ಸುಮಲತಾ ನಡೆ ಜೆಡಿಎಸ್ ಕಡೆ..? ಇಂದು ಅಧಿಕೃತ ನಿಲುವು ಪ್ರಕಟ
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಪ್ರಕಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಮಂಡ್ಯ ಲೋಕಸಭಾ ಕಣದಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿ ಸಂಸತ್ ಪ್ರವೇಶಿಸುವ ಸುಮಲತಾ ಅವರು ಕನಸು ಭಗ್ನಗೊಂಡಾಗಿನಿಂದಲೂ ಹಾಲಿ ಸಂಸದರ ಮುಂದಿನ ರಾಜಕೀಯ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಏರ್ಪಟ್ಟಿದ್ದು ಬುಧವಾರ ಈ ಕುತೂಹಲಕ್ಕೆ ತೆರೆ ಬೀಳಲಿದೆ.
ಮಂಡ್ಯದಲ್ಲಿ ಸ್ಪರ್ಧಿಸಲು ಜೆಡಿಎಸ್‌ಗೆ ಟಿಕೆಟ್ ನೀಡಿದ ಮೇಲೆ ಕೆಲದಿನಗಳ ಕಾಲ ಮೌನಕ್ಕೆ ಶರಣಾಗಿದ್ದ ಸಂಸದೆ ಸುಮಲತಾ ಅವರು ಶನಿವಾರ ತಮ್ಮ ನಿವಾಸಕ್ಕೆ ಹರಿದುಬಂದ ಬೆಂಬಲಿಗರಿಗೆ ಚುನಾವಣೆಗೆ ನಿಂತರೂ, ಸೋತರೂ ಮತ್ತು ಸತ್ತರೂ ಮಂಡ್ಯದಲ್ಲೇ’ ಅಂತ ಸಂತೈಸಿದ ಮೇಲೆ ರಾಜ್ಯ ರಾಜಕೀಯದಲ್ಲಿನ ಕುತೂಹಲ ತಾರಕಕ್ಕೇರಿದೆ. ಸುಮಲತಾ ಅವರು ಮತ್ತೊಮ್ಮೆ ಪಕ್ಷೇತರರಾಗಿ ಮಂಡ್ಯದಲ್ಲಿ ಕಣಕ್ಕಿಳಿಯುವರೇ ಎಂಬ ಕುತೂಹಲ ಒಂದೆಡೆಯಾದರೆ, ಸುಮಲತಾ ಅವರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಾಹ್ಯ ಬೆಂಬಲ ಘೋಷಿಸುವರೆಂಬ ಮಾತೂ ಕೇಳಿಬರುತ್ತಿದೆ. ಇದೇ ವೇಳೆ ಸುಮಲತಾ ಅವರು ತಟಸ್ಥರಾಗಿ ಉಳಿಯುವರೆಂಬ ಗುಮಾನಿಯೂ ಇದೆ. ಸುಮಲತಾ ಅವರು ತಮ್ಮ ಮುಂದಿರುವ ಈ ಮೂರು ಆಯ್ಕೆಗಳಲ್ಲಿ ಹಳೆಯ ಭಿನ್ನಾಭಿಪ್ರಾಯ ಬದಿಗಿಟ್ಟು ಕುಮಾರಸ್ವಾಮಿ ಅವರಿಗೆ ಬೆಂಬಲ ಪ್ರಕಟಿಸುವರೆಂದು ಹೇಳಲಾಗುತ್ತಿದೆ. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಮಂಡ್ಯ ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿನ ರಾಜಕಾರಣಕ್ಕಿಂತಲೂ
ಸಂಧಾನ’ ರಾಜಕಾರಣವೇ ಸೂಕ್ತ ಎಂಬ ನಿಲುವಿಗೆ ಸುಮಲತಾ ಅವರು ಬಂದಿದ್ದಾರೆಂದು ತಿಳಿದುಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುಮಲತಾ ಅವರು ಸಂಧಾನದ ಮನಸ್ಥಿತಿಗೆ ಬಂದಿದ್ದಾರೆನ್ನಲಾಗಿದೆ. ಆದರೆ, ಇಂತಹದೊಂದು ಸಂಧಾನದ ಸ್ಥಿತಿ ಬರಲು ಕಾರಣವಾದ ರಾಜಕೀಯ ಸನ್ನಿವೇಶಗಳು ಮತ್ತು ಅನಿವಾರ್ಯತೆಯ ಬಗ್ಗೆ ಮಂಡ್ಯದ ಮತದಾರರಿಗೆ ವಿವರಿಸಿದ ಬಳಿಕ ಆ’ ನಿರ್ಧಾರ ಪ್ರಕಟಿಸುವರೆಂದು ಸುಮಲತಾರ ಆಪ್ತ ಮೂಲಗಳು ದೃಢಪಡಿಸಿವೆ. ಎಚ್ಡಿಕೆಗೆ ಏದುಸಿರು: ಮಂಡ್ಯದಲ್ಲಿ ನೆಲಕಚ್ಚಿರುವ
ತೆನೆಹೊತ್ತ ಮಹಿಳೆ’ಯ ನೆಲೆಯನ್ನು ಮರುಸ್ಥಾಪಿಸಲೇಬೇಕೆಂದು ಪಣ ತೊಟ್ಟು ಲೋಕಸಭಾ ಕಣಕ್ಕೆ ಧುಮುಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಏಪ್ರಿಲ್ ೪ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಉಮೇದುವಾರಿಕೆ ಪತ್ರ ಸಲ್ಲಿಕೆಗೆ ಅಂದೇ ಕೊನೆಯ ದಿನವೂ ಆಗಿದ್ದು ಅದಕ್ಕೂ ಮುನ್ನವೇ ಸುಮಲತಾರ ಬೆಂಬಲ ಘೋಷಣೆಯಾದಲ್ಲಿ ಎಚ್ಡಿಕೆಗೆ ದೊಡ್ಡ ಸಮಾಧಾನವಾಗಲಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಸುಮಲತಾರ ಮುಂದಿನ ರಾಜಕೀಯ ನಡೆ ಅತ್ತ ಬಿಜೆಪಿ, ಇತ್ತ ಜೆಡಿಎಸ್‌ಗೆ ಬಹುಮುಖ್ಯವಾಗಿದ್ದು ಎರಡೂ ಪಕ್ಷಗಳ ನಾಯಕರು ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡಿದೆ. ಸುಮಲತಾರ ಅಧಿಕೃತ ಘೋಷಣೆಯ ಬಳಿಕ ಈ ನಾಯಕರು ನಿಟ್ಟುಸಿರುವ ಬಿಡುವರೋ? ಅಥವಾ ಅವರ ಏದುಸಿರು ಹೆಚ್ಚುವುದೋ? ಕಾದು ನೋಡಬೇಕಾಗಿದೆ.