ಸೋಲಿನ ಹತಾಶೆಯಿಂದ ಕಾಂಗ್ರೆಸ್ ಕೆಟ್ಟದಾಗಿ ವರ್ತಿಸುತ್ತಿದೆ
ಹುಬ್ಬಳ್ಳಿ: ಐದು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್ ಅತ್ಯಂತ ತಲೆ ಕೆಟ್ಟೋರ ರೀತಿಯಲ್ಲಿ ವರ್ತಿಸುತ್ತಿದೆ. ಲೋಕಸಭೆ, ವಿಧಾನಸಭೆ ಅಧಿವೇಶನ ನಡೆಸುವುದಕ್ಕೆ ಬಿಡುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ಕಾಂಗ್ರೆಸ್ ವರ್ತಿಸುತ್ತಿದೆ. ಜನ ಇದನ್ನು ಗಮನಿಸುತ್ತಿದ್ದಾರೆ. ಸಂಸತ್ ಘಟನೆ ನೆಪ ಮಾಡಿ, ಅಧಿವೇಶನ ನಡೆಸಲ್ಲ ಎಂಬ ಸರ್ವಾಧಿಕಾರಿ ಮಾನಸಿಕತೆಗೆ ಬಂದರು. ಸೋಲಿನ ಸಿಟ್ಟನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದಾರೆ. ಅಮಾನತು ಮಾಡಿ ಬಿಲ್ ಪಾಸ್ ಮಾಡಿದ್ದಾರೆಂದು ಪ್ರಚಾರ ಮಾಡುತ್ತಿದ್ದಾರೆ. ಘಟನೆ ನಡೆದ ದಿನ ಭಾಗಿಯಾಗಿದ್ದವರು, ನಂತರ ಎಲ್ಲಿಂದಲೋ ಸೂಚನೆ ಬಂದ ಮೇಲೆ ಅಧಿವೇಶನಕ್ಕೆ ಅಡೆ ತಡೆ ಮಾಡುತ್ತಾರೆ ಎಂದರು.
ಈ ಹಿಂದೆ ಕೂಡಾ ಕೆಲ ಘಟನೆ ನಡೆದಿವೆ. ಪಾಸ್ ಪಡೆಯುವ ಮೂಲಕ ಪಾರ್ಲಿಮೆಂಟ್‌ನಲ್ಲಿ ವೆಪನ್ಸ್, ಡ್ರ್ಯಾಗನ್ ತಗೆದುಕೊಂಡು ಬಂದ ಉದಾಹರಣೆ ಇದೆ. ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಪೀಕರ್‌ಗೆ ಬಿಟ್ಟಿರುವ ವಿಚಾರ ಎಂದು ಹೇಳಿದರು.
ಕಾಂಗ್ರೆಸ್ ಎಂದರೆ ಗೊಂದಲದ ಪಕ್ಷವಾಗಿದೆ. ಕಾಂಗ್ರೆಸ್‌ನವರು ಸದನಕ್ಕೆ ಬಿತ್ತಿ ಪತ್ರ ತಂದಿದ್ದರು ಏಕೆ ಎಂದು ಕೇಳಿದರೆ ಸಸ್ಪೆಂಡ್ ಮಾಡಬೇಕು ಎಂದರು. ಆಗ ೧೩ ಜನರನ್ನು ಅಮಾನತು ಮಾಡಲಾಯಿತು. ಇದಾದ ಮೇಲೆ ಮತ್ತೇ ಕೆಲವರು ನಮ್ಮ ನಮ್ಮನ್ನು ಅಮಾನತು ಮಾಡಿ ಎಂದಿದ್ದರು. ನಿಮಗೆ ಒಳಗೆ ಬರುವುದಕ್ಕೆ ನೈತಿಕತೆ ಇಲ್ಲ. ನಮ್ಮನ್ನು ಹೊರಗಿಟ್ಟು ಮಾಡಿದರೂ ಎಂದು ಹೇಳುತ್ತಾರೆ. ಹಳೇ ಬಿಲ್‌ಗಳ ಕುರಿತು ಮಾತನಾಡುವುದಕ್ಕೆ ಅವರಿಗೆ ಧೈರ್ಯ ಇಲ್ಲ. ಚರ್ಚೆಯಲ್ಲಿ ಭಾಗವಹಿಸಲು ನೈತಿಕತೆ ಇಲ್ಲ. ಇದು ಕೊನೆ ಅಧಿವೇಶನ. ಪುರಾತನ ಭಾರತೀಯ ನ್ಯಾಯಶಾಸ್ತ್ರದ ಆಧಾರದ ಮೇಲೆ ನಾವು ಕಾನೂನು ರಚನೆ ಮಾಡಿದ್ದೇವೆ ಎಂದರು.