ಸೋತ ಬಿಜೆಪಿ-ಗೆದ್ದ ಬಂಡಾಯ
ನರೇಗಲ್ಲ : ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಹಲವು ಅಚ್ಚರಿ ನಡೆದವು. ಅಧಿಕೃತ ಅಭ್ಯರ್ಥಿಯ ಸೋಲಿನೊಂದಿಗೆ ಬಿಜೆಪಿ ಮುಖಬಂಗ ಅನುಭವಿಸಿದರೆ, ತನ್ನ ಒಗ್ಗಟ್ಟನ್ನು ಕಾಯ್ದುಕೊಂಡು ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಜಯದ ನಗೆ ಬೀರಿತು. ತೀವ್ರ ಕುತೂಹಲ ಕೆರಳಿಸಿದ್ದ ನರೇಗಲ್ಲ ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುಣಾವಣೆಯು ಚುನಾವಣಾಧಿಕಾರಿ ಗಜೇಂದ್ರಗಡ ತಹಸೀಲ್ದಾರ ಕೀರಣಕುಮಾರ ಕುಲಕರ್ಣಿ ಅವರ ನೇತೃತ್ವದಲ್ಲಿ ಸೋಮವಾರ ಜರುಗಿತು.
ಬಂಡಾಯ ಬಿಜೆಪಿಯ ೬ ಸದಸ್ಯರು ಒಂದು ವಾರದ ಹಿಂದೆ ನಾಪತ್ತೇಯಾಗಿದ್ದರು. ಸೋಮವಾರ ಕಾಂಗ್ರೆಸ್ ಮುಖಂಡರೊAದಿಗೆ ಪ.ಪಂ ಆಗಮಿಸಿದ ಬಿಜೆಪಿಯ ನಾಪತ್ತೆಯಾದ ೬ ಸದಸ್ಯರ ಪೈಕಿ ೧೪ನೇ ವಾರ್ಡ್ನ ಸದಸ್ಯ ಫಕ್ಕೀರಪ್ಪ ಮಳ್ಳಿ ಅಧ್ಯಕ್ಷ ಹಾಗೂ ೧೭ನೇ ವಾರ್ಡ್ನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ೪ನೇ ವಾರ್ಡ್ನ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಅಧ್ಯಕ್ಷ ಸ್ಥಾನಕ್ಕೆ ಹಾಗೂ ೮ನೇ ವಾರ್ಡ್ನ ವಿಶಾಲಾಕ್ಷಿ ಹೊಸಮನಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಸ್ಥಳೀಯ ಪ.ಪಂ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು ೧೭ ಸದಸ್ಯ ಸ್ಥಾನವನ್ನು ಹೊಂದಿರುವ ಪ.ಪಂ ಅದರಲ್ಲಿ ಬಿಜೆಪಿ ಬಂಡಾಯ ೬ ಸದಸ್ಯರು ಹಾಗೂ ಕಾಂಗ್ರೆಸ್‌ನ ೩ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಒಬ್ಬ ಪಕ್ಷೇತರ ಸದಸ್ಯ, ರೋಣ ಶಾಸಕ ಜಿ.ಎಸ್ ಪಾಟೀಲ ಸೇರಿ ಒಟ್ಟು ೧೧ ಸದಸ್ಯರ ಬೆಂಬಲದಿAದ ಕಾಂಗ್ರೆಸ್ ಪರವಾಗಿ ಮತಚಲಾಯಿಸಿದರು. ಬಿಜೆಪಿಯ ಪರವಾಗಿ ೭ ಸದಸ್ಯರು ಮತ ಚಲಾಯಿಸಿದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬಿರಿದರು. ಬಿಜೆಪಿಯಿಂದ ಮುನಿಸಿಕೊಂಡು ನಾಪತ್ತೆಯಾಗಿದ್ದ ೬ ಸದಸ್ಯರ ಪೈಕಿ ೧೪ನೇ ವಾರ್ಡ್ನ ಸದಸ್ಯ ಫಕ್ಕೀರಪ್ಪ ಮಳ್ಳಿ ಅಧ್ಯಕ್ಷರಾಗಿ ಹಾಗೂ ೧೭ನೇ ವಾರ್ಡ್ನ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿಗೆ ತೀವ್ರ ಮುಖಭಂಗ : ನರೇಗಲ್ಲನ ಪಟ್ಟಣ ಪಂಚಾಯತಿಯಲ್ಲಿ ೧೨ ಬಿಜೆಪಿ ಸದಸ್ಯರು ಹಾಗೂ ಒಂದು ಪಕ್ಷೇತರ ಸದಸ್ಯ ಸೇರಿ ಒಟ್ಟು ೧೩ ಬಲ ಹೊಂದಿದ್ದರೂ ಬಿಜೆಪಿ ಎರಡನೇ ಅವಧಿಯಲ್ಲಿ ಅಧಿಕಾರ ಕೈ ತಪ್ಪಿರುವುದು ತೀವ್ರ ಮುಖಭಂಗಕ್ಕೆ ಕಾರಣವಾಗಿದೆ. ಬಿಜೆಪಿಯ ಸ್ಥಳೀಯ ಮುಖಂಡರೊಬ್ಬರ ವೈಯಕ್ತಿಕ ದ್ವೇಷ ಹಾಗೂ ಪಕ್ಷದ ಸದಸ್ಯರಲ್ಲಿನ ಭಿನ್ನಾಭಿಪ್ರಾಯದದಿಂದ ಸ್ಪಷ್ಟ ಬಹುಮತವಿದ್ದರೂ ಪ.ಪಂ ಗದ್ದುಗೆ ಹಿಡಿಯಲಾಗದೆ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಸಂಭ್ರಮಾಚರಣೆ : ಸೋತ ಬಿಜೆಪಿ ಗೆದ್ದ ಬಂಡಾಯದ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬಿರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಕೈಗೊಂಡರು.