For the best experience, open
https://m.samyuktakarnataka.in
on your mobile browser.

ಸುಮ್ಮನೆ ಕೂರಬೇಕಾ? ಅಥವಾ ನಿಮಗೆ ಬಹುಪರಾಕ್ ಹೇಳಬೇಕಾ?

11:13 AM Oct 17, 2024 IST | Samyukta Karnataka
ಸುಮ್ಮನೆ ಕೂರಬೇಕಾ  ಅಥವಾ ನಿಮಗೆ ಬಹುಪರಾಕ್ ಹೇಳಬೇಕಾ

ಬೆಂಗಳೂರು: ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿ ಕೆ ಶಿವಕುಮಾರ್‌ ಅವರ ರಸ್ತೆಗುಂಡಿ ಮುಚ್ಚಿಸುವ ಮಹತ್ಕಾರ್ಯದ ಕಾರ್ಯವೈಖರಿ ಒಂದೇ ಮಳೆಗೆ ಬಟಾ ಬಯಲಾಗಿದೆ ಎಂದು ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಮಹಾದೇವಪುರದಲ್ಲಿ ನೀರಿನಲ್ಲಿ ಮುಳುಗಿರುವ ಬೈಕ್ ಎತ್ತುತ್ತಿರುವ ಈ ದೃಶ್ಯ, ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಂಗಳೂರಿನ ಪರಿಸ್ಥಿತಿ ಯಾವ ಅಧೋಗತಿಗೆ ತಲುಪಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ.

ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರೇ, ರಸ್ತೆಗುಂಡಿ ಮುಚ್ಚುಲು ಅಧಿಕಾರಿಗಳಿಗೆ ಆದೇಶ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಒಂದೆರಡು ಫೋಟೋ, ವಿಡಿಯೋ ಹಾಕಿಬಿಟ್ಟರೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿದು ಬಿಡುತ್ತಾ? ಒಬ್ಬ ಜವಾಬ್ದಾರಿಯುತ ಸಚಿವರು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂದು ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು. ಅದು ಬಿಟ್ಟು ನಾಮಕಾವಸ್ತೆ ಸುಮ್ಮನೆ ಆದೇಶ ನೀಡಿ ವಾರಗಟ್ಟಲೆ ವಿದೇಶ ಪ್ರವಾಸಕ್ಕೆ ಹೊರಟುಬಿಟ್ಟರೆ, ಇಲ್ಲಿ ರಸ್ತೆಗುಂಡಿ ಸಮಸ್ಯೆ ಹೇಗೆ ಬಗೆಹರಿಯುತ್ತೆ?
'ನಮ್ಮ ತೆರಿಗೆ ನಮ್ಮ ಹಕ್ಕು' ಎಂದು ಬೀದಿನಾಟಕ ಮಾಡುತ್ತೀರಲ್ಲ, ರಾಜ್ಯದ ಜಿಎಸ್ ಡಿಪಿಗೆ 35-40% ಕೊಡುಗೆ ನೀಡುವ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಗುಂಡಿ ಮುಕ್ತ ರಸ್ತೆಯನ್ನಾದರೂ ಕೊಡಬೇಕಲ್ಲವೇ? ಇನ್ನು ಪ್ರತಿಪಕ್ಷಗಳು ಟೀಕೆ ಮಾಡಿದರೆ, ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತಿದರೆ, ಬೆಂಗಳೂರಿನ ಮರ್ಯಾದೆ ಕಳೆಯಬೇಡಿ ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತೀರಿ. ಬೆಂಗಳೂರಿನ ಜನರಿಗೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ, ಜನಜೀವನ ಅಸ್ತವ್ಯಸ್ತಗೊಂಡಿದ್ದರು ವಿಪಕ್ಷಗಳು ಸುಮ್ಮನೆ ಕೂರಬೇಕಾ? ಅಥವಾ ನಿಮಗೆ ಬಹುಪರಾಕ್ ಹೇಳಬೇಕಾ? ಇನ್ನಾದರೂ ರಸ್ತೆ ಗುಂಡಿ ಮುಚ್ಚುವ ಈ ತೇಪೆ ಹಾಕುವ ಕೆಲಸ ಸಾಕು ಮಾಡಿ. ಹೊಸದಾಗಿ ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ಬೆಂಗಳೂರಿನ ಜನತೆ ಕಟ್ಟುವ ತೆರಿಗೆಗೆ ಋಣ ತೀರಿಸಿ ಎಂದಿದ್ದಾರೆ.

Tags :