ಸೋತು ಗೆದ್ದ ಸಾಹಸ
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದ ರಾಜಕೀಯ ಹೋರಾಟ ಹಾಗೂ ಅಂತಿಮವಾಗಿ ಕಾನೂನಿನ ಸಮರದಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದಿಂದ ನ್ಯಾಯವನ್ನು ಪಡೆದಿರುವುದು ಸಂತಸದ ಸಂಗತಿಯೇ. ಆದರೆ, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಭಾರತ ದೇಶದಲ್ಲಿ ಇಂತಹ ಬಹು ಹಂತದ ಜಿಜ್ಞಾಸೆಗಳ ಅವಶ್ಯಕತೆ ಇತ್ತೇ ಎಂಬುದು ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿರುವ ಪ್ರಶ್ನೆ. ಸಂವಿಧಾನದ ನೀತಿ ನಿಯಮಗಳ ಪ್ರಕಾರ ರಾಜ್ಯ ಹಾಗೂ ಕೇಂದ್ರದ ನಡುವಣ ಸಂಬಂಧಗಳು ಸ್ಪಷ್ಟವಾಗಿವೆ. ಹಣಕಾಸಿನ ವಿಚಾರದ ಜವಾಬ್ದಾರಿಗಳಲ್ಲೂ ಗೊಂದಲವಿಲ್ಲ. ಹೀಗಿದ್ದರೂ ಪ್ರಾಕೃತಿಕ ವಿಕೋಪದಂತಹ ಘೋರ ಅನ್ಯಾಯಕ್ಕೆ ಒಳಗಾಗಿರುವ ಕರ್ನಾಟಕಕ್ಕೆ ಪರಿಹಾರ ಕೊಡಲು ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ವಿಳಂಬ ಮಾಡಿತು ಎಂಬುದು ಮುಂದೆ ಇಂತಹ ಘಟನಾವಳಿಗಳು ನಡೆಯದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಚರ್ಚೆಯಾಗಲೇಬೇಕಾದ ಸಂಗತಿ. ಕರ್ನಾಟಕ ಸರ್ಕಾರದ ಹೋರಾಟದಲ್ಲಿ ಸತ್ಯ ಮತ್ತು ಸತ್ವಗಳು ಇದ್ದುದರಿಂದಲೇ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ದೊರಕಿದೆ. ಆದರೆ, ಸುಮಾರು ವರ್ಷಗಳ ಕಾಲ ಅಂಗಲಾಚಿ ಬೇಡಿದರೂ ಕೇಂದ್ರದ ಮನ ಕರಗದೇ ಹೋದದ್ದು ಚರ್ಚೆಯಾಗಬೇಕಾದ ಸಂಗತಿ. ಕಾನೂನಿನ ಸಮರದಲ್ಲಿ ಗೆದ್ದಿರುವ ಕರ್ನಾಟಕ ಈ ಮೊದಲು ರಾಜಕೀಯ ಸಮರದಲ್ಲಿ ಸೋಲುವ ಸ್ಥಿತಿಯಲ್ಲಿದ್ದುದನ್ನು ಗಮನಿಸಿದರೆ ಇದೊಂದು ಸೋತು ಗೆದ್ದ ಸಾಹಸದ ಕಥೆ ಎಂಬುದು ಸ್ಪಷ್ಟವಾಗುತ್ತದೆ.
ನಿಜ. ಕೇಂದ್ರವಾಗಲೀ ಅಥವಾ ರಾಜ್ಯವಾಗಲೀ ಘೋಷಿತ ನೀತಿ ನಿಲುವುಗಳ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸಾಧುವಾದ ಮಾರ್ಗವಲ್ಲ. ರಾಜ್ಯ ಕೂಡಾ ಕಾನೂನಿನ ಮೊರೆ ಹೋಗುವಂತಹ ಸ್ಥಿತಿ ಬರಬಾರದು. ಅದೇಕೋ ಏನೋ ಪರಿಸ್ಥಿತಿಯ ಪಿತೂರಿಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ನ ಮುಂದೆ ಮಂಡಿಸಿರುವ ವಾದದಲ್ಲಿ ವಾರದೊಳಗೆ ಪರಿಹಾರ ಬಿಡುಗಡೆ ಮಾಡುವ ಖಚಿತ ಭರವಸೆ ಸಿಕ್ಕಿದೆ. ಪರಿಹಾರದ ಬಿಡುಗಡೆಗೆ ಅಡ್ಡಿ ಎಂದು ಭಾವಿಸಲಾಗಿದ್ದ ಚುನಾವಣಾ ಆಯೋಗದ ಸಮ್ಮತಿಯೂ ಕೂಡಾ ದೊರಕಿದೆ ಎಂಬ ಸಂಗತಿ ಈಗ ಎಲ್ಲಾ ತಕರಾರುಗಳಿಂದ ಮುಕ್ತವಾದಂತಾಗಿದೆ. ಕೇಂದ್ರದಿಂದ ಬರುವ ಈ ಹಣವನ್ನು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಪ್ರದೇಶದ ಕಲ್ಯಾಣಕ್ಕೆ ಬಳಸುವ ಜವಾಬ್ದಾರಿ ಈಗ ರಾಜ್ಯ ಸರ್ಕಾರದ್ದಾಗಿದೆ.
ಈ ಪ್ರಕರಣದಲ್ಲಿ ಗೆದ್ದವರು ಸೋತಿದ್ದಾರೆ ಸೋತವರು ಪಾಠ ಕಲಿತಿದ್ದಾರೆ ಎಂಬ ಅಂಶವನ್ನು ನಾವು ಮನಗಾಣಬೇಕು. ಏಕೆಂದರೆ, ಭಾರತದಲ್ಲಿ ಈಗಿರುವುದು ಸಮ್ಮಿಶ್ರ ರಾಜಕೀಯ ವ್ಯವಸ್ಥೆ. ಒಂದು ಪಕ್ಷ ಅಥವಾ ಮೈತ್ರಿ ಕೂಟ ಅಧಿಕಾರದಲ್ಲಿದ್ದಾಗ ದರ್ಪದಿಂದ ನಡೆದುಕೊಳ್ಳುವ ರೀತಿಯಲ್ಲಿಯೇ ಇನ್ನೊಂದು ಪಕ್ಷ ಅಥವಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದಾಗ ನಡೆದುಕೊಳ್ಳುವುದನ್ನು ದೇಶ ಕಂಡಿದೆ. ಹೀಗಾಗಿ ಗೆದ್ದವರು ಬೀಗುವ ಅಗತ್ಯವಿಲ್ಲ. ಸೋತವರು ಬಾಗುವ ಅಗತ್ಯವೂ ಕಾಣುತ್ತಿಲ್ಲ. ಆದರೆ, ಇಬ್ಬರೂ ಕೂಡಾ ಕಲಿಯಬೇಕಾದ ಪಾಠ ಬಹಳವಿದೆ. ಪ್ರತಿಯೊಂದನ್ನೂ ಚುನಾವಣೆಯ ಗಲ್ಲಾ ಪೆಟ್ಟಿಗೆಯ ದೃಷ್ಟಿಯಿಂದಲೇ ನೋಡುವ ಪರಿಪಾಠದಿಂದ ಇಂತಹ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಮಾತು ನಿಜವೇ. ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಆದರೆ, ಅನಿವಾರ್ಯ ಪ್ರಾರಬ್ಧದಂತೆ ಇಂತಹ ಪ್ರವೃತ್ತಿ ರಾಜಕಾರಣದಲ್ಲಿ ಬೆರೆತುಹೋಗಿದೆ. ಇಂತಹ ಬೆರೆತ ಜೀವಗಳಲ್ಲಿ ಉಸಿರಾಡುತ್ತಿರುವ ರಾಜಕಾರಣದ ದಿಕ್ಕು ದೆಸೆ ಬದಲಾಗಿ ಸಂವಿಧಾನದ ಜೊತೆಗೆ ಆತ್ಮಸಾಕ್ಷಿಯ ಧಾಟಿಯಲ್ಲಿ ಆಡಳಿತದ ಚುಕ್ಕಾಣಿಯನ್ನು ನಿರ್ವಹಿಸುವ ಕೌಶಲ್ಯವನ್ನು ಅರಗಿಸಿಕೊಳ್ಳುವುದು ಬದಲಾಗುತ್ತಿರುವ ಭಾರತದ ಅಗತ್ಯ.
ಲೋಕಸಭಾ ಚುನಾವಣೆಯ ನಡುವೆ ಸುಪ್ರೀಂಕೋರ್ಟ್ ಮೂಲಕ ಇತ್ಯರ್ಥಗೊಂಡಿರುವ ಈ ಪರಿಹಾರದ ಬಿಕ್ಕಟ್ಟು ಸಹಜವಾಗಿಯೇ ಸಾರ್ವಜನಿಕರ ಮೇಲೆ ಪರಿಣಾಮ ಬೀರಬಹುದು. ಭಾವನೆಗಳ ಸಾಮ್ರಾಜ್ಯದಲ್ಲಿ ಯಾವುದೇ ನೀತಿ ಸೂತ್ರವನ್ನು ಜಾರಿಗೊಳಿಸುವುದು ಅಸಾಧ್ಯ. ಇಂತಹ ಅನಪೇಕ್ಷಿತ ಬಿಕ್ಕಟ್ಟನ್ನು ಆಹ್ವಾನಿಸಿಕೊಂಡ ತಪ್ಪು ಯಾರದು ಎಂಬುದನ್ನು ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆತ್ಮಾವಲೋಕನ ಮಾಡಿಕೊಂಡರೆ ಮುಂದೆ ಅಂತಹ ಘಟನೆ ನಡೆಯುವುದನ್ನು ತಪ್ಪಿಸಬಹುದು.