ಸ್ಪೀಕರ್ ಸ್ಥಾನದ ಮಹತ್ವ
ಸ್ಪಷ್ಟ ಬಹುಮತವಿರುವ ಸರ್ಕಾರಗಳ ನಿರ್ವಹಣೆಯಲ್ಲಿ ವಿಧಾನಸಭೆ ಅಥವಾ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಸಾಮಾನ್ಯವಾಗಿ ಅಂತಹ ಮಹತ್ವ ಇರುವುದಿಲ್ಲ. ಸಂಪ್ರದಾಯ ಹಾಗೂ ನಿಯಮಾವಳಿಗಳ ಬೆಳಕಿನಲ್ಲಿ ಸದನದ ಕಲಾಪವನ್ನು ತೂಗಿಸಿಕೊಂಡು ಹೋಗುವುದಷ್ಟೇ ಸ್ಪೀಕರ್ ಆದವರ ಜವಾಬ್ದಾರಿ. ಆದರೆ ಸಮ್ಮಿಶ್ರ ಸರ್ಕಾರಗಳ ನಿರ್ವಹಣೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಇರುವ ಮಹತ್ವವೇ ಬೇರೆ. ಏಕೆಂದರೆ ಸರ್ಕಾರದ ಬಹುಮತ ನಿಷ್ಕರ್ಷೆಯಾಗುವುದು ಸದನದಲ್ಲಿ. ಬಹುಮತದ ನಿರ್ಣಯವೂ ಸೇರಿದಂತೆ ಹಲವಾರು ಪ್ರಸ್ತಾಪಗಳ ಬಗ್ಗೆ ತೀರ್ಪುಗಳನ್ನು ಕೊಡುವಾಗ ಸ್ಪೀಕರ್ ಆದವರು ಕೊಂಚ ಎಡವಿದರೂ ಸಾಕು. ಸರ್ಕಾರ ಉರುಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ಭಾರತದ ಸಂಸದೀಯ ಕಲಾಪದಲ್ಲಿ ನಡೆದುಕೊಂಡು ಬಂದಿರುವ ನಿದರ್ಶನಗಳ ಪಾಠ. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರದಲ್ಲಿಯೂ ಕೂಡಾ ಸ್ಪೀಕರ್ ಸ್ಥಾನಕ್ಕೆ ಹೆಚ್ಚಿನ ಮಹತ್ವ ಇರುವುದು ಖಂಡಿತಾ. ಬಹುಶಃ ಈ ಸೂಕ್ಷ್ಮವನ್ನು ಗುರುತಿಸಿರುವ ಆಂಧ್ರಪ್ರದೇಶದ ತೆಲುಗುದೇಶಂ ಮುಖಂಡ ಚಂದ್ರಬಾಬು ನಾಯ್ಡು ತಮ್ಮ ಪಕ್ಷಕ್ಕೆ ಸ್ಪೀಕರ್ ಸ್ಥಾನವನ್ನು ಕೊಡಬೇಕು ಎಂಬ ಪ್ರಸ್ತಾಪವಿಟ್ಟಿರುವುದು. ಸ್ಪೀಕರ್ ಸ್ಥಾನವನ್ನು ಸಮ್ಮಿಶ್ರ ಸರ್ಕಾರದ ಪ್ರಧಾನ ಅಂಗಪಕ್ಷ ಬೇರೆ ಪಕ್ಷಗಳಿಗೆ ಬಿಟ್ಟುಕೊಡುವ ಸಾಧ್ಯತೆಗಳು ವಿರಳ. ಈ ಹಿಂದೆ ೧೯೯೬ರ ನಂತರ ವಾಜಪೇಯಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರದಲ್ಲಿ ತೆಲುಗುದೇಶಂನ ಜಿಎಂಸಿ ಬಾಲಯೋಗಿ ಸ್ಪೀಕರ್ ಆಗಿದ್ದರು. ಹಾಗೆಯೇ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸಮ್ಮಿಶ್ರ ಸರ್ಕಾರದಲ್ಲಿ ಸಿಪಿಎಂನ ಸೋಮನಾಥ ಚಟರ್ಜಿ ಸ್ಪೀಕರ್ ಆಗಿದ್ದರು. ಈ ಇಬ್ಬರು ಸ್ಪೀಕರ್ ಆಗಿದ್ದಾಗ ಸದನದಲ್ಲಿ ಕೈಗೊಂಡ ಕೆಲವು ತೀರ್ಪುಗಳು ಸರ್ಕಾರಕ್ಕೆ ಇರುಸುಮುರುಸು ಮಾಡಿದ್ದನ್ನು ಮರೆಯುವಂತಿಲ್ಲ. ಬಹುಶಃ ಇಂತಹ ಸೂಕ್ಷ್ಮಗಳನ್ನು ಗುರುತಿಸಿರುವ ಚಂದ್ರಬಾಬು ನಾಯ್ಡು ಸ್ಪೀಕರ್ ಸ್ಥಾನ ತಮ್ಮ ಪಕ್ಷಕ್ಕೆ ಬೇಕು ಎಂದು ಪಟ್ಟು ಹಾಕಿರುವುದು ನಿಜವಾಗಿಯೂ ಒಂದು ರಾಜಕೀಯ ಜಾಣ್ಮೆ.
ಸಮ್ಮಿಶ್ರ ಸರ್ಕಾರಗಳು ಆಡಳಿತದಲ್ಲಿರುವಾಗ ಅಧಿವೇಶನದ ಸಂದರ್ಭಗಳಲ್ಲಿ ಅವಿಶ್ವಾಸ ನಿರ್ಣಯಗಳು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಛೀಮಾರಿ ನಿರ್ಣಯಗಳು ಮಂಡನೆಯಾಗುವುದು ವಾಡಿಕೆ. ಸ್ಥಿತಪ್ರಜ್ಞತೆಯಿಂದ ನಡೆದುಕೊಳ್ಳುವ ಸ್ಪೀಕರ್ ಆಗಿದ್ದರೆ ಈ ನಿರ್ಣಯಗಳ ಪ್ರಸ್ತಾಪದ ಪೂರ್ವಭಾವಿ ಚರ್ಚೆಯಲ್ಲಿಯೇ ಅವುಗಳ ಗುಣಾವಗುಣಗಳನ್ನು ವಿಶ್ಲೇಷಿಸಿ ಸಾಮಾನ್ಯವಾಗಿ ಅನುಮತಿ ನಿರಾಕರಿಸುವುದು ವಾಡಿಕೆ. ಹಾಗಾಗದಿದ್ದರೆ ಸರ್ಕಾರಕ್ಕೆ ಇಕ್ಕಟ್ಟು. ಕೊಂಚ ವಾಲುವ ಮನೋಧರ್ಮದವರು ಸ್ಪೀಕರ್ ಆದರೆ ಇಂತಹ ಫಜೀತಿ ಎದುರಿಸುವ ಪರಿಸ್ಥಿತಿ ಉದ್ಭವಿಸಲಾರದು. ಇನ್ನು ಮೈತ್ರಿಕೂಟಕ್ಕೆ ಬಹುಮತವಿದ್ದರೂ ಮೈತ್ರಿಕೂಟದ ಪ್ರಧಾನ ಪಕ್ಷಕ್ಕೆ ಬಹುಮತ ಇಲ್ಲದೇ ಇರುವ ಸಂದರ್ಭದಲ್ಲಿ ಪಕ್ಷಾಂತರದ ಬೆಳವಣಿಗೆಗಳು ಸರ್ವೇಸಾಮಾನ್ಯ. ಸಂಬಂಧಿಸಿದ ರಾಜಕೀಯ ಪಕ್ಷಗಳ ಅಧ್ಯಕ್ಷರ ಮನವಿಯ ಮೇರೆಗೆ ಸ್ಪೀಕರ್ ಪಕ್ಷಾಂತರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ನಿರ್ಣಯ ಕೈಗೊಂಡರೆ, ವಿವಾದಿತ ಸದಸ್ಯರು ಅನರ್ಹತೆಗೆ ಒಳಗಾಗುತ್ತಾರೆ. ಉದಾರ ನಿಲುವು ತಳೆದರೆ ಅನರ್ಹತೆಯಿಂದ ಪಾರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಸ್ಪೀಕರ್ ಕೈಗೊಳ್ಳುವ ನಿರ್ಧಾರ ಪ್ರಶ್ನಾತೀತ. ಯಾಕೆಂದರೆ ಈ ನಿರ್ಧಾರಗಳನ್ನು ನ್ಯಾಯಾಲಯದಲ್ಲಿಯೂ ಕೂಡಾ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ನಿರ್ಧಾರದ ವಿಧಾನವನ್ನು ಮಾತ್ರ ಪ್ರಶ್ನಿಸಬಹುದೇ ವಿನಃ ನಿರ್ಧಾರವನ್ನು ಪ್ರಶ್ನಿಸುವುದು ನಿಷಿದ್ಧ. ಹೀಗಾಗಿಯೇ ಸ್ಪೀಕರ್ ಸ್ಥಾನ ಸಮ್ಮಿಶ್ರ ರಾಜಕೀಯ ವ್ಯವಸ್ಥೆಯಲ್ಲಿ ತುಂಬಾ ಆಯಕಟ್ಟಿನದು.
ಈಗಿನ ನೂತನ ಲೋಕಸಭೆಯ ಸಂರಚನೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಅಂತರ ಕೇವಲ ೬೦ ಮಾತ್ರ. ಯಾವುದೇ ಒಂದು ಅಂಗಪಕ್ಷ ಸೆಡ್ಡುಹೊಡೆದು ನಿಂತರೂ ಸರ್ಕಾರಕ್ಕೆ ಸಂಚಕಾರ. ವಾಜಪೇಯಿ ಸರ್ಕಾರ ೧೯೯೦ರ ದಶಕದ ಮಧ್ಯಭಾಗದಲ್ಲಿ ಎರಡನೆಯ ಬಾರಿಗೆ ವಿಶ್ವಾಸಮತವನ್ನು ಯಾಚಿಸಿದಾಗ ಸಂಸತ್ತಿನಲ್ಲಿ ನಡೆದ ಕಲಾಪ ಅತ್ಯಂತ ಅಪರೂಪದ ಗುಣಮಟ್ಟದಿಂದ ಕೂಡಿದ್ದನ್ನು ಸ್ಮರಿಸಬಹುದು. ಆಗ ಒಡಿಸ್ಸಾದ ಮುಖ್ಯಮಂತ್ರಿಯಾಗಿದ್ದ ಗಿರಿಧರ್ ಗಮಾಂಗ್ ಇವರು ಇನ್ನೂ ಲೋಕಸಭಾ ಸ್ಥಾನಕ್ಕೆ ಕೊಟ್ಟಿದ್ದ ರಾಜೀನಾಮೆ ಇನ್ನೂ ಅಂಗೀಕಾರವಾಗಿರಲಿಲ್ಲ. ವಿಶ್ವಾಸಮತ ಗೆಲುವು ಹಾಗೂ ಸೋಲಿಗೆ ಕೇವಲ ಒಂದು ಮತ ಮಾತ್ರ ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ವ್ಯವಧಾನ, ಸಮಚಿತ್ತ ಹಾಗೂ ಕಾನೂನು ತಜ್ಞರ ಸಮಾಲೋಚನೆಯ ನಂತರ ಸ್ಪೀಕರ್ ಬಾಲಯೋಗಿ ಅವರು ಗಿರಿಧರ್ ಗಮಾಂಗ್ ಅವರು ರಾಜೀನಾಮೆ ಕೊಟ್ಟಿರುವುದನ್ನು ಒಪ್ಪಿ ವಿಶ್ವಾಸಮತಕ್ಕೆ ಗೆಲುವಾಗಿದೆ ಎಂದು ಘೋಷಿಸಿದ್ದು ಒಂದು ಐತಿಹಾಸಿಕ ತೀರ್ಪು. ಇದಾದ ನಂತರ ವಾಜಪೇಯಿ ಸರ್ಕಾರ ಸುಸೂತ್ರವಾಗಿ ಆಡಳಿತವನ್ನು ನಿರ್ವಹಿಸಿತು ಎಂಬುದು ಪ್ರತ್ಯೇಕ ವಿಚಾರ. ಸೋಮನಾಥ ಚಟರ್ಜಿ ಅವರು ಕೂಡಾ ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಪಕ್ಷದ ಮರ್ಜಿಯಿಲ್ಲದೇ ನಿರ್ದಾಕ್ಷಿಣ್ಯ ತೀರ್ಪುಗಳನ್ನು ಕೊಟ್ಟ ಪರಿಣಾಮವಾಗಿ ಮುಂದೆ ಅವರು ಚುನಾವಣೆಗೆ ಸ್ಪರ್ಧಿಸಲು ಕೂಡಾ ಅವಕಾಶವಾಗಲಿಲ್ಲ ಎಂಬುದರಲ್ಲಿ ಸ್ಪೀಕರ್ ಸ್ಥಾನ ಮತ್ತು ಚಟರ್ಜಿ ಅವರ ವ್ಯಕ್ತಿತ್ವದ ಕುರುಹುಗಳನ್ನು ಗುರುತಿಸಬಹುದು. ಪಕ್ಷಾಂತರ ನಿಷೇಧ ಶಾಸನ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಬ್ರಹ್ಮಾಸ್ತ್ರದಂತೆ ಪ್ರಯೋಗವಾಗುತ್ತದೆ. ಈ ಬ್ರಹ್ಮಾಸ್ತ್ರವನ್ನು ಶಮನಗೊಳಿಸುವ ಇಲ್ಲವೇ ಅದನ್ನು ಬಳಸಿ ನಿರ್ನಾಮ ಮಾಡುವ ಪರಮಾಧಿಕಾರವಿರುವುದು ಸ್ಪೀಕರ್‌ಗೆ ಮಾತ್ರ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿರುವ ಸರ್ಕಾರದ ಅವಧಿಯಲ್ಲಿ ಯಾರು ಸ್ಪೀಕರ್ ಸ್ಥಾನಕ್ಕೆ ಬರುತ್ತಾರೆ ಎಂಬುದು ಮುಂದಿನ ಬೆಳವಣಿಗೆಯ ದೃಷ್ಟಿಯಿಂದ ನಿರ್ಣಾಯಕ.