For the best experience, open
https://m.samyuktakarnataka.in
on your mobile browser.

ಸುಮಲತಾ ಬಾಹ್ಯ ಬೆಂಬಲ ಸಾಧ್ಯತೆ

10:35 PM Apr 01, 2024 IST | Samyukta Karnataka
ಸುಮಲತಾ ಬಾಹ್ಯ ಬೆಂಬಲ ಸಾಧ್ಯತೆ

ಬೆಂಗಳೂರು: ಮಂಡ್ಯ ಬಿಟ್ಟರೆ ಬೇರೆ ಎಲ್ಲೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಂಸದೆ ಸುಮಲತಾ ಅವರು ಈ ಬಾರಿ ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದ್ದು, ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರ ಕಾವೇರಿದೆ. ನಾಮಪತ್ರ ಸಲ್ಲಿಕೆಗೆ ೩ ದಿನ ಬಾಕಿ ಇದೆ. ಏಪ್ರಿಲ್ ೩ಕ್ಕೆ ನಿರ್ಧಾರ ತಿಳಿಸುವುದಾಗಿ ಸುಮಲತಾ ಅಂಬರೀಶ್ ಹೇಳಿರುವುದು ಮಂಡ್ಯ ಯುದ್ಧಕ್ಕೆ ಹೊಸ ಆಯಾಮ ಕೊಟ್ಟಿದೆಯಾದರೂ, ಸುಮಲತಾರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನವನ್ನು ಎಚ್.ಡಿ ಕುಮಾರಸ್ವಾಮಿ ಮಾಡಿದ್ದಾರೆ. ಏಪ್ರಿಲ್ ೪ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಹಕಾರ ಕೊಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಭೇಟಿ ವೇಳೆ ಏನು ಚರ್ಚೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಎಚ್‌ಡಿಕೆ ಹೇಳದಿದ್ದರೂ ಭೇಟಿ ಫಲಪ್ರದವಾಗಿದೆ ಎಂದು ಹೇಳಿರುವುದನ್ನು ಗಮನಿಸಿದರೆ ಸುಮಲತಾ ಅವರು ಕುಮಾರಸ್ವಾಮಿ ಅವರಿಗೆ ಬಾಹ್ಯ ಬೆಂಬಲ ನೀಡಬಹುದು ಎಂದು ಹೇಳಲಾಗುತ್ತಿದೆ.
೨೦೧೯ರಲ್ಲಿ ಇದ್ದ ಸ್ಥಿತಿ ಈಗ ಮಂಡ್ಯದಲ್ಲಿ ಇಲ್ಲ. ಮಂಡ್ಯದ ಜನತೆ ಸುಮಲತಾ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯೂ ಸ್ವತಂತ್ರವಾಗಿ ಕಣಕ್ಕಿಳಿದರೆ ಹಿನ್ನಡೆಯಾಗಬಹುದೆಂಬ ಭಯ ಸುಮಲತಾ ಅವರನ್ನು ಕಾಡತೊಡಗಿದೆ. ಕಾಂಗ್ರೆಸ್ ಬಾಗಿಲು ಕೂಡಾ ಬಂದ್ ಆಗಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ಸುಮಲತಾ ಇಚ್ಛೆಯಾಗಿರುವುದರಿಂದ ಮೈತ್ರಿಗೆ ಬೆಂಬಲಿಸಬೇಕಾದ ಅನಿವಾರ್ಯತೆ ಇದೆ. ಮೈತ್ರಿ ವಿರುದ್ಧ ನಡೆದುಕೊಂಡರೆ ಭವಿಷ್ಯದಲ್ಲಿ ಸಂಕಷ್ಟ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಇದೀಗ ಕುಮಾರಸ್ವಾಮಿ ಅವರ ಮಾತುಗಳನ್ನು ಗಮನಿಸಿದರೆ ಸುಮಲತಾ ಅಂಬರೀಶ್ ಅವರು ಬೆಂಬಲಿಸುವ ಸಾಧ್ಯತೆಯಿದೆ.. ಆದರೆ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗದೇ ಬಾಹ್ಯವಾಗಿ ಬೆಂಬಲಿಸಲಿದ್ದಾರೆ ಎಂದು ತಿಳಿದುಬಂದಿದೆ.