For the best experience, open
https://m.samyuktakarnataka.in
on your mobile browser.

ಸ್ವಚ್ಛತೆ: ಶ್ರದ್ಧೆ-ಸೇವೆಯ ನಡುವೆ ತಾಕಲಾಟ

12:01 AM Feb 08, 2024 IST | Samyukta Karnataka
ಸ್ವಚ್ಛತೆ  ಶ್ರದ್ಧೆ ಸೇವೆಯ ನಡುವೆ ತಾಕಲಾಟ

ಕಳೆದ ಭಾನುವಾರ ಹುಬ್ಬಳ್ಳಿಯಲ್ಲಿ ನಸುಕು ಎಂದಿನಂತೆ ಗೋಚರಿಸಲಿಲ್ಲ. ಎಲ್ಲೆಲ್ಲೂ ಟೋಪಿಧಾರಿ ಜನಗಳು ಪೊರಕೆ- ಸಲಾಕೆ ಹಿಡಿದು ಬೀದಿ, ಉದ್ಯಾನ, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ತುಂಬೆಲ್ಲ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿದ್ದರು. ಜನ ಮನೆ ಬಾಗಿಲು ತೆರೆದರೆ, ಅವರೇ ಗಲೀಜು ಮಾಡಿದ, ತಿಪ್ಪೆ ಹಾಕಿದ, ಉಗುಳಿ ಕೆಂಪು ಮಾಡಿದ ಜಾಗಗಳನ್ನೆಲ್ಲ ಈ ಟೋಪಿಧಾರಿ ಮಂದಿ ಯಾವ ಸಂಕೋಚ, ಅಸಹ್ಯ ತೋರದೇ ಸ್ವಚ್ಛಗೈದರು. ಸಂಜೆ ಹೊತ್ತಿಗೆ ಹುಬ್ಬಳ್ಳಿ ನಳನಳಿಸಿತು.
ಒಂದೆರಡು ಬಡಾವಣೆಗಳಲ್ಲ, ನೂರ ಎಂಬತ್ತು ಕಡೆಗಳಲ್ಲಿ ಸುಮಾರು ಹನ್ನೆರಡು ಸಾವಿರ ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಕೇವಲ ಮೂರು ತಾಸಿನಲ್ಲಿ ೨೦೩೨ ಮೆಟ್ರಿಕ್ ಟನ್‌ನಷ್ಟು ಹುಬ್ಬಳ್ಳಿ ಕಸವನ್ನು ಎತ್ತಿ ಗುಪ್ಪೆ ಮಾಡಿ ಸಾಗಿಸಿದರು. ಸಮಾಜ ಸೇವೆಗೆ, ವಿಶೇಷವಾಗಿ ನಿಸ್ವಾರ್ಥ- ನಿಸ್ಪೃಹ ಕೈಂಕರ್ಯಕ್ಕೆ ಹೆಸರಾದುದು ಅಲಿಬಾಗ್‌ನ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ. ಅಲ್ಲಿಂದ ನೂರಾರು ಬಸ್, ವಾಹನಗಳಲ್ಲಿ ಬಂದವರು ಹುಬ್ಬಳ್ಳಿಯ ಜನರಿಗೆ ಸ್ವಚ್ಛತೆಯ ಪಾಠ ಕಲಿಸಿದರು.
ಹಾಗಂತ ಹುಬ್ಬಳ್ಳಿಯವರು ಪಾಲ್ಗೊಂಡಿದ್ದು ನೂರಾರು ಮಂದಿ ಅಷ್ಟೇ. ಅದೂ ವಿಶೇಷವಾಗಿ ಫೋಟೊ ಶೂಟ್‌ಗಾಗಿ. ಅಥವಾ ತಮ್ಮ ನಾಯಕರು ಪಾಲ್ಗೊಂಡಿದ್ದಾರೆಂಬ ಕಾರಣಕ್ಕೆ ಅವರಿಗೆ ಮುಖ ತೋರಿಸಲು !
ಭಾಷೆ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ- ಕರ್ನಾಟಕ ವಿವಾದ ಏನೇ ಇರಬಹುದು. ಆದರೆ ನಾನಾಸಾಹೇಬ್ ಪ್ರತಿಷ್ಠಾನಕ್ಕೆ ಸೇವೆಗೆ ಯಾವ ಗಡಿ ಬೇಕಿಲ್ಲ. ಜನರ ಜೀವನ ಮಟ್ಟ ಸುಧಾರಣೆ, ಸಂಸ್ಕಾರ, ಸ್ವಚ್ಛತೆ, ಪ್ರಾಂಜಲ ಮನಸ್ಸು ಅರಳಿಸುವುದಷ್ಟೇ ಈ ಪ್ರತಿಷ್ಠಾನದ ಕೆಲಸ.
ಈ ವರ್ಷ ಮಾತ್ರ ಈ ಪ್ರತಿಷ್ಠಾನದ ಸದಸ್ಯರು ಬಂದದ್ದಲ್ಲ. ಹಿಂದೆ ಎರಡು ಸಾರೆ ಹುಬ್ಬಳ್ಳಿಯನ್ನು ಸ್ವಚ್ಛಗೊಳಿಸಿಕೊಟ್ಟವರು ಇವರೇ. ಹುಬ್ಬಳ್ಳಿಯ ಸ್ಮಶಾನಗಳಿಗೂ ಉತ್ತಮ ಪರಿಸರ ನಿರ್ಮಿಸಿಕೊಟ್ಟವರು. ದುರಂತ ಎಂದರೆ ಹುಬ್ಬಳ್ಳಿ ಮಂದಿ ಈ ನಿಸ್ಪೃಹ ಅಭಿಯಾನದಲ್ಲಿ ಪಾಲ್ಗೊಳ್ಳಲೂ ಇಲ್ಲ. ಕೈ ಜೋಡಿಸಲೂ ಇಲ್ಲ. ಕನಿಷ್ಠ ಆ ನಂತರವೂ ತಮ್ಮ ಮನೆ, ವರಾಂಡಾ, ಬಡಾವಣೆ, ಸಾರ್ವಜನಿಕ ಸಂಸ್ಥೆಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲೂ ಇಲ್ಲ. ಹದಿನೈದು ಸಾವಿರ ಕಾರ್ಯಕರ್ತರು ಇಲ್ಲಿಗೆ ಬಂದು ಕೈಂಕರ್ಯ ಮಾಡಿ ತೆರಳುತ್ತಿದ್ದಂತೇ ಅದೇ ಬಸ್ ಸ್ಟ್ಯಾಂಡು, ರೈಲು ನಿಲ್ದಾಣ, ರಸ್ತೆ ಎಲ್ಲೆಂದರಲ್ಲಿ ಪಿಚಕ್ ಎಂದು ಉಗುಳಿದರು; ತಿಂದ ಪೊಟ್ಟಣಗಳನ್ನು ಎಸೆದರು; ಸೂಸು ಮಾಡಿದರು… ಅಷ್ಟೇ….!
ಡಾ. ನಾನಾಸಾಹೇಬ ಪ್ರತಿಷ್ಠಾನ ಮಹಾರಾಷ್ಟçದ ಗಡಿ ಮೀರಿ ಉಡುಪಿಯವರೆಗೆ ಜಲಮರುಪೂರಣ, ಅರಣ್ಯೀಕರಣ, ನೈರ್ಮಲ್ಯ ಇತ್ಯಾದಿಗಳಿಗೆ ಮಹತ್ವ ನೀಡಿದೆ. ಗದಗ, ವಿಜಯಪುರ, ಕಲಬುರ್ಗಿ ಇಂತಹ ಕಡೆಗಳಲ್ಲಿ ಅಲ್ಲಿಂದ ಬಂದು ಸ್ವಚ್ಛಗೊಳಿಸಿ ತೆರಳಿದ್ದಾರೆ. ಸೇವಾಕರ್ತರು ಬಿಳಿ ಟೋಪಿ, ಪ್ಯಾಂಟು- ಶರಟು, ಚಪ್ಪಲಿ ಧರಿಸಿ, ಕೈಲೊಂದು ನೀರಿನ ಬಾಟಲು ಮತ್ತು ಟಿಫಿನ್ ಬಾಕ್ಸ್ ಹಿಡಿದು ಮುಂಜಾನೆ ಬಂದು ಸ್ವಚ್ಛಗೊಳಿಸಿ ತೆರಳಿದ್ದಾರೆ. ಯಾರೊಂದಿಗೂ ಮಾತಿಲ್ಲ. ಕಥೆಯಿಲ್ಲ. ಸಹಸ್ರಾರು ಮಂದಿ ಸ್ವಯಂ ಸೇವಾಕರ್ತರು ತುಟಿ ಪಿಟ್ ಎನ್ನದೇ ಸೇವಾ ಕಾರ್ಯ ಮಾಡಿದರು ಅಷ್ಟೇ.
ಇವರಲ್ಲಿ ಬಹುತೇಕರು ಸೇವಾಪತ್ತಿನ ಅನುಯಾಯಿಗಳು. ಎಂಜಿನಿಯರ್‌ಗಳು, ಸರ್ಕಾರಿ ನೌಕರರು, ಉದ್ಯಮಿಗಳು, ಕಾರ್ಮಿಕರು, ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಪ್ರಸಿದ್ಧಿ ಪಡೆದವರು, ಕಾರ್ಮಿಕರು, ಕೃಷಿಕರು ಇವರೆಲ್ಲ ಪ್ರತಿಷ್ಠಾನ ಒಂದು ಕರೆ ನೀಡಿದರೆ ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವಯಂ ಸೇವೆ ಮಾಡಿ ತೆರಳುತ್ತಾರೆ. ಮಹಾರಾಷ್ಟçದಲ್ಲಿ ಸಹಸ್ರಾರು ಹೆಕ್ಟೇರ್ ಬೀಡು ಭೂಮಿಯನ್ನು ಹಸಿರು ಮಾಡಿದ, ವರದಕ್ಷಿಣೆ ಪಿಡುಗು ನಿವಾರಣೆ, ಸಾಕ್ಷರತೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಕೀರ್ತಿ ಈ ಸದಸ್ಯರದ್ದು.
ತುಂಬ ದುಃಖವಾಗುವುದು ಈ ಸೇವಾಕರ್ತರೊಂದಿಗೆ ಇಲ್ಲಿನ ಜನ ಕೈ ಜೋಡಿಸದೇ ಇರುವುದು. ಮಹಾನಗರ ಪಾಲಿಕೆ ಹದಿನೈದು ಸಾವಿರ ಮಂದಿ ಎತ್ತಿದ ಕೊಳೆ ಕಸವನ್ನು ವಿಲೇವಾರಿ ಮಾಡಲು ವಾರವಾದರೂ ಇನ್ನೂ ಸಾಧ್ಯವಾಗಿಲ್ಲ. ಅಂದರೆ ಈ ವಾಣಿಜ್ಯ ನಗರದ ಅನೈರ್ಮಲ್ಯ ಎಷ್ಟಿದೆ ನೋಡಿ?
ಅಂದ ಹಾಗೆ, ಸ್ವಚ್ಛತಾ ಸೂಚ್ಯಂಕದಲ್ಲಿ, ಹುಬ್ಬಳ್ಳಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಹಾನಗರ ಪಾಲಿಕೆಗಳ ಪಟ್ಟಿಯಲ್ಲಿ ೬೭ನೇ ಸ್ಥಾನದಲ್ಲಿದೆ. ಸದ್ಯ ಬೆಂಗಳೂರಿಗಿಂತ ಮೊದಲು!. ನೈರ್ಮಲ್ಯವೆಂದರೆ ಉತ್ತರ ಕರ್ನಾಟಕದ ಜನ ಗಾವುದ ದೂರ. ಮಂದಿ ತಮ್ಮ ಮನೆ ಮುಂದೆಯೂ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಗಮನ ಕೊಡುವುದಿಲ್ಲ.
ಹೌದು. ಇಂತಹ ಸೇವಾ ಸಂಸ್ಥೆಗಳು ಕರ್ನಾಟಕದಲ್ಲಿ ಏಕಿಲ್ಲ? ಯಾಕೆ ಇಲ್ಲಿಯ ರಾಜಕಾರಣಿಗಳು, ಧಾರ್ಮಿಕ ಸಂಸ್ಥೆಗಳು, ಸೇವಾ ಸಂಸ್ಥೆಗಳು ಇಂತಹ ಮನೋಭಾವ ಬೆಳೆಸಿಲ್ಲ? ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.
೨೦೧೪ರ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ ೨ರಂದು ದೇಶದ ಪ್ರಧಾನಿ ತ್ಯಾಜ್ಯ ಮುಕ್ತ ಭಾರತ, ಅಂದರೆ ಸ್ವಚ್ಛ ಅಭಿಯಾನದ ಕರೆ ನೀಡಿದರು. ಹದಿನೈದು ಕೋಟಿ ಜನರು ಈ ಶ್ರಮದಾನದಲ್ಲಿ ಭಾಗಿಯಾದರು. ಅಲ್ಲಿಂದ ಈವರೆಗೆ ಸ್ವಚ್ಛತಾ ಅಭಿಯಾನಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಸರ್ಕಾರ ವ್ಯಯ ಮಾಡುತ್ತಿದೆ. ಈವರೆಗೆ ೩೨ ಕೋಟಿ ಮಂದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆಂದು ಸರ್ಕಾರಿ ಅಂಕಿಸಂಖ್ಯೆ ಘೋಷಿಸುತ್ತದೆ. ಏಕ್ ತಾರೀಕ್, ಏಕ್ ಗಂಟಾ, ಏಕ್ ಸಾಥ್… ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ಕರೆ ಇತ್ತರು. ಈ ಮೂಲಕ ಶುಚಿತ್ವಕ್ಕೆ ಇರಬೇಕಾದ ಒತ್ತು ಇನ್ನಷ್ಟು ಮನವರಿಕೆಯಾಗುವಂತೆ ಮಾಡಿದರು.
ಈಗ ದೇಶದಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗಿ ದಶಕಗಳಾದವು. ಬಯಲು ಶೌಚಾಲಯ ಮುಕ್ತ, ಪ್ರತಿ ಮನೆಯಲ್ಲೂ ಟಾಯ್ಲೆಟ್, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛ ಶೌಚಾಲಯಗಳು, ಪ್ರತಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳು ಇರಬೇಕೆಂಬುದು ಸಂಕಲ್ಪ. ಸರ್ಕಾರಿ ಅಂಕಿಸಂಖ್ಯೆಗಳ ಪ್ರಕಾರ ಶೇಕಡಾ ೭೨ರಷ್ಟು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಲಭ್ಯತೆ ಇದೆ. ಅಂದರೆ ಶೇಕಡಾ ೨೮ರಷ್ಟು ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಮತ್ತು ಶೌಚಾಲಯದ ಸೌಲಭ್ಯ ಇನ್ನೂ ಆಗಿಲ್ಲ. ರಾಜ್ಯದಲ್ಲಿ ಈ ಅಂಕಿಸಂಖ್ಯೆ ನಂಬುವುದು ಕಷ್ಟ. ಸರ್ಕಾರವೇ ಘೋಷಿಸಿದಂತೆ ಶೇ. ೧೦೦ರಷ್ಟು ಗ್ರಾಮ ಪಂಚಾಯ್ತಿಗಳು ಬಯಲು ಶೌಚ ಮುಕ್ತವಾಗಿವೆ. ಆದರೆ, ಸಣ್ಣ ಪಟ್ಟಣಗಳಲ್ಲಿ ಮುಂಜಾನೆ, ಸಂಜೆ ಹೊತ್ತು ಅಲ್ಲಿಯ ಸ್ಥಿತಿಗತಿಗಳನ್ನು ನೋಡಿದಾಗ ವಾಸ್ತವ ಗೊತ್ತಾಗುತ್ತದೆ.
ಏಕೆ ಹೀಗೆ? ಎಂದು ಡಾ.ನಾನಾಸಾಹೇಬ ಪ್ರತಿಷ್ಠಾನದ ಪ್ರಮುಖರನ್ನು ವಿಚಾರಿಸಿದರೆ ಎಷ್ಟು ಮಾರ್ಮಿಕವಾಗಿ ಹೇಳುತ್ತಾರೆ ನೋಡಿ: `ಈ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಶಾಲಾ ಮಕ್ಕಳ ಹಂತದಲ್ಲೇ ತಿಳಿವಳಿಕೆ ನೀಡಬೇಕು. ನಾಗರಿಕರಲ್ಲಿ ಅರಿವು ಮೂಡಿಸಬೇಕು. ಯಾವುದೇ ರೀತಿ ಬಾಧಕವಾಗದ ರೀತಿಯಲ್ಲಿ ಸಾಧ್ಯವಿರುವ ಕಡೆ ಶಾಲಾ ಮಕ್ಕಳನ್ನು ಸ್ವಚ್ಛತೆಯ ಕೆಲಸದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳಬೇಕು. ಜನರ ಮನಃ ಪರಿವರ್ತನೆಯಿಂದಲೇ ಶುಚಿತ್ವ ಸಾಧ್ಯ'.
ನಿಜ. ಜಪಾನ್ ದೇಶದಲ್ಲಿ ಶಾಲಾ ಮಕ್ಕಳೇ ತಮ್ಮ ಶಾಲಾ ಆವರಣ, ಮೈದಾನಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ನಮ್ಮಲ್ಲೂ ಈ ಹಿಂದೆ ಇದು ಚಾಲ್ತಿಯಲ್ಲಿತ್ತು. ಶಾಲೆ ಆರಂಭವಾದ ದಿನ ಮಕ್ಕಳೇ ಕಸ ಗುಡಿಸುತ್ತಿದ್ದರು. ನಂತರ ಸರತಿಯಂತೆ ಈ ಕೆಲಸವನ್ನು ಮಕ್ಕಳು ಮಾಡುತ್ತಿದ್ದರು. ಯಾವ ಶಾಲೆಯಲ್ಲೂ ಅಟೆಂಡರ್ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದಲೇ ಕಸ ಗೂಡಿಸುತ್ತಾರೆಂಬ ಸಂಗತಿ ದೊಡ್ಡ ಸುದ್ದಿಯಾಗಿ, ವಿವಾದವಾಗಿ ಶಾಲಾ ಮುಖ್ಯಸ್ಥರನ್ನು ಅಮಾನತುಗೊಳಿಸುವಂತಹ ಘಟನೆಗಳು ಆಗಾಗ ನಡೆಯುತ್ತಿವೆ! ಹತ್ತು ವರ್ಷಗಳ ಹಿಂದಿನವರೆಗೂ ಮಕ್ಕಳು ಶಾಲಾ ಕೊಠಡಿ ಸ್ವಚ್ಛಗೊಳಿಸುವುದು ಪರಿಪಾಠವಾಗಿತ್ತು.. ವಿವಾದವೇ ಅಲ್ಲ! ಇಲ್ಲಿ ಹಾಗಿಲ್ಲವಲ್ಲ… ದೇಶದಲ್ಲಿ ಹದಿನೈದು ವರ್ಷಗಳ ಹಿಂದೆಯೇ ಸರ್ಕಾರ ಸ್ವಚ್‌ಘನತ್ಯಾಜ್ಯ ವಿಲೇವಾರಿ ನೀತಿಯನ್ನು ರೂಪಿಸಿತು. ಪ್ರತಿಯೊಂದಕ್ಕೂ ನೀತಿ, ಆಯೋಗ ರಚನೆ ಚಟ ಇರುವ ಈ ದೇಶದಲ್ಲಿ ಇದಕ್ಕೂ ಒಂದು ರೀತಿ. ಈಗ ಈ ನೀತಿಯೂ, ಕಸದ ರೀತಿ ಯಾವುದೋ ಒಂದು ಕಸದ ಬುಟ್ಟಿ ಸೇರಿದೆ ಅಷ್ಟೇ.
ಇಲ್ಲಿಯ ಮನಸ್ಥಿತಿ ಹೇಗಿದೆ ಎಂದರೆ ಅಸ್ಪೃಶ್ಯತೆ ಮತ್ತು ಸಾಮಾಜಿಕ ಸ್ತರಗಳು ಆಳವಾಗಿ ಬೇರೂರಿರುವುದರಿಂದ ಭಾರತದಲ್ಲಿ ಕಸ ಎಸೆಯುವುದು ಒಬ್ಬರ ಹಕ್ಕು ಹಾಗೂ ಶುಚಿಗೊಳಿಸುವುದು ಇನ್ನೊಬ್ಬರ ಕರ್ತವ್ಯ ಎನ್ನುವ ಮನಸ್ಸುಗಳು ಇರುವಲ್ಲಿ ಯಾವ ನೀತಿ ನಿರೂಪಣೆ ತಾಗೀತು?
ದೇಶದ ನಗರಗಳ ಸ್ವಚ್ಛತೆ, ನೈರ್ಮಲ್ಯ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಪ್ರತಿ ವರ್ಷ ತುಲನಾತ್ಮಕ ಅಧ್ಯಯನ ನಡೆದು ರ‍್ಯಾಂಕಿಂಗ್ ನೀಡಲಾಗುತ್ತದೆ. ಉತ್ತಮ ನಗರವೆನ್ನುವ, ಸ್ವಚ್ಛತೆಯಲ್ಲಿ ಕಾಣುವ ಮೈಸೂರು ನಗರ ಈಗ ಹಿನ್ನಡೆ ಕಂಡಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಬೃಹತ್ ವಾಣಿಜ್ಯೋದ್ಯಮಿಗಳೆಲ್ಲ ಇರುವ ಬೃಹನ್ ನಗರ ಬೆಂಗಳೂರು ಕಳಪೆ ಸಾಧನೆ ಮಾಡಿದೆ.
ಪ್ರಶ್ನೆ ಏಳುವುದು…. ಸಾವಿರಾರು ಕೋಟಿ ಹಣವನ್ನು ನೈರ್ಮಲ್ಯ, ಸ್ವಚ್ಛತೆ, ಲಕ್ಷಾಂತರ ಶೌಚಾಲಯಗಳ ನಿರ್ಮಾಣ, ವಸತಿ, ಮಾರುಕಟ್ಟೆ ಇವುಗಳಿಗೆಲ್ಲ ಸುರಿಯುವ ಯೋಜನೆಗಳು ಜನರಿಗೆ ತಲುಪಿದವೇ? ಏಕೆ ವಾಸ್ತವವಾಗಿ ಇವು ಕಾಣುತ್ತಿಲ್ಲ? ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ಲಕ್ಷಾಂತರ ಮಂದಿಗೆ ಸೇವಾ ಕೈಂಕರ್ಯವನ್ನು ಬೆಳೆಸಲು ಸಾಧ್ಯವಾದರೆ ಸರ್ಕಾರ ಮತ್ತು ಧಾರ್ಮಿಕ ಸಂಸ್ಥೆಗಳಿಂದ ಏಕೆ ಸಾಧ್ಯವಿಲ್ಲ?
ಕರ್ನಾಟಕದ ಧಾರ್ಮಿಕ ಕ್ಷೇತ್ರಗಳನ್ನೇ ನೋಡಿ… ಗೋಕರ್ಣ, ಧರ್ಮಸ್ಥಳ, ಉಡುಪಿ, ಹೂಲಿ, ಕೂಡಲಸಂಗಮ, ಗಾಣಗಾಪುರ, ಇತ್ತ ಕಾವೇರಿ ತಟ (ತಲಕಾವೇರಿ), ಬಾದಾಮಿ, ಬನಶಂಕರಿ, ಸವದತ್ತಿ ಎಲ್ಲೆಡೆ ನೈರ್ಮಲ್ಯದ ಜಾಗ, ಶುದ್ಧ ನೀರು, ಕಸವಿಲ್ಲದ ಪ್ರದೇಶ ಹುಡುಕಬೇಕಿದೆ!
ಸ್ವಚ್ಛತೆಯು ಇಹಕ್ಕೆ ಸಂಬಂಧಿಸಿದ ವಿಷಯವಾದರೆ, ನೈರ್ಮಲ್ಯ ಮನಸ್ಸು ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದ್ದು ಎಂದು ಅನುಭವಸ್ಥರು ಹೇಳುತ್ತಾರೆ. ಆದರೆ ಮನಸ್ಸೇ ಕೊಳಕಾದರೇ…? ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಮನಸ್ಸು ಮತ್ತು ಅರಿವಿನ ಜೊತೆಗೆ ಶ್ರದ್ಧೆಯ- ಸೇವೆಯ ಕೆಲಸವಾಗಬೇಕು. ಬದುಕಿನ, ಜೀವನದ ಅಳವಡಿಕೆಯಾಗಬೇಕು. ಅನೈರ್ಮಲ್ಯ ಉಂಟು ಮಾಡುವುದು ಹಕ್ಕು ಎಂದು ಭಾವಿಸುವವರು ಈಗ ಪ್ರಧಾನಿಯವರೇ ಪೊರಕೆ ಹಿಡಿದು ಕಸಗೂಡಿಸಲು ನಿಂತಿರುವಾಗ, ಕಸ ಶುಚಿ ಮಾಡುವುದು ಅವರ ಕೆಲಸ ಎಂದುಕೊಂಡು ಭಂಡತನ ಮೆರೆದಾರಲ್ಲವೇ…!?