ಸೋಮಾರಿ ಸಿದ್ದ ಎಂದಿದ್ದು ಸಿದ್ದರಾಮಯ್ಯರಿಗೆ ಅಲ್ಲ
ಮೈಸೂರು: ಸೋಮಾರಿ ಸಿದ್ದ ಎಂಬ ಪದ ಬಳಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳಕೆ ಮಾಡಿದ್ದಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಅವರು, ಸೋಮಾರಿ ಸಿದ್ದ ಎಂದು ನಾನು ಬಳಸಿದ್ದು ಸಿದ್ದರಾಮಯ್ಯ ಅವರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋದು ನಾಮ ಪದವಲ್ಲ. ಅದು ಒಂದು ಸಂದರ್ಭ ವಿವರಿಸುವ ನಾಣ್ನುಡಿ ಅಷ್ಟೇ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ನಾನು ಬಳಸಿದ್ದ ನಾಣ್ನುಡಿಯನ್ನು ನಿಮಗೆ ಬಳಸಿದ್ದು ಅಂತಾ ತಿರುಚುವ ಯತ್ನ ನಡೆದಿದೆ. ನಿಮ್ಮನ್ನು ಓಲೈಸಲು ನಿಮ್ಮ ಹಿಂಬಾಲಕರು ನನ್ನ ಮೇಲೆ ವಿನಾಕಾರಣ ಸುಳ್ಳು ಸೃಷ್ಟಿ ಮಾಡುತ್ತಾರೆ, ಅವರಿಗೆ ಬೇಗ ಅಧಿಕಾರ ಕೊಡಿ ಎಂದು ಕಿಡಿಕಾರಿದರು.
ಕಲ್ಲು ಬಿಸಾಡಿದರೆ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಪ್ರತಾಪ್ ಸಿಂಹ. ನೀವು ಕಲ್ಲು ಬಿಸಾಕಿದರೆ ನಾನು ಕೂಡ ಕಲ್ಲೇ ಬಿಸಾಕುತ್ತೇನೆ ಎಂದು ಹೇಳುವ ಮೂಲಕ ಸಿಎಂಗೆ ತಿರುಗೇಟು ನೀಡಿದ್ದಾರೆ.
ಪ್ರತಾಪ್ ಸಿಂಹ ಅವರು ಮಂಗಳವಾರ ಹುಣಸೂರಿನಲ್ಲಿ ಮಾತನಾಡುವ ವೇಳೆ, ಈ 9 ವರ್ಷದಲ್ಲಿ ನಾನು ಏನು ಕೆಲಸ ಮಾಡಿದ್ದೇನೆ, ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕಾರಣದಲ್ಲಿ ಏನು ಮಾಡಿದ್ದಾರೆ ಎಂದು ಹೇಳಲಿ. ನೀನು ಗೌಡ, ನೀನು ಕುರುಬ, ನೀನು ಲಿಂಗಾಯತ ಎಂದೆಲ್ಲಾ ಅವರ ಹಾಗೆ ಜಾತಿ ರಾಜಕಾರಣ ನಾನು ಮಾಡಿಲ್ಲ. ನಾನು ಮಾಡಿರುವುದು ಅಭಿವೃದ್ಧಿ ರಾಜಕಾರಣ ಮಾತ್ರ. ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತು ನಾನು ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದರು.