ಸ್ಮಶಾನಕ್ಕೆ ನುಗ್ಗಿದ ನೀರು ಪುರಸಭೆ ಆಡಳಿತಾಧಿಕಾರಿ ಸಜ್ಜನ ಭೇಟಿ
ಕೆಂಭಾವಿ: ಪಟ್ಟಣದ ಸ್ಮಶಾನವೊಂದಕ್ಕೆ ಶನಿವಾರ ಉಪಕಾಲುವೆ ನೀರು ನುಗ್ಗಿದ್ದು ಇದರಿಂದ ಸ್ಮಶಾನದ ತಡೆಗೋಡೆ ಬೀಳುವ ಹಂತಕ್ಕೆ ತಲುಪಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಪಟ್ಟಣದ ವಿಪ್ರ (ಬ್ರಾಹ್ಮಣ) ಸಮುದಾಯಕ್ಕೆ ಸೇರಿದ ಸ್ಮಶಾನಕ್ಕೆ ಕೃಷ್ಣಾ ಕಾಲುವೆಯ ಮಳೆ ನೀರು ರಾಜ್ಯ ಹೆದ್ದಾರಿಯ ಪಕ್ಕದ ಪುರಸಭೆಯ ಚರಂಡಿಗೆ ನೀರು ಸರಾಗವಾಗಿ ಸಾಗದ ಪ್ರಯುಕ್ತ ಮುಂದೆ ಹೋಗಲಾರದೆ ಸ್ಮಶಾನದ ಜಾಗದಲ್ಲಿ ನಿಂತು ಸ್ಮಶಾನ ಸಂಪೂರ್ಣ ಕೆರೆಯಂತಾಗಿದೆ.
ಉಪ ತಹಸೀಲ್ದಾರ ಕಚೇರಿಗೆ ತೆರಳುವ ಮಾರ್ಗಮಧ್ಯೆ ಬರುವ ಈ ಸ್ಮಶಾನದ ಅಭಿವೃದ್ಧಿ ಸರಿಯಾಗಿ ಆಗದೇ ಇರುವುದರಿಂದ ನೀರು ಸರಾಗವಾಗಿ ಚಲಿಸದೆ ನೇರವಾಗಿ ಇಲ್ಲಿ ನುಗ್ಗಿದ ಬಗ್ಗೆ ಸಮುದಾಯ ಮುಖಂಡರುಗಳು ಸಹಾಯಕ ಆಯುಕ್ತರ ಗಮನಕ್ಕೆ ತಂದರು.
ಸಹಾಯಕ ಆಯುಕ್ತರ ಭೇಟಿ : ಸ್ಮಶಾನಕ್ಕೆ ನೀರು ನುಗ್ಗಿದ ಸುದ್ದಿ ತಿಳಿಯುತ್ತಲೆ ಕಾರ್ಯಕ್ರಮದ ನಿಮಿತ್ಯ ಪಟ್ಟಣಕ್ಕೆ ಆಗಮಿಸಿದ್ದ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಮಶಾನಕ್ಕೆ ನುಗ್ಗಿದ ನೀರನ್ನು ಸಂಜೆಯೊಳಗೆ ತೆರವುಗೊಳಿಸಬೇಕು ಮತ್ತೊಮ್ಮೆ ಹೀಗಾಗದಂತೆ ಎಚ್ಚರ ವಹಿಸಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪುರಸಭೆ ಇಂಜಿನಿಯರ್ ಉದಯಕುಮಾರ ಅವರಿಗೆ ಸೂಚನೆ ನೀಡಿದರು. ಈ ಸ್ಮಶಾನದ ಸಂಪೂರ್ಣ ಅಭಿವೃದ್ಧಿಗಾಗಿ ಪುರಸಭೆಯಿಂದ ಅನುದಾನ ನೀಡುವುದಾಗಿ ಹೇಳಿದರು. ಕಂದಾಯ ನಿರೀಕ್ಷಕ ರಾಜೇಸಾಬ ಕಂದಗಲ್, ಇಂಜಿನಿಯರ್ ಉದಯಕುಮಾರ, ಸಿದ್ರಾಮಯ್ಯ ಇಂಡಿ ಇದ್ದರು.