For the best experience, open
https://m.samyuktakarnataka.in
on your mobile browser.

ಸೌಹಾರ್ದಕ್ಕೆ ಬೆಂಕಿ ಇಕ್ಕುವವರ ನೂಕಾಚೆ ದೂರ

12:10 AM Feb 01, 2024 IST | Samyukta Karnataka
ಸೌಹಾರ್ದಕ್ಕೆ ಬೆಂಕಿ ಇಕ್ಕುವವರ ನೂಕಾಚೆ ದೂರ

ಹುಷಾರು… ಚುನಾವಣೆ ಸಮೀಪಿಸುತ್ತಿದೆ. ಗಲಭೆ- ಘರ್ಷಣೆ- ದಾಂಧಲೆಗಳು ಆರಂಭವಾಗಿವೆ.
ನಿಮ್ಮ ಮಕ್ಕಳು, ಬಂಧು ಬಾಂಧವರನ್ನು ರಕ್ಷಿಸಿಕೊಳ್ಳಿ. ಯಾರದ್ದೇ ಪ್ರಚೋದನೆ, ಪ್ರಭಾವ, ಕೈಗೊಂಬೆಯಂತೆ ವರ್ತಿಸದಿರಿ!!
ಜನತೆಗೆ ಈ ರೀತಿ ಮನವಿ ಮಾಡಿಕೊಳ್ಳುವ, ತಿಳಿವಳಿಕೆ ನೀಡುವ ಕಾರ್ಯ ಜರೂರು ಆಗಬೇಕಿದೆ.
ಈಗಲೇ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಧ್ವಜ ಹಾರಿಸುವ ಸಂಬಂಧ ಘರ್ಷಣೆ ಆರಂಭವಾಗಿದೆ. ಈ ಕಿಚ್ಚು ಆರಿಸಲು ಬಿಡದೆ, ರಾಜ್ಯದ ಇತರೆಡೆಯೂ ಹಬ್ಬಿಸುವ ಎಲ್ಲ ಸಿದ್ಧತೆ ನಡೆಯುತ್ತಿದೆ. ಮೂರು ದಿನಗಳಿಂದ ಕೆರಗೋಡಿನಲ್ಲಿ ಘರ್ಷಣೆ, ಲಾಠಿ ಚಾರ್ಜ್, ನಿಷೇಧಾಜ್ಞೆ ಇತ್ಯಾದಿಗಳೆಲ್ಲ ನಡೆದು ನೂರಾರು ಜನರ ಮೇಲೆ ಪ್ರಕರಣಗಳು ದಾಖಲಾಗಿವೆ.
ಧ್ವಜ ವಿವಾದ ಆ ಊರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ರಾಜಕೀಯ ಪಕ್ಷ, ನಾಯಕರು ನೇರವಾಗಿ ರಣರಂಗಕ್ಕೆ ಇಳಿದಿದ್ದಾರೆ.
ಇದನ್ನು ಇನ್ನಷ್ಟು ಹಬ್ಬಿಸುವುದು, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಇದಕ್ಕೆ ದೇವರು, ಜಾತಿ ಎಳೆದು ತಂದು ತಮ್ಮ ಅಸ್ತಿತ್ವಕ್ಕಾಗಿ ರಣರಂಗ ಸಿದ್ಧಪಡಿಸುತ್ತಿರುವುದು ಸ್ಪಷ್ಟವಾಗಿದೆ. ಇದರಿಂದ ಆಗುವ ದುಷ್ಪರಿಣಾಮ ಅತ್ಯಂತ ಜನ ಸಾಮಾನ್ಯರ ಮೇಲೆ! ಜೀವನ ಪರ್ಯಂತ ನರಳುವವರು ಅದೇ ಊರಿನ ಏನೂ ಅರಿಯದ ಮುಗ್ಧರು. ಇವರ ಬದುಕು ಈ ರಾಜಕೀಯ ಪರೀಧಿಯಲ್ಲಿ ಬೆಂದು ಹೋಗಲಿದೆ…!!
ಇತ್ತೀಚಿಗಷ್ಟೇ ಶ್ರೀಕಾಂತ ಪೂಜಾರಿ ಎನ್ನುವ ಹುಬ್ಬಳ್ಳಿಯ ವ್ಯಕ್ತಿಯೊಬ್ಬನ ಪ್ರಕರಣ ತಮಗೆಲ್ಲ ನೆನಪಿದೆ. ಮೂವತ್ತೊಂದು ವರ್ಷಗಳ ಹಿಂದೆ ಅಯೋಧ್ಯಾ ರಾಮ ಮಂದಿರ ಹೋರಾಟ, ಗೋಲಿಬಾರ್, ಘರ್ಷಣೆಯಲ್ಲಿ ಆತ ಪಾಲ್ಗೊಂಡಿದ್ದನೆಂದು ಪೊಲೀಸ್ ಪ್ರಕರಣ ದಾಖಲಾಗಿತ್ತು. ಆತ ಒಬ್ಬ ರಿಕ್ಷಾ ಚಾಲಕ. ಸಂಸಾರದ ನೊಗ ಹೊತ್ತವನು. ಆಗ ಇಪ್ಪತ್ತು ವರ್ಷದ ಯುವಕ. ಈಗ ಆತನಿಗೆ ಐವತ್ತೆರಡು ವರ್ಷ. ಮೂರು ದಶಕಗಳಿಂದ ಆತ ಈ ಕೋರ್ಟ್, ಕಟ್ಟಲೆ, ನ್ಯಾಯಾಲಯಕ್ಕೆ ಅಲೆದಾಟ ಎಲ್ಲವುಗಳನ್ನು ಸಹಿಸಿಕೊಂಡೇ ಬಂದ. ಆಗ ಹೋರಾಟದ ನೇತೃತ್ವ ವಹಿಸಿಕೊಂಡಿದ್ದವರು ಇಂತಹ ನೂರಾರು ಮಂದಿಯ ಮೇಲೆ ಹೂಡಲಾಗಿದ್ದ ಪ್ರಕರಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ದಿನಗೂಲಿ ನೌಕರರು, ಹೊಟ್ಟೆ ಪಾಡಿಗಾಗಿ ಕೂಲಿ ನಾಲಿ ಮಾಡುವವರು, ಯಾವುದೋ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದವರು ಕೆಲಸ ಬೊಗಸೆ ಬಿಟ್ಟು ಮೂವತ್ತೆರಡು ವರ್ಷಗಳ ಕಾಲ ನ್ಯಾಯಾಲಯ, ಪೊಲೀಸು, ವಿಚಾರಣೆ ಎದಿರುಸುತ್ತಿದ್ದಾರೆ.
ಮೊನ್ನೆ ಕಳೆದ ತಿಂಗಳು ಆತನನ್ನು ಬಂಧಿಸಿದಾಗ ತಕ್ಷಣ ಕೂಗು ಭುಗಿಲೆದ್ದು ವೀರಾವೇಶದ ಮಾತುಗಳು ಕೇಳಿ ಬಂದವು.
ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಎದಿರು ಒಂದು ಕೋಮಿನ ಜನರು ಯಾರದ್ದೋ ಪ್ರಚೋದನೆಯ ಮೇಲೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಥಳಿಸಿದರು. ಹುಬ್ಬಳ್ಳಿ ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಹಿಂಸಾಕೃತ್ಯ ಅದಾಗಿತ್ತು. ಪೊಲೀಸರು ಕ್ರಮ ತೆಗೆದುಕೊಂಡು ನೂರಾರು ಜನರನ್ನು ಬಂಧಿಸಿದರು. ಬಂಧಿತರು ಯಾವುದೇ ಗಣ್ಯರಲ್ಲ. ಕಾರ್ಪೋರೇಟರ್‌ಗಳೂ ಅಲ್ಲ. ವಿಷಯ ಎಂದರೆ ಯಾರದ್ದೋ ಸ್ಟೇಟಸ್‌ನಲ್ಲಿ ಧ್ವಜ ಚಿತ್ರ ಹರಿದಾಡಿತ್ತು ಎಂಬುದು. ನೂರೈವತ್ತಕ್ಕೂ ಹೆಚ್ಚು ಜನ ಜೈಲು ಪಾಲಾದರು. ಇವರ ಹೊಟ್ಟೆ ಬಟ್ಟೆ, ಮಕ್ಕಳ ವಿದ್ಯಾಭ್ಯಾಸ ಇವೆಲ್ಲಕ್ಕೂ ಒಂದು ವರ್ಷದಿಂದ ನರಳಾಟ.
ಬೆಂಗಳೂರಿನ ಪುಲಕೇಶಿ ನಗರ ಶಾಸಕರ ಮನೆಯನ್ನು ರಾತ್ರೋರಾತ್ರಿ ಧ್ವಂಸ ಮಾಡಲಾಯಿತು. ಇದಕ್ಕೆ ಪ್ರಚೋದನೆ ನೀಡಿದವರು ಆರಾಮಾಗಿ ಬಿಂದಾಸ್ ಆಗಿದ್ದಾರೆ. ಒಳಗೆ ಹೋದವರೆಲ್ಲ ಏನೂ ಅರಿಯದ ಬಲಿಪಶುಗಳು. ಅವರ ಕುಟುಂಬಗಳು ಹತಾಶರಾಗಿ ಹೊಟ್ಟೆ ಪಾಡಿಗೆ ನರಳುತ್ತಿವೆ.
ಕೋಮು ಗಲಭೆಗಳಿರಲಿ, ವೈಯಕ್ತಿಕ ಸಂಘರ್ಷಗಳಿರಲಿ, ಇವು ಶಾಂತಿ-ಭವಿಷ್ಯಕ್ಕೆ ನೆಮ್ಮದಿ ಬಿಡಿ, ಶಾಶ್ವತ ದ್ವೇಷ, ಅಶಾಂತಿಯ ಜೊತೆಗೆ ಒಂದು ಊರಿನ ಸಮುದಾಯದ ಬದುಕು-ಬೆಳವಣಿಗೆಗಳನ್ನು ನಾಶ ಮಾಡುತ್ತವೆ. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಹಾಗೂ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ನಡೆದ ಗಲಭೆ, ಹಿಂಸಾಕೃತ್ಯಗಳಿಂದ ವಾಣಿಜ್ಯ ರಾಜಧಾನಿ ಎಂಬ ಹೆಗ್ಗಳಿಕೆ-ಕಿರೀಟ ಕುಸಿದು ಬಿತ್ತು. ಇಲ್ಲಿಯ ವಾಣಿಜ್ಯೋದ್ಯಮ, ವ್ಯಾಪಾರ ವಹಿವಾಟು ದಾವಣಗೆರೆ, ಬೆಳಗಾವಿ, ರಾಣೆಬೆನ್ನೂರು, ಗಂಗಾವತಿ, ಬಾಗಲಕೋಟೆ, ಇಳಕಲ್‌ದಂತಹ ಪ್ರದೇಶಗಳಿಗೆ ಸ್ಥಳಾಂತರವಾದವು. ಹುಬ್ಬಳ್ಳಿಗೆ ಬರಬೇಕು ಎಂದರೆ ಜನ ಭಯ-ಆತಂಕ ವ್ಯಕ್ತಪಡಿಸುತ್ತಿದ್ದರು.
ಇದೊಂದು ಕಥೆಯಾದರೆ, ಸಾವಿರಾರು ಜನ ತಮ್ಮ ಕೆಲಸ ಬೊಗಸೆ ಬಿಟ್ಟು ನಿತ್ಯ ನ್ಯಾಯಾಲಯಗಳಿಗೆ ಅಲೆದಾಡುವ, ಪೊಲೀಸರ ಮುಂದೆ ಕೈಕಟ್ಟಿ ನಿಲ್ಲುವಂತಾಯಿತು.
ಇಡೀ ದೇಶದಲ್ಲೇ ಸುದೀರ್ಘ ಕೋಮು ಗಲಭೆ ಸಂಭವಿಸಿದ ಕುಖ್ಯಾತಿ ಪಡೆದಿರುವ ಉತ್ತರ ಕನ್ನಡದ ಭಟ್ಕಳದಲ್ಲಿ ಇನ್ನೂ ಭಯ ಮುಕ್ತ ವಾತಾವರಣ ಇಲ್ಲ. ಇಪ್ಪತ್ತೈದು ವರ್ಷಗಳ ನಂತರವೂ ಅಂದಿನ ಗಲಭೆಗಳ ಕರಾಳ ಛಾಯೆಯನ್ನು ಪಟ್ಟಣ ಹೊದ್ದಿದೆ. ಜನಕ್ಕೆ ಆ ಕಹಿ ನೆನಪು ಅಳಿಸಿಲ್ಲ. ಅತ್ಯಂತ ಪ್ರಸಿದ್ಧ ಜೈನರ ತೀರ್ಥಕ್ಷೇತ್ರ ಈಗ, ಜೈನ ಸಮುದಾಯದವರು ಬಾರದೇ ಬಿಕೋ ಎನ್ನುತ್ತಿದೆ. ಭಟ್ಟಾಳಂಕನ ನಾಡಿನಲ್ಲಿ ಇನ್ನೂ ಭಯದ ವಾತಾವರಣವಿದೆ. ಅಲ್ಲಿಯ ವ್ಯಾಪಾರ, ಬದುಕು ಆ ಭಯದಿಂದ ಹೊರ ಬಂದಿಲ್ಲ.
ಮಂಗಳೂರು ಕರಾವಳಿ ಭಾಗ ನಿರಂತರ ಕೋಮು ಗಲಭೆ, ಜಾತಿ ವೈಷಮ್ಯ, ದ್ವೇಷಾಸೂಯೆಗಳ ಕೇಂದ್ರವಾಗಿ ಜನರ ಮನಸ್ಸು ಒಡೆದಿದೆ.
ನಿಸ್ಸಂಶಯ. ಕೋಮು ಗಲಭೆಗಳ ಹಿಂದೆ, ಇತ್ತೀಚಿನ ವರ್ಷಗಳಲ್ಲಿ ಯಾವುದೇ ಹೋರಾಟ-ಘರ್ಷಣೆಗಳ ಹಿಂದೆ ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಖಂಡಿತ ಇದೆ. ಪಾಪ, ಅಮಾಯಕರಿಗೆ ಎಲ್ಲಿ ಗೊತ್ತು ಇದರ ಹಿಂದಿನ ಹುನ್ನಾರ !? ಬಿಜೆಪಿ, ಕಾಂಗ್ರೆಸ್ಸು, ಜನತಾ ದಳ, ಮುಸ್ಲೀಂ ಲೀಗ್, ಎಸ್‌ಡಿಪಿಐ ಎಲ್ಲವುಗಳ ಹುನ್ನಾರ? ಭಾವನಾತ್ಮಕ ವಿಷಯವನ್ನು ಇಂತಹ ಚುನಾವಣೆಯ ಸಂದರ್ಭದಲ್ಲಿ ಮುಂದಿಟ್ಟು ಗಲಭೆ ಎಬ್ಬಿಸುವುದೇ ಆಗಿದೆ. ನೀವು ಈಗಲೇ ಅವನ್ನು ತಿರಸ್ಕರಿಸಿ ದೂರ ಇಡದೇ ಇದ್ದರೆ, ಅಮಾಯಕ ಮಕ್ಕಳು ಹೆಣವಾಗುತ್ತಾರೆ. ಬಡಪಾಯಿ ಮಕ್ಕಳು ಜೈಲು ಸೇರುತ್ತಾರೆ.
೨೦೦೬ರ ಮಂಗಳೂರು ಕೋಮು ಗಲಭೆಯಲ್ಲಿ ಸುಮಾರು ಐದು ಯುವಕರು ಜೈಲು ಸೇರಿದ್ದರು. ಇವರೆಲ್ಲ ಬಡವರ ಮನೆಯ ಮಕ್ಕಳು. ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ, ಭಟ್ಕಳ, ಚಿಕ್ಕಮಗಳೂರು ಹೀಗೆ ಎಲ್ಲೆಲ್ಲಿ ಗಲಭೆಗಳು ಸಂಭವಿಸಿದವೋ ಅಲ್ಲೆಲ್ಲ ಜೈಲು ಸೇರಿದವರು ಬಡವರ ಮನೆಯ ಮಕ್ಕಳು. ಎಲ್ಲೆಲ್ಲಿ ಕೋಮು ಗಲಭೆಗಳು ಸಂಭವಿಸಿದವೋ ಅಲ್ಲೆಲ್ಲ ಅವನ್ನು ಬೆಳೆಸಿದವರು, ನಗದೀಕರಿಸಿಕೊಂಡವರು ರಾಜಕೀಯ ಪಕ್ಷಗಳವರು. ಲಾಭ ಪಡೆದುಕೊಂಡು ಶಾಸಕರಾದರು, ಸಂಸದರಾದರು. ಆದರೆ ಇರ‍್ಯಾರೂ ಈ ಅಮಾಯಕರ ರಕ್ಷಣೆಗೆ ಬಂದಿಲ್ಲ. ಬರುವುದೂ ಇಲ್ಲ. ಯಾರು ಇವುಗಳಿಂದ ನೊಂದು ಕಣ್ಣೀರಾಗಿದ್ದಾರೋ ಅವರೆಲ್ಲ ನಿರಂತರವಾಗಿ ಇವರ ಮನೆಯ ಮುಂದೆ ಸಹಾಯ ಯಾಚಿಸಿ ನಿಲ್ಲಬೇಕು… ಕಾಲಿಗೆ ಬೀಳುತ್ತಿರಬೇಕು. ಅಣ್ಣಾವರೇ, ಅಕ್ಕಾವರೇ ಎಂದು ಜೈಕಾರ ಹಾಕಿ ಗೋಗರೆಯಬೇಕು ! ಜೈಲಿನಲ್ಲಿದ್ದವರಿಗೆ, ನ್ಯಾಯಾಲಯಕ್ಕೆ ಓಡಾಡುತ್ತಿರುವವರಿಗೆ ತಮ್ಮನ್ನು ಬಿಡಿಸಿಕೊಡುತ್ತಾರೆಂಬ ಸಹಜ ಆಸೆ. ಬಿಡಿಸಿ ಬಿಟ್ಟರೆ, ಈ ಜನ ತಮ್ಮ ಬಳಿ ಬರೋದಿಲ್ಲ ಎಂಬ ದುರಾಸೆ ಆ ಪುಢಾರಿಗೆ..!!
ಗಲಭೆಗಳು ನಡೆದಾಗಲೆಲ್ಲ ಧ್ವಂಸವಾಗುವುದು ಡಬ್ಬಾ ಅಂಗಡಿಗಳು, ಅಥವಾ ಒಂದು ಕೋಮಿನ, ಒಂದು ಸಮುದಾಯಕ್ಕೆ ಸೇರಿದ ಅಥವಾ ವ್ಯಾಪಾರ ವಹಿವಾಟಿನಲ್ಲಿ ಈರ್ಷ್ಯೆ ಹೊಂದಿರುವ ಪ್ರದೇಶಗಳು. ವಿವಾದಾತ್ಮಕ ಜಾಗಗಳು, ಲೀಸ್, ಬಾಡಿಗೆ ಬಿಡಿಸುವವರು, ಜಾಗೆ ಕಬಳಿಸುವವರಿಗೆಲ್ಲ ಗಲಭೆ ಘರ್ಷಣೆ ಸದವಕಾಶ..ಖುಷಿ. ಅಲ್ಲಿಯೇ ಬೆಂಕಿ ಬೀಳುತ್ತಿವೆ. ಅಲ್ಲಿಯೇ ದೊಂಬಿಗಳಾಗುತ್ತಿವೆ.
ಒಂದು ಯೋಚಿಸಿ. ಎಲ್ಲಿಯೂ ರಾಜಕೀಯ ನಾಯಕನ, ಪ್ರಚೋದಿಸಿ ದಾಂಧಲೆ ಎಬ್ಬಿಸಲು ತಂತ್ರ ಹೆಣೆಯುವವರ ಮನೆ ಮಕ್ಕಳು, ಊರಿನ ಶ್ರೀಮಂತರ ಮಕ್ಕಳು, ಪ್ರಚೋದನೆ ಕೊಟ್ಟವರ ಮಕ್ಕಳು-ಬಂಧುಗಳು ಇರುವುದಿಲ್ಲ!.
ಈಗ ಕೆರಗೋಡು ಘಟನೆಯಲ್ಲಿಯೇ ಬೆಂಕಿ ಉಗುಳುತ್ತಿರುವ ರಾಜಕೀಯ ನಾಯಕರ ಮಕ್ಕಳ್ಯಾರಾದರೂ ಹೋರಾಟದಲ್ಲಿ ಪಾಲ್ಗೊಂಡಿದ್ದರೆ? ಅವರ ಮೇಲೆ ಪ್ರಕರಣ ದಾಖಲಾಯಿತೇ? ಯಾವ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೂ ದೂರು ದಾಖಲಾಗಿಲ್ಲ. ಆಗುವುದಿಲ್ಲ. ಯಾವ ಶಾಸಕರೂ, ಅಲ್ಲಿಯ ರಾಜಕೀಯ ಮುಖಂಡರ ಮಕ್ಕಳ ಮೇಲೆ ಪ್ರಕರಣ ದಾಖಲಾಗುವುದಿಲ್ಲ. ಏಕೆಂದರೆ ಅವರು ಇಂಥವುಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವರು ಘಟನೆಯನ್ನು ಟಿವಿಗಳಲ್ಲಿ ನೋಡುತ್ತಾರೆ. ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಾರೆ ಅಷ್ಟೇ.
ಪ್ರಶ್ನೆ ಎದ್ದಿರುವುದು ಅವರ ಮಕ್ಕಳು, ಬಂಧುಗಳಿಗೆ ಬೇಕಿಲ್ಲದ ವಿವಾದ ನಿಮಗೇಕೆ ಬೇಕು? ನಿಮ್ಮ ಮೇಲೆ ಹಾಕಿದ ಪ್ರಕರಣದಲ್ಲಿ ಜಾಮೀನು ಕೂಡ ಕೊಡಲು ಬರುವುದಿಲ್ಲ. ಈಗ ಕೆರಗೋಡು ನೋಡಿ, ಮಂಡ್ಯ ನೋಡಿ… ಇನ್ನು ಎರಡು ಮೂರು ವರ್ಷ ಇದೇ ವಿವಾದದಲ್ಲಿ ಮುಳುಗಿರುತ್ತದೆ. ಅಲ್ಲಿಯ ವ್ಯಾಪಾರ ವಹಿವಾಟು ಬೆಂಗಳೂರಿಗೋ ಮೈಸೂರಿಗೋ ಸ್ಥಳಾಂತರವಾಗುತ್ತದೆ. ಈ ಮತೀಯ ಹುಚ್ಚು, ಸಂಘರ್ಷ ಹಳ್ಳಿ ಹಳ್ಳಿಗಳಿಗೆ ಹಬ್ಬುತ್ತದೆ. ಜನ ಜನರ ನಡುವೆ ಸಹಬಾಳ್ವೆ ನಾಶವಾಗಿ ಕ್ರೋಧ ತುಂಬಿ ಹೋಗುತ್ತದೆ.
ಇಷ್ಟಕ್ಕೂ ಇದೆಲ್ಲ ಯಾತಕ್ಕಾಗಿ, ಯಾರಿಗಾಗಿ ಎಂದು ಕ್ಷಣ ಮಾತ್ರ ಚಿಂತಿಸಿದರೆ ಸತ್ಯ ಗೊತ್ತಾಗುತ್ತದೆ. ನಿಮ್ಮೂರು, ನಿಮ್ಮ ನಗರ ಅಧೋಗತಿಗೆ ಇಳಿಯಬೇಕೆಂದಿದ್ದರೆ, ಅಥವಾ ಸರ್ವನಾಶದ ಅಂಚಿಗೆ ಹೋಗಬೇಕಿದ್ದರೆ ಇಂತಹ ಗಲಭೆಗೆ ಆಸ್ಪದ ನೀಡಿ ಎಂದು ವಿಷಾದದಿಂದ ಹೇಳಲೇಬೇಕಾಗುತ್ತದೆ.
ಆಯ್ತು. ವಿಶ್ವ ಮಾನವ ತತ್ವ, ಭ್ರಾತೃತ್ವ, ಎಲ್ಲರಿಗೂ ಸಹಬಾಳ್ವೆ, ಸಮಪಾಲು, ಸಹಜೀವನ ಎಂದೆಲ್ಲ ಉಪದೇಶಿಸುವ ಚಿಂತಕ ಬದನೆಕಾಯಿ'ಗಳೂ ಕೂಡ ನಿಮ್ಮನ್ನು ರಕ್ಷಿಸಲು ಬರುತ್ತಾರಾ ಎಂದರೆ ಖಂಡಿತ ಇಲ್ಲ. ಅವರೆಲ್ಲ ಉಪದೇಶ, ಸಿದ್ಧಾಂತ ಅರಹುವ ಶಿಖಾಮಣಿಗಳಾಗಿದ್ದಾರೆ. ಹೊರತು, ಅವರನ್ನು ಮಾತನಾಡಿಸಿ...ನಾನು ಹೇಗೆ ಇವರಿಗೆ ಬೆಂಬಲವಾಗಲಿ.. ಎನ್ನುವ ಪ್ರಶ್ನೆಯನ್ನಿಡುತ್ತಾರೆ.
ಇತ್ತೀಚಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಕೋಮು ಸಂಘರ್ಷದಲ್ಲಿ ದೇಶದಲ್ಲಿ ಎರಡು-ಮೂರನೇ ಸ್ಥಾನದಲ್ಲೇ ಇದೆ. ಎಲ್ಲೆಲ್ಲಿ ಕೋಮು ದ್ವೇಷ ಹಬ್ಬಿದೆಯೋ ಅಲ್ಲಲ್ಲಿ ಹೊಸ ಎಂ.ಪಿ., ಎಂಎಲ್‌ಎಗಳು ಉದ್ಭವವಾಗಿದ್ದಾರೆ!
ಈಗ ಆಗಬೇಕಿರುವುದು ಇಷ್ಟೇ. ಕೆಲ ಕ್ಷುಲ್ಲಕ ವಿಷಯಗಳಿಗೆ ರಾಜಕೀಯ ಮುಖಂಡರ ಪ್ರವೇಶಕ್ಕೆ ಆಸ್ಪದ ನೀಡಬೇಡಿ. ಊರಲ್ಲೇ ಬಗೆಹರಿಸಿಕೊಳ್ಳಿ. ಅವರೇನಾದರೂ ಮೀಸೆ-ಮೂಗು ತೂರಿಸಲು ಬಂದರೆ, ನಮ್ಮ ಊರು, ನಮ್ಮ ಜನ, ದಯವಿಟ್ಟು ನೀವು ಬರಬೇಡಿ; ದೂರ ಸರಿಯಿರಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುವ ಛಾತಿ ಬೆಳೆಸಿಕೊಳ್ಳಿ. ಇದು ನಿಮಗೂ ಕಷ್ಟ. ಊರೆಂದರೆ ಬೇರೆ ಬೇರೆ ಸಮುದಾಯಗಳು, ವಿಭಿನ್ನ ಪಂಗಡಗಳು ಇದ್ದೇ ಇರುತ್ತವೆ. ಆದಾಗ್ಯೂ ಸಹಮತಕ್ಕೆ ಸದಾ ಬೆಲೆ ಇದ್ದೇ ಇರುತ್ತದೆ. ಸಹೃದಯಿಗಳೂ ಇದ್ದೇ ಇರುತ್ತಾರೆ.
ಈಗ ಮತ್ತೆ ಮಹಾ ಚುನಾವಣೆ ಬರುತ್ತಿದೆ. ಪ್ರತಿ ಊರಲ್ಲಿ ರಾಜಕೀಯ ಘರ್ಷಣೆಗಳಿಗಿಂತಲೂ ಹೆಚ್ಚಾಗಿ ಭಾವನಾತ್ಮಕ ವಿಷಯಗಳ ಮೇಲೆ, ಕೋಮು ಪ್ರಚೋದಕರು ಆಗಮಿಸಲಿದ್ದಾರೆ. ಹೆಣ, ಗಾಯಾಳುಗಳ ಮೇಲೆ ಓಟಿನ ಮತ ಬೇಟೆಯಾಗುತ್ತದೆ. ಧ್ವಜ, ಕರಸೇವಕ, ದೇವರು ಮಂದಿರ, ಮಸೀದಿ-ದರ್ಗಾ, ಮೈದಾನ-ಸ್ಮಶಾನ, ಜಾತಿಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕಾರ್ಯ!
ಹುಷಾರ್. ನಾಲ್ಕೈದು ವರ್ಷ ನಿದ್ದೆಯಲ್ಲಿದ್ದವರು, ನಿಮ್ಮ ಕಷ್ಟ ಸುಖ ಕೇಳದೇ, ಊರ ಅಭಿವೃದ್ಧಿಯತ್ತ ಚಿಕ್ಕಾಸೂ ಗಮನ ಹರಿಸದವರು ಈಗ ಧರ್ಮ, ಜಾತಿ, ಹಿಂದುತ್ವ, ಇಸ್ಲಾಮೀಕರಣ, ತುಷ್ಟೀಕರಣ, ಸಂಘರ್ಷಗಳ ಮಾತನಾಡುತ್ತ ಎದ್ದು ನಿಂತಿದ್ದಾರೆ. ದೇವಸ್ಥಾನ ಕೆಡವ್ತೀನಿ, ಮಸೀದಿ ಧ್ವಂಸ ಮಾಡ್ತೀನಿ ಎನ್ನುತ್ತ ನಿಮ್ಮೂರಿನ ಶಾಂತಿ ಕದಡಲು ಆಗಮಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದ ಮಕ್ಕಳ ಭವಿಷ್ಯವನ್ನು ಹೊಸಕಿ ಹಾಕಲಿದೆ ಇಂಥವರ ರಾಜಕೀಯ ಷಡ್ಯಂತ್ರಗಳು. ಹಾಗಾಗಿ ಯಾವುದೇ ಪ್ರಚೋದನೆಗೆ ಒಳಗಾಗದಿರಿ.
ಚುನಾವಣೆ, ರಾಜಕೀಯ, ಗಲಭೆ, ಘರ್ಷಣೆ, ಘೋಷಣೆಗಳು ಬೆಂಕಿ ಬಿರುಗಾಳಿಯಂತೆ. ಜ್ವಾಲೆಗೆ ಗಾಳಿ ಹಾಕದಿರಿ. ಬಿರುಗಾಳಿಗೆ ಸಿಲುಕದಿರಿ. ಹನುಮನ ಬಾಲಕ್ಕೆ ಬೆಂಕಿ ಹಚ್ಚುವ ಕಾರ್ಯಕ್ಕೆ ಎಣ್ಣೆ ಸುರಿಯದಿರಿ.. ನಿಮ್ಮೂರನ್ನೇ ಸುಟ್ಟು ಬಿಡುತ್ತದೆ ಆ ಜ್ವಾಲೆ!!