ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸೌಮ್ಯೆಯೂ ಅವಳೇ, ರುದ್ರಕಾಳಿಯೂ ಅವಳೇ

01:30 AM Mar 07, 2024 IST | Samyukta Karnataka

ಸ್ವಂತಕ್ಕಾಗಿ ಬಾಳುವ ಆಸೆಯಿಲ್ಲದೆ ಸ್ಪಷ್ಟ ಧ್ಯೇಯದೊಂದಿಗೆ ನಾಡನ್ನು ಕಾದ, ಕಾದು ಮಿಡಿದ, ಮಿಡಿದು ಮಡಿದ, ಮಡಿದು ಅಮರರಾದ ರಣರಾಗಿಣಿಯರ ಬದುಕಂತೂ ಉದಾತ್ತ, ಉನ್ನತ, ಮಹನ್ಮಧುರ ಚೈತನ್ಯದಾಯಕ. ಸ್ವಾತಂತ್ರ‍್ಯ ಹೋರಾಟದಲ್ಲಿ ಸ್ತ್ರೀಯರ ಮಹೋನ್ನತ ತ್ಯಾಗ ಮತ್ತು ಬಲಿದಾನಕ್ಕೆ ಪ್ರತೀಕದಂತಿರುವ ರಾಣಿ ಕರ್ಣಾವತಿ ಮತ್ತು ವೀರಾಂಗನಾ ಝಲ್ಕಾರಿಬಾಯಿಯರ ಬದುಕು ನಾಡಿಗೆ ಸ್ಫೂರ್ತಿದಾಯಕ.
ಮಾತೃಭೂಮಿಯನ್ನು ಭಗವತಿಯೆಂದು ಆರಾಧಿಸುವ ರಜಪೂತಕುಲತಿಲಕ ವೀರಸೇನಾನಿಗಳ ಸಮ್ಮುಖದಲ್ಲಿ, ಚಿತ್ತೋಡದ ಮಾನಸಮ್ಮಾನಗಳ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣದ ವಿರುದ್ಧ ಖಡ್ಗ ಝಳಪಿಸಲು ಕೈಜೋಡಿಸಿ. ನಮ್ಮ ವಂಶದ ರಕ್ಷಣೆಗಾಗಿ ನಿಮ್ಮ ನೆರವು ಕೇಳುತ್ತಿಲ್ಲ. ಪರಕೀಯರ ಆಕ್ರಮಣದಿಂದ ನಾಡು ತತ್ತರಿಸಿ ಸುಡುಗಾಡಾಗುವ ಮುನ್ನ ಧರ್ಮದ ರಕ್ಷಣೆ ಹಾಗೂ ರಾಷ್ಟ್ರದ ವಿಜಯಕ್ಕಾಗಿ ನನ್ನೊಡನೆ ಹೆಜ್ಜೆಯಿಡಿ. ಪತಿಯನ್ನು ಕಳೆದುಕೊಂಡ ಅಬಲೆಯಾಗಿ ನಿಮ್ಮ ನೆರವು ಕೋರುತ್ತಿಲ್ಲ, ಧರ್ಮೋತ್ಥಾನಕ್ಕಾಗಿ ಹೊರಟ ಮನೆಮಗಳೆಂದು ಅನುಗ್ರಹಿಸಿ' ಎಂಬ ಕ್ಷಾತ್ರವಾಣಿಯನ್ನು ಮೊಳಗಿಸಿ ನಿರಾಶಾವಾದಿ ರಜಪೂತ ರಾಜರಲ್ಲಿ ವಿದ್ಯುತ್ಸಂಚಲನಗೈದ ರಾಣಿ ಕರ್ಣಾವತಿ, ಐದು ಶತಮಾನಗಳ ಹಿಂದೆ ವಿಧರ್ಮಿ ಆಕ್ರಮಣಕಾರರಿಗೆ ಖಡ್ಗದ ರುಚಿ ತೋರಿದ ವೀರವನಿತೆ. ಬುಂಧಿಯ ರಾಜನ ಮಗಳಾಗಿ ಜನಿಸಿ, ಬಾಲ್ಯದಲ್ಲೇ ಶಸ್ತ್ರಶಾಸ್ತ್ರಾಭ್ಯಾಸಗೈದು ಯುಕ್ತ ವಿದ್ಯೆಯನ್ನೂ ಸಂಪಾದಿಸಿ ಮೇವಾಡದ ರಾಜಾ ರಾಣಾ ಸಂಗ್ರಾಮ ಸಿಂಹನ ಕೈಹಿಡಿದ ರಾಣಿ ಕರ್ಣಾವತಿ ಪತಿಯ ಸಾಹಸಕ್ಕೆ ಬೆಂಗಾವಲಾದಳು. ಪುಣ್ಯಭೂಮಿ ಭಾರತದಲ್ಲಿ ರಕ್ತದೋಕುಳಿ ಹರಿಸಿ, ಲಕ್ಷಾಂತರ ಗುಡಿಗೋಪುರಗಳ ಧ್ವಂಸಕ್ಕೆ ಕಾರಣರಾದ ಮೊಘಲರ ಹೆಜ್ಜೆ ಬಾಬರನ ಮೂಲಕ ದೆಹಲಿಯಲ್ಲಿ ಬೇರೂರುವ ಲಕ್ಷಣಗಳು ದಟ್ಟವಾಯಿತು. ಹಿಂದೂ ಮಂದಿರಗಳ ನಾಶ, ಮಹಿಳೆಯರ ಮೇಲಿನ ಅತ್ಯಾಚಾರವನ್ನು ಕಂಡು ಕ್ರುದ್ಧನಾದ ರಾಣಾ ಸಂಗ್ರಾಮಸಿಂಹ ರಜಪೂತ ರಾಜರನ್ನೊಗ್ಗೂಡಿಸಿ ಮೊಘಲ್ ಆಧಿಪತ್ಯದ ವಿರುದ್ಧ ಸಮರ ಸಾರಿದ. ರಾಣಾನ ಯೋಜನೆಗೆ ಸಂಪೂರ್ಣ ಸಹಕರಿಸಿದ ಕರ್ಣಾವತಿ, ರಾಜ್ಯಾಡಳಿತದ ಜವಾಬ್ದಾರಿಯನ್ನು ಸ್ವಯಂ ನಿಭಾಯಿಸಿ ಯಶಸ್ವಿಯಾದಳು. ಇನ್ನೇನು ಸಮರಗೆದ್ದು, ವಿಧರ್ಮಿಗಳನ್ನು ಗಡಿಯಾಚೆ ಓಡಿಸಿ ಹಿಂದೂ ಏಕಚಕ್ರಾಧಿಪತ್ಯದ ಕಾಲ ಸನ್ನಿಹಿತವಾಯಿತೆಂಬ ಹೊತ್ತಿಗೆ, ರಾಣಾ ಸಂಗ ಮೋಸದ ಸಾವಿಗೆ ಬಲಿಯಾದ. ಪತಿಯ ವೀರಸ್ವರ್ಗದ ಬಳಿಕ ಪುತ್ರ ರಾಣಾ ವಿಕ್ರಮಾದಿತ್ಯ ಮತ್ತು ರಾಣಾ ಉದಯಸಿಂಹರನ್ನು ಬೆಳೆಸಿ ರಾಜ್ಯರಕ್ಷೆಯ ದಾಯಿತ್ವ ಹೊತ್ತ ಕರ್ಣಾವತಿ, ಮಗ ವಿಕ್ರಮನ ಹೆಸರಲ್ಲಿ ಚದುರಿದ್ದ ಸೈನ್ಯಶಕ್ತಿಯನ್ನು ಒಗ್ಗೂಡಿಸಿದಳು. ಪ್ರಜೆಗಳ ವಿಶ್ವಾಸ ಸಂಪಾದಿಸಿ ಉತ್ತಮ ಆಡಳಿತ ನೀಡಿ, ಚಿಗುರೊಡೆಯುತ್ತಿದ್ದ ಮುಸ್ಲಿಂ ದಾಳಿಕೋರರ ಉದ್ಧಟತನದ ಬಗ್ಗೆ ರಜಪೂತವೀರರನ್ನು ಎಚ್ಚರಿಸಿದಳು. ಆರು ವರ್ಷಗಳ ದಕ್ಷ, ಸಮರ್ಥ ಆಡಳಿತ ನೀಡಿದ ಮಹಾರಾಣಿಯ ಕೋಶ ತುಂಬಿತು, ಸಮೃದ್ಧಿ ನಾಟ್ಯವಾಡಿತು. ನೇರ ದಾರಿಯಿಂದ ಚಿತ್ತೋಡನ್ನು ವಶಪಡಿಸಲು ಧೈರ್ಯಸಾಲದ ಹುಮಾಯೂನ್, ಸೌರಾಷ್ಟ್ರದ ಬಹಾದ್ದೂರ್ ಶಹನ ಮನವೊಲಿಸಿ ಮೇವಾಡವನ್ನು ಆಕ್ರಮಿಸಲು ಸಹಾಯವಿತ್ತ. ಯುದ್ಧದ ವಾಸನೆ ಮೂಗಿಗೆ ಬಡಿಯುತ್ತಲೇ ಹಿತೈಷಿಗಳ, ಸೈನಿಕರ ಮನೋಬಲ ವೃದ್ಧಿಸಿ ಗೆಲುವಿನ ಗುರಿ ನಿಶ್ಚಯಿಸಿದಳು. ಪ್ರಜೆಗಳ ಒತ್ತಾಯದ ಮೇರೆಗೆ ಮಕ್ಕಳನ್ನು ಗುಪ್ತಸ್ಥಳಕ್ಕೆ ರವಾನಿಸಿದ ಮಹಾರಾಣಿ ಯುದ್ಧಕ್ಕೆ ಸಿದ್ಧಳಾದಳು. ಯೋಜಿತ ಹೋರಾಟ, ಸಂಘಟನಾಶಕ್ತಿ, ಧೀರ ನಾಯಕತ್ವದಿಂದ ರಾಣಿಯ ಕೈ ಮೇಲಾಯಿತು.ನನ್ನ ರಾಜ್ಯಾಧಿಕಾರದ, ಅರಮನೆ, ಅಂತಸ್ತಿನ ವೈಭೋಗದ ಉಳಿವಿಗಾಗಿ ಅಲ್ಲ, ವೇದಭೂಮಿಯ ಸುರಕ್ಷೆಗಾಗಿ ಶಸ್ತ್ರಪಾಣಿಗಳಾಗಿ' ಎಂಬ ಪ್ರೇಮಪೂರ್ಣ ಕರೆಗೆ ಓಡೋಡಿ ಬಂದ ಯುವಕರ ಧೈರ್ಯಸಾಹಸಗಳಿಂದ ಬೆದರಿದ ವಿರೋಧಿಪಾಳಯ ಮೋಸದ ಹಾದಿ ಹಿಡಿಯಿತು. ಗೆಲುವಿನ ಪತಾಕೆ ಹಾರಿಸಬೇಕೆನ್ನುವಷ್ಟರಲ್ಲಿ ಸೋಲು ಧುತ್ತನೆ ಬಂದೆರಗಿತು. ಮಾನರಕ್ಷೆಗಾಗಿ ೧೫೩೪ರ ಮಾರ್ಚ್ ಎಂಟರಂದು ಸಜೀವ ಅಗ್ನಿಪ್ರವೇಶಿಸಿ ಬಲಿದಾನಗೈದ ರಾಣಿ ಕರ್ಣಾವತಿಯ ಕೆಚ್ಚು, ಸ್ವಾಭಿಮಾನ, ಛಲಬಲದ ಹೋರಾಟ ವಿಶ್ವದ ಇತಿಹಾಸದಲ್ಲಿ ಸರ್ವದಾ ಶಾಶ್ವತ. ಮುಂದೆ ಮೊಮ್ಮಗ ಮಹಾರಾಣಾ ಪ್ರತಾಪನಿಗೆ ಅಸಹಿಷ್ಣು ಅಕ್ಬರನನ್ನು ಹಲ್ದೀಘಾಟ್ ಯುದ್ಧದಲ್ಲಿ ಮಣ್ಣುಮುಕ್ಕಿಸಲು ಪ್ರೇರಣೆಯಾದ ರಾಣಿ ಕರ್ಣಾವತಿ, ಚಿತ್ತೋಡದ ಮೇಲೆ ನಭವನ್ನೇ ಸ್ಪರ್ಶಿಸುವಂತೆ ಭಗವಾಧ್ವಜ ಹಾರಾಡಲು ಕಾರಣೀಭೂತರಾದರು.
ರಾಣಿ ಲಕ್ಷ್ಮೀಬಾಯಿಯ ದುಗುಡವನ್ನು ದೂರಗೊಳಿಸಿದ ನಾರಿಶಕ್ತಿಯ ಪ್ರತಿರೂಪ ಝಲ್ಕಾರಿಬಾಯಿ ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಝಾನ್ಸಿಯ ಸಮೀಪದ ಪುಟ್ಟ ಹಳ್ಳಿಯಲ್ಲಿ ಜನಿಸಿದ ಝಲ್ಕಾರಿಬಾಯಿ, ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ ಶಸ್ತ್ರಾಭ್ಯಾಸ, ಕುದುರೆಸವಾರಿಯಲ್ಲಿ ಪರಿಣತಳಾದಳು. ಪಶುಪಾಲನೆ, ಕಾಡಿನ ಸಹವಾಸದಲ್ಲಿ ತೊಡಗಿಸಿದ ತರುಣಿ ಊರಿನ ಮೇಲೆ ದಾಳಿ ನಡೆಸಿದ ಡಕಾಯಿತರ ಗುಂಪನ್ನು ಏಕಾಂಗಿಯಾಗಿ ಎದುರಿಸಿದ್ದಳು. ಹುಲಿ, ಚಿರತೆಗಳ ಆಕ್ರಮಣದಿಂದ ಜನರನ್ನು ರಕ್ಷಿಸಿದ ಝಲ್ಕಾರಿ, ಅಮ್ಮನಿಲ್ಲದ ಕೊರಗನ್ನು ಪರೋಪಕಾರದ ಮೂಲಕ ನೀಗಿಸುತ್ತಿದ್ದಳು. ಝಾನ್ಸಿಯ ಸೈನಿಕ ಪೂರನ್ ಕೋರಿಯ ಕೈಹಿಡಿದ ಝಲ್ಕಾರಿಬಾಯಿಗೆ ಅನಿರೀಕ್ಷಿತವಾಗಿ ರಾಣಿ ಲಕ್ಷ್ಮೀಬಾಯಿಯನ್ನು ಭೇಟಿಯಾಗುವ ಅವಕಾಶ ದೊರಕಿತು. ತದ್ರೂಪಿಯಂತೆಯೇ ಕಾಣುತ್ತಿದ್ದ ವನಸುಮವನ್ನು ಕಂಡ ಮಹಾರಾಣಿ ಆಕೆಯ ಆಸಕ್ತಿ, ಹೋರಾಟದ ಕೆಚ್ಚನ್ನು ಕೇಳಿ ಪ್ರಭಾವಿತರಾಗಿ ತನ್ನ ಸೈನ್ಯದ ಮಹಿಳಾ ವಿಭಾಗಕ್ಕೆ ಸೇರ್ಪಡೆಗೊಳಿಸಿದರು. ಕತ್ತಿವರಸೆ, ಬಂದೂಕು ಚಲಾವಣೆ, ತೋಪು ಉಡಾಯಿಸುವ ವಿದ್ಯೆಯನ್ನು ಕಲಿತ ಝಲ್ಕಾರಿಬಾಯಿ ದುರ್ಗಾದಳದ ಸೇನಾಪತಿಯಾಗಿ ಮಹಿಳಾ ತಂಡವನ್ನು ಮುನ್ನಡೆಸಿದಳು. ಹ್ಯೂ ರೋಸನ ಸೈನ್ಯ ಕೋಟೆಯನ್ನು ಮುತ್ತುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ತಾತ್ಯಾಟೋಪೆಯ ನಾಯಕತ್ವದ ಸೈನ್ಯ ಸೋಲಿಗೀಡಾದಾಗ ಕಂಗೆಡದ ರಾಣಿ ಸ್ವಯಂ ರಣಾಂಗಣಕ್ಕಿಳಿದು ಹೋರಾಡಿದರು.
ಒಳಗಿನವರ ಮೋಸದಾಟದಿಂದ ನಗರ ಪ್ರವೇಶಿಸಿ ಕೋಟೆ ಸೂರೆಗೈವ ಹೊಂಚು ಹಾಕಿದ ಬ್ರಿಟಿಷರ ಕೈ ಮೇಲಾದಾಗ ರಾಣಿಯನ್ನು ಕ್ಷೇಮವಾಗಿ ಹೊರಕಳುಹಿಸಿ, ಲಕ್ಷ್ಮೀಬಾಯಿಯ ಪೋಷಾಕು ಧರಿಸಿ ಕೋಟೆಯೊಳಗೆ ನೆಲಕಚ್ಚಿ ನಿಂತು ಹೋರಾಡಿದ ಝಲ್ಕಾರಿಬಾಯಿ, ತನ್ನ ಗಂಡನನ್ನು ಕಳಕೊಂಡರೂ ಧೃತಿಗೆಡದೆ ಹೋರಾಟ ಮುಂದುವರಿಸಿದಳು. ದಿನಪೂರ್ತಿ ಯುದ್ಧಮಾಡಿ ರಾಣಿಯ ಇರುವಿಕೆಯ ಭ್ರಮೆ ಸೃಷ್ಟಿಸಿದ ಝಲ್ಕಾರಿಯ ಪರಾಕ್ರಮ ಅತ್ಯದ್ಭುತ. ತೊಟ್ಟಿಲು ತೂಗುವ, ಸೌಟು ಹಿಡಿದು ಉಣಬಡಿಸುವ ಸೌಮ್ಯೆ ಸ್ತ್ರೀ ನಾಡರಕ್ಷಣೆಯ ಅನಿವಾರ್ಯತೆ ಎದುರಾದಾಗ ಚಾಮುಂಡಿಯ ಅವತಾರ ತಳೆಯಬಲ್ಲಳೆಂಬ ಸತ್ಯವನ್ನು ಸಾರಿದ ನಾರಿರತ್ನಗಳ ತೇಜಸ್ವಿ ಬದುಕು ದೇಶಕ್ಕೆ ನವದಿಶೆಯನ್ನು ನೀಡಲಿ.

Next Article