For the best experience, open
https://m.samyuktakarnataka.in
on your mobile browser.

ಸ್ವಪಕ್ಷೀಯರಿಂದಲೇ ಸಂಸದ ಹೆಗಡೆ ತರಾಟೆ

10:05 PM Jan 18, 2024 IST | Samyukta Karnataka
ಸ್ವಪಕ್ಷೀಯರಿಂದಲೇ ಸಂಸದ ಹೆಗಡೆ ತರಾಟೆ

ಖಾನಾಪುರ: ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಬುಧವಾರ ಪಟ್ಟಣಕ್ಕೆ ಭೇಟಿ ನೀಡಿದ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರನ್ನು ಅವರದ್ದೇ ಪಕ್ಷದ ಕಾರ್ಯಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ವಕೀಲ ಚೇತನ ಮನೇರಿಕರ, ನೀಲಾವಡೆ ಗ್ರಾಪಂ ಸದಸ್ಯ ವಿನಾಯಕ ಮುತಗೇಕರ, ಪಕ್ಷದ ಹಿರಿಯ ಮುಖಂಡ ಜಯಂತ ತಿಣೈಕರ ಸೇರಿದಂತೆ ಹಲವು ಕಾರ್ಯಕರ್ತರು ಸಂಸದರನ್ನುದ್ದೇಶಿಸಿ ಮಾತನಾಡಿ, ತಾವು ಐದು ಬಾರಿ ಸಂಸದರು ಮತ್ತು ಒಮ್ಮೆ ಕೇಂದ್ರ ಸಚಿವರಾಗಿದ್ದೀರಿ, ಲೋಕಸಭೆ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ಮತದಾರರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಅಷ್ಟಾದರೂ ತಾವು ತಾಲೂಕಿಗೆ ಯಾವುದೇ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಮಾಡಿಲ್ಲ. ವರ್ಷಗಟ್ಟಲೇ ಕ್ಷೇತ್ರದ ಜನತೆಗೆ ಮುಖ ತೋರಿಸಿಲ್ಲ. ಈ ಕಾರಣದಿಂದಲೇ ಜನರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ. ಅದಕ್ಕಾಗಿ ನಿಮ್ಮ ಹೃದಯ ವೈಶಾಲ್ಯತೆ ತೋರಿ ಮುಂಬರುವ ಲೋಕಸಭೆ ಚುನಾವಣೆಗೆ ಖಾನಾಪುರ ತಾಲೂಕಿನ ಭಾರತೀಯ ಜನತಾ ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರಿಗೆ ಪಕ್ಷದ ಟಿಕೆಟ್ ಕೊಡಿಸುವ ಮೂಲಕ ಬೇರೆಯವರು ಕೆನರಾ ಸಂಸದರಾಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬುಧವಾರ ಮಧ್ಯಾಹ್ನ ಸಂಸದ ಹೆಗಡೆ ಅವರ ಕ್ಷೇತ್ರ ಪ್ರವಾಸದ ಸುದ್ದಿ ತಿಳಿದು ಅವರನ್ನು ಭೇಟಿಯಾಗಲು ಬಂದಿದ್ದ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತುಂಬಿದ ಸಭೆಯಲ್ಲಿಯೇ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಮೊದಮೊದಲು ಕಾರ್ಯಕರ್ತರ ಪ್ರಶ್ನೆಗಳಿಗೆ ಅನಂತಕುಮಾರ ಹೆಗಡೆ ಸಮಾಧಾನವಾಗಿ ಉತ್ತರಿಸಿದರು. ಬಳಿಕ ಕೆಲ ಕಾರ್ಯಕರ್ತರು ಆಕ್ರೋಶದಿಂದ ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ನಿರುತ್ತರರಾದರು. ಕೆಲ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ಮೌನಕ್ಕೆ ಆದ್ಯತೆ ನೀಡಿದರು.