ಸ್ಮಾರ್ಟ್ ಮೀಟರ್ ಅಳವಡಿಕೆ ಹಿಂಜರಿಕೆ ಏಕೆ?
ವಿದ್ಯುತ್ ಮೀಟರ್ ಅಳವಡಿಕೆ ಮೊದಲಿನಿಂದಲೂ ಸಮಸ್ಯೆಯಾಗೇ ಇದೆ. ಮೀಟರ್‌ಗಳು ಬಹಳ ವೇಗದಲ್ಲಿ ಓಡುತ್ತವೆ ಎಂಬುದು ಮೊದಲಿನಿಂದಲೂ ಕೇಳಿ ಬರುತ್ತಿರುವ ದೂರು. ಹಿಂದೆ ಮೆಕಾನಿಕಲ್ ಮೀಟರ್‌ಗಳಿದ್ದವು. ಆಮೇಲೆ ಎಲೆಕ್ಟ್ರಾನಿಕ್ ಮೀಟರ್‌ಗಳು ಬಂದವು. ಈಗ ನಾವು ಬಳಸುತ್ತಿರುವುದು ಸಾಧಾರಣ ಮೀಟರ್. ಇದನ್ನು ಪ್ರತಿತಿಂಗಳು ವಿದ್ಯುತ್ ಕಂಪನಿಯ ರೀಡರ್ ಬಂದು ಬಿಲ್ ಕೊಟ್ಟು ಹೋಗಬೇಕು. ಹಣ ಪಾವತಿಗೆ ಕಾಲಾವಕಾಶ ನೀಡಬೇಕು. ಆಗಲೂ ಪಾವತಿಸಲಿಲ್ಲ ಎಂದರೆ ವಿದ್ಯುತ್ ಸಂಪರ್ಕ ತೆಗೆದುಹಾಕಬೇಕು. ಈಗ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಮಾಸಿಕ ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಅದರಿಂದ ಬಿಲ್ ಪಾವತಿಸುವ ಜನರ ಸಂಖ್ಯೆ ಇಳಿಮುಖಗೊಂಡಿದೆ.
ಆಂದೋಲನ
ಈಗ ಸೆಪ್ಟೆಂಬರ್ ೧ರಿಂದ ವಿದ್ಯುತ್ ಕಂಪನಿಗಳು ಹಳೆ ಬಾಕಿ ವಸೂಲಿಗೆ ಆಂದೋಲನ ಆರಂಭಿಸಿದೆ. ಮೀಟರ್ ರೀಡರ್ ಜತೆ ಒಬ್ಬ ಲೈನ್‌ಮನ್ ಹೋಗಿ ಬಾಕಿ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ತೆಗೆಯುತ್ತಾನೆ. ಇದರಿಂದ ಬಾಕಿ ಪಾವತಿಸುವವರ ಸಂಖ್ಯೆ ಅಧಿಕಗೊಳ್ಳುತ್ತದೆ ಎಂಬುದು ವಿದ್ಯುತ್ ಕಂಪನಿಗಳ ಲೆಕ್ಕಾಚಾರ. ಗ್ರಾಮೀಣ ಭಾಗದಲ್ಲಿ ಜನ ವಿದ್ಯುತ್ ಬಿಲ್ ಪಾವತಿಸುವುದೇ ಕಡಿಮೆ. ಮೀಟರ್ ರೀಡರ್ ಕೂಡ ಕಡಿಮೆ ಬಿಲ್ ಬರೆದುಕೊಡುವ ಪರಿಪಾಠ ಕೆಲವು ಕಡೆ ಈಗಲೂ ಇದೆ. ಗ್ರಾಮೀಣ ಭಾಗದಲ್ಲಿ ಬಿಲ್ ಸಂಗ್ರಹ ಹೆಚ್ಚಿಸಲು ಕೆಲವು ಕಡೆ ಗ್ರಾಮೀಣ ವಿದ್ಯುತ್ ಪ್ರತಿನಿಧಿಯನ್ನೂ ನೇಮಿಸಲಾಗಿದೆ. ಆದರೂ ಬಿಲ್ ಸಂಗ್ರಹ ಮೊತ್ತ ಅಧಿಕಗೊಂಡಿಲ್ಲ. ಇದಕ್ಕಾಗಿ ಎಲ್ಲ ವಿತರಣ ಕಂಪನಿಗಳು ತಮ್ಮದೇ ಆದ ನೀತಿ ನಿಯಮಗಳನ್ನು ಅನುಸರಿಸುತ್ತಿವೆ. ವಿದ್ಯುತ್ ಸಕಾಲದಲ್ಲಿ ಪಾವತಿ ಮಾಡದೇ ಇದ್ದಲ್ಲಿ ಅದರ ಮೇಲೆ ಬಡ್ಡಿ ವಿಧಿಸುವ ಪದ್ಧತಿಯೂ ಇದೆ. ಹಿಂದೆ ಬಡ್ಡಿ ದರ ಅಧಿಕವಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಕ್ಕೆ ವಿದ್ಯುತ್ ಇಲಾಖೆ ಸಿಬ್ಬಂದಿ ಹೋಗುತ್ತಿರಲಿಲ್ಲ. ಈಗ ವಿದ್ಯುತ್ ಸಂಪರ್ಕ ಕಡಿತ ಅನಿವಾರ್ಯವಾಗಿದೆ. ವಿದ್ಯುತ್ ನೌಕರರ ಸಂಬಳ ಅಧಿಕವಾಗಿರುವುದರಿಂದ ಗ್ರಾಮಗಳಲ್ಲಿ ಸಂಗ್ರಹವಾಗುವ ವಿದ್ಯುತ್ ಬಿಲ್ ಮೊತ್ತ ಸಿಬ್ಬಂದಿಯ ಸಂಬಳಕ್ಕೆ ಸಾಕಾಗುವುದಿಲ್ಲ. ಹೀಗಾಗಿ ವಿದ್ಯುತ್ ಕಂಪನಿಗಳು ನಷ್ಟದಲ್ಲಿ ಮುಳುಗುವುದು ಅನಿವಾರ್ಯವಾಗಿದೆ.
ಸ್ಮಾರ್ಟ್ ಮೀಟರ್
ಈಗಿನ ಸಮಸ್ಯೆಗಳಿಗೆ ಪರಿಹಾರ ಎಂದರೆ ಸ್ಮಾರ್ಟ್ ಮೀಟರ್. ಇದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತದೆ. ಮನೆಯ ಮಾಲೀಕ ತನ್ನ ಮೊಬೈಲ್‌ನಲ್ಲೇ ವಿದ್ಯುತ್‌ಗೆ ಸಂಬಂಧಿಸಿದ ಆಪ್ ಬಳಸಿ ತನ್ನ ಮೀಟರ್‌ಗೆ ಎಷ್ಟು ಹಣಬೇಕೋ ಅಷ್ಟು ಹಣದ ಕರೆನ್ಸಿ ತುಂಬ ಬಹುದು. ಮೀಟರ್ ತಂತಾತೇ ವಿದ್ಯುತ್ ನೀಡುತ್ತದೆ. ಅಲ್ಲದೆ ಇದರಲ್ಲಿ ಎರಡು ಮಾರ್ಗದಲ್ಲೂ ಸಂಪರ್ಕ ಹೊಂದಿದೆ. ವಿದ್ಯುತ್ ಕಂಪನಿ ತನ್ನ ಕಚೇರಿಯಿಂದಲೇ ಈ ಮೀಟರ್ ಕೆಲಸ ಮಾಡುತ್ತಿದೆಯೋ ಇಲ್ಲವೊ ಎಂಬುದನ್ನು ಪರಿಶೀಲಿಸಬಹುದು. ಮೀಟರ್‌ಗೆ ಎಷ್ಟು ಕರೆನ್ಸಿ ಹಾಕಿಸಲಾಗಿದೆ ಎಂಬುದನ್ನೂ ಪರಿಶೀಲಿಸಬಹುದು.
ಇದರಿಂದ ಅನುಕೂಲ ಎಂದರೆ ವಿದ್ಯುತ್ ಮೀಟರ್ ಓದಲು ಒಬ್ಬ ವ್ಯಕ್ತಿಯನ್ನು ಕಳುಹಿಸಬೇಕಿಲ್ಲ. ಅದೇರೀತಿ ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿದಿದೆ ಎಂದು ಲೈನ್‌ಮನ್ ಕಳುಹಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅಗತ್ಯವಿಲ್ಲ. ಕರೆನ್ಸಿ ಖಾಲಿಯಾದ ಕೂಡಲೇ ಮೀಟರ್ ಸ್ಥಗಿತಗೊಳ್ಳುತ್ತದೆ. ಮನೆ ಮಾಲೀಕ ತನಗೆ ಬೇಕಾದಾಗ ಕರೆನ್ಸಿ ಹಾಕಿಸಿಕೊಂಡು ವಿದ್ಯುತ್ ಬಳಸಬಹುದು. ಮನೆಯಲ್ಲಿ ಇಲ್ಲ ಎಂದರೆ ಮೊಬೈಲ್ ಮೂಲಕವೇ ಮೀಟರ್‌ಗೆ ಬೀಗಹಾಕಬಹುದು. ಆಗ ಶಾರ್ಟ್ ಸರ್ಕ್ಯೂಟ್ ಆಗುವ ಸಂದರ್ಭ ಒದಗಿ ಬರುವುದಿಲ್ಲ. ತಂತ್ರಜ್ಞಾನ ಅಭಿವೃದ್ಧಿಗೊಂಡ ಮೇಲೆ ಅದಕ್ಕೆ ತಕ್ಕಂತೆ ಬಳಸುವ ಉಪಕರಣವನ್ನು ಬದಲಿಸುವುದು ಅನಿವಾರ್ಯ. ಈಗ ನಾವು ಬಳಸುತ್ತಿರುವ ಮೀಟರ್‌ಗಳು ಹಲವು ದಶಕಗಳಷ್ಟು ಹಳೆಯದವು. ಅವುಗಳ ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಈ ಸ್ಮಾರ್ಟ್ ಮೀಟರ್ ತರಲಾಗಿದೆ.
ಸ್ಮಾರ್ಟ್ ಮೀಟರ್ ಬೆಲೆ
ಸಾಧಾರಣ ಮೀಟರ್‌ಗಿಂತ ಇದು ಸ್ವಲ್ಪ ದುಬಾರಿಯಾಗಿದ್ದರೂ ಗ್ರಾಹಕರಿಗೆ ಇದರಿಂದ ಅನುಕೂಲ ಹೆಚ್ಚು. ಗ್ರಾಹಕರು ತಮ್ಮ ಜೇಬು ನೋಡಿಕೊಂಡು ವಿದ್ಯುತ್ ಕರೆನ್ಸಿ ಪಡೆಯಬಹುದು. ಬೇರೆ ಊರಿನಲ್ಲಿದ್ದರೂ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. ಸರ್ಕಾರಕ್ಕೂ ಇದರಿಂದ ಅನುಕೂಲ. ಈಗ ಸರ್ಕಾರ ಪ್ರತಿ ತಿಂಗಳೂ ೨೦೦ ಯೂನಿಟ್ ಉಚಿತ ಬಳಕೆದಾರರ ಶುಲ್ಕ ಪಾವತಿಸಬೇಕು. ಅದನ್ನು ನೇರವಾಗಿ ಫಲಾನುಭವಿಗಳಿಗೆ ಈ ಸ್ಮಾರ್ಟ್ ಮೀಟರ್ ಮೂಲಕ ಸುಲಭವಾಗಿ ವರ್ಗಾಯಿಸಬಹುದು. ಸ್ಮಾರ್ಟ್ ಮೀಟರ್ ಬಳಕೆ ಅಧಿಕಗೊಂಡಲ್ಲಿ ಅದರ ಬೆಲೆ ಇಳಿಮುಖಗೊಳ್ಳುವುದು ಖಚಿತ.
ಸಿಬ್ಬಂದಿ ಉಳಿತಾಯ
ಸ್ಮಾರ್ಟ್ ಮೀಟರ್ ಬಳಕೆ ಅಧಿಕಗೊಂಡಲ್ಲಿ ಲೈನ್‌ಮನ್ ಮತ್ತು ಮೀಟರ್ ರೀಡರ್ ಸಂಖ್ಯೆ ಇಳಿಮುಖಗೊಳ್ಳುತ್ತದೆ. ಅವರನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಹುದು. ಅಲ್ಲದೆ ಇದುವರೆಗೆ ವಿದ್ಯುತ್ ಬಳಸಿ ಗ್ರಾಹಕರು ನಂತರ ಬಿಲ್ ಪಾವತಿಸುತ್ತಿದ್ದರು. ಈಗ ಮೊದಲು ಬಿಲ್ ಪಾವತಿಸಿ ನಂತರ ವಿದ್ಯುತ್ ಬಳಸುತ್ತಾರೆ. ಇದು ಮೊಬೈಲ್ ಕರೆನ್ಸಿ ಇದ್ದಂತೆ. ವಿದ್ಯುತ್ ಕಂಪನಿಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಅಲ್ಲದೆ ವಿದ್ಯುತ್ ಬಳಕೆಯ ಮೇಲೆ ನಿಯಂತ್ರಣ ಹೇರಿದಂತೆ ಆಗುತ್ತದೆ.
ಒಂದೇ ದರ
ಕೆಇಆರ್‌ಸಿ ಈಗ ವಿದ್ಯುತ್ ಶುಲ್ಕವನ್ನು ಒಂದೇ ದರ ಎಂದು ನಿಗದಿಪಡಿಸಿರುವುದರಿಂದ ಕರೆನ್ಸಿ ಪಡೆಯುವುದು ಕಷ್ವವಾಗುವುದಿಲ್ಲ. ಆಪ್ ಮೂಲಕ ಸುಲಭವಾಗಿ ವಿದ್ಯುತ್ ಕರೆನ್ಸಿ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರ ಕಳೆದ ವರ್ಷವೇ ಸ್ಮಾರ್ಟ್ ಮೀಟರ್ ಬಳಸಲು ಸೂಚನೆ ನೀಡಿದೆ. ಕೆಇಆರ್‌ಸಿ ಕೂಡ ಎಲ್ಲ ಗ್ರಾಹಕರಿಗೆ ನೀಡಬೇಕೆಂದು ಆದೇಶಿಸಿದೆ.
ಆದರೂ ಎಲ್ಲ ಕಂಪನಿಗಳು ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದರೆ ಹಿಂಜರಿಯುತ್ತಿದೆ. ಇದಕ್ಕೆ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ಈಗ ನಿರ್ಮಾಣದ ಹಂತದಲ್ಲಿರುವ ಕಟ್ಟಡಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ನೀಡಲಾಗುತ್ತಿದೆ. ಕಾಯಂ ಮೀಟರ್ ಎಂದ ಕೂಡಲೇ ಸಾಮಾನ್ಯ ಮೀಟರ್ ಬಳಕೆಯಾಗುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಅಧಿಕಾರಿಗಳು ಉತ್ತರಕೊಡುವುದಿಲ್ಲ.
ಮಾರುಕಟ್ಟೆಯಲ್ಲಿ ಲಭ್ಯ
ಸ್ಮಾರ್ಟ್ ಮೀಟರ್ ಮಾರುಕಟ್ಟೆಯಲ್ಲಿ ಲಭ್ಯ. ಅಲ್ಲದೆ ೨ ವರ್ಷಗಳ ಗ್ಯಾರಂಟಿ ಕೂಡ ಮೀಟರ್ ತಯಾರಿಕೆ ಕಂಪನಿಗಳು ನೀಡುತ್ತಿವೆ. ಅಲ್ಲದೆ ಗ್ರಾಹಕರ ಮನೆಯಲ್ಲಿ ಸ್ಮಾರ್ಟ್ಮೀಟರ್‌ನಿಂದ ಹೋಗುವ ವಿದ್ಯುತ್ ಪ್ರತಿ ಯೂನಿಟ್ ವಿವರ ವಿದ್ಯುತ್ ವಿತರಣ ಕೇಂದ್ರಕ್ಕೆ ರವಾನೆಯಾಗುತ್ತದೆ. ಗ್ರಾಹಕ ತಮ್ಮ ಕೈನಿಂದ ದೂರ ಉಳಿದುಬಿಡುತ್ತಾನೆ ಎಂಬ ವಿತರಣ ಕಂಪನಿಯ ಸಂದೇಹಕ್ಕೆ ಆಸ್ಪದವಿಲ್ಲ. ಸ್ಮಾರ್ಟ್ನಿಂದ ವಿತರಣ ಕಂಪನಿಗಳ ಕೆಲಸ ಸುಲಭವಾಗುತ್ತದೆ. ಜನರಿಗೆ ಹೆಚ್ಚಿನ ಸವಲತ್ತು ಲಭಿಸಲಿದೆ. ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಬಳಕೆ ಅಧಿಕಗೊಂಡಿದೆ. ಕೇಂದ್ರ ಸರ್ಕಾರ ಇದಕ್ಕೆ ನೆರವನ್ನೂ ನೀಡುತ್ತಿದೆ. ಆದರೂ ನಮ್ಮ ಎಂಜಿನಿಯರ್‌ಗಳು ಹಿಂಜರಿಯುವುದಕ್ಕೆ ಕಾರಣ ತಿಳಿದುಬಂದಿಲ್ಲ. ಜನ ಸ್ಮಾರ್ಟ್ ಮೀಟರ್ ಕೊಡಿ ಎಂದು ಆಂದೋಲನ ಆರಂಭಿಸಿದರೆ ಆಗ ವಿದ್ಯುತ್ ಇಲಾಖೆ ಮೌನವಹಿಸಲು ಬರುವುದಿಲ್ಲ.