ಸೋಸಲೆ ಗ್ರಾಮದಲ್ಲಿ ಇಂದಿನಿಂದ ವಿಶೇಷ ಕಾರ್ಯಕ್ರಮ
ಮೈಸೂರು: ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ರಾಜೇಂದ್ರ ತೀರ್ಥರ ಪೂರ್ವಾದಿ ಮಠ, ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ
ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ಎಂಟನೇ ಚಾತುರ್ಮಾಸ್ಯ ವ್ರತವು ಮೈಸೂರು ಜಿಲ್ಲೆ ತಿ. ನರಸೀಪುರ ಸಮೀಪದ ಸೋಸಲ ಗ್ರಾಮದಲ್ಲಿ ಆಗಸ್ಟ್ 2ರಿಂದ ಚಾಲನೆಗೊಳ್ಳಲಿದೆ.
ಇದರ ಅಂಗವಾಗಿ ಆಗಸ್ಟ್ 1ರ ಸಂಜೆ ಬನ್ನೂರು ವೃತದಿಂದ ಸೋಸಲೆ ಗ್ರಾಮದ ಶ್ರೀ ವ್ಯಾಸರಾಜರ ಮಹಾ ಮಠದ ವರೆಗೆ ವೈಭವಯುತ ಮೆರವಣಿಗೆ ಮತ್ತು ಶ್ರೀಗಳ
ಪುರ ಪ್ರವೇಶ ಕಾರ್ಯಕ್ರಮ ಜರುಗಿತು.
ಪ್ರತಿನಿತ್ಯದ ಕಾರ್ಯಕ್ರಮಗಳು:
ಸೋಸಲೆ ಶ್ರೀಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಆಗಸ್ಟ್ ಎರಡರಿಂದ ಸೆಪ್ಟೆಂಬರ್ 17ರವರೆಗೆ ಪ್ರತಿನಿತ್ಯವೂ ಶ್ರೀಮಠದಲ್ಲಿ ನಿತ್ಯ ಜ್ಞಾನ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಪ್ರತಿದಿನವೂ ಬೆಳಗ್ಗೆ ಏಳಕ್ಕೆ ಸ್ವಾಮೀಜಿ ಅವರಿಂದ ಅಣು ಭಾಷ್ಯ ಶಾಸ್ತ್ರ ಪಾಠ, ವಿದ್ವಾಂಸರಿಂದ ಗೃಹಸ್ಥರಿಗೆ ಸೂತ್ರ ದೀಪಿಕಾ ಗ್ರಂಥದ ಪಾಠ, ಮಾತೆಯರಿಗೆ ಶ್ರೀ ವ್ಯಾಸರಾಜರ ಕೃತಿಗಳ ವಿಶೇಷ ಅಧ್ಯಯನ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸಂಸ್ಥಾನ ಪ್ರತಿಮಾ ಶ್ರೀಗೋಪಾಲಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಹಾಗೂ ಭವ್ಯ ಮೆರವಣಿಗೆ, ಉತ್ಸವ ನಡೆಯಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಶ್ರೀ ಲಕ್ಷ್ಮಿಕಾಂತ ತೀರ್ಥರ ಆರಾಧನೆ, ಶ್ರೀ ಲಕ್ಷ್ಮೀನಾಥ ತೀರ್ಥರ ಆರಾಧನೆ, ಶ್ರೀ ವಿದ್ಯಾ ಪೂರ್ಣತೀರ್ಥರ ಆರಾಧನೆ ಸಂಪನ್ನಗೊಳ್ಳಲಿದೆ. ಇವುಗಳೊಂದಿಗೆ ಪ್ರತಿನಿತ್ಯವೂ ಶಾಸ್ತ್ರ ಅರ್ಥ ಗೋಷ್ಠಿ, ವ್ಯಾಸತ್ರಯ ವಿಷಯಗಳಲ್ಲಿ ವಿದ್ವದ್ಗೋಷ್ಠಿ ಹಾಗೂ ಯುವ ಜನರಿಗಾಗಿ ವಿಶೇಷ ಕಾರ್ಯಾಗಾರ ಆಯೋಜನೆಗೊಂಡಿದೆ.
ಪ್ರತಿದಿನವೂ ಸಂಜೆ ಆರು ಗಂಟೆಗೆ ನಾಡಿನ ಪ್ರಖ್ಯಾತ ವಿದ್ವಾಂಸರಿಂದ ಹರಿವಂಶ ಗ್ರಂಥದ ಪ್ರವಚನ, ಸಮಾಜಕ್ಕೆ ಅಗತ್ಯವೆನಿಸಿದ, ಧರ್ಮ ಪಾಲನೆಯಲ್ಲಿ ಮುಖ್ಯ ಪಾತ್ರ ವಹಿಸುವ ವಿಷಯಗಳ ಬಗ್ಗೆ ಕಾರ್ಯಾಗಾರ, ಎಲ್ಲ ವಯೋಮಾನದವರಿಗೂ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ಶಿಬಿರ ಆಯೋಜನೆಗೊಂಡಿದೆ.
ಗೋ ಸೇವೆ: ಶ್ರೀಮಠದಲ್ಲಿರುವ ಗೋಶಾಲೆಗೆ ಭಕ್ತರು ಗೋಗ್ರಾಸ ಮತ್ತು ಗೋದಾನಗಳನ್ನು ನೀಡುವ ಮೂಲಕ ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣನ ಸೇವೆಯನ್ನು ಮಾಡಬಹುದು ಎಂದು ಚಾತುರ್ಮಾಸ ಮುಖ್ಯ ಆಯೋಜಕರಾದ ಡಾ. ಮಧುಸೂದನ ಆಚಾರ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.