ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ
ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು "ಬೆಳಗಾವಿಯ ಮಹಿಳಾ ದೌರ್ಜನ್ಯದ ಬೆನ್ನಲೇ ಮಕ್ಕಳ ಮೇಲಿನ ದೌರ್ಜನ್ಯದ ಘಟನೆ ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನಡೆದಿರುವುದು ನೋಡಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಹಳಿತಪ್ಪಿದ ಆಡಳಿತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ.
ಅದರಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರೇ ದೌರ್ಜನ್ಯ ಶೋಷಣೆಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾಲೂರಿನ ಘಟನೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ದೈಹಿಕ ದೌರ್ಜನ್ಯ ನಡೆಸಿರುವುದು ಅತ್ಯಂತ ಹೇಯ ಘಟನೆಯಾಗಿದ್ದು ಕರ್ನಾಟಕ ಬಿಜೆಪಿ ಇದನ್ನು ಬಲವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರು ನೈತಿಕ ಹೊಣೆ ಹೊರುವಂತೆ ಒತ್ತಾಯಿಸುತ್ತದೆ ಎಂದಿದ್ದಾರೆ.