ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಸಚಿವ ಖರ್ಗೆ ಭೇಟಿ
ಕಲಬುರಗಿ: ನಗರದ ವಾಜಪೇಯಿ ಬಡಾವಣೆಯಲ್ಲಿ ಇರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಈ ಸಲದ ಬಜೆಟ್ ಒಳಗಡೆಯಲ್ಲಿ ಪ್ರಾರಂಭಿಸಲು ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಕಟ್ಟಡ ವೀಕ್ಷಣೆಯ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ಕಲಬುರಗಿ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್, ನೀಟ್, ಜೆಇಇ, ಬ್ಯಾಂಕಿಂಗ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ಎಲ್ಲ ಸೌಲಭ್ಯಯುಳ್ಳ ಕಟ್ಟಡ ನಿರ್ಮಾಣ ಮಾಡಲಾಗಿದ್ದು. ತರಬೇತಿ ತರಗತಿಗಳು ಪ್ರಾರಂಭವಾಗಬೇಕಿದೆ. ಅಗತ್ಯ ತರಬೇತಿ ನೀಡುವ ಉಪನ್ಯಾಸಕರು ಹೈದರಾಬಾದ್, ಚೆನ್ನೈ ಸೇರಿದಂತೆ ಬೇರೆ ಭಾಗದಲ್ಲಿ ಇದ್ದರೆ ಅವರನ್ನೇ ಕರೆಸಿ ಅವರಿಂದ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ ಸಚಿವರು ಒಟ್ಟಾರೆಯಾಗಿ ಈ ಸಲದ ಬಜೆಟ್ ಒಳಗಡೆ ತರಬೇತಿ ನೀಡುವಂತಾಗಬೇಕು ಎಂದು ಸಚಿವರು ಹೇಳಿದರು.
ತರಬೇತಿಗಾಗಿ ಹಾಗೂ ಇತರೆ ಸೌಲಭ್ಯಗಳಿಗಾಗಿ ಬೇಕಾಗುವ ರೂ 10 ಕೋಟಿ ಅನುದಾನವನ್ನು ಕೆಕೆಆರ್ ಡಿಬಿಯಿಂದ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ MLC ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮೀಷನರ್ ಆರ್ ಚೇತನ,ಎಸ್ ಪಿ ಅಡ್ಡೂರು ಶ್ರೀನಿವಾಸಲು, ಹಾಗೂ ಅಧಿಕಾರಿಗಳು ಇದ್ದರು.