ಸುಧಾಂಬುದಿ ಚಂದ್ರಶ್ರೀ
ಮಹಿಳೆ ಮಾಯೆಯಲ್ಲ; ಆದರೆ, ಒಂದು ಅಚ್ಚರಿ: ಮನೆಯಲ್ಲಿ ಮಗಳಾಗಿ, ತಂಗಿಯಾಗಿ, ಸೊಸೆಯಾಗಿ, ಹೆಂಡತಿಯಾಗಿ, ಮನೆಯೊಡತಿಯಾಗಿ ಇದೇ ಸಂದರ್ಭದಲ್ಲಿ ಮನೆಯ ಹೊರಗೆ ಹೊಲದಲ್ಲಿ ದುಡಿವ ಹೆಣ್ಣಾಗಿ, ಗಂಡನ ಜೊತೆ ಬದುಕಿನ ಬಂಡಿಯಲ್ಲಿ ಹೆಜ್ಜೆ ಹಾಕುತ್ತಲೇ ಅರಿವಿಗೆ ಬಾರದ ರೀತಿಯಲ್ಲಿ ಸಮಾಜದ ಕಣ್ಣಾಗಿ ನಿರಂತರ ಬೆವರಿನ ಬೆಲೆಯ ಮಾಲಕಿಯಾಗಿರುವ ಮಹಿಳೆ ಎಂದಿಗೂ ಮಾಯೆ ಅಲ್ಲ. ಆದರೆ, ಆಕೆ ಮಾಡುವುದೆಲ್ಲಾ ಅಚ್ಚರಿಯ ಮೂಟೆಯೇ. ಇದೊಂದು ರೀತಿಯಲ್ಲಿ ಮೈದಾಸನ ಸ್ಪರ್ಶ ಇದ್ದಹಾಗೆ. ಕೇವಲ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸುವುದರಿಂದ ಆಕೆಯ ಬಯಕೆ ಈಡೇರದು. ಬದಲಾಗಿರುವ ಕಾಲಘಟ್ಟಕ್ಕೆ ತಕ್ಕಂತೆ ಮಹಿಳೆಗೆ ಅಗತ್ಯವಾಗಿರುವುದು ಸಮಾನತೆ ಹಾಗೂ ಸಮಾನ ಅವಕಾಶ. ಇದಕ್ಕೆ ಸಾವಕಾಶ ಎಂಬ ಧೋರಣೆ ಯಾರೂ ಕೂಡಾ ಅನುಸರಿಸುವ ಕಾಲ ಇದಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಸಮಾಜದ ಸರ್ವತೋಮುಖ ಉನ್ನತಿ ಪವಾಡದ ರೂಪದಲ್ಲಿ ನಮ್ಮ ಕಣ್ಣೆದುರಿಗೆ ಸಾಕ್ಷಾತ್ಕಾರಗೊಳ್ಳುವುದು ಖಂಡಿತ.
ಸಮಾನತೆಯಿಂದ ವಂಚಿತಳಾಗಿರುವ ಮಹಿಳೆಯ ಪ್ರತಿಭೆ ಹಾಗೂ ಕೌಶಲ್ಯ ವ್ಯರ್ಥವಾಗುವುದರಿಂದ ಆಗುವ ಅನ್ಯಾಯ ಪುರುಷ ಪ್ರಧಾನ ಸಮಾಜಕ್ಕೆ ಎಂಬುದನ್ನು ಕಣ್ತೆರೆದು ನೋಡಬೇಕಾದ ಕಾಲವಿದು. `ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂಬ ಸಂಚಿಹೊನ್ನಮ್ಮನ ದೂರದೃಷ್ಟಿಯ ಕವಿಮಾತನ್ನು ಸುಭಾಷಿತದ ರೂಪದಲ್ಲಿ ಬೇರೆಯವರಿಗೆ ಉಪದೇಶ ಹೇಳುತ್ತಲೇ ನಾಗರಿಕತೆಯ ಮೆಟ್ಟಿಲುಗಳನ್ನು ಏರುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಸಂಗಾತಿ ಎಂಬ ಶಬ್ದದ ಅರ್ಥ ಮತ್ತು ವ್ಯಾಪ್ತಿಯನ್ನು ಅರಿತು ಬಾಳುವೆಯ ದಾರಿಯನ್ನು ರೂಪಿಸಿಕೊಂಡರೆ ಹತಾಶೆಯಿಂದ ಬೇಯುತ್ತಿರುವ ಸಮಾಜ ನಿಜಾರ್ಥದಲ್ಲಿ ಸಮಾಧಾನದಿಂದ ಅರಳುವುದು ಖಂಡಿತ.
ಇಂತಹ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿಯೇ ಕಾಯಕಯೋಗಿಯಾಗಿ, ಚಿಂತಕಿಯಾಗಿ, ಸಮಾಜ ಸುಧಾರಕಿಯಾಗಿ, ಕಲಿತ ಹೆಣ್ಣಾಗಿ, ಎಲ್ಲಕ್ಕೂ ಮಿಗಿಲಾಗಿ ಕನ್ನಡತಿಯಾಗಿರುವ ಶ್ರೀಮತಿ ಸುಧಾಮೂರ್ತಿಯವರು ಪ್ರತಿಷ್ಠಿತ ರಾಜ್ಯಸಭೆ ಸದಸ್ಯತ್ವಕ್ಕೆ ನಾಮಕರಣಗೊಂಡಿರುವುದು ನಿಜಕ್ಕೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ನಿರೀಕ್ಷಿಸುತ್ತಿರುವ ಮಹಿಳಾ ಲೋಕಕ್ಕೆ ಒಂದು ಶುಭಾರಂಭದ ಸುದ್ದಿ. ಸುಧಾಮೂರ್ತಿಯವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಹ ಸ್ವಭಾವದವರು. ದೌರ್ಜನ್ಯಕ್ಕೆ ಒಳಗಾಗಿರುವ ಉತ್ತರ ಕರ್ನಾಟಕ ಪ್ರದೇಶದ ಮಹಿಳೆಯರಿಗೆ ನಿರಂತರವಾಗಿ ಬದುಕಿನ ದಾರಿಯನ್ನು ರೂಪಿಸಿಕೊಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಕೀರ್ತಿ ಶನಿ ತೊಲಗಾಚೆ ಎನ್ನುವ ಮನೋಧರ್ಮದವರು. ಲೇಖಕಿಯಾಗಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಲೇ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಪಾಲ್ಗೊಂಡು ಹೊಸ ಆಂದೋಲನಗಳಿಗೆ ಪ್ರೇರಣೆ ನೀಡಿರುವ ಸುಧಾಮೂರ್ತಿಯವರು ಕುಟುಂಬದ ಮೂಲಕವೇ ಸಮಾಜದ ಕಣ್ಣು ತೆರೆಸಲು ಹೊರಟವರು ಎಂಬುದನ್ನು ಗುರುತಿಸುವುದು ಸೂಕ್ತ. ಪತಿ ಸುಪ್ರಸಿದ್ಧ ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ. ಅಳಿಯ ಬ್ರಿಟನ್‌ನ ಪ್ರಧಾನಿ ಮಗ ವಿದೇಶದಲ್ಲಿ ಕಲಿತರೂ ರಾಘವಾಂಕನ ಹರಿಶ್ಚಂದ್ರಕಾವ್ಯ ಹಾಗೂ ಕುಮಾರವ್ಯಾಸನ ಮಹಾಭಾರತವನ್ನು ಇಂಗ್ಲಿಷ್ ಭಾಷೆಗೆ ಗಣ್ಯ ಸಾಹಿತಿಗಳ ನೆರವಿನೊಂದಿಗೆ ರೋಹನ್ ಗ್ರಂಥಾಲಯದ ಹೆಸರಿನಲ್ಲಿ ಲೋಕಾರ್ಪಣೆ ಮಾಡಿರುವ ಸಂಗತಿ ಅಷ್ಟಾಗಿ ಜನರಿಗೆ ತಿಳಿದಿರಲಾರದು.
ಸುಧಾಂಬುದಿ ಚಂದ್ರಶ್ರೀ ಎಂಬ ಕೀರ್ತನೆಯಲ್ಲಿರುವ ಅರ್ಥ ಅಮೃತದ ಕ್ಷೀರಸಾಗರದಲ್ಲಿ ಜನಿಸಿದ ಚಂದ್ರ ಹಾಗೂ ಲಕ್ಷ್ಮೀಯರಂತೆ ಅಮೃತ ಪ್ರತಿರೂಪ ಸುಧಾಮೂರ್ತಿಯವರು. ಸುಧಾ ಎಷ್ಟಾದರೂ ಅಮೃತ. ಅಮೃತವೂ ಕೂಡಾ ಚಂದ್ರ ಹಾಗೂ ಲಕ್ಷ್ಮೀಯರ ಹಾಗೆ ಅಮೃತಮಥನದಲ್ಲಿ ಜನಿಸಿದ ಮಹಾತ್ಮರು. ಇಂತಹ ಗುರುತರ ಸಾಧನೆಯ ಕುಟುಂಬವನ್ನು ಗಮನಿಸಿ ಸುಧಾಮೂರ್ತಿಯವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಕಾಲಿಕ ಕ್ರಮ ನಿಜವಾದ ಅರ್ಥದಲ್ಲಿ ಕನ್ನಡದ ಹೃದಯವಂತಿಕೆ ಹಾಗೂ ಸಂವೇದನಾಶೀಲತೆಗೆ ಕೊಟ್ಟಿರುವ ಗೌರವ.
ಹಾಗೆ ನೋಡಿದರೆ, ರಾಜ್ಯಸಭೆಗೆ ಕರ್ನಾಟಕದಿಂದ ನಾಮಕರಣವಾಗಿರುವವರ ಪೈಕಿ ಸುಧಾಮೂರ್ತಿ ಮೊದಲಿಗರೇನೂ ಅಲ್ಲ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸುಪ್ರಸಿದ್ಧ ರಂಗಭೂಮಿಯ ನಿರ್ದೇಶಕಿ ಹಾಗೂ ಗಾಯಕಿ ಬಿ. ಜಯಶ್ರೀ ಅವರನ್ನು ಇದೇ ಸ್ಥಾನಕ್ಕೆ ನಾಮಕರಣ ಮಾಡಲಾಗಿತ್ತು. ಇದಲ್ಲದೆ, ಈ ಹಿಂದೆ ಹಿಂದಿ ಚಿತ್ರನಟ ಸುನಿಲ್ ದತ್, ತಮಿಳು ಚಿತ್ರನಟ ಶಿವಾಜಿ ಗಣೇಶನ್ ಸೇರಿದಂತೆ ಹಲವರು ಸಾಧಕರನ್ನು ಸರ್ಕಾರಗಳು ನೇಮಕ ಮಾಡಿವೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಸಾಧಕರಿಗೆ ಬದಲು ರಾಜಕೀಯ ಆಶ್ರಯವನ್ನು ನಿರೀಕ್ಷಿಸುತ್ತಿರುವವರಿಗೆ ಮೇಲ್ಮನೆಯ ಸ್ಥಾನಗಳು ದೊರಕುತ್ತಿರುವುದು ಬೇಸರದ ಸಂಗತಿ. ಬ್ರಿಟನ್‌ನಲ್ಲಿರುವಂತೆ ಭಾರತದಲ್ಲಿಯೂ ಕೂಡಾ ಮೇಲ್ಮನೆಯಾಗಿರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಸಮಾಜದ ಪ್ರತಿಷ್ಠಿತ ಸಾಧಕರನ್ನು ನಾಮಕರಣ ಮಾಡುವ ಮೂಲಕ ಕಲಾಪದ ಗುಣಮಟ್ಟ ಹಾಗೂ ಮೌಲ್ಯ ಸುಧಾರಿಸುವಂತೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸುಧಾಮೂರ್ತಿಯವರ ನಾಮಕರಣ ಸಾಮಯಿಕವೂ ಹೌದು ಹಾಗೂ ಸಮರ್ಥನೀಯವೂ ಹೌದು.