For the best experience, open
https://m.samyuktakarnataka.in
on your mobile browser.

ಸೈಬರ್ ಕ್ರೈಂ ಸ್ವಾಮಿ ಪ್ರಸನ್ನ

03:30 AM Oct 16, 2024 IST | Samyukta Karnataka
ಸೈಬರ್ ಕ್ರೈಂ ಸ್ವಾಮಿ ಪ್ರಸನ್ನ

ವಿಶ್ವ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ವಿಶಾಲುಗೂ ದಿಕ್ಕು ತೋಚದಾಗಿತ್ತು. ಸಮಾಧಾನ ಮಾಡಲು ಪ್ರಯತ್ನ ಮಾಡಿದೆ.
“ಇಷ್ಟಕ್ಕೂ ಈ ಸೈಬರ್ ಕ್ರೈಂ ಸಮಸ್ಯೆ ಎಲ್ಲಿಂದ ಶುರುವಾಯಿತು?” ಎಂದು ಕೇಳಿದೆ.
“ಯಾವುದೋ ಫೋನ್ ಕಾಲ್ ಬಂತು. ವಿಶ್ವ ಅಂದರೆ ನೀವು ತಾನೇ? ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಆಗಿದೆ. ಅದರಿಂದ ದೇಶ ವಿರೋಧಿ ಚಟುವಟಿಕೆಗಳು ರಾಷ್ಟ್ರಮಟ್ಟದಲ್ಲಿ ನಡೀತಾ ಇವೆ. ನಿಮ್ಮನ್ನ ಅರೆಸ್ಟ್ ಮಾಡೋಕೆ ಕೋರ್ಟ್ ಆದೇಶ ಆಗಿದೆ. ಮನೇಲೇ ಇರಿ. ಸಂಜೆ ಒಳಗೆ ಪೊಲೀಸ್ ವ್ಯಾನ್ ಅರೆಸ್ಟ್ ವಾರೆಂಟ್‌ನೊಂದಿಗೆ ಬರುತ್ತೆ. ನಿಮಗೆ ಕಾಲಾವಕಾಶ ಬೇಕಾದ್ರೆ ಒಂದನ್ನು ಒತ್ತಿ, ಲಾಯರ್‌ನ ಸಂಪರ್ಕ ಮಾಡೋದಾದ್ರೆ ಎರಡನ್ನ ಒತ್ತಿ ಅಂತ ಹಿಂದೀಲಿ ಹೇಳಿದ್ರು” ಎಂದ.
ತನ್ನ ಗಂಡ ಅರೆಸ್ಟ್ ಆಗ್ತಾರೆ ಅನ್ನೋ ಭಯ ವಿಶಾಲೂ ಮುಖದಲ್ಲಿತ್ತು.
“ನನಗೆ ಭಯ ಆಯ್ತು, ೧ ರಿಂದ ೯ ಎಲ್ಲಾ ಒತ್ತಿ ಬಿಡಿ ಅಂದೆ” ಎಂದಳು.
“ತಪ್ಪು, ಅನ್‌ನೋನ್ ನಂಬರ್ ಕಾಲ್ ಕಟ್ ಮಾಡಬೇಕಿತ್ತು” ಎಂದೆ.
“ಅವರು ತಲೆ ಕಟ್ ಮಾಡೋಕೆ ಹೊರಟಾಗ ಕಾಲ್ ಕಟ್ ಮಾಡೋಕೆ ಧೈರ್ಯ ನಮಗೆ ಇರೊಲ್ಲ” ಎಂದ ವಿಶ್ವ. ವಿಶಾಲೂ ಹೌದೆಂದು ತಲೆ ಆಡಿಸಿ ಹೇಳಿದಳು.
“ನಮ್ಮ ಯಜಮಾನರು ಜೈಲು ಸರ‍್ತಾರೆ. ನಾನು ಬಿಸಿಲಲ್ಲಿ ಊಟ ತಗೊಂಡು ಹೋಗಿ ಕೊಡಬೇಕು ಅಂತ ನನಗೂ ಗಾಬರಿ ಆಗ್ಹೋಯ್ತು. ಅವರು ಆಧಾರ್‌ಕಾರ್ಡ್‌ನ ವಿಸಿಟಿಂಗ್ ಕಾರ್ಡ್ ಥರ ಎಲ್ಲಾ ಕಡೆ ಕೊಡ್ತಾರೆ. ರೇಷನ್ ಅಂಗಡೀಲಿ, ಟೂರ್ ಹೋದಾಗ, ಹೋಟೆಲ್‌ನಲ್ಲಿ, ದೇವಸ್ಥಾನಗಳಲ್ಲಿ ಕೊಡ್ತಾರೆ. ಇವರ ಆಧಾರ್‌ಕಾರ್ಡು ನ್ಯೂಸ್ ಪೇಪರನಲ್ಲಿ ಇನ್ನೂ ಪ್ರಿಂಟಾಗಿಲ್ಲ ಅಷ್ಟೆ” ಎಂದು ಕೊಂಕಿದಳು.
“ಕಾಲ್ ಬಂದಾಗ ನೀನು ಏನ್ಮಾಡಿದ್ರಿ?” ಎಂದು ಕೇಳಿದೆ.
“ನಾನು ನಿಮ್ಮ ಫ್ರೆಂಡ್‌ಗೆ ಒಂದ್ಮಾತು ಹೇಳಿ, ಒತ್ತೋ ಮುಂಚೆ ಸೆಕೆಂಡ್ ಒಪೀನಿಯನ್ ಬೇಕು. ಅರ‍್ನ ಕೇಳ್ಬಿಟ್ಟು ನನ್ನ ಕುತ್ತಿಗೆ ಬೇಕಾದ್ರೂ ಒತ್ತಿ ಅಂತ ಹೇಳಿದೆ” ಎಂದಳು ವಿಶಾಲೂ.
ವಿಶ್ವನಿಗೆ ಸಿಟ್ಟು ಬಂತು.
“ಫೋನಲ್ಲಿ ಮಾತಾಡೋವಾಗ ಬೇರೆಯವರ ಒಪೀನಿಯನ್ ತಗೊಳ್ಳೋಕೆ ಟೈಂ ಎಲ್ಲಿರುತ್ತೆ. ತಕ್ಷಣ ಒತ್ಲೇಬೇಕು. ಇಲ್ಲಾಂದ್ರೆ ಅರೆಸ್ಟಾಗ್ತಿದ್ದೆ” ಎಂದ ವಿಶ್ವ.
ನಾನು ಅವರಿಂದ ಫೋನ್ ಕರೆಯ ವಿವರಗಳೆಲ್ಲ ಪಡೆದೆ.
“ವಿಶಾಲೂ ಅವ್ರೇ, ಹೋಗಿ ಸ್ಟ್ರಾಂಗಾಗಿ ಕಾಫಿ ಮಾಡ್ಕೊಂಡು ಬನ್ನಿ. ಇದಕ್ಕೆ ಪರಿಹಾರ ಹೇಳ್ತೀನಿ” ಎಂದಾಗ ಕಾಫಿ ಬಂತು. ಸವಿಯುತ್ತಾ ಮುಗುಳ್ನಕ್ಕೆ.
ನಗುವನ್ನ ಚೆಲ್ಲಿದಾಗ ಪರಿಸರದ ಟೆನ್‌ಶನ್ ಕಡಿಮೆ ಆಗುತ್ತದೆ. ಇದೇ ರೀತಿ ಫೋನ್‌ಕಾಲ್‌ಗೆ ಹೆದರಿದ ಉತ್ತರ ಭಾರತದ ಉದ್ಯಮಿ ಒಬ್ಬರ ಹತ್ರ ಏಳು ಕೋಟಿ ರೂಪಾಯಿ ಪೀಕಿಸಿದ್ರು. ಅರೆಸ್ಟ್‌ಗೆ ಸುಪ್ರೀಂ ಕೋರ್ಟ್ ಆರ್ಡರ್ ಆಗಿದೆ ಅಂತ ಫೇಕ್ ಆರ್ಡರ್ ಕಾಪಿ ಕೂಡ ವಿಡಿಯೋ ಕಾಲ್ ಮಾಡಿ ತೋರಿಸಿದ್ರು. ಎಲ್ಲಾನೂ ಫ್ರಾಡು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಹೇಳಿದೆ.
“ಆ ಉದ್ಯಮಿ ಅದ್ಹೆಂಗೆ ಹಣ ಕಳಿಸೋಕೆ ಒಪ್ಪಿದ್ರು?” ಎಂದು ಕೇಳಿದಳು.
“ಫ್ರಾಡ್ ಮನುಷ್ಯ ವಿಡಿಯೋ ಕಾಲ್ ಮಾಡಿದ್ದ. ಅವನ ಹಿನ್ನೆಲೆಯಲ್ಲಿ ಸಿಬಿಐ ಆಫೀಸ್‌ನ ಬೋರ್ಡ್ ಇತ್ತು. ಆ ರೀತಿ ವ್ಯವಸ್ಥೆ ಮಾಡ್ಕೊಂಡಿದ್ದ” ಎಂದೆ.
“ನಮ್ಮತ್ತೆಗೇನಾದ್ರೂ ಈ ವಿಷ್ಯ ಗೊತ್ತಾದ್ರೆ ಹಿಡ್ಕೊಂಡು ಬಾರಿಸಿಬಿಡ್ತಾರೆ” ಎಂದು ವಿಶ್ವ ವಿಷಯಾಂತರ ಮಾಡಿದ.
“ಹೌದು, ನಮ್ಮಮ್ಮನಿಗೆ ಫ್ರಾಡ್ ಮಾಡೋವರ ಬಗ್ಗೆ ಸಿಟ್ಟಿದೆ. ಅವರ ಅಕೌಂಟಿಂದ ಸ್ವಲ್ಪ ದುಡ್ ಹೀಗೇ ಕಳ್ಕೊಂಡಿದ್ರು. ಇವತ್ತು ಅಮ್ಮ ಊರಿಂದ ಬರ‍್ತಾ ಇದ್ದಾರೆ” ಎಂದಳು ವಿಶಾಲು.
“ನೋಡು, ಸೈಬರ್ ಕ್ರೈಂ ಮಾಡೋ ಕಳ್ಳರು ನಮ್ಮ ನಂಬರ್‌ಗೆ ಕಾಲ್ ಮಾಡಿದಾಗ ಜಾಸ್ತಿ ಸಮಯ ಕೊಡೊಲ್ಲ. ನಿಮ್ಮ ಅಕೌಂಟು ರಾತ್ರಿಗೆ ಬ್ಲಾಕ್ ಆಗುತ್ತೆ, ನಿಮ್ಮ PAN card ಬ್ಲಾಕ್ ಈಗಲೇ ಆಗುತ್ತೆ ಅಂತ ಹೆದರಿಸ್ತಾರೆ.”
“ಅಂಥ ಟೈಮಲ್ಲಿ ಏನ್ಮಾಡೋದು?” ಕೇಳಿದ ವಿಶ್ವ.
“ಕ್ರೈಂ ಮಾಡೋವರು ಫೋನ್ ಮಾಡಿ ನಿಮ್ಮ ಮೊಬೈಲ್‌ನಲ್ಲಿ ಅದನ್ನ ಒತ್ತಿ, ಇದನ್ನ ಒತ್ತಿ ಅಂತಾರೆ. ಆಗ ದೀರ್ಘವಾಗಿ ಉಸಿರಾಡಿ, ಮನೆ ದೇವರನ್ನ ಸ್ಮರಿಸಿಕೊಳ್ಳಿ. ಮನೆ ದೇವರ ಆಣೆಗೂ ಏನೂ ಒತ್ತೊಲ್ಲ. ಸೈಬರ್ ಕ್ರೈಂ ಸ್ವಾಮಿ ಪ್ರಸನ್ನ ಅಂತ ಹೇಳಿ ಫೋನ್ ಆಫ್ ಮಾಡಬೇಕು”
“ಒಳ್ಳೇ ಐಡಿಯಾ” ಎಂದಳು ವಿಶಾಲೂ.
“ಅಪರಿಚಿತರು ಫೋನ್ ಮಾಡಿ ನಿಮ್ಮ ವೈಯಕ್ತಿಕ ವಿಷಯ ನಿಮಗೇ ಹೇಳ್ತಾರೆ. ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಇದು, ಇನ್‌ಶೂರೆನ್ಸ್ ಪಾಲಿಸಿ ಮೊತ್ತ ಇದು ಅಂತ ಎಲ್ಲ ಹೇಳ್ತಾರೆ. ನಿಮ್ಮ ಖಾತೆ ಫ್ರೀಜ್ ಆಗ್ತಿದೆ. ವಿವರಗಳಿಗೆ ಒಂದನ್ನು ಒತ್ತಿ ಅಂತಾರೆ. ಆಗ ನಾವು ಸೈಬರ್ ಕ್ರೈಂ ಸ್ವಾಮಿ ಪ್ರಸನ್ನ ಅಂದ್ರೆ ಅವರು ಹೆರ‍್ತಾರೆ” ಎಂದೆ.
ಅಷ್ಟರಲ್ಲಿ ವಿಶ್ವನಿಗೆ ಒಂದು ಫೋನ್‌ಕಾಲ್ ಬಂತು.
“ಸ್ಪೀಕರ್ ಫೋನ್ ಆನ್ ಮಾಡು” ಎಂದೆ. ಆ ಕಡೆ ಇರುವ ವ್ಯಕ್ತಿ ವಿಶ್ವನಿಗೆ ಭಯಂಕರ ಸುದ್ದಿಯನ್ನು ಮುಟ್ಟಿಸಿದ.
“ಮಿಸ್ಟರ್ ವಿಶ್ವ ಅವರೇ, ನಿಮ್ಮ ಅತ್ತೆ ಭಾಗೀರಥಮ್ಮನ್ನ ದಾರಿಯಲ್ಲಿ ಕಿಡ್ನ್ಯಾಪ್ ಮಾಡಿದ್ದೀವಿ. ನಿಮ್ಮ ಅತ್ತೆ ನಿಮಗೆ ಜೀವಂತ ವಾಪಸ್ ಬೇಕಾದ್ರೆ ನಿಮ್ಮ ಪಾಸ್‌ಬುಕ್ ವಿವರ ನಿಮ್ಮ ಪಾಸ್ವರ್ಡು, ಅಕೌಂಟ್ ನಂಬರು ಎಲ್ಲಾನೂ ಫೋನಲ್ಲಿ ಕಳಿಸಿದ್ರೆ ಜೀವ ಉಳಿಸ್ತೀವಿ, ಇಲ್ಲಾಂದ್ರೆ ಅವರನ್ನ ಪೀಸ್ ಪೀಸ್ ಮಾಡಿ ಪಾರ್ಸೆಲ್ ಕಳಿಸ್ತೀವಿ” ಎಂದು ಬೆದರಿಸಿದಾಗ ವಿಶಾಲೂಗೆ ಗಾಬರಿ ಆಯಿತು.
“ರೀ, ಅದು ನಿಜ ಇದ್ರೂ ಇರಬಹುದು. ಕಾಂಪ್ರೊಮೈಸ್ ಮಾಡ್ಕೊಳ್ರೀ, ಚೌಕಾಶಿ ಮಾಡ್ರೀ” ಎಂದಳು ವಿಶಾಲೂ.
“ಇದು ಸೈಬರ್ ಕ್ರೈಂ ಅಲ್ಲ ವಿಶ್ವ, ಬ್ಲಾಕ್ ಮೇಲು! ನೀನು ಹೀಗೆ ಹೇಳು” ಎಂದು ಚೀಟಿಯಲ್ಲಿ ಉಪಾಯ ಬರೆದುಕೊಟ್ಟೆ. ಅದನ್ನು ವಿಶ್ವ ಓದಿದ.
“ನೋಡಿ ಮಿಸ್ಟರ್, ಭಾಗೀರಥಮ್ಮ ನಮ್ಮತ್ತೆ ನಿಜ. ಆದರೆ ಅರ‍್ನ ಕಂಡ್ರೆ ನನ್ಗೆ ಆಗೊಲ್ಲ. ನಾನೇ ಸುಪಾರಿ ಕೊಡ್ಬೇಕು ಅಂತಿದ್ದೆ. ಈಗ ನೀವೇ ಪೀಸ್ ಮಾಡ್ತಿದ್ದೀರಿ, ಥ್ಯಾಂಕ್ಸ್. ಅರ‍್ನ ಇವತ್ತೇ ಪೀಸ್ ಪೀಸ್ ಮಾಡಿ. ಕೊಂದಿದ್ದಕ್ಕೆ ಪ್ರೂಫ್ ಕಳಿಸಿ, ನಾನೇ ಹತ್ತು ಸಾವಿರ ನಿಮಗೆ ಕಳಿಸಿ ಕೊಡ್ತೀನಿ, ಸೈಬರ್ ಕ್ರೈಂ ಸ್ವಾಮಿ ಪ್ರಸನ್ನ” ಎಂದ. ಫೋನ್ ಕಟ್ ಆಯ್ತು. ವಿಶಾಲೂಗೆ ಸಿಟ್ಟು ಬಂದಿತ್ತು.
“ಏನ್ರೀ ನಮ್ಮಮ್ಮನ ಬಗ್ಗೆ ಅಷ್ಟು ತಾತ್ಸಾರಾನಾ? ಅಮ್ಮನ್ನ ಕತ್ತರಿಸಿದರೆ ೧೦ ಸಾವಿರ ಕೊಡ್ತೀರಾ?” ಎಂದು ರೇಗುವ ವೇಳೆಗೆ ವಿಶ್ವನ ಅತ್ತೆ ಊರಿಂದ ಬಂದು ಬಾಗಿಲಲ್ಲಿ ನಿಂತಿದ್ದಳು.
“ಅಳಿಯಂದ್ರೇ, ಎಲ್ಲಾ ಕೇಳಿಸಿಕೊಂಡೆ. ಆ ಹತ್ತು ಸಾವಿರ ನನಗೇ ಕೊಡಿ. ಇಲ್ಲಾಂದ್ರೆ ನಾನು ಈ ಮನೆ ಬಿಟ್ಟು ಹೋಗೊಲ್ಲ” ಎಂದಳು.
“ಇದು ಸೈಬರ್ ಅಲ್ಲ, ಅತ್ತೆ ಕ್ರೈಮು” ಎಂದು ವಿಶ್ವ ಅತ್ತೆಯ ಕಾಲಿಗೆ ಬಿದ್ದ.