ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ಪೀಕರ್ ಘನತೆಯ ಸಾಕ್ಷಾತ್ಕಾರ

11:15 AM Nov 08, 2023 IST | Samyukta Karnataka

ವಿಧಾನಸಭಾಧ್ಯಕ್ಷರ (ಸ್ಪೀಕರ್) ಸ್ಥಾನವೆಂಬುದು ಸಾರ್ವಜನಿಕರ ದೃಷ್ಟಿಯಲ್ಲಿ ಆರಾಮ ಕುರ್ಚಿಯ ಸ್ವರೂಪ. ಏಕೆಂದರೆ ಅದರ ಕಾರ್ಯ ನಿರ್ವಹಣೆಯಲ್ಲಿ ಜವಾಬುಗಳಿದ್ದರೂ ಸವಾಲುಗಳಿಲ್ಲ. ಜನರ ಸುಖ ದುಃಖಗಳನ್ನು ಸದನದ ಮೂಲಕ ಸದಸ್ಯರು ನಿವೇದಿಸಿಕೊಂಡ ನಂತರ ನಿರ್ಣಯಧಿಕಾರವನ್ನು ಹೊಂದಿರುವ ಮಂತ್ರಿಗಳು ಅದರ ಪರಿಹಾರ ಕ್ರಮಗಳನ್ನು ಘೋಷಿಸಲು ಅವಕಾಶ ಕಲ್ಪಿಸಿಬಿಟ್ಟರೆ ಅಲ್ಲಿಗೆ ಸ್ಪೀಕರ್ ಹೊಣೆಗಾರಿಕೆ ಮುಗಿಯಿತು ಎಂದೇ ಅರ್ಥ ಎಂಬುದು ಜನರ ನಂಬಿಕೆ. ರಾಜಕೀಯ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ ಸ್ಪೀಕರ್ ಸ್ಥಾನ ಹಾಗಿದ್ದರಲೂಬಹುದು. ಆದರೆ, ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಸಂಸತ್ತು ಸೇರಿದಂತೆ ರಾಜ್ಯಗಳ ಎಲ್ಲ ಶಾಸನ ಸಭೆಗಳಲ್ಲಿ ಸ್ಪೀಕರ್ ಸ್ಥಾನ ನಿರ್ವಹಿಸಲು ರಾಜಕೀಯ ಪ್ರಜ್ಞೆಯ ಜೊತೆಗೆ ಆತ್ಮವಿಶ್ವಾಸದ ಜಾಣತನವಿರಬೇಕು. ಕರ್ನಾಟಕದಲ್ಲಂತೂ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಸ್ಪೀಕರ್ ಸ್ಥಾನವನ್ನು ನಿಭಾಯಿಸುವುದು ತಂತಿಯ ಮೇಲಿನ ನಡಿಗೆ. ಗುಂಡೂರಾಯರ ಸರ್ಕಾರ ೧೯೮೩ ಜನವರಿ ೧೦ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಜನತಾ ರಂಗ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ ಎದುರಾದ ಮೊದಲ ಬ್ರಹ್ಮಾಂಡ ಸಮಸ್ಯೆ ಎಂದರೆ ಸ್ಪೀಕರ್ ಸ್ಥಾನದ ನಿರ್ವಹಣೆ ಮಾಡುವ ಭೂಪತಿ ಯಾರೆಂಬುದು. ಏಕೆಂದರೆ, ಜನತಾ ರಂಗದ ಹೊಸ ಶಾಸಕರ ಪೈಕಿ ಬಹುತೇಕ ಮಂದಿ ಹೊಸಬರು. ಇನ್ನು ಉಳಿದಿದ್ದ ಹಲವರಿಗೆ ಸ್ಪೀಕರ್ ಸ್ಥಾನ ಕಬ್ಬಿಣದ ಕಡಲೆ. ಅಂತಹ ದಿಕ್ಕೆಟ್ಟ ಸಂದರ್ಭದಲ್ಲಿ ಹೆಗಡೆ ಮಿತ್ರ ಮಂಡಳಿಯ ಕಣ್ಣಿಗೆ ಬಿದ್ದ ವ್ಯಕ್ತಿ ಎಂದರೆ ಡಿ.ಬಿ. ಚಂದ್ರೇಗೌಡ. ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿಗೆ ಆರಿಸಿಬಂದಿದ್ದ ಚಂದ್ರೇಗೌಡರಿಗಾದರೋ ಕಂದಾಯ ಮಂತ್ರಿ ಸ್ಥಾನದ ಮೇಲೆ ಕಣ್ಣು. ಆದರೆ, ಮಿತ್ರ ಮಂಡಳಿಯ ಹಕ್ಕೊತ್ತಾಯಕ್ಕೆ ಶರಣಾಗಿ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಂಡು ಅದರ ನಿರ್ವಹಣೆಯನ್ನು ಪ್ರಾರಂಭಿಸಿದ ಮೇಲೆ ಕರ್ನಾಟಕದ ಶಾಸನಸಭೆಯ ಇತಿಹಾಸದಲ್ಲಿ ಸ್ಪೀಕರ್ ಸ್ಥಾನ ಪಡೆದುಕೊಂಡ ಮಹತ್ವ ಈಗ ಇತಿಹಾಸ.
ಚಂದ್ರೇಗೌಡರು ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರು. ಸಂಜಯಗಾಂಧಿಯವರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅಂಬಿಕಾಸೋನಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ ದೆಹಲಿ ರಾಜಕಾರಣದ ಪಟ್ಟುಗಳನ್ನು ಅರಿತು ಅದರ ಸೂಕ್ಷ್ಮಗಳನ್ನು ಜತನವಾಗಿ ಜೀರ್ಣ ಮಾಡಿಕೊಳ್ಳಲು ಯತ್ನಿಸಿದವರು. ೧೯೭೭ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆರಿಸಿಹೋಗಿದ್ದು ಅಷ್ಟಾಗಿ ಜನರ ಗಮನಕ್ಕೆ ಬಾರದೇ ಹೋಗಿರಬಹುದು. ಆದರೆ, ೧೯೭೮ರಲ್ಲಿ ರಾಜಕಾರಣದಲ್ಲಿ ಮೂಲೆಗುಂಪಾಗಿದ್ದ ಇಂದಿರಾಗಾಂಧಿಯವರಿಗೆ ಮರುಜನ್ಮ ನೀಡುವ ಸಲುವಾಗಿ ಚಿಕ್ಕಮಗಳೂರು ಕ್ಷೇತ್ರದ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಚಂದ್ರೇಗೌಡರು ರಾತ್ರಿ ಬೆಳಗಾಗುವುದರೊಳಗೆ ಮನೆಮಾತಾಗಿಹೋಗಿದ್ದರು. ತದನಂತರ ವೀರೇಂದ್ರ ಪಾಟೀಲರ ವಿರುದ್ಧ ಇಂದಿರಾಗಾಂಧಿಯವರು ದಿಗ್ವಿಜಯ ಸಾಧಿಸಿದ ನಂತರ ಚಂದ್ರೇಗೌಡರಿಗೆ ಇಂದ್ರನ ಪಟ್ಟ ಸಿಕ್ಕೇಬಿಡುತ್ತದೆ ಎಂದು ಲೆಕ್ಕ ಹಾಕಿದ್ದವರಿಗೆ ನಿರಾಸೆಯಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಚೌಕಾಶಿ ರಾಜಕಾರಣದ ಪರಿಣಾಮವಾಗಿ ವಿಧಾನಪರಿಷತ್ತಿನ ಸದಸ್ಯತ್ವ ಪ್ರಾಪ್ತಿಯಾಗಿದ್ದನ್ನು ಬಿಟ್ಟರೆ ಚಂದ್ರೇಗೌಡರಿಗೆ ಕಾಂಗ್ರೆಸ್‌ನಿಂದ ಏನೊಂದು ಕಾಣಿಕೆಯೂ ಒದಗಿಬರಲಿಲ್ಲ. ಹಾಗೆ ಬರದೇ ಹೋದದ್ದು ಅವರ ನಾಯಕತ್ವ ದಿನದಿಂದ ದಿನಕ್ಕೆ ಹೊಸ ಹೊಳಪನ್ನು ಅದರ ಜೊತೆಗೆ ಹೊಸ ಆಯಾಮಗಳನ್ನು ಪಡೆದುಕೊಳ್ಳಲು ಕಾರಣವಾಯಿತು. ಗುಂಡೂರಾಯರ ನಾಯಕತ್ವವನ್ನು ದಿಕ್ಕರಿಸಿ ದೇವರಾಜ ಅರಸರ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡ ಚಂದ್ರೇಗೌಡರು ರೈತರ ಮೇಲೆ ನರಗುಂದದಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ವಿರೋಧಿಸಿ ರೈತರ ಜಾಥಾವನ್ನು ಬೆಂಗಳೂರಿನವರೆಗೆ ಏರ್ಪಡಿಸಿದ್ದ ರೀತಿಯನ್ನು ಮರೆಯುವಂತಿಲ್ಲ. ಆಗ ವಿಧಾನಪರಿಷತ್ತಿನಲ್ಲಿ ಜನರ ಧ್ವನಿಯಂತಿದ್ದ ಎ.ಕೆ. ಸುಬ್ಬಯ್ಯನವರೂ ಕೂಡಾ ಚಂದ್ರೇಗೌಡರ ನಾಯಕತ್ವದ ರೈತ ಜಾಥಾ ಯಶಸ್ಸನ್ನು ಪ್ರಸ್ತಾಪಿಸುತ್ತಾ ಸರ್ಕಾರಕ್ಕೆ ಚಾಟಿಯೇಟು ನೀಡಿದ ರೀತಿ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದಿಷ್ಟೂ ಚಂದ್ರೇಗೌಡರು ಸ್ಪೀಕರ್ ಸ್ಥಾನಕ್ಕೆ ಏರುವ ಮುನ್ನಾದಿನಗಳ ಸ್ಥಿತಿಗತಿ.
೧೯೮೩-೮೫ರ ನಡುವಣ ವಿಧಾನಸಭೆಯ ಸ್ವರೂಪ ನಿಜಕ್ಕೂ ವಿಚಿತ್ರ. ಏಕೆಂದರೆ, ಅಧಿಕಾರದಲ್ಲಿರುವ ಜನತಾರಂಗಕ್ಕೆ ಬಹುಮತವಿಲ್ಲ. ಬಹುಮತಕ್ಕಾಗಿ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರಲ್ಲದೆ ಜನತಾರಂಗದ ವಿರುದ್ಧ ಬಂಡಾಯವೆದ್ದಿದ್ದ ಬಂಗಾರಪ್ಪನವರ ಮುಲಾಜಿನಲ್ಲಿಯೇ ಹೆಜ್ಜೆ ಹಾಕಬೇಕಾದ ಸ್ಥಿತಿ. ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಸುಮಾರು ೬೦ ಸದಸ್ಯಬಲವನ್ನು ಹೊಂದಿದ್ದ ಕಾಂಗ್ರೆಸ್‌ಗೆ ರೇಸಿನಲ್ಲಿ ಸೋತ ಕುದುರೆಯ ಮನಸ್ಥಿತಿ. ಆಗಿನ ಕಾಂಗ್ರೆಸ್ಸಿಗರ ಸಿಟ್ಟು ಸೆಡವು ಒಟ್ಟಾಗಿದ್ದ ಪರಿಣಾಮ ಎಂದರೆ ದಿನಬೆಳಗಾದರೆ ಸರ್ಕಾರವನ್ನು ಉರುಳಿಸಲು ಸಂಚು. ಪ್ರಮಾಣವಚನದ ಶಾಸ್ತ್ರೋಕ್ತ ವಿಧಿವಿಧಾನಗಳ ನಂತರ ಶಾಸನಸಭೆಯ ಕಲಾಪವಾದ ಮೇಲೆ ಕರ್ನಾಟಕ ರಾಜಕಾರಣದಲ್ಲಿ ಮಾತಿನ ಮೂಲಕವೇ ರಾಜಕೀಯ ಸೌಧಗಳನ್ನು ಸೃಷ್ಟಿಸುವ ಹಾಗೂ ನಿರ್ನಾಮ ಮಾಡುವ ರೀತಿಯ ಕಲಾಪಗಳು ಜರುಗಿದ್ದು ನಿಜಕ್ಕೂ ಕರ್ನಾಟಕದ ರಾಜಕೀಯ ಪ್ರಭುತ್ವಕ್ಕೆ ಹಿಡಿದ ಕನ್ನಡಿ. ಕಾಂಗ್ರೆಸ್ ಪಕ್ಷದಲ್ಲಿ ಅನುಭವಸ್ಥರಾದ ಕೆ.ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಮೊದಲಾದ ಅತಿರಥರಿದ್ದರು. ವೀರಪ್ಪ ಮೊಯ್ಲಿ ಅವರದು ಪ್ರತಿಪಕ್ಷದ ನಾಯಕತ್ವ. ಸಂಸದೀಯಪಟುತ್ವಕ್ಕೆ ಹೆಸರಾದ ವಾಟಾಳ್ ನಾಗರಾಜ್ ಸದಾ ಕಲಾಪದಲ್ಲಿ ಹಾಜರು. ಇನ್ನು ಸರ್ಕಾರದ ಕಡೆಯಲ್ಲಿ ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಏಕಾಂತಯ್ಯ ಅವರಿದ್ದರೂ ಕೂಡಾ ಮಂತ್ರಿಗಿರಿ ಹೊಸತು. ಎಂ.ಪಿ. ಪ್ರಕಾಶ, ಜೀವರಾಜ ಆಳ್ವ, ಸಿದ್ದರಾಮಯ್ಯ, ದೇಶಪಾಂಡೆ, ಪಿ.ಜಿ.ಆರ್. ಸಿಂಧ್ಯಾ, ಜಿಗಜಿಣಗಿ ಹೀಗೆ ಸದನದಲ್ಲಿ ಹೊಸ ಮುಖಗಳು. ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೇ ಬಾರಿ ಸದನ ಪ್ರವೇಶದ ಅವಕಾಶ. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಈ ಹಿಂದೆ ಹಣಕಾಸು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಅನುಭವವನ್ನು ಬಿಟ್ಟರೆ ಉಳಿದವರಿಗೆ ಆಡಳಿತದ ಅನುಭವ ಅಷ್ಟಕ್ಕಷ್ಟೆ. ಇಂತಹ ವೈವಿಧ್ಯಪೂರ್ಣ ಸದನವನ್ನು ನಿರ್ವಹಣೆ ಮಾಡುವ ಹೊಣೆ ಡಿ.ಬಿ. ಚಂದ್ರೇಗೌಡರದು. ಆರಂಭದ ದಿನಗಳಲ್ಲಿ ಚಂದ್ರೇಗೌಡರ ನಿರ್ವಹಣೆಯ ಬಗ್ಗೆ ಸಾಕಷ್ಟು ಮಂದಿಗೆ ಅನುಮಾನಗಳಿತ್ತು. ಏಕೆಂದರೆ, ಈ ಹಿಂದೆ ಸ್ಪೀಕರ್ ಸ್ಥಾನವನ್ನು ಗಾಂಭೀರ್ಯದಿಂದ ನಿರ್ವಹಿಸಿದ ಕೆ.ಎಚ್. ರಂಗನಾಥ್ ಪ್ರತಿಪಕ್ಷದ ಪ್ರಮುಖ ಸದಸ್ಯರು. ಹೀಗಿರುವಾಗ ವಿದ್ಯುಕ್ತ ಕಲಾಪ ಆರಂಭವಾದ ಮೊದಲ ದಿನದಿಂದಲೇ ಪ್ರಶ್ನೋತ್ತರ ಅವಧಿಗೆ ಕಾಲಮಿತಿಯನ್ನು ಹಾಕುವ ಮೂಲಕ ಸ್ಪೀಕರ್ ಸ್ಥಾನದ ಪರಮಾಧಿಕಾರವನ್ನು ಚಂದ್ರೇಗೌಡರು ಪ್ರದರ್ಶಿಸಿದ ರೀತಿ ಅದ್ಭುತವಾಗಿತ್ತು.
ರಾಜಕೀಯ ಏರುಪೇರಿನ ಸಂದರ್ಭದಲ್ಲಿ ಸದನ ಆರಂಭವಾಗುವ ಹೊತ್ತಿಗೆ ನಿಲುವಳಿ ಸೂಚನೆಗಳನ್ನು ಮಂಡಿಸುವ ಸುಲಭ ಮಾರ್ಗವನ್ನು ಪ್ರತಿಪಕ್ಷಗಳು ಅನುಸರಿಸಲು ಆರಂಭಿಸಿದ್ದವು. ಈ ಸೂಚನೆಗಳ ಉದ್ದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕುವುದಷ್ಟೆ. ಜಾಣತನದಿಂದ ಈ ಸೂಚನೆಗಳನ್ನು ಅಲ್ಪ ಕಾಲಾವಧಿಯ ಚರ್ಚೆಗಳಾಗಿ ಪರಿವರ್ತಿಸಿ ಪ್ರಶ್ನೋತ್ತರ ಕಲಾಪ ಸುಸೂತ್ರವಾಗಿ ಸಾಗುವಂತೆ ನೋಡಿಕೊಂಡಿದ್ದು ಚಂದ್ರೇಗೌಡರ ಹೆಚ್ಚುಗಾರಿಕೆ. ನಿಲುವಳಿ ಸೂಚನೆಗಳ ಮಂಡನೆ ಹದ್ದುಮೀರುತ್ತಿದ್ದ ಸಂದರ್ಭದಲ್ಲಿ ಶಾಸನಸಭೆಯ ನಿಯಮಾವಳಿಗೆ ತಿದ್ದುಪಡಿಗಳನ್ನು ರೂಪಿಸುವ ಮೂಲಕ ಆಸಕ್ತ ಸದಸ್ಯರು ಪ್ರಶ್ನೋತ್ತರದ ನಂತರ ತಮ್ಮ ಸಮಸ್ಯೆಯನ್ನು ನಿವೇದಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿ ನಿಲುವಳಿ ಸೂಚನೆ ಮಂಡನೆಯ ಮಾರ್ಗವನ್ನೇ ಬಂದ್ ಮಾಡಿದ್ದು ಇನ್ನೊಂದು ಕಥೆ. ಪ್ರಶ್ನೋತ್ತರ ಎಂಬುದು ಗಂಟೆಗೆ ಮಾತ್ರ ಸೀಮಿತವಾಗಬೇಕು ಎಂಬುದನ್ನು ಪರಿಪಾಲಿಸುವಲ್ಲಿ ಯಶಸ್ವಿಯಾದ ಚಂದ್ರೇಗೌಡರು ತಮ್ಮ ಸಹೋದ್ಯೋಗಿಯಾಗಿದ್ದ ಡೆಪ್ಯೂಟಿ ಸ್ಪೀಕರ್ ವೀರಣ್ಣನವರು ಕೂಡಾ ಅದೇ ಮಾರ್ಗ ಅನುಸರಿಸುವಂತೆ ನೋಡಿಕೊಂಡದ್ದು ಸಂಘಟಿತ ಪ್ರಯತ್ನದ ಇನ್ನೊಂದು ಮುಖ.
ದಿನನಿತ್ಯದ ಕಲಾಪದ ಆರಂಭದಲ್ಲಿ ರಾಜಕೀಯ ಘಟನಾವಳಿಗಳೇ ಆ ದಿನದ ಪ್ರಮುಖ ವಿಚಾರ. ಮುಖ್ಯಮಂತ್ರಿ ಸ್ಥಾನ ವಂಚಿತರಾಗಿದ್ದ ಬಂಗಾರಪ್ಪ ಹಾಗೂ ಹೆಗಡೆಯವರಿಗೆ ಬೇರೆ ಬೇರೆ ಕಾರಣಗಳಿಂದ ವೈಮನಸ್ಯ. ಇವರ ನಡುವಣ ಚರ್ಚೆ ಹಲವಾರು ಬಾರಿ ಅತಿರೇಕಕ್ಕೆ ತಿರುಗಿದಾಗ ಮಾತಿನ ಲಹರಿಯನ್ನು ಬೌದ್ಧಿಕತೆಯ ಲೇಪ ಹಚ್ಚಿ ಶೇಕ್ಸ್ಪಿಯರ್, ಮಿಲ್ಟನ್, ಡಿವಿಜಿ, ಕುವೆಂಪು, ಬೇಂದ್ರೆ ಕಾವ್ಯದ ಸಾಲುಗಳನ್ನು ಎರಕ ಹೊಯ್ದು ನಂತರ ಕಲಾಪವನ್ನು ನಿಯಂತ್ರಿಸಲು ಕೌಲ್ ಮತ್ತು ಶಕ್ದರ್ ಗ್ರಂಥದ ಪುಟಗಳ ಪಠಣ ಆರಂಭಿಸುತ್ತಿದ್ದ ರೀತಿ ಚಂದ್ರೇಗೌಡರ ಸಂಸದೀಯ ಪಟುತ್ವ ಹಾಗೂ ರಾಜಕೀಯ ಪ್ರಬುದ್ಧತೆಗೆ ದಿಕ್ಸೂಚಿ. ಆಗಿನ ಸದನದಲ್ಲಿ ಉತ್ತಮ ಸಂಸದೀಯ ಪಟುತ್ವದ ಘಟನಾವಳಿಗಳು ಜರುಗಿದವು. ಅನುಭವಿ ರಾಜಕಾರಣಿ ಕೆ.ಎಚ್. ಶ್ರೀನಿವಾಸ್, ಸಿಪಿಎಂನ ಸೂರ್ಯನಾರಾಯಣರಾವ್, ಸಿಪಿಐನ ಎಂ.ಎಸ್. ಕೃಷ್ಣನ್ ಅವರುಗಳ ಪ್ರಸ್ತಾಪಕ್ಕೆ ಹೊಸ ಮುಖಗಳಾದ ಎಂ.ಪಿ. ಪ್ರಕಾಶ್ ಹಾಗೂ ಏಕಾಂತಯ್ಯ ಅವರು ಸಮಾಜವಾದಿ ಬೆಳಕಿನಲ್ಲಿ ಕೊಡುತ್ತಿದ್ದ ಉತ್ತರವನ್ನು ತೂಗಿನೋಡಿ ತುಲಾಭಾರದ ರೀತಿಯಲ್ಲಿ ಮಂಗಳ ಹಾಡುತ್ತಿದ್ದ ಚಂದ್ರೇಗೌಡರು ಇಡೀ ಸದನದ ಕಣ್ಮಣಿಯಾಗಲು ಹೆಚ್ಚು ದಿನ ಬೇಕಾಗಲಿಲ್ಲ.
ಮೊದಲ ಅಧಿವೇಶನ ಮುಗಿಯುತ್ತಿದ್ದಂತೆಯೇ ಅಕ್ಕಿ ಕಳ್ಳಸಾಗಣೆ ಆರೋಪ ಕುರಿತ ಪ್ರಕರಣದ ವಿಚಾರಣೆ ಮೈಸೂರಿನ ಶಾಸಕ ಗಂಗಾಧರನ್ ಅವರ ನೇತೃತ್ವದಲ್ಲಿ ಸದನ ಸಮಿತಿಯನ್ನು ನೇಮಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಈ ವಿವಾದ ಹೆಗಡೆಯವರ ಸೋದರ ಸಂಬಂಧಿ ಗಣೇಶ ಹೆಗಡೆ ಅವರ ಹೆಸರು ಪ್ರಮುಖವಾಗಿತ್ತು. ಸಭಾಧ್ಯಕ್ಷರಿಗೆ ಅಧಿವೇಶನ ನಡೆಯುವಾಗ ಮಾತ್ರ ಸದನ ಸಮಿತಿ ರಚಿಸುವ ಪರಮಾಧಿಕಾರ ಇರುತ್ತದೆ ಎಂಬ ಪ್ರತಿಪಕ್ಷಗಳ ವಾದವನ್ನು ಎಷ್ಟೇ ಬಲವಾಗಿ ತಿರಸ್ಕರಿಸಿದರೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗಿಯೇ ಮುಂದುವರಿಯಿತು. ಇಂತಹ ನಿರ್ಧಾರವನ್ನು ಕೈಗೊಂಡಿದ್ದ ಚಂದ್ರೇಗೌಡರು ರಾಷ್ಟ್ರೀಯ ಸ್ಪೀಕರ್‌ಗಳ ಸಮಾವೇಶದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ವಿವೇಕ ಹಾಗೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವ ಪರಮಾಧಿಕಾರವಿದೆ ಎಂಬ ಸರ್ವಸಮ್ಮತ ನಿಲುವು ಹೊರಹೊಮ್ಮುವಂತೆ ಮಾಡಿದ ನಂತರವೂ ಸ್ಪೀಕರ್ ಸ್ಥಾನದ ಪರಮಾಧಿಕಾರ ಕುರಿತ ವಿವಾದ ಇನ್ನೂ ನಿಂತಿಲ್ಲ. ಸ್ಪೀಕರ್ ಸ್ಥಾನದಿಂದ ಇಳಿದ ನಂತರ ೧೯೮೯ರಲ್ಲಿ ವಿಧಾನಸಭೆಗೆ ಮರು ಆಯ್ಕೆಯಾದಾಗ ಚಂದ್ರೇಗೌಡರಿಗೆ ಪ್ರತಿಪಕ್ಷ ನಾಯಕತ್ವ. ಆಗಿನ ಸ್ಪೀಕರ್ ಎಸ್. ಎಂ. ಕೃಷ್ಣ. ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ದೆಹಲಿಯಿಂದ ಮೂಡಿಬಂದ ವಾರ್ತೆಗಳನ್ನು ಆಧರಿಸಿ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಶಾಸನಸಭೆಯಲ್ಲಿ ಮಾರ್ದನಿಗೊಂಡು ಕೋಲಾಹಲದ ವಾತಾವರಣವನ್ನೇ ಸೃಷ್ಟಿಸಿತು. ಮುಖ್ಯಮಂತ್ರಿ ವೀರೇಂದ್ರ ಪಾಟೀಲರು
ಪ್ರಕರಣದ ಸುದೀರ್ಘ ವಿವರಣೆ ಕೊಟ್ಟ ನಂತರ ಚಂದ್ರೇಗೌಡರು ಆಕ್ಷೇಪಗಳ ಜೊತೆ ಆಕ್ಷೇಪಗಳನ್ನು ಎತ್ತುತ್ತಾ ಹೋದರು. ಇದಕ್ಕೆ ಪೂರಕವಾಗಿ ರಾಮಕೃಷ್ಣ ಹೆಗಡೆಯವರು ಕಡತದಲ್ಲಿ ಬಿಳಿಹಾಳೆಯನ್ನು ಯಾರೋ ಸೇರಿಸಿದ್ದಾರೆ ಎಂಬರ್ಥದ ಮಾತುಗಳನ್ನು ಹೇಳಿ ವಿವರಣೆಗೆ ಮುಂದಾದರು. ಆಗ ಚರ್ಚೆ ದಿಕ್ಕು ತಪ್ಪುತ್ತಾ ಹೋದಾಗ ಹೆಗಡೆಯವರು ಕ್ರಿಯಾಲೋಪ ಎತ್ತಿದರು. ಈ ಕ್ರಿಯಾಲೋಪದ ಮೇಲೆ ಸುಮಾರು ಒಂದೂವರೆ ದಿನದಷ್ಟು ಕಲಾಪ ನಡೆಯಿತು. ಆಗ ವೀರೇಂದ್ರ ಪಾಟೀಲರು ಎದ್ದು ನಿಂತು
ಸನ್ಮಾನ್ಯ ಸ್ಪೀಕರ್, ನಾನು ಮಾತನಾಡಬಹುದೇ?' ಎಂದು ಕೇಳಿದರು. ಇನ್ನೊಂದು ಕಡೆ ರಾಮಕೃಷ್ಣ ಹೆಗಡೆಯವರು ವಾದ ಮಂಡಿಸಲು ಕಾದು ನಿಂತಿದ್ದರು. ಡಿ.ಬಿ. ಚಂದ್ರೇಗೌಡರು ತಮ್ಮ ಸ್ಥಾನದಲ್ಲಿ ಎದ್ದು ನಿಂತು ಅವಕಾಶ ಕೇಳುತ್ತಿದ್ದರು. ಸ್ಪೀಕರ್ ಕೃಷ್ಣ ಅವರಿಗೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ದೊಡ್ಡ ಸವಾಲಾಗಿ ಹೋಯಿತು. ಆಗ ಇಡೀ ಸದನವನ್ನು ವೀಕ್ಷಿಸಿ ನಂತರಸನ್ಮಾನ್ಯ ಮುಖ್ಯಮಂತ್ರಿಗಳೇ, ನೀವು ಮಾತನಾಡಬಹುದು. ಆದರೆ, ಈಗಲ್ಲ' ಎಂದು ರೂಲಿಂಗ್ ನೀಡಿ ಹೆಗಡೆಯವರ ಕಡೆ ತಿರುಗಿ ತಮ್ಮ ಮಾತನ್ನು ಮುಂದುವರಿಸಿ ಎಂದು ಸೂಚಿಸಿದಾಗ ಚಪ್ಪಾಳೆ ತಟ್ಟುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು ಚಂದ್ರೇಗೌಡರು. ಚಂದ್ರೇಗೌಡರು ಎಷ್ಟಾದರೂ ಸ್ಪೀಕರ್ ಆಗಿದ್ದವರು. ಆ ಸ್ಥಾನದ ಸೂಕ್ಷ್ಮತೆ ಗೊತ್ತಿದ್ದವರು.
ಬಹುಶಃ ಕರ್ನಾಟಕ ಶಾಸನಸಭೆಯ ಇತಿಹಾಸದಲ್ಲಿ ಹಲವಾರು ಮಂದಿ ಸ್ಪೀಕರ್‌ಗಳ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಮಾನ್ಯತೆ ಪಡೆದಿದ್ದರೂ ಡಿ.ಬಿ. ಚಂದ್ರೇಗೌಡ ಹಾಗೂ ಎಸ್.ಎಂ. ಕೃಷ್ಣ ಅವರ ರೀತಿಯಲ್ಲಿ ಸದನವನ್ನು ನಿರ್ವಹಿಸಿದ ರೀತಿ ಬೇರೆಯವರಿಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ, ಈ ಎರಡೂ ಸಂದರ್ಭಗಳಲ್ಲಿ ರಾಜಕೀಯವಾಗಿ ದಿಕ್ಕೆಟ್ಟ ಪರಿಸ್ಥಿತಿ ಇತ್ತು. ಹೀಗಾಗಿಯೇ ಸ್ಪೀಕರ್ ಸ್ಥಾನವೆಂಬುದು ಜನರು ಭಾವಿಸಿರುವ ಹಾಗೆ ಆರಾಮ ಕುರ್ಚಿಯಲ್ಲ. ತಂಗುದಾಣವಂತೂ ಅಲ್ಲವೇ ಅಲ್ಲ.
ನಾಡೊಂದರ ರಾಜಕೀಯ ಪ್ರಬುದ್ಧತೆಯ ಕನ್ನಡಿಯಾಗಿ ನಾಡ ಜನರ ಬದುಕನ್ನು ಹಸನು ಮಾಡಲು ಶಾಸನರಚನೆಯ ಮಾರ್ಗಗಳು ಸುಗಮವಾಗುವಂತೆ ನೋಡಿಕೊಳ್ಳುವ ಪರಮಾಧಿಕಾರವಿರುವ ಈ ಸ್ಥಾನವೆಂದರೆ ಬರಿ ಮಾತುಗಾರಿಕೆಯಲ್ಲ. ಮೌನದ ಮೂಲಕ ಮಾತಿನ ಮಹತ್ವವನ್ನು ಎತ್ತಿತೋರುತ್ತಲೇ ಆಡುವ ಮಾತಿನ ಸತ್ಯ ಹಾಗೂ ಸತ್ವಗಳ ಅಗ್ನಿಪರೀಕ್ಷೆಯಲ್ಲಿ ಜನಕಲ್ಯಾಣವನ್ನು ಸಾಕ್ಷಾತ್ಕರಿಸುವ ಈ ಸ್ಥಾನಕ್ಕೆ ಚಂದ್ರೇಗೌಡರು ಕೊಟ್ಟಿರುವ ಕೊಡುಗೆ ನಿಜಕ್ಕೂ ಇತಿಹಾಸದ ಪುಟದಲ್ಲಿ ದಾಖಲಾಗುವಂತಹದ್ದು.

Next Article