For the best experience, open
https://m.samyuktakarnataka.in
on your mobile browser.

ಸುಳ್ಳೋತ್ಪಾದಕರಿಗೆ ಈ ಕಾರ್ಯಕ್ರಮವೇ ಒಂದು ಉತ್ತರ

05:05 PM Jan 29, 2024 IST | Samyukta Karnataka
ಸುಳ್ಳೋತ್ಪಾದಕರಿಗೆ ಈ ಕಾರ್ಯಕ್ರಮವೇ ಒಂದು ಉತ್ತರ

ತುಮಕೂರು: ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ, ಸರ್ಕಾರದಲ್ಲಿ ಹಣ ಇಲ್ಲ ಎಂದು ಸುಳ್ಳೋತ್ಪಾದಕರಿಗೆ ಈ ಕಾರ್ಯಕ್ರಮವೇ ಒಂದು ಉತ್ತರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತುಮಕೂರು ಜಿಲ್ಲೆಯ 30,125 ಫಲಾನುಭವಿಗಳಿಗೆ ಹಲವು ಇಲಾಖೆಗಳ ಸವಲತ್ತು ಮತ್ತು ಸಲಕರಣೆಗಳನ್ನು ವಿತರಿಸಿ, 697 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿರುವ ಅವರು ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ, ಸರ್ಕಾರದಲ್ಲಿ ಹಣ ಇಲ್ಲ ಎಂದು ಸುಳ್ಳೋತ್ಪಾದಕರಿಗೆ ಈ ಕಾರ್ಯಕ್ರಮವೇ ಒಂದು ಉತ್ತರ. ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಈ ಯೋಜನೆಗಳ ಫಲಾನುಭವಿಗಳು ಸುಳ್ಳೋತ್ಪಾದಕರ ಮುಖಕ್ಕೆ ಸರಿಯಾಗಿ ಉತ್ತರ ನೀಡಬೇಕು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ರಾಜ್ಯದ ಪಾಲಿನ ಒಂದೇ ಒಂದು ರೂಪಾಯಿ ಬರ ಪರಿಹಾರವನ್ನೂ ನೀಡಿಲ್ಲ. ಆದರೆ ರಾಜ್ಯ ಸರ್ಕಾರ 29,28,910 ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತನ್ನು ಜಮೆ ಮಾಡಿದೆ.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹೊಸ ಅಭಿವೃದ್ಧಿ ಕಾರ್ಯಗಳನ್ನೂ ಕೈಗೆತ್ತಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ನಾಡಿನ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿರುವುದರಿಂದ ಕೇಂದ್ರದ ಬೆಲೆ ಏರಿಕೆಯಿಂದಾಗಿ ಸೃಷ್ಟಿಯಾಗಿದ್ದ ಸಂಕಷ್ಟವನ್ನು ನಾವು ಕಡಿಮೆ ಮಾಡಿದ್ದೇವೆ. ಆದರೂ ಬಿಜೆಪಿ ಪರಿವಾರದವರು ಸುಳ್ಳಿನ ಉತ್ಪಾದನೆಯಲ್ಲಿ ತೊಡಗಿದ್ದಾರೆ.
2013-18ರ ವರೆಗೆ ನಾವು ಕೊಟ್ಟ ಎಲ್ಲಾ ಭರವಸೆಗಳನ್ನೂ ಈಡೇರಿಸಿದ್ದೇವೆ. ಈ ಬಾರಿ ಚುನಾವಣೆ ವೇಳೆಯಲ್ಲಿ ಕೊಟ್ಟಿದ್ದ ಐದು ಗ್ಯಾರಂಟಿಗಳನ್ನು 8 ತಿಂಗಳ ಒಳಗೆ ಜಾರಿಗೆ ಮಾಡಿದ್ದೇವೆ. ಉಳಿದ ಭರವಸೆಗಳನ್ನೂ ಈಡೇರಿಸುತ್ತಲೇ ಇದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿಯವರೂ ಇದ್ದಾರೆ. ಆದರೂ ಬಿಜೆಪಿಯವರು ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳುಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ.
142 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಒಂದು ಕೋಟಿ 50 ಲಕ್ಷ ಮಹಿಳೆಯರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಅನುಕೂಲಗಳು ತಲುಪುತ್ತಿವೆ. ಒಂದು ಕೋಟಿ 18 ಲಕ್ಷ ಮಂದಿಗೆ ಗೃಹಜ್ಯೋತಿಯ ಅನುಕೂಲಗಳು ಸಿಕ್ಕುತ್ತಿವೆ. ಯುವನಿಧಿಗಾಗಿ ಲಕ್ಷಾಂತರ ಯುವಕ ಯುವತಿಯರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.