For the best experience, open
https://m.samyuktakarnataka.in
on your mobile browser.

'ಸುಡುವ' ಬದುಕಿನ ಒಳನೋಟ

09:40 PM Jul 27, 2024 IST | Samyukta Karnataka
 ಸುಡುವ  ಬದುಕಿನ ಒಳನೋಟ

ಗಣೇಶ್ ರಾಣೆಬೆನ್ನೂರು

ಚಿತ್ರ: ಕೆಂಡ
ನಿರ್ದೇಶನ: ಸಹದೇವ್ ಕೆಲವಡಿ
ನಿರ್ಮಾಣ: ರೂಪಾರಾವ್
ತಾರಾಗಣ: ಗೋಪಾಲಕೃಷ್ಣ ದೇಶಪಾಂಡೆ, ಬಿ.ವಿ.ಭರತ್, ಪ್ರಣವ್ ಶ್ರೀಧರ್, ದೀಪ್ತಿ ನಾಗೇಂದ್ರ, ವಿನೋದ್, ರೇಖಾ ಇತರರು.
ರೇಟಿಂಗ್ಸ್: 3

ಸಮಾಜದಲ್ಲಿ ಎಲ್ಲ ವರ್ಗದ ಜನರೂ ಇರುತ್ತಾರೆ. ಅವರು ಹೇಗೆ ಬದುಕುತ್ತಾರೆ… ಬದುಕಲು ಏನೆಲ್ಲ ಮಾಡುತ್ತಾರೆ, ಅವರು ಜೀವಿಸಲು ಹುಡುಕಿಕೊಂಡ ಮಾರ್ಗ ಯಾವುದು..?
ಇದನ್ನು ಒಂದೇ ಸಿನಿಮಾದಲ್ಲಿ, ಆದರೆ ಬೇರೆ ಬೇರೆ ಆಯಾಮದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಹದೇವ್ ಕೆಲವಡಿ. ಬಡ ಕುಟುಂಬ ಅಥವಾ ಮಧ್ಯಮ ವರ್ಗದವರು ಸಮಾಜದಲ್ಲಿ ಒಂದು ಹಂತಕ್ಕೆ ಗುರುತಿಸಿಕೊಳ್ಳಬೇಕೆಂದರೆ ಅದರ ಹಿಂದೆ ಏನೆಲ್ಲ ಪಡಿಪಾಟಲು ಅನುಭವಿಸಬೇಕು ಎಂಬುದು ಬಲ್ಲವರೇ ಬಲ್ಲರು. ಶ್ರೀಮಂತ ವರ್ಗ ಅವರನ್ನು ಯಾವ ದೃಷ್ಟಿಯಿಂದ ನೋಡಬಹುದು ಎಂಬ ಸಣ್ಣ ಊಹೆ ಇದ್ದರೂ ಸಾಕು, ಜೀವನದ ದಿಕ್ಕನ್ನು ಮತ್ತೊಂದು ಮಜಲಿಗೆ ತಮಗೆ ತಾವೇ ಕಂಡುಕೊಳ್ಳಬಹುದು.

ಇಲ್ಲಿ ನಾಯಕನ ಮನಸ್ಥಿತಿಯನ್ನು ಕೆಂಡಕ್ಕೆ ಹೋಲಿಸಲಾಗಿದೆ. ಸಮಾಜದ ವ್ಯವಸ್ಥೆ ಬೂದಿಯಂತೆ ಗೋಚರಿಸುತ್ತದೆ. ಕೆಂಡ ಎಂದಿಗೂ ನಿಗಿ ನಿಗಿ… ಬೂದಿಯನ್ನು ಕೆದಕಿದಾಗ ಮಾತ್ರ ಕೆಂಡದ ಸ್ವರೂಪ ಅರಿವಿಗೆ ಬರುತ್ತದೆ. ಕೆಂಡವನ್ನು ರೂಪಕವಾಗಿ ಬಳಸಿಕೊಂಡಿದ್ದರೂ, ಅದರ ಕರಾಳ ಮುಖವನ್ನು ಆಗಾಗ ಪರಿಚಯಿಸುತ್ತಾ ಸಾಗುತ್ತಾರೆ ನಿರ್ದೇಶಕ. ಛಾಯಾಗ್ರಹಣದ ಜವಾಬ್ದಾರಿಯೂ ಸಹದೇವ್ ಅವರದ್ದೇ. ಎರಡನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ.

ಇಲ್ಲಿ ಆಡಂಬರಕ್ಕೆ ಜಾಗವಿಲ್ಲ. ವಿಷಯದಲ್ಲಿ ಗಟ್ಟಿತನವಿರುವುದರಿಂದ, ಒಳನೋಟದ ಪರಿಣಾಮ ಎಷ್ಟು ಆಳವಾಗಿದೆ ಎಂಬುದಕ್ಕೆ ಸಿನಿಮಾವನ್ನು ಕೊನೆಯವರೆಗೂ ಕಣ್ತುಂಬಿಕೊಳ್ಳಬೇಕು. ನೈಜತೆಗೆ ಹೆಚ್ಚು ಒತ್ತು ಕೊಟ್ಟು, ಸಮಾಜದ ಮತ್ತೊಂದು ಮುಖವನ್ನು ಅನಾವರಣ ಮಾಡುವುದೇ ಕೆಂಡದ ಅಸಲಿ ತಾಕತ್ತು.

ಪಾತ್ರವರ್ಗ, ಆಯ್ದುಕೊಂಡ ಸ್ಥಳ, ಬಟ್ಟೆ-ಬರೆ, ಸಂಭಾಷಣೆ ಒಪ್ಪಿಸುವ ಶೈಲಿ, ಛಾಯಾಗ್ರಹಣದ ಕುಸುರಿ ಕೆಲಸ, ಹಿನ್ನೆಲೆಯಲ್ಲಿ ತಣ್ಣಗೆ ತೇಲಿ ಬರುವ ಸಂಗೀತ… ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಬೆರೆತಿದೆ, ನೋಡುಗರನ್ನು ತನ್ನೊಳಗೆ ಆವಾಹಿನಿಸಿಕೊಳ್ಳುವಂತೆ ಮಾಡುತ್ತದೆ.

ಈವರೆಗೂ ಗೋಪಾಲಕೃಷ್ಣ ದೇಶಪಾಂಡೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಹಾಗೆಯೇ ಇಲ್ಲಿ ಮತ್ತೊಂದು ಪಾತ್ರದ ಮೂಲಕ ಪರಿಚಯವಾಗಿ ಬೆರಗು ಮೂಡಿಸುತ್ತಾರೆ. ಪಾತ್ರವೇ ತಾವಾಗಿ ಆಪ್ತವಾಗುತ್ತಾರೆ. ಬಿ.ವಿ.ಭರತ್ ಕೆಲವೊಮ್ಮೆ ಕಣ್ಣಲ್ಲೇ ನಟಿಸಿ, ಸಂಭಾಷಣೆ ಇಲ್ಲದೇ ಭಾವನೆಯಲ್ಲೇ ಎಲ್ಲವನ್ನೂ ಒಪ್ಪಿಸಿ ಸೈ ಎನ್ನಿಸಿಕೊಳ್ಳುತ್ತಾರೆ. ಪ್ರಣವ್ ಶ್ರೀಧರ್, ದೀಪ್ತಿ ನಾಗೇಂದ್ರ, ವಿನೋದ್, ರೇಖಾ ಕೂಡ್ಲಿಗಿ ನಟನೆ ಸಹಜವಾಗಿದೆ. ಗಮನ ಸೆಳೆಯುವಂತಿದೆ. ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ಕಥೆಯ ಜತೆಗೆ ಬೆರೆತಿದೆ.