For the best experience, open
https://m.samyuktakarnataka.in
on your mobile browser.

ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ನಿಧನ: ಸಂತಾಪ ಸೂಚಿಸಿದ ಸಿಎಂ

11:20 AM Feb 21, 2024 IST | Samyukta Karnataka
ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ನಿಧನ  ಸಂತಾಪ ಸೂಚಿಸಿದ ಸಿಎಂ

ಬೆಂಗಳೂರು: ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ಫಾಲಿ ಎಸ್ ನಾರಿಮನ್(95) ಅವರು ನಿಧನ ಹೊಂದಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದೆಹಲಿ ನಿವಾಸದಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ಪೋಸ್ಟ್‌ ಮಾಡಿದ್ದಾರೆ.
"ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ದೇಶದ ಅತ್ಯಂತ ಶ್ರೇಷ್ಠ ನದಿ ನೀರಿನ ವಿವಾದ ತಜ್ಞರಾಗಿದ್ದ ನಾರಿಮನ್ ಅವರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು.

ಕೃಷ್ಞಾ, ಕಾವೇರಿ ನದಿಗಳ ಜಲಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದ್ದರೆ ಅದರಲ್ಲಿ ನಾರಿಮನ್ ಅವರ ದೊಡ್ಡ ಕೊಡುಗೆ ಇದೆ. ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು. ದೇಶದ ಖ್ಯಾತ ಮತ್ತು ಪ್ರತಿಭಾವಂತ ವಕೀಲರಾಗಿದ್ದ ನಾರಿಮನ್ ಅವರ ಜೊತೆಗೆ ನನ್ನದು ದೀರ್ಘಕಾಲದ ಒಡನಾಟ. ನೀರಾವರಿಗೆ ಸಂಬಂಧಿಸಿದ ಎಂತಹ ಜಟಿಲ ಸಮಸ್ಯೆಗಳು ಎದುರಾದರೂ ಉದ್ವೇಗಗೊಳ್ಳದೆ ಪರಿಹಾರದ ಕ್ರಮಗಳನ್ನು ಸೂಚಿಸುತ್ತಿದ್ದ ಅವರ ಕಸುಬುಗಾರಿಕೆ ಅನನ್ಯವಾದುದು. ಆಂತರಿಕವಾದ ಸಭೆಯಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದ ವಾದಗಳಿಂದ ನೀರಾವರಿ ವಿಷಯದಲ್ಲಿ ನನ್ನ ಜ್ಞಾನವೃದ್ಧಿಯಾಗಿದೆ ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ.

ನಾರಿಮನ್ ಅವರ ಅಗಲಿಕೆಯ ದು:ಖದಲ್ಲಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.‌ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಹೋಗಿ ಬನ್ನಿ ನಾರಿಮನ್ ಸಾಬ್, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.