ಸೇವಾಗ್ರಾಮದ ಪಾಠಗಳು…
ಮೇಘನಾ ಬ್ಯಾಹಟ್ಟಿ
ವರ್ಧಾ ಆಶ್ರಮದಲ್ಲಿ ಮಹಾತ್ಮ ಗಾಂಧಿಯವರು ಚರಕದಿಂದ ನೂಲುತ್ತ ಕುಳಿತಿದ್ದರು. ಪಕ್ಕದಲ್ಲಿ ಕುಳಿತು ಶ್ರದ್ಧೆಯಿಂದ ನೂಲು ತೆಗೆಯುತ್ತಿದ್ದ ಮಹಿಳೆಯನ್ನು ನೋಡಿ, ‘ಈ ಹಂಜಿಗಳನ್ನು ತುಂಬ ಚೆನ್ನಾಗಿ ಮಾಡಿದ್ದಿ, ನೂಲು ಸರಾಗವಾಗಿ ಬರುತ್ತದೆ’ ಎಂದು ಪ್ರಶಂಸಿಸಿದರು. ನಸುನಕ್ಕ ಮಹಿಳೆ, ‘ಬಾಪು, ತಮಗೆ ಕೆಲ ಪ್ರಶ್ನೆಗಳನ್ನು ಕೇಳಬೇಕೆಂದಿರುವೆ. ಕೇಳಲೇ?’ ಎಂದಾಗ, ‘ಆಗಬಹುದು’ ಎಂದು ಬಾಪು ತಲೆಯಾಡಿಸಿದರು.
‘ತಾವು ದೇವರನ್ನು ಕಂಡಿದ್ದೀರಾ?’ ‘ಹೂಂ, ದೀನದಲಿತರೇ ನನ್ನ ದೇವರು. ಅವರ ಸೇವೆಯೇ ದೇವರ ಸೇವೆ’ ಎಂದರು ಬಾಪು. ಮತ್ತೆ, ಮಹಿಳೆ ಬಾಪೂವಿನತ್ತ ನೋಡಿ, ‘ಸತ್ಯಾಗ್ರಹವಾಯಿತು, ಚಳವಳಿಯಾಯಿತು. ಆದರೂ ಬಹು ದಿನಗಳಿಂದ ನಮಗೆ ಸ್ವಾತಂತ್ರ್ಯ ಬರಲಿಲ್ಲ. ನಾವು ಯಾವಾಗ ಸ್ವತಂತ್ರರಾಗುತ್ತೇವೆ?’ ಅದಕ್ಕೆ ಬಾಪು ಗಂಭೀರವದನರಾಗಿ ಹೇಳಿದರು, ‘ಶೀಘ್ರದಲ್ಲಿಯೇ ದೊರೆಯುತ್ತದೆ, ಅದೂ ಮಧ್ಯರಾತ್ರಿಯೇ ದೊರೆಯುತ್ತದೆ.’ ಆಶ್ಚರ್ಯಚಕಿತಗೊಂಡ ಮಹಿಳೆ, ‘ಮಧ್ಯರಾತ್ರಿಯೇ ದೊರೆಯುತ್ತದೆ ಎಂದು ಹೇಗೆ ಹೇಳುವಿರಿ?’ ಪುನಃ ಪ್ರಶ್ನಿಸಿದಾಗ, ಬಾಪು ನಸು ನಕ್ಕು ನುಡಿದರು, ‘ಯಾರು ಹನ್ನೆರಡು ವರ್ಷ ಸತ್ಯವನ್ನೇ ನುಡಿಯುತ್ತಾರೋ ಮುಂದೆ ಅವರ ಬಾಯಿಂದ ಹೊರಡುವ ಎಲ್ಲ ಮಾತುಗಳೂ ಸತ್ಯವಾಗಿರುತ್ತವೆ.’
ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಗಾಂಧಿಯವರ ಪಕ್ಕದಲ್ಲಿ ಕುಳಿತು, ಅವರಿಂದ ಇಂತಹ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದ ಮಹಿಳೆಯೇ ಸ್ವಾತಂತ್ರ್ಯ ಹೋರಾಟಗಾರ್ತಿ ಕುಸುಮಾವತಿ ದೇಶಪಾಂಡೆ. ಬಿಜಾಪುರ ಜಿಲ್ಲೆಯ ಕೋಲ್ದಾರದವರಾದ ಶಂಕರರಾವ್ ದೇಶಪಾಂಡೆ ಅವರದು ದೊಡ್ಡ ಹೆಸರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಅವರ ಪತ್ನಿಯೇ ಕುಸುಮಾವತಿ.
ಅವರು ಹುಟ್ಟಿದ್ದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ. ಅವರು ಹುಟ್ಟಿದ ದಿನವೇ ಗಾಂಧಿಯವರು ಗದಗಿಗೆ ಆಗಮಿಸಿದ್ದು ಯೋಗಾಯೋಗ. ಕುಸುಮಾವತಿಯವರ ತಂದೆ ಶಿವಪ್ಪಯ್ಯ ಇನಾಮದಾರ. ‘ಮಹಾಪುರುಷ’ ಎಂದು ಹೆಸರಾದವರು. ತಾಯಿ ಪಾರ್ವತೀಬಾಯಿ. ಅವರು ಹಂಪಿಗೋಪುರ ಕಟ್ಟಿಸಿದ್ದ ಪ್ರಸಿದ್ಧ ಬಿಷ್ಟಪ್ಪಯ್ಯನವರ ಮನೆತನದವರು. ಡಾ|| ನಾ. ಸು. ಹರ್ಡಿಕರರ ಆದೇಶದ ಮೇರೆಗೆ, ಹೆಚ್ಚಿನ ಶಿಕ್ಷಣಕ್ಕಾಗಿ ಕಾಣದ ಕಡಲಿಗೆ ಹಂಬಲಿಸಿದ ಮನ ಹೊತ್ತು ಶಂಕರರಾವ್ ದೇಶಪಾಂಡೆ - ಕುಸುಮಾವತಿ ದಂಪತಿ ವರ್ಧಾದ ಸೇವಾಗ್ರಾಮ ಆಶ್ರಮದತ್ತ ಪ್ರಯಾಣ ಬೆಳೆಸಿದರು. ವರ್ಧಾ ಕಲಿಸಿದ ಪಾಠ ಎಂದೆಂದಿಗೂ ಈ ದಂಪತಿಯ ಎದೆಗೂಡಲ್ಲಿ ಬೆಚ್ಚಗಿದೆ. ಅವರಿಗೆ ಆಶ್ರಮದ ನಿಯಮಗಳ ಬಗ್ಗೆ, ಅವುಗಳ ಪಾಲನೆಯ ಬಗ್ಗೆ ಅರಿವಿತ್ತು. ಸತಿ-ಪತಿಗಳೆಂಬ ಕಾರಣದಿಂದ ಎರಡು ಕೋಣೆಗಳ ಮನೆಯಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗಿತ್ತು.
ಆಶ್ರಮದ ದಿನಚರಿ
ಬೆಳಗಿನ ಜಾವ ೫.೩೦ಕ್ಕೆ ಪ್ರಾರ್ಥನೆಯೊಂದಿಗೆ ಆಶ್ರಮದಲ್ಲಿ ಎಲ್ಲರ ದಿನಚರಿ ಪ್ರಾರಂಭವಾಗುತ್ತಿತ್ತು. ಅಲ್ಲಿ ಎಲ್ಲ ಕಾರ್ಯಗಳಿಗೂ ಸಮಾನ ಗೌರವ. ಎಲ್ಲದಕ್ಕೂ ‘ಯಜ್ಞ’ದ ಪರಿಭಾಷೆ. ಸಫಾಯಿ ಮಾಡುವುದು ‘ಸಫಾಯಿ ಯಜ್ಞ’. ಅಲ್ಲಿ ಯಾರು ಬೇಕಾದರೂ ಗಾಂಧಿಯವರೊಂದಿಗೆ ಮಾತಾಡಬಹುದು. ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು, ಓಡಾಡಬಹುದಿತ್ತು. ಯಾವುದೇ ಭೇದಭಾವ ಇರಲಿಲ್ಲ.
ಅಲ್ಲಿನ ವಿದ್ಯಾಲಯದಲ್ಲಿ ಹತ್ತಿಯನ್ನು ಸ್ವಚ್ಛ ಮಾಡುವುದರಿಂದ ನೇಯ್ಗೆಯ ಅಂದರೆ ಬಟ್ಟೆ ತಯಾರಿಸುವವರೆಗಿನ ಮೂರು ವಿಭಾಗಗಳಲ್ಲಿ ತರಬೇತಿಯನ್ನು ನೀಡುತ್ತಿದ್ದರು. ದೇಶಪಾಂಡೆ ದಂಪತಿಯ ಹತ್ತಿರ ‘ಮೋಹನ ಚರಕ’ ಎಂಬ ನೂಲು ತೆಗೆಯುವ ಚರಕವಿತ್ತು. ಅದರಲ್ಲಿ ಎರಡೂ ಕೈಗಳಿಂದ ನೂಲು ತೆಗೆಯುತ್ತಿದ್ದರು. ಇದರ ಜೊತೆಗೆ ಅಲ್ಲಿ ಬೌದ್ಧಿಕ ವರ್ಗಗಳು ಕೂಡ ನಡೆಯುತ್ತಿದ್ದವು. ಮುಖ್ಯವಾಗಿ ಗಾಂಧಿ ತತ್ತ್ವಜ್ಞಾನ, ಕಾಂಗ್ರೆಸ್ ಇತಿಹಾಸ, ಖಾದಿಶಾಸ್ತ್ರಗಳ ಜೊತೆಗೆ ಕೈಗಾರಿಕೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹೇಳುತ್ತಿದ್ದರು.
ಸಂಭ್ರಮದ ಸರಳ ಮದುವೆ
ಸರಳತೆಗೆ ಮತ್ತೊಂದು ಹೆಸರು ಮಹಾತ್ಮ ಗಾಂಧೀಜಿ. ದೇಶಪಾಂಡೆ ದಂಪತಿ ಆಶ್ರಮದಲ್ಲಿದ್ದಾಗ ನಡೆದ ಮರೆಯಲಾಗದ ಸಂಭ್ರಮದ ಘಟನೆಯೆಂದರೆ ಅಲ್ಲಿ ಜರುಗಿದ ಮದುವೆ. ಅದೊಂದು ಆಡಂಬರವಿಲ್ಲದ ಸರಳ, ಆದರ್ಶ ವಿವಾಹ. ಪ್ರಾತಃಕಾಲದ ಉಲ್ಲಾಸದ ಸಮಯ. ಸೂರ್ಯ ಹೊಂಗಿರಣಗಳನ್ನು ಪಸರಿಸುತ್ತ, ನೀಲವರ್ಣದ ಬಾನಿನಲ್ಲಿ ಮುನ್ನಡೆಯುತ್ತಿದ್ದ. ಹಿತವಾದ ತಂಗಾಳಿ ಸೂಸುತ್ತಿತ್ತು. ಹಕ್ಕಿಗಳ ಇಂಪಾದ ಚಿಲಿಪಿಲಿ ಧ್ವನಿ. ಆಶ್ರಮವಾಸಿಗಳೆಲ್ಲ ಶುಭ್ರ ಬಿಳಿ ಖಾದಿ ಬಟ್ಟೆಗಳನ್ನು ಧರಿಸಿದ್ದರು. ಹುಲ್ಲುಹಾಸಿನ ಚಾಪೆಯ ಮೇಲೆ ವಧೂ-ವರರನ್ನು ಕೂಡಿಸಿಕೊಂಡ ಗಾಂಧೀಜಿ ಅವರ ಕೈಗೆ ಕಿಸಾನ್ ಚರಕವನ್ನು ಕೊಟ್ಟರು. ಗಾಂಧಿಯವರ ಮೊಮ್ಮಗ (ಸೋದರಳಿಯನ ಮಗ) ಕನು ಗಾಂಧಿ ವರ. ಬಂಗಾಳಿ ಮೂಲದ ಆಭಾ ಬೆಹನ್ ವಧು. ಗಾಂಧೀಜಿ ಇಬ್ಬರ ಹಣೆಗೂ ತಿಲಕವನ್ನಿಟ್ಟರು. ಭಗವದ್ಗೀತೆಯ ೧೨ನೇ ಅಧ್ಯಾಯವನ್ನು ಪಠಿಸಿ ದೀಕ್ಷೆ ಬೋಧಿಸಿದರು. ಮದುವೆಯ ಸಿಹಿಯಾಗಿ ಎಲ್ಲರಿಗೂ ಶೇಂಗಾ ಉಂಡಿಯನ್ನು ಹಂಚಿದರು. ಅಲ್ಲಿಗೆ ಮುಗಿಯಿತು ಆಡಂಬರವಿಲ್ಲದ ಸರಳ ಮದುವೆ.
ದೇಶದ ದಿಕ್ಸೂಚಿಯ ಕೇಂದ್ರ
ಸೇವಾಗ್ರಾಮದಲ್ಲಿ ಮಾರ್ಗದರ್ಶನ ಸಿಗುತ್ತಿದ್ದುದು ವಿಧೇಯಕ ಕಾರ್ಯಕ್ರಮಗಳಿಗಷ್ಟೇ ಆಗಿರಲಿಲ್ಲ. ದೇಶದ ರಾಜಕಾರಣಿಗಳಿಗೆ ಅದೊಂದು ದಿಕ್ಸೂಚಿಯ ಕೇಂದ್ರವೂ ಆಗಿತ್ತು. ದೇಶದ ರಾಜಕೀಯ ಧುರೀಣರು ಆಗಾಗ ಬಂದು ಬಾಪು ಅವರನ್ನು ಕಂಡು, ವಿಚಾರ ವಿನಿಮಯ ಮಾಡುತ್ತಿದ್ದರು. ಅಲ್ಲದೆ ಹಲವಾರು ವಿದೇಶಿ ಗಣ್ಯರು, ವಿಚಾರವಂತರು ಬಾಪು ಭೆಟ್ಟಿಗೆ ಬರುತ್ತಿದ್ದರು. ದೇಶಪಾಂಡೆ ದಂಪತಿ ವರ್ಧಾ ಆಶ್ರಮದಲ್ಲಿ ಗಾಂಧಿ ಎಂಬ ವ್ಯಕ್ತಿಯನ್ನಷ್ಟೇ ಕಂಡಿರಲಿಲ್ಲ. ಗಾಂಧಿಯವರು ಒಂದು ತತ್ತ್ವವಾಗಿ ಬದುಕಿದ ಜೀವನವನ್ನು ಕಂಡಿದ್ದರು. ಅಲ್ಲಿ ಗಾಂಧಿತತ್ತ್ವದಲ್ಲಿ ಗಾಂಧಿಯನ್ನು ಮೀರಿಸಿದವರಿದ್ದರು. ಪ್ರೊ. ಬನ್ಸಾಲಿ ಎಂಬ ವಿದ್ವಾಂಸರಿದ್ದರಂತೆ, ನಾಲ್ಕು ಪಿಎಚ್.ಡಿ. ಪಡೆದವರು. ಒಮ್ಮೆ ಗಾಂಧಿ, ‘ಎಷ್ಟು ಮಾತಾಡ್ತೀರಿ ಬನ್ಸಾಲಿ?’ ಎಂದು ಕೇಳಿದ್ದಕ್ಕೆ ಮಾತೇ ಆಡಲು ಆಗದಂತೆ ಕಟಬಾಯಿಯನ್ನು ಹೊಲಿಸಿಕೊಂಡು ಬರೀ ಕರ್ಮಚಾರಿಗಳಾಗಿದ್ದರಂತೆ.
ದೇಶಪಾಂಡೆ ದಂಪತಿ ಸೇವಾಗ್ರಾಮದಲ್ಲಿ ಮುಂಬೈ ಹಾಸ್ಪಿಟಲ್‌ನ ಡೀನ್ ಜೀವರಾಜ್ ಮೆಹತಾ, ಸುಶೀಲಾ ನಯ್ಯರ್, ಜಮ್ನಾಲಾಲ್ ಬಜಾಜ್ ಮತ್ತು ಅವರ ಪತ್ನಿ ಜಾನಕೀದೇವಿ ಬಜಾಜ್ ಅವರೊಂದಿಗೆ ಸೇರಿಕೊಂಡು ಮನೆಮನೆಗೆ ಹೋಗಿ ಗರ್ಭಿಣಿಯರಿಗೆ ಹಾಗೂ ರೋಗಿಗಳಿಗೆ ಔಷಧ ಸೇವನೆ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಆಶ್ರಮದ ಎಲ್ಲ ಮಹಿಳೆಯರು ಅಕ್ಷರ ಕಲಿಸಲು ಹೋಗುತ್ತಿದ್ದರು. ಅಲ್ಲಿಂದ ಬಂದ ಮೇಲೆ ಬಾಪು ಅವರಿಗೆ ವರದಿಯನ್ನು ಒಪ್ಪಿಸುತ್ತಿದ್ದರು.
ಗಾಂಧಿ ಎಂಬ ಸಮೂಹದ ಶಕ್ತಿ
ಯಾವಾಗಲೂ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದ ಗಾಂಧೀಜಿ ವಿನೋದಪ್ರಿಯರಾಗಿದ್ದರು. ಕಲೆ, ಕಾವ್ಯ, ಸಾಹಿತ್ಯಗಳಲ್ಲಿಯೂ ಅಭಿರುಚಿ ಹೊಂದಿದ್ದರು. ಅವರು ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಒಂದು ಸಮೂಹದ ಶಕ್ತಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಬಿಡುವಿಲ್ಲದ ಎಷ್ಟು ಕಾರ್ಯಗಳಲ್ಲಿ ಒತ್ತಡವಿದ್ದರೂ, ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿ ಅವರವರ ಇಚ್ಛೆಗೆ ತಕ್ಕಂತೆ ಮಾರ್ಗದರ್ಶನ ಮಾಡುತ್ತಿದ್ದರು. ಸರಳತೆ, ಉದಾರ ಮನೋಭಾವ, ಎಲ್ಲ ಜನರ ಬಗ್ಗೆ ಪ್ರೀತಿ, ವಿಶ್ವಾಸ, ಅಹಿಂಸೆ, ನಿಸ್ವಾರ್ಥ ಸೇವೆ, ಸಮಯಕ್ಕೆ ಪ್ರಾಧಾನ್ಯತೆ - ಈ ಎಲ್ಲ ಗುಣಗಳು ಗಾಂಧಿಯವರನ್ನು ಮಹಾತ್ಮರನ್ನಾಗಿಸಿವೆ. ಇಂತಹ ಮಹಾತ್ಮರೊಂದಿಗೆ ನಾಲ್ಕು ವರ್ಷಗಳ ಕಾಲ ಆಶ್ರಮದಲ್ಲಿ ಜೊತೆಯಾಗಿರಲು ದೇಶಪಾಂಡೆ ದಂಪತಿಗೆ ಅವಕಾಶ ದೊರಕಿತ್ತು. ಭೂದಾನ ಚಳವಳಿಯ ಹರಿಕಾರ ಎಂದು ಖ್ಯಾತರಾಗಿದ್ದ ಆಚಾರ್ಯ ವಿನೋಬಾ ಭಾವೆ ಅವರ ಪವನಾರ ಆಶ್ರಮಕ್ಕೂ ದೇಶಪಾಂಡೆ ದಂಪತಿ ಭೇಟಿ ನೀಡಿದ್ದರು.
ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ದೇಶಪಾಂಡೆ ದಂಪತಿಗೆ ಅನೇಕ ಹಿರಿಯ ನೇತಾರರ ಸಂಪರ್ಕ ಒದಗಿ ಬಂದಿತ್ತು. ಸುಭಾಷಚಂದ್ರ ಬೋಸ್, ದಾದಾಭಾಯಿ ನವರೋಜಿ, ಮಹಾದೇವ ದೇಸಾಯಿ, ನೆಹರು, ರಾಜಗೋಪಾಲಾಚಾರಿ, ಸುಚೇತಾ ಕೃಪಲಾನಿ, ಹನುಮಂತರಾವ್ ಕೌಜಲಗಿ, ಹಾರನಹಳ್ಳಿ ರಾಮಸ್ವಾಮಿ, ಕೆ.ಎ. ವೆಂಕಟರಾಮಯ್ಯ ಅವರಲ್ಲಿ ಪ್ರಮುಖರು.
ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿನ ನಿಃಸ್ವಾರ್ಥ ಸೇವೆಯನ್ನು ಗುರುತಿಸಿ ಶಂಕರರಾವ್ ದೇಶಪಾಂಡೆಯವರಿಗೆ ವೆಂಕಟರಾಮಯ್ಯ ಪ್ರಶಸ್ತಿ ಹಾಗೂ ಕುಸುಮಾವತಿ ದೇಶಪಾಂಡೆಯವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಬಸವಭೂಷಣ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸರ್ವಾಧಿಕಾರಿಯ ಶಸ್ತ್ರಾಗಾರದಲ್ಲಿ…
ಚರಕದ ಬಗ್ಗೆ ಗಾಂಧಿಯವರಿಗೆ ಅಗಾಧ ಪ್ರೇಮ ಮತ್ತು ಅಚಲ ವಿಶ್ವಾಸವಿತ್ತು. ಈ ವಿಷಯವನ್ನು ಪ್ರತಿಪಾದಿಸುತ್ತ ಎರಡು ದಿನಗಳವರೆಗೆ ಅಖಂಡವಾಗಿ ಬಹು ತೀಕ್ಷ್ಣ ಭಾಷಣ ಮಾಡಿದ್ದರು. ಅದು ತುಂಬ ಗಹನವೂ, ಸ್ವಾರಸ್ಯಕರವೂ ಆಗಿತ್ತು. ತಮ್ಮ ಅನುಭವಗಳನ್ನು ತುಂಬ ಸುಂದರವಾಗಿ ವರ್ಣಿಸುತ್ತಿದ್ದರು. ಗಾಂಧಿಯವರು ದುಂಡುಮೇಜಿನ ಪರಿಷತ್ತಿಗೆಂದು ಇಂಗ್ಲೆಂಡಿಗೆ ಹೋಗಿ ಮರಳಿ ಬರುವಾಗ, ಇಟಲಿಯ ಸರ್ವಾಧಿಕಾರಿ ಮುಸಲೋನಿ ತಮ್ಮಲ್ಲಿಗೆ ಬಂದುಹೋಗಲು ಆಮಂತ್ರಣ ಕೊಟ್ಟಿದ್ದರು. ಅದರಂತೆ ಅಲ್ಲಿಗೆ ಹೋದಾಗ ಮುಸಲೋನಿ ಶಸ್ತ್ರಾಗಾರಕ್ಕೆ ಕರೆದುಕೊಂಡು ಹೋದರು. ಆಗ ಅವರಿಗೆ ಶಸ್ತ್ರಾಸ್ತ್ರಗಳನ್ನು ನೋಡಿ ಒಂದು ರೀತಿಯ ಅನುಭವವಾಯಿತಂತೆ. ತುಬಾಕಿಯ ಮುಂದೆ ನಿಂತಾಗ, ‘ನನ್ನ ಕುದುರೆಯನ್ನು ಒತ್ತು, ಗುಂಡು ಹಾರಿಸಿ ನಿನ್ನ ಪ್ರಾಣ ತೆಗೆಯುವೆ’ ಎಂದಿತಂತೆ. ತೋಪಿನ ಮುಂದೆ ನಿಂತಾಗ, ‘ನೀನು ನನ್ನಲ್ಲಿ ಒಂದು ಕಿಡಿಯನ್ನು ಹಾಕು, ನಿನ್ನನ್ನು ಆಕಾಶಕ್ಕೆ ಉಡಾಯಿಸುವೆ’ ಎಂದಿತಂತೆ. ಆದರೆ ಅದೇ ತಮ್ಮ ಚರಕದ ಮೇಲೆ ಕೈ ಇಟ್ಟಾಗ, ‘ನಿನಗೆ ಸತ್ಯ, ಅಹಿಂಸೆಯ ಮಾರ್ಗ ತೋರಿಸುವೆ. ವಿಶ್ವಶಾಂತಿಯನ್ನು ಕೊಡುವೆ’ ಎಂದು ಹೇಳಿತಂತೆ. ‘ಯಾರಾದರೂ ಇದನ್ನು ನಿಜವಲ್ಲವೆಂದು ಸಿದ್ಧಮಾಡಿ ತೋರಿಸಿದರೆ, ನಾನು ಈ ಚರಕವನ್ನು ಸುಟ್ಟು ಭಸ್ಮ ಮಾಡಿಬಿಡುವೆ’ ಎಂದು ಆವೇಶಭರಿತವಾಗಿ ಹೇಳಿದ್ದರು.