ಸ್ತ್ರೀಧನ ಆಸ್ತಿ: ಉತ್ತರಾಧಿಕಾರಿ ನೀವಲ್ಲಾ.. ನೀವಲ್ಲಾ
ಅದೊಂದು ಸುಸಂಸ್ಕೃತ ಸಾಂಪ್ರದಾಯಿಕ ಮನೆತನ. ಮನೆತನದ ಮೂಲ ಪುರುಷ ಶಿವರುದ್ರಪ್ಪ ಬಹಳ ವರ್ಷಗಳ ಹಿಂದೆ ಮೃತನಾದನು. ಅವನಿಗೆ ಹೆಂಡತಿ ಚೆನ್ನಮ್ಮ ಮತ್ತು ಒಬ್ಬನೇ ಮಗ ರಾಜಪ್ಪ. ಶಿವರುದ್ರಪ್ಪ ಯಾವುದೇ ಆಸ್ತಿ ಹೊಂದಿರಲಿಲ್ಲ, ಹೀಗಾಗಿ ಉತ್ತರಾಧಿಕಾರಿಗಳಾದ ಪತ್ನಿ ಮಗನಿಗೆ ಯಾವುದೇ ಸ್ವತ್ತುಗಳು ಪ್ರಾಪ್ತಿಯಾಗಲಿಲ್ಲ. ತಾಯಿ ಮಗನ ಜೀವನ ಹೀಗೇ ಸಾಗಿತು. ಚನ್ನಮ್ಮ ಹಗಲು ರಾತ್ರಿ ಎನ್ನದೆ ದುಡಿದು ತನ್ನ ಹಾಗೂ ಮಗನ ಹೊಟ್ಟೆ ತುಂಬಿಕೊಳ್ಳುವದಲ್ಲದೆ ನಾಲ್ಕು ಎಕರೆ ಮನೆ, ಎರಡು ನಿವೇಶನ ಖರೀದಿಸಿದಳು. ಈ ಆಸ್ತಿಗಳು ಚೆನ್ನಮ್ಮನ ಸ್ತ್ರೀಧನ ಆಸ್ತಿಗಳು. ರಾಜಪ್ಪನ ಮದುವೆಯನ್ನು ಶಿವಲೀಲಾ ಜೊತೆ ಮಾಡಿದಳು. ಅವನಿಗೆ ಶೇಖರ, ರವೀಂದ್ರ, ರಾಜೇಂದ್ರ ಅನ್ನುವ ಮೂವರು ಪುತ್ರರು, ಮೀನಾಕ್ಷಿ, ಸರೋಜನಿ ಇಬ್ಬರು ಪುತ್ರಿಯರು. (ವ್ಯಕ್ತಿಗಳ ಹೆಸರು ಬದಲಿಸಿದೆ)
ಒಕ್ಕಲುತನ ಕೆಲಸ ಮಾಡುತ್ತ ಚನ್ನಮ್ಮ ಸದೃಢವಾಗಿ, ಆರೋಗ್ಯವಾಗಿದ್ದಳು. ೧೯೪೭ರಲ್ಲಿ ರಾಜಪ್ಪ ಮತ್ತು ೧೯೪೮ರಲ್ಲಿ ಶಿವಲೀಲಾ ನಿಧನರಾದರು. ರಾಜಪ್ಪನ ಮಕ್ಕಳಿಗೆ ಅಜ್ಜಿ ಚನ್ನಮ್ಮ ಆಸರೆಯಾದಳು. ಮಗ, ಸೊಸೆ ನಿಧನದ ನಂತರ, ಚನ್ನಮ್ಮ ಬಹಳ ದಿನ ಬದುಕಲಿಲ್ಲ. ರಾಜಪ್ಪನ ಪುತ್ರರು ಮಾತ್ರ ಜಮೀನಿನ ಕಂದಾಯ ದಾಖಲಾತಿಯಲ್ಲಿ ಮತ್ತು ಮನೆ, ನಿವೇಶನದ ನಗರ ಸಭೆ ದಾಖಲೆಗಳಲ್ಲಿ, ಚನ್ನಮ್ಮನ ವಾರಸುದಾರರೆಂದು ಹೆಸರು ದಾಖಲಿಸಿ ಕೊಂಡರು. ಪುತ್ರಿಯರು ಇದರ ಬಗ್ಗೆ ಗಮನ ಕೊಡಲಿಲ್ಲ. ಸಹೋದರ ಸಹೋದರಿಯರ ಸಂಬಂಧ ಸುಮಧುರವಾಗಿತ್ತು. ಮಧುರವಾಗಿ ಇದ್ದದ್ದು ಹಳಸಲು ಕೆಲವು ವರ್ಷ ಗತಿಸಿದವು.
ಸಹೋದರಿಯರು ತಮ್ಮ ಅಜ್ಜಿ ಚನ್ನಮ್ಮಳ ಸ್ತ್ರೀಧನ ಆಸ್ತಿಯಲ್ಲಿ ನಮಗೂ ಹಕ್ಕಿದೆಯೆಂದು ವಾದಿಸಿ ಪಾಲು ಕೇಳಿದರು. ಸಹೋದರರು ಆಸ್ತಿ ಅಭಿವೃದ್ಧಿಪಡಿಸಿದ್ದರು, ತಮ್ಮಲ್ಲಿ ವಿಭಜನೆ ಮಾಡಿಕೊಂಡು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪಾಲು ಕೊಡಲು ನಿರಾಕರಿಸಿದರು. ಹಿರಿಯರು ಸಂಧಾನಕ್ಕೆ ಕೂಡಿಸಿದರು. ಸಹೋದರಿಯರಿಗೆ ಬಂಗಾರ, ಹಣ ಕೊಡುವುದಾಗಿ ಹೇಳಿದರು. ಸಹೋದರಿಯರು ತಮಗೆ ಸಮನಾಗಿ ಆಸ್ತಿ ಬೇಕೆಂದು ಹಠ ಹಿಡಿದರು. ಸಂಧಾನ ವಿಫಲವಾಯಿತು. ಅಂತಿಮವಾಗಿ ಅಜ್ಜಿಯ ಸ್ತ್ರೀಧನ ಆಸ್ತಿಯಲ್ಲಿ ಸಮಪಾಲು ಕೇಳಿ ಸಹೋದರರ ವಿರುದ್ಧ ಕೋರ್ಟ್ ಮೆಟ್ಟಲೇರಿದರು. ಕೋರ್ಟ್ ಸಮನ್ಸ್ ಹಿಡಿದುಕೊಂಡು ಸಹೋದರರು ನಮ್ಮ ಹೋಮ್ ಆಫೀಸಿಗೆ ಬಂದರು.
ನ್ಯಾಯಾಲಯದಿಂದ ಬಂದ ಕಾಗದ ಪತ್ರಗಳನ್ನು ಪರಿಶೀಲಿಸುತ್ತ, ಸ್ಪೆಕ್ಟ್ ಮೇಲಿನ ಅಂಚಿನಿಂದ ಅವರೆಡೆಗೆ ದೃಷ್ಟಿ ಬೀರಿದೆ. ಸಹೋದರರ ಮುಖದಲ್ಲಿ ದುಗುಡವಿತ್ತು. ಚನ್ನಮ್ಮಳ ತವರು ಮನೆಯವರು ಕೊಟ್ಟ ಆಸ್ತಿ ಅಲ್ಲ. ಅವಳು ದುಡಿದು ಸಂಪಾದಿಸಿದ ಸ್ತ್ರೀಧನ ಆಸ್ತಿಯಾಗಿತ್ತು. ದಾಖಲಾತಿಗಳನ್ನು ನೋಡುತ್ತ ಹೋದಂತೆ ಇದೊಂದು ಅಪರೂಪದ ಸವಾಲಿನ ಪ್ರಕರಣ ಎನಿಸಿತು. ಹಿಂದೂ ಉತ್ತರಾಧಿಕಾರ ಕಾನೂನು-೧೯೫೬ ರನ್ವಯ ವಾದಿಯರು/ಸಹೋದರಿಯರು ಸ್ತ್ರೀಧನ ಆಸ್ತಿಯಲ್ಲಿ ತಮ್ಮ ಪಾಲನ್ನು ವಿಭಜಿಸಿ ಕೊಡಲು ಕೇಳಿದ್ದಾರೆ. ಚನ್ನಮ್ಮಳ ಮರಣದ ನಂತರ ತಮ್ಮನ್ನು ಹೊರತುಪಡಿಸಿ ಪ್ರತಿವಾದಿಯರು ತಾವಷ್ಟೆ ಉತ್ತರಾಧಿಕಾರಿಗಳೆಂದು, ಆಸ್ತಿಗಳ ಸರಕಾರಿ ದಾಖಲಾತಿಗಳಲ್ಲಿ ಮೋಸತನದಿಂದ ಹೆಸರು ದಾಖಲಿಸಿಕೊಂಡಿದ್ದಾರೆ ಎಂದು ಆಪಾದನೆ ಮಾಡಿದ್ದರು. ಕಕ್ಷಿದಾರರಿಗೆ ಚನ್ನಮ್ಮನ ಮರಣ ಪ್ರಮಾಣ ಪತ್ರ ತರಲು ಸೂಚಿಸಿದೆ. ನೀವು ಭಯಪಡುವ ಅವಶ್ಯಕತೆ ಇಲ್ಲ. ನಿಮ್ಮ ಕಾನೂನುಬದ್ಧ ಹಕ್ಕನ್ನು ರಕ್ಷಿಸುವ ಹೊಣೆ ನನ್ನದು ಎಂದು ಭರವಸೆ, ಧೈರ್ಯ ತುಂಬಿದೆ. ನ್ಯಾಯಾಲಯದಲ್ಲಿ ಪ್ರತಿವಾದಿಯರ ಪರವಾಗಿ ವಕಾಲತ್ತು ಹಾಜರುಪಡಿಸಿದೆ. ಪ್ರತಿವಾದಿಯರ ಕೈಫಿ ಯತ್ /ತಕರಾರು ಸಲ್ಲಿಸಿ, ಪ್ರತಿವಾದಿಯರು ದಾವೆ ಆಸ್ತಿ ಮಾಲೀಕರು ಇರುತ್ತಾರೆ. ಚೆನ್ನಮ್ಮ ೧೨/೧೨/೧೯೫೦ ರಲ್ಲಿ ಮರಣವಾಗಿದ್ದು, ಉತ್ತರಾಧಿಕಾರಿಗಳೆಂದು ಪ್ರತಿ ವಾದಿಯರು ಆಸ್ತಿಗಳ ಮಾಲೀಕರಾಗಿದ್ದು, ಸ್ವಾಧೀನದಲ್ಲಿರುತ್ತಾರೆ. ವಾದಿಯರಿಗೆ ಅಜ್ಜಿಯ ಆಸ್ತಿಗೆ ಉತ್ತರಾಧಿಕಾರದ ಹಕ್ಕು ಪ್ರಾಪ್ತಿ ಆಗಿರುವುದಿಲ್ಲವೆಂದು ದಾಖಲಿಸಿದೆ.
ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ನಿರ್ವಿವಾದ ಸಂಗತಿ ಏನೆಂದರೆ, ಚನ್ನಮ್ಮ ದಾವೆಯ ಆಸ್ತಿಗಳನ್ನು ಸ್ವತಂತ್ರವಾಗಿ ಖರೀದಿಸಿದ್ದಾಳೆ. ಅವು ಸ್ತ್ರೀಧನ ಆಸ್ತಿಗಳು. ವಿವಾದ ಏನೆಂದರೆ ಚನ್ನಮ್ಮ ಉತ್ತರಾಧಿಕಾರ ಕಾನೂನು-೧೯೫೬ ತಾ. ೫/೬/೧೯೫೬ರಂದು ಜಾರಿ ಬರುವುದಕ್ಕಿಂತ ಮುಂಚೆ ತೀರಿಕೊಂಡಳೋ? ನಂತರ ತೀರಿಕೊಂಡಳೋ?. ಇದು ಮೊದಲು ನಿರ್ಣಯವಾಗಬೇಕು. ಏಕೆಂದರೆ ವಾದಿಯರು, ಚೆನ್ನಮ್ಮ ೫/೯/೧೯೫೬ರಂದು ತೀರಿಕೊಂಡಿರುವುದಾಗಿ ಮತ್ತು ಪ್ರತಿವಾದಿಯರು, ಚೆನ್ನಮ್ಮ ೧೨/೧೨/೧೯೫೦ರಲ್ಲಿ ಮರಣ ಹೊಂದಿರುವುದಾಗಿ ಮರಣ ಪ್ರಮಾಣ ಪತ್ರ ಹಾಜರುಪಡಿಸಿದ್ದಾರೆ. ವಾದಿ ಪ್ರತಿವಾದಿಯರು ದಾಖಲಾತಿ ಸಲ್ಲಿಸಿ ತಮ್ಮ ಹಾಗೂ ತಮ್ಮ ಪರ ಸಾಕ್ಷೀದಾರರನ್ನು ಸಾಕ್ಷೀಕರಿಸಿದರು.
ಕೊನೆಯ ಹಂತ ಆರ್ಗ್ಯುಮೆಂಟ್
ವಾದಿಯರ ಪರ ವಕೀಲರು, ಚನ್ನಮ್ಮ ಇವಳು ೫/ ೯/೧೯೫೬ರಲ್ಲಿ ಉತ್ತರಾಧಿಕಾರ ಕಾನೂನು-೧೯೫೬ ಜಾರಿಗೆ ಬಂದ ನಂತರ ತೀರಿಕೊಂಡಿರುವುದಾಗಿ ಮುನ್ಸಿಪಾಲ್ಟಿ ಇವರು ನೀಡಿದ ಸರ್ಟಿಫಿಕೇಟ್ ಹಾಜರು ಪಡಿಸಿದ್ದು, ಉತ್ತರಾಧಿಕಾರ ಕಾನೂನು ಕಲಂ ೧೪ ರಡಿಯಲ್ಲಿ ಉತ್ತರಾಧಿಕಾರಿಯಾಗಿದ್ದಾರೆ. ವಾದಿಯರಿಗೆ ಕಾನೂನುಬದ್ಧ ಸಮಪಾಲು ಇದೆ, ಅದಕ್ಕಾಗಿ ಪಾಲು ವಿಭಜಿಸಿಕೊಡಬೇಕು ಎಂದು ವಾದಿಸಿದರು.
ಪ್ರತಿವಾದಿಯರ ಪರ ವಾದವನ್ನು ಪ್ರಾರಂಭಿಸಿದೆ. "ಯುವರ್ ಆನರ್, ಹಿಂದೂ ಉತ್ತರಾಧಿಕಾರ ಕಾನೂನು ಜಾರಿ ಬರುವುದಕ್ಕಿಂತ ಮುಂಚೆ ಮತ್ತು ನಂತರ ಸ್ತ್ರೀಧನ ಸ್ವತ್ತಿಗೆ ಮೃತ ಮಗನ ಗಂಡು ಮಕ್ಕಳು, ಹೆಣ್ಣು ಮಕ್ಕಳ ಅಂದರೆ ಮೊಮ್ಮಕ್ಕಳ ಉತ್ತರಾಧಿಕಾರದ ಸ್ಥಾನದ ಬಗ್ಗೆ ನಿರ್ಣಯ ಆಗಬೇಕು. ವಾದಿಯರು ಚನ್ನಮ್ಮಳ ಮರಣ ತಾ. ೫/೯/೧೯೫೬ ಎಂದು ಸರ್ಟಿಫಿಕೇಟ್ ಹಾಜರುಪಡಿಸಿದ್ದು ಅದು ನಂಬಲು ಅರ್ಹ ಇರುವುದಿಲ್ಲ. ಏಕೆಂದರೆ ಮುನ್ಸಿಪಲ್ ದಾಖಲೆ ರಿಜಿಸ್ಟರ್‌ನಲ್ಲಿ ಮರಣ ದಿನಾಂಕ ನಮೂದಾಗಿಲ್ಲವೆಂದು ವಿವರಿಸಿದ್ದಾರೆ. ಪ್ರತಿವಾದಿಯರು, ತಹಶೀಲ್ದಾರ್ ನೀಡಿದ ಮರಣ ಪ್ರಮಾಣ ಪತ್ರ ಹಾಜರುಪಡಿಸಿದ್ದು ಅದು ಸುಸಂಬದ್ಧ, ಕಾನೂನುಬದ್ಧ ದಾಖಲೆ ಇದ್ದು ನಂಬಲು ಯೋಗ್ಯ ಇದೆ. ಚನ್ನಮ್ಮ ಹಿಂದೂ ಉತ್ತರಾಧಿಕಾರ ಕಾನೂನು ಬರುವುದಕ್ಕಿಂತ ಮುಂಚೆ ನಿಧನ ಹೊಂದಿದ್ದಾರೆಂಬುದು ಸ್ಪಷ್ಟ. ಆ ಕಾಲದಲ್ಲಿ ಮೊಮ್ಮಗಳ ಸ್ತ್ರೀಧನ ಸ್ವತ್ತಿನ ಉತ್ತರಾಧಿಕಾರದ ಸ್ಥಾನದ ಬಗ್ಗೆ ಗಮನಿಸೋಣ. ಮುಲ್ಲಾ ಇವರು ಬರೆದ ಹಿಂದೂ ಲಾ ಬುಕ್ ಸೆಕ್ಷನ್ ೧೪೭ರಲ್ಲಿ ಉತ್ತರಾಧಿಕಾರ ಕಾನೂನಿನ ಪೂರ್ವದಲ್ಲಿ, ಸ್ತ್ರೀಧನ ಸ್ವತ್ತಿನ ಉತ್ತರಾಧಿಕಾರದ ಬಗ್ಗೆ ಹೇಳುತ್ತಾ, ಮಗಳ ಕಲ್ಯಾಣಕ್ಕೆ ಮದುವೆಯ ಸಂದರ್ಭದಲ್ಲಿ ಕೊಟ್ಟ ಸ್ವತ್ತು ಶುಲ್ಕ ಎಂದು ಪರಿಗಣಿಸುತ್ತಾರೆ. ಆ ಸ್ವತ್ತಿನ ಉತ್ತರಾಧಿಕಾರದ ಶ್ರೇಣಿ ಅವಳ ತವರುಮನೆಯ ಬಂಧುಗಳ ಕಡೆಗೆ ಹೊರಳುತ್ತದೆ" ಎಂದು ವಾದಕ್ಕೆ ಅಲ್ಪ ವಿರಾಮ ನೀಡಿದೆ.
ಮತ್ತೆ ಆರ್ಗ್ಯುಮೆಂಟ್ ಮುಂದುವರಿಸಿ "ಯುವರ್ ಆನರ್, ಹೆಣ್ಣು ಮಗಳು ಸ್ವತಂತ್ರವಾಗಿ ಹೊಂದುವ ಸ್ವತ್ತನ್ನು ಸ್ತ್ರೀಧನ ಸ್ವತ್ತು ಎಂದು ಪರಿಗಣಿಸುತ್ತಾರೆ. ಈ ಪ್ರಕರಣದಲ್ಲಿ ಇರುವ ಸ್ವತ್ತು ನಿರ್ವಿವಾದವಾಗಿ ಸ್ತ್ರೀಧನ ಸ್ವತ್ತು. ಉತ್ತರಾಧಿಕಾರ ಕಾನೂನು ಜಾರಿ ಮುಂಚೆ ಸ್ತ್ರೀಧನ ಸ್ವತ್ತಿನ ಉತ್ತರಾಧಿಕಾರದ ಶ್ರೇಣಿಯಲ್ಲಿ, ಅವಿವಾಹಿತ ಹೆಣ್ಣು ಮಗಳಿಂದ ಪ್ರಾರಂಭವಾಗಿ, ಮೃತ ಮಗನ ಗಂಡು ಮಕ್ಕಳತನಕ ಬಂದು ನಿಲ್ಲುತ್ತದೆ. ಈ ಶ್ರೇಣಿಯಲ್ಲಿ ಮೃತ ಮಗನ ಹೆಣ್ಣು ಮಗಳು ಇರುವುದಿಲ್ಲ. ಆದ್ದರಿಂದ ಚನ್ನಮ್ಮಳ ಸ್ತ್ರೀಧನ ಸ್ವತ್ತಿಗೆ ಮೃತ ಮಗನ ಗಂಡು ಮಕ್ಕಳು ಪ್ರತಿವಾದಿಯರು ಮಾತ್ರ ಉತ್ತರಾಧಿಕಾರಿಗಳು. ವಾದಿಯರು ಮೃತ ಮಗನ ಹೆಣ್ಣುಮಕ್ಕಳಿದ್ದು ಅವರು ಸ್ತ್ರೀಧನ ಸ್ವತ್ತಿಗೆ ಉತ್ತರಾಧಿಕಾರಿಗಳಲ್ಲ. ಆದ್ದರಿಂದ ವಾದಿಯರ ದಾವೆಯನ್ನು ವಜಾಗೊಳಿಸಬೇಕು, ಯುವರ್ ಆನರ್" ಎಂದು ವಾದಕ್ಕೆ ತೆರೆ ಎಳೆದೆ.
ನ್ಯಾಯಾಲಯವು ಉಭಯ ವಕೀಲರ ವಾದ ಆಲಿಸಿ, ಪ್ರತಿವಾದಿ ಪರ ನನ್ನ ವಾದ ಪುಷ್ಟೀಕರಿಸಿ, ವಾದಿಯರು ಸ್ತ್ರೀಧನ ಆಸ್ತಿಗೆ ಉತ್ತರಾಧಿಕಾರಿಗಳು ಅಲ್ಲವೆಂದು ನಿರ್ಣಯಿಸಿ ದಾವೆಯನ್ನು ವಜಾಗೊಳಿಸಿ ತೀರ್ಪು ನೀಡಿತು.
ಈ ತೀರ್ಪು ಪ್ರಶ್ನಿಸಿ ವಾದಿಯರು ಮೇಲ್ಮನವಿಯನ್ನು ಅಪಲೆಂಟ್ ಕೋರ್ಟಿಗೆ ಸಲ್ಲಿಸಿದರು. ಮೇಲ್ಮನವಿ ನ್ಯಾಯಾಲಯ ಕೆಳ ನ್ಯಾಯಾಲಯದ ಅಭಿಪ್ರಾಯ ಸಮಂಜಸ ಇರುವುದೆಂದು, ಆ ತೀರ್ಪಿನಲ್ಲಿ ಹಸ್ತಕ್ಷೇಪ ಅವಶ್ಯಕ ಇಲ್ಲವೆಂದು ಮೇಲ್ಮನವಿಯನ್ನು ವಜಾಗೊಳಿಸಿತು.