ಸೊಸೈಟಿ ಮೂಲಕ ಹೊರಗುತ್ತಿಗೆ ನೌಕರರ ಪೂರೈಕೆ
ಧಾರವಾಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸೊಸೈಟಿ ರಚಿಸಲು ಪ್ರಸ್ತಾವನೆ ಕೇಳಲಾಗಿದೆ
ಬೆಂಗಳೂರು: ಹೊರಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಒದಗಿಸುವ ಸೊಸೈಟಿ'ಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಮಹತ್ವದ ನಿರ್ಧಾರಕ್ಕೆ ನಮ್ಮ ಕಾರ್ಮಿಕ ಇಲಾಖೆ ಮುಂದಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪ್ರಸ್ತುತ ಕಲಬುರ್ಗಿ ವಿಭಾಗದ ಬೀದರ್ ಜಿಲ್ಲೆಯಲ್ಲಿ ಮಾತ್ರ ಈ ಮಾದರಿ ಅನುಷ್ಠಾನದಲ್ಲಿತ್ತು. ಈಗ ಇತರ ಮೂರು ವಿಭಾಗಗಳ ಮೈಸೂರು, ಧಾರವಾಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಈ ಸೊಸೈಟಿ ರಚಿಸಲು ಪ್ರಸ್ತಾವನೆ ಕೇಳಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗುವ ಈ ಸೊಸೈಟಿಗಳು ಜಿಲ್ಲೆಯ ಕೌಶಲ್ಯಯುತ ಹಾಗೂ ಕೌಶಲ್ಯ ರಹಿತ ನಿರುದ್ಯೋಗಿಗಳಿಗೆ ಕೆಲಸ ನೀಡಲಿವೆ. ಇದರಿಂದ ನಿರುದ್ಯೋಗ ನಿರ್ಮೂಲನೆಯೊಂದಿಗೆ, ಕಾರ್ಮಿಕರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿ, ಸಾಮಾಜಿಕ ಭದ್ರತೆ ಒದಗಿಸಲು ಅನುಕೂಲವಾಗಲಿದೆ. ಈ ಹಿಂದಿನ ಕಲಾಪದಲ್ಲಿ ಈ ಬಗ್ಗೆ ಚರ್ಚೆಯಾದಾಗ, ಆದಷ್ಟು ಬೇಗ ಎಲ್ಲ ಜಿಲ್ಲೆಗಳಿಗೂ ಈ ಸೊಸೈಟಿಯನ್ನು ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದು ಮಾಹಿತಿ ನೀಡಲಾಗಿತ್ತು. ಅದರಂತೆ ಈ ಮೂರು ಜಿಲ್ಲೆಗಳ ಪ್ರಗತಿ ಪರಿಶೀಲಿಸಿ, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದಿದ್ದಾರೆ.