ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ
ಬೆಂಗಳೂರು: ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿದರು. ಸುಭಾಷ್‌ಚಂದ್ರ ಬೋಸ್ ಅವರ 127ನೇ ಜಯಂತಿಯನ್ನು ಆಚರಿಸುತ್ತಿದ್ದು, ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ಮರಿಸಿ, ಗೌರವಿಸಿದ್ದೇವೆ. ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗಾಂಧೀಜಿ ಹಾಗೂ ಸುಭಾಷ್‌ಚಂದ್ರ ಬೋಸ್ ನಡುವೆ ಸ್ವಾತಂತ್ರ್ಯ ಹೋರಾಟದ ಹಾದಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು. ಮಹಾತ್ಮ ಗಾಂಧೀಜಿ ಶಾಂತಿ, ಅಹಿಂಸೆ ಮೂಲಕ ಸ್ವಾತಂತ್ರ್ಯ ಗಳಿಸಬೇಕು ಎಂದರೆ, ಸುಭಾಷ್ ಚಂದ್ರ ಬೋಸ್ ಅವರಿಗೆ ಅದರ ತದ್ವಿರುದ್ಧವಾದ ನಿಲುವು ಇತ್ತು. ಬೇರೆ ವಿಚಾರಗಳಲ್ಲಿ ಗಾಂಧೀಜಿ ಯವರ ಬಗ್ಗೆ ಅಪಾರವಾದ ಗೌರವವಿತ್ತು. ಈ ವಿಚಾರದಲ್ಲಿ ಮಾತ್ರ ಆಲೋಚನೆಗಳಲ್ಲಿ ಭಿನ್ನಾಭಿಪ್ರಾಯ ಇತ್ತು. ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಅದರ ಮುಖ್ಯಸ್ಥರಾಗಿದ್ದರು. ಜಪಾನ್ ದೇಶದಲ್ಲಿ ಅವರು ವಿಮಾನ ದುರಂತದಲ್ಲಿ ಅವರು ಸಾವಿಗೀಡಾದರು. ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ, ದೇಶಪ್ರೇಮಿಯಾಗಿದ್ದರು. ಸುಭಾಷ್‌ಚಂದ್ರ ಬೋಸ್ ಅವರು ನಮಗೆಲ್ಲಾ ಆದರ್ಶ. ಅವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ. ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಲಿ.