For the best experience, open
https://m.samyuktakarnataka.in
on your mobile browser.

ಸುಳ್ಳೇ ಮನೆದೇವರಾದಾಗ ಸತ್ಯಕ್ಕೆಲ್ಲಿ ಹುಡುಕೋದು?

12:05 AM Apr 11, 2024 IST | Samyukta Karnataka
ಸುಳ್ಳೇ ಮನೆದೇವರಾದಾಗ ಸತ್ಯಕ್ಕೆಲ್ಲಿ ಹುಡುಕೋದು

ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳು ವಿಜೃಂಭಿಸುತ್ತಿವೆ!
ಚುನಾವಣೆಯಲ್ಲಿ ಭರವಸೆ ಮತ್ತು ಸುಳ್ಳುಗಳ ತೇರು ಎಳೆಯಲಾಗುತ್ತಿದೆ. ಯಾವುದು ಸತ್ಯ, ಯಾವುದು ಹುಸಿ, ಯಾವುದು ಉದ್ದೇಶಪೂರ್ವಕ, ಯಾವುದು ದುರುದ್ದೇಶಪೂರಿತ ಎನ್ನುವ ಊಹೆಗೂ ನಿಲುಕದಂತಹ ಸತ್ಯ-ಅಸತ್ಯಗಳ, ಭರವಸೆ-ಬೂಟಾಟಿಕೆಗಳ ತೊಳಲಾಟದಲ್ಲಿ ಪ್ರಜೆಗಳು ಸಿಲುಕಿದ್ದಾರೆ.
ಸತ್ಯ ಏನೆಂಬುದು ತಡವಾಗಿಯಾದರೂ ಗೊತ್ತಾಗಲೇಬೇಕು ಎನ್ನುವುದು ಒಪ್ಪಿತ ಮಾತು.
ರಾಜ್ಯದಲ್ಲಿ ಈಗ ಕೇಂದ್ರದ ಅನುದಾನ, ಬರ ಪರಿಹಾರ ನಿಧಿ ಬಿಡುಗಡೆ, ತೆರಿಗೆ ಪಾಲಿನ ತಾರತಮ್ಯ ಮತ್ತು ಗ್ಯಾರಂಟಿಗಳ ಕುರಿತ ಟೀಕೆ ಟಿಪ್ಪಣಿಗಳು ಜೋರಾಗಿವೆ.
ಕೇಂದ್ರ ಸರ್ಕಾರದಿಂದ ಸಾಂವಿಧಾನಿಕವಾಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಅನುದಾನ ಮತ್ತು ಬಜೆಟ್ ಘೋಷಿತ ಕಾಮಗಾರಿಗಳಿಗೆ ಹಣ, ಭೀಕರ ಬರಗಾಲ ಬಿದ್ದರೂ ಕೇಂದ್ರದಿಂದ ಬಿಡುಗಡೆಯಾಗದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಕುರಿತು ಎರಡೂ ರಾಜಕೀಯ ಪಕ್ಷಗಳ ಮೇಲಾಟ, ಅಂಕಿಸಂಖ್ಯೆಗಳ, ಲೆಕ್ಕಾಚಾರಗಳ ನಡುವೆ ಈಗ ಸತ್ಯ ಹೊರಬರುವಂತಾಗಿದೆ.
ಚುನಾವಣೆ ಬಂದಾಗ ಒಂದಿಲ್ಲೊಂದು ಅಂಶಗಳು ಜನರೆದುರು ಬರಲೇಬೇಕು. ಹಾಗೆಯೇ ಆಯಿತು. ರಾಜ್ಯಕ್ಕೆ ಯಾವುದೇ ಅನ್ಯಾಯವೇ ಆಗಿಲ್ಲ. ಕೇಂದ್ರ ಕೊಡಬೇಕಾದುದನ್ನೆಲ್ಲ ಕೊಟ್ಟಿರುತ್ತೇವೆ. ರಾಜ್ಯ ಸುಳ್ಳು ಆರೋಪ ಮಾಡುತ್ತಿದೆ ಎನ್ನುವ ಸ್ಪಷ್ಟಣೆ ನೀಡಲು ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭೀಕರ ಬರವಿದ್ದರೂ ಎನ್‌ಡಿಆರ್‌ಎಫ್ ಅನುದಾನ ಏಕೆ ಬಿಡುಗಡೆ ಮಾಡಿಲ್ಲ? ಎಂಬ ಪ್ರಶ್ನೆ ಎದುರಾದಾಗ ಕೊಡ್ತಿದ್ವಿ ಬರ ಪರಿಹಾರ, ಆದರೆ ಚುನಾವಣೆ ಘೋಷಣೆಯಾಯಿತು. ಚುನಾವಣಾ ಆಯೋಗ ವಿಪತ್ತು ಪರಿಹಾರ ಸಮಿತಿ ಸಭೆ ನಡೆಸಲು ಅವಕಾಶ ನೀಡಲಿಲ್ಲ' ಎಂದು ಬಿಟ್ಟರು! ಯಾವಾಗ ಈ ಹೇಳಿಕೆ ವಿತ್ತ ಸಚಿವೆ ಬಾಯಲ್ಲಿ ಹೊರಬಿತ್ತೋ, ಇಡೀ ರಾಜ್ಯ ಸರ್ಕಾರ, ಆರ್ಥಿಕ ತಜ್ಞರು ಮುಗಿಬಿದ್ದರು. ಚುನಾವಣಾ ಆಯೋಗಕ್ಕೆ ಬರೆದ ಪತ್ರ ತೋರಿಸಿ ಅಥವಾ ಚುನಾವಣಾ ಆಯೋಗ ಬರ ಪರಿಹಾರ ಕ್ರಮ ಕೈಗೊಳ್ಳದಿರಲು, ಅನುದಾನ ಬಿಡುಗಡೆ ಮಾಡದಿರಲು ಬರೆದಿರುವ ನಿರ್ದೇಶನವನ್ನಾದರೂ ಬಹಿರಂಗಪಡಿಸಿ ಎಂದರು. ಇಷ್ಟಕ್ಕೇ ನಿಲ್ಲಲಿಲ್ಲ. ಆ ನಂತರ ಬಂದ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆದ ಗೃಹ ಮಂತ್ರಿ ಅಮಿತ್ ಶಾ,ಕರ್ನಾಟಕ ಸರ್ಕಾರ ಬರ ಪರಿಹಾರ ಕೋರಿ ಸಲ್ಲಿಸಿದ ಪ್ರಸ್ತಾವನೆಯೇ ತುಂಬ ವಿಳಂಬವಾಗಿತ್ತು. ಹಾಗಾಗಿ ಪರಿಗಣನೆಗೆ ಬರಲಿಲ್ಲ' ಎಂದು ಬಿಟ್ಟರು!
ಆಗಲೂ ರಾಜ್ಯ ಸರ್ಕಾರ ಇಡೀ ಕಡತವನ್ನು ಟೈಮ್ ಲೈನ್‌ಗೆ (ಕಾಲಸೂಚಿ) ಅನುಗುಣವಾಗಿ ಬಟಾ ಬಯಲು ಮಾಡಿತು. ಅಮಿತ್ ಶಾ, ಪ್ರಧಾನಿ, ಕೇಂದ್ರ ಸಚಿವರುಗಳು, ಅಧಿಕಾರಿಗಳನ್ನು ಭೇಟಿಯಾಗಿರುವುದು, ಕೇಂದ್ರ ತಂಡ ಬಂದು ಹೋಗಿರುವುದು, ಪ್ರಸ್ತಾವನೆ ಸಲ್ಲಿಸಿರುವುದು ಎಲ್ಲವನ್ನೂ ದಿನ ಕಾಲಕ್ಕನುಗುಣವಾಗಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿತು. ಆಗಲೇ ಪ್ರಸ್ತಾಪವಾದದ್ದು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಲಾಗುತ್ತಿದೆ' ಎನ್ನುವ ಟೀಕೆ. ಈಗ ಸತ್ಯ ಯಾವುದು, ಸುಳ್ಳು ಯಾವುದು, ಯಾವ ಕಾರಣಕ್ಕೆ ಬರ ಪರಿಹಾರ ನೆರವು ಬಂದಿಲ್ಲ ಎನ್ನುವ ಅರಿವು ಮತ್ತು ವಾಸ್ತವ ಸಂಗತಿ ತಿಳಿದುಕೊಳ್ಳುವ ಸ್ಥಿತಿ ಜನರದ್ದು. ಕೇಂದ್ರದ ವಿತ್ತ ಸಚಿವೆ, ಬರ ಪರಿಹಾರದ ಅನುದಾದ ನೆರವು ನೀಡುವುದಕ್ಕೆ ಆಗದ ಕಾರಣವನ್ನು ಚುನಾವಣಾ ಆಯೋಗದ ಮೇಲೆ ಏಕೆ ತೋರಿಸಿದರು? ಈ ಹಿಂದೆಯೇ ಕರ್ನಾಟಕಕ್ಕೆ ಬಡ್ಡಿ ರಹಿತವಾಗಿ ಕೋವಿಡ್ ಕಾಲದಲ್ಲಿ ಹೆಚ್ಚಿನ ಹಣ ನೀಡಿರುವುದನ್ನು ಉದಾಹರಿಸಲು ಹೋಗಿ ಮತ್ತೆ ಎಡವಟ್ಟು ಮಾಡಿಕೊಂಡರು? ಅಮಿತ್ ಶಾ ಅವರು ಎಲ್ಲ ಅಧ್ಯಯನ, ವಿವಾದ, ರಾಜಕಾರಣ ಅರಿಯದೇ ಬರ ಪ್ರಸ್ತಾವನೆಯನ್ನು ಸರ್ಕಾರ ವಿಳಂಬವಾಗಿ ಸಲ್ಲಿಸಿದೆ ಎಂದು ಲಘುವಾಗಿ ಆರೋಪಿಸಿ ಉದ್ದೇಶ ಮರೆ ಮಾಚಲು ಯೋಚಿಸಿದರೇ? ರಾಜ್ಯ ಸರ್ಕಾರ ಚುನಾವಣಾ ಹೊಸ್ತಿಲಿನಲ್ಲಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯಲೆಂದೇ ತೆರಿಗೆ ಅನುದಾನದ ತಾರತಮ್ಯ ಮತ್ತು ಬರ ಪರಿಹಾರ ಅನುದಾನವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿತೇ? ಈ ಎಲ್ಲ ಸತ್ಯವನ್ನು ಈಗ ಜನ ಅರಿಯುವ ಕಾಲ. ಇದೇ ಈಗ ತಾರ್ಕಿಕ ಅಂತ್ಯವನ್ನೂ ಕೂಡ ಕಾಣುವ ಸ್ಥಿತಿ ಇದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಅನಾವೃಷ್ಟಿ ಅನುದಾನದ ಕುರಿತ ವಿವಾದ ವಿಚಾರಣೆ ಆರಂಭವಾಗಿದೆ. ಏಕೆ ಎನ್‌ಡಿಆರ್‌ಎಫ್ ಅನುದಾನವನ್ನು ನೀಡಿಲ್ಲ? ರಾಜ್ಯ ಸರ್ಕಾರಗಳು ನ್ಯಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟುತ್ತಿವೆಯಲ್ಲ ಎಂಬುದನ್ನು ನ್ಯಾಯಾಲಯವೇ ಈಗ ಪ್ರಶ್ನಿಸಿದೆ. ಎರಡು ವಾರಗಳ ಕಾಲಾವಕಾಶವನ್ನೇನೋ ನ್ಯಾಯಾಲಯ ನೀಡಿದೆ. ಅಷ್ಟರಲ್ಲಿ ರಾಜ್ಯದ ಚುನಾವಣೆ ಮುಗಿಯುತ್ತದೆ. ದುರಂತ ಎಂದರೆ ಈ ಸತ್ಯ-ಸುಳ್ಳಿನ ತಾಕಲಾಟದಲ್ಲಿ ಬರದಿಂದ ಜನ ತತ್ವಾರ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿಲ್ಲ. ಕೈಗೆ ಕೆಲಸವಿಲ್ಲ. ನರೇಗಾ ಹಣ ಬಿಡುಗಡೆಯಾಗಿಲ್ಲ. ಕೂಲಿ ದಿನ ಹೆಚ್ಚಳವಾಗಿಲ್ಲ. ರಾಜ್ಯ ಸರ್ಕಾರ ೨೦೦೦ ರೂ ಪ್ರತಿ ಕುಟುಂಬಕ್ಕೆ ಮಧ್ಯಂತರ ಪರಿಹಾರ ಎಂದು ಘೋಷಿಸಿ ಬಿಡುಗಡೆ ಮಾಡಿದೆ. ಯಾರ ಬದುಕಿಗೆ ಸಾಕು ೨ ಸಾವಿರ ರೂಪಾಯಿ ಎಂಬ ಪ್ರಶ್ನೆ ಎದ್ದಿದೆ. ಹಾಗೆ ಪ್ರಶ್ನಿಸುವವರು ಎನ್‌ಡಿಆರ್‌ಎಫ್ ಹಣ, ಕೇಂದ್ರದ ನೆರವು ಬಿಡುಗಡೆ ಮಾಡಿಲ್ಲವೇಕೆಂದು ಸಮಜಾಯಿಷಿ ನೀಡುತ್ತಿಲ್ಲ. ಕೇಳುತ್ತಲೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ, ತಾರತಮ್ಯ ಧೋರಣೆಗಳಿಗೆ ಡಬಲ್ ಎಂಜಿನ್ ಸರ್ಕಾರ ಇಲ್ಲದಿರುವುದು ಕಾರಣವೇ? ಈ ರಾಜಕೀಯ ಅಂಶಕ್ಕಾಗಿನ ಪ್ರತೀಕಾರವೇ? ಹಾಗೇನಿಲ್ಲ. ಈ ಹಿಂದೆ ಎರಡು ಸಾರೆ ರಾಜ್ಯದಲ್ಲಿ ಭಯಂಕರ ಪ್ರವಾಹ, ಅತಿವೃಷ್ಟಿಯಾಗಿ ಕೊಡಗು, ಶಿವಮೊಗ್ಗ, ಉತ್ತರ ಕನ್ನಡದ ಮಲೆನಾಡು ಪ್ರದೇಶ, ಜೊತೆಗೆ ಎಲ್ಲೆಡೆಯೂ ರಸ್ತೆ-ಹೊಲ-ಗದ್ದೆ-ತೋಟ ಪಟ್ಟಿಗಳೆಲ್ಲ ಕೊಚ್ಚಿ ಹೋದವು. ಪ್ರಳಯ ಸ್ವರೂಪದಂತೆ ರಾಜ್ಯ ಕಾಣುತ್ತಿತ್ತು. ಆಗ ಡಬಲ್ ಎಂಜಿನ್ ಸರ್ಕಾರವೇ ಇತ್ತು. ಆದರೆ, ಕೆಲವರಿಗೆ ಒಲ್ಲದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಿದ್ದರಿಂದ ಪ್ರಧಾನಿ, ಕೇಂದ್ರ ಗೃಹ ಸಚಿವರು, ಕೃಷಿ ಸಚಿವರು ಯಾರೂ ಇತ್ತ ಸುಳಿಯಲಿಲ್ಲ. ಅತಿವೃಷ್ಟಿಯ ಹಾನಿಗೆ ಪರಿಹಾರ ದೊರೆಯಲಿಲ್ಲ! ಈ ಸತ್ಯ ಅಲ್ಲಿಯೇ ಮರೆಮಾಚಿಹೋಯಿತು..! ಈಗ ರಾಜ್ಯದಲ್ಲಿ ಶುರುವಾಗಿದೆ-ಸುಳ್ಳೇ ಅವರ ಮನೆಯ ದೇವರು' ಎನ್ನುವ ಆರೋಪ ಪ್ರತ್ಯಾರೋಪ. ಕಾಂಗ್ರೆಸ್ ನಾಯಕರು, ಬಿಜೆಪಿಯತ್ತ; ಬಿಜೆಪಿ-ಜೆಡಿಎಸ್ ಕಾಂಗ್ರೆಸ್‌ನತ್ತ… ನಾಯಕರ ಹೆಸರೆತ್ತಿ ನಾಮಾಂಕಣ ಮಾಡುತ್ತಿದ್ದಾರೆ. ಇದರೊಟ್ಟಿಗೆ ತುಷ್ಟೀಕರಣ ಸೇರಿಕೊಂಡಿದೆ. ಕೋಮುವಾದ, ಜಾತಿ- ಪಂಗಡಗಳ ವಿವಾದಗಳೂ ಸೇರಿಕೊಂಡು ಸುಳ್ಳು ಯಾರ ಮನೆ ದೇವರು ಎನ್ನುವುದನ್ನು ಈಗ ಹುಡುಕುವ ಪ್ರಸಂಗ.
ರಾಜ್ಯದ ಮಟ್ಟಿಗಂತೂ ಸುಳ್ಳು-ಸತ್ಯದ ಜಿಜ್ಞಾಸೆಯಲ್ಲಿ ನಮ್ಮ ಹಕ್ಕು' ಈಗ ಮುನ್ನೆಲೆಗಂತೂ ಬಂದಿದೆ. ಸುಳ್ಳು ಸತ್ಯದ ಅರಿವು ಬರುವುದೇ ವಾಸ್ತವದ ಸ್ಥಿತಿ ಅರಿತಾಗ. ಕೆಲ ದಿನಗಳ ಹಿಂದೆ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ರಾಜ್ಯದ ಹಿರಿಯ ರಾಜಕಾರಣಿಗಳ ಸಮಾವೇಶ ಜರುಗಿತು. ಆಗ ಈ ಕಲ್ಯಾಣ ಕರ್ನಾಟಕದಲ್ಲಿ ನಾವು ನಮ್ಮ ಸರ್ಕಾರ ಇದ್ದಾಗ ಸಾಕಷ್ಟು ಅಭಿವೃದ್ಧಿಗೈದಿದ್ದೇವೆ. ಎಲ್ಲರಿಗೂ ಮನೆ, ಮನೆಗೆ ನೀರು, ಶೌಚಾಲಯ, ನೈರ್ಮಲ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ ಎಂದು ಸಾರುತ್ತಿದ್ದಂತೇ ಮಹಿಳೆಯರು, ಯುವಕರು ತರಾಟೆಗೆ ತೆಗೆದುಕೊಂಡರು. ಎಲ್ಲಿದೆ ಶೌಚಾಲಯ? ಎಲ್ಲಿದೆ ಮನೆ? ನಮಗೆ ತೋರಿಸಿ. ಎಲ್ಲಿಗೆ ಕೊಟ್ಟಿದ್ದೀರಿನಿರ್ಮಲ ಗ್ರಾಮ ಯೋಜನೆ' ಎಂದು ನೇರವಾಗಿ ಪ್ರಶ್ನಿಸಿದರು.
ಭರವಸೆ ಭಾಷಣ ಸಾಕು. ಕನಿಷ್ಠ ಶೌಚಾಲಯವನ್ನಾದರೂ ಕಟ್ಟಿಸಿದಿರಾ? ಸಾರ್ವಜನಿಕ ಶೌಚಾಲಯವನ್ನೂ ನೀಡಿಲ್ಲ. ಇನ್ನೆಲ್ಲಿ ಖಾಸಗಿ ಶೌಚಾಲಯ ಎಂದು ಪ್ರಶ್ನಿಸುವುದರ ಜೊತೆಗೆ, ಶೌಚಾಲಯ ನಿರ್ಮಾಣಕ್ಕೆ ಇರುವ ಮಾನದಂಡ ಬದಲಾಯಿಸಿ ಜನತೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿರುವುದನ್ನು ತೋರಿಸಿದರು. ಏನು ಹೇಳುತ್ತಾರೆ? ಅಲ್ಲಿಂದ ಕಾಲು ಕಿತ್ತರು ಅಷ್ಟೇ. ಭರವಸೆ ಮತ್ತು ಆಶ್ವಾಸನೆಗಳ ನಂಬಿ ಜನ ಇನ್ನೆಷ್ಟು ಕಾಲ ಬದುಕಬೇಕಿದೆ?.
ಮುಖ್ಯಮಂತ್ರಿಗಳು ಸುಳ್ಳನ್ನು ಸತ್ಯದ ಮೇಲೆ ಹೊಡೆದಂತೆ ಹೇಳುತ್ತಾರೆಂದು ಪ್ರತಿಪಕ್ಷದ ನಾಯಕರು ಆರೋಪಿಸಿ ಹತ್ತು ವರ್ಷಗಳ ಮನಮೋಹನ ಸಿಂಗ್ ಸರ್ಕಾರದಲ್ಲಿ ನೀಡಿದ್ದ ಅನುದಾನಕ್ಕಿಂತ ದ್ವಿಗುಣ ನೀಡಿದ್ದೇವೆ ಎನ್ನುತ್ತಾರೆ. ಆದರೆ ಜಿಎಸ್‌ಟಿ ಬಂದಿರುವುದೇ ಈಗ. ಬಜೆಟ್, ತೆರಿಗೆ ಸಂಗ್ರಹ ಹೆಚ್ಚಳವಾದದ್ದೂ ಈ ನಾಲ್ಕೈದು ವರ್ಷಗಳಲ್ಲಿ.
ಕಾನೂನು ಪ್ರಕಾರ ಜಿಎಸ್‌ಟಿ ಅನುದಾನ ನೀಡಲಾಗಿದೆಯೇ? ಇದಕ್ಕೆ ಉತ್ತರ ಇಲ್ಲ. ಇದರೊಟ್ಟಿಗೆ ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ-ಅಂಕೋಲಾ ರೈಲು ಎಲ್ಲವೂ ಸೇರಿಕೊಂಡಿವೆ. ಸತ್ಯ ಸುಳ್ಳಿನ ತೇರು ಶುರುವಾಗಿದೆ.
ಇದರೊಟ್ಟಿಗೆ ಎಸ್‌ಸಿ-ಎಸ್‌ಟಿ ಸೇರ್ಪಡೆ, ಜಾತಿ ಗಣತಿ, ಮಠ ಮಂದಿರ ವಿವಾದಗಳ ಜೊತೆಗೆ ಬೆಲೆ ಏರಿಕೆ, ಅಂದು ಇಂದಿನ ತುಲನೆಗಳ ನಡುವೆ `ರಾಮ' ಸಿಕ್ಕಿಕೊಂಡಿದ್ದಾನೆ. ಚುನಾವಣೆ ಎಂದರೇ ಹೀಗೆ. ಮತ ಗಳಿಕೆಯ ಯಾವುದೇ ರೀತಿ ರಿವಾಜು, ನಿಶ್ಚಿತ ಸೂತ್ರಗಳಿಲ್ಲ. ಆ ಕ್ಷಣದಲ್ಲಿ ಮತ ಕ್ರೋಢೀಕರಣಕ್ಕೆ ಏನೆಲ್ಲ ಸುಳ್ಳು-ಸತ್ಯ, ಆಶ್ವಾಸನೆಗಳನ್ನು ನೀಡಲು ಸಾಧ್ಯವೋ ಅವೆಲ್ಲವೂ ವಿಜೃಂಭಿಸುತ್ತವೆ.
ಸಮಾಜವೇ ಒಪ್ಪುವಂತೆ ಸುಳ್ಳು ಹೇಳುವುದೇ ಈಗಿನ ರಾಜಕಾರಣ. ಸುಳ್ಳನ್ನೇ ಸತ್ಯ ಎಂದು ವಾದಿಸುವವರ ನಡುವೆ, ಸುಳ್ಳಿನ ಸತ್ಯಾಸತ್ಯತೆಯನ್ನು ಅರಿಯುವುದೇ ಮತದಾರನಿಗೆ ಇರುವ ಚಾಣಾಕ್ಷತನ. ಇಷ್ಟಕ್ಕೂ ಕಲ್ಪನೆಯನ್ನೇ ಜನರೆದುರು ಬಿಚ್ಚಿಟ್ಟು ಅದೇ ಸರ್ಕಾರದ ಧೋರಣೆ ಎಂದು ಸಾಬೀತುಪಡಿಸುವವರಿಂದಲೂ ಈಗ ಅಪಾಯ ಎದುರಾಗಿದೆ.
ಅಂತೂ ಸತ್ಯವಂತರಿಗೆ ಇದು ಕಾಲವಲ್ಲ… ರಾಜಕಾರಣದಲ್ಲಿ ಎಲ್ಲರ ಮನೆ ದೇವರೂ ಸುಳ್ಳೇ. ಎಲ್ಲರ ಭರವಸೆಗಳು ಸ್ವರ್ಗದ ಬಾಗಿಲುಗಳೇ, ಅಲ್ಲವೇ!?