For the best experience, open
https://m.samyuktakarnataka.in
on your mobile browser.

ಸ್ವರಾಜ್ಯದೀಕ್ಷೆಗೆ ಸುರಾಜ್ಯದುಡುಗೊರೆ

02:24 AM Sep 05, 2024 IST | Samyukta Karnataka
ಸ್ವರಾಜ್ಯದೀಕ್ಷೆಗೆ ಸುರಾಜ್ಯದುಡುಗೊರೆ

ಭಾರತೀಯ ಸಂಸ್ಕೃತಿಯ ಹೆಗ್ಗುರುತಾದ ಗುರುಶಿಷ್ಯ ಪರಂಪರೆ ವಿಶ್ವಕ್ಕೆ ಆದರ್ಶ. ಧರ್ಮದ ಆಚರಣೆಯೊಂದಿಗೆ ಜಗತ್ಕಲ್ಯಾಣದ ನೀತಿಯನ್ನು ಬೋಧಿಸುವ ಗುರು, ಮನದ ತಮವನ್ನು ಕಳೆಯುವುದರ ಜೊತೆಜೊತೆಗೆ ಜ್ಞಾನದ ಮದವನ್ನೂ ನಿವಾರಿಸುವ ಲೋಕವಂದ್ಯ. ಸನಾತನ ಚಿಂತನೆಗಳಲ್ಲಂತೂ ಆಚಾರ್ಯನೇ ಸರ್ವಪ್ರಥಮ. ಸಿರಿತನ ಬಡತನಗಳ ಭೇದವಿಲ್ಲದೆ, ಮೇಲು ಕೀಳಿನ ಭಾವವಿಲ್ಲದೆ ವಿಜ್ಞಾನಸಹಿತ ಜ್ಞಾನದ ಸರ್ವೋತ್ಕೃಷ್ಟ ಆನಂದಸ್ಥಿತಿಯನ್ನು ತಲುಪಲು ಸಹಕರಿಸುವ ಗುರುವಿಗೆ ಭಗವಂತನ ಸ್ಥಾನವನ್ನಿತ್ತು ಆರಾಧಿಸಿದ ಭೂಮಿ ನಮ್ಮದು. ರಾಷ್ಟ್ರರಕ್ಷಣೆಯನ್ನೂ ವಿದ್ಯಾವ್ಯವಸ್ಥೆಯ ಭಾಗವೆಂದೇ ಪರಿಭಾವಿಸಿ ಅದಕ್ಕೆ ಸೂಕ್ತವಾದ ಶಿಕ್ಷಣವನ್ನು ನೀಡುತ್ತಿದ್ದ ಭರತವರ್ಷದ ಋಷಿಸಂಕುಲದ ಗರಿಮೆಗೆ ಸಾಟಿಯಿಲ್ಲ. ಅದುವರೆಗೂ ಗುರುಕುಲದಲ್ಲಿ ವಿಶ್ವಶಾಂತಿಯ ಪಾಠ ಹೇಳಿದ ಮೇಧಾವಿ ಪಂಡಿತೋತ್ತಮರು ಶತ್ರುಗಳ ಆಕ್ರಮಣದ ಸುದ್ದಿ ತಿಳಿಯುತ್ತಲೇ ಅದಕ್ಕೆ ಪ್ರತಿಯಾಗಿ ತಂತ್ರ ಹೂಡಿ ಸ್ವಯಂ ಖಡ್ಗಧಾರಿಗಳಾದ ಉದಾಹರಣೆ ನೂರಾರು. ವೇದ ಹೇಳುವ ಕಂಠದಿಂದ ಹೊರಹೊಮ್ಮುವ ಶತ್ರುಮರ್ದನ ದೀಕ್ಷೆಗಾಗಿ ಕಾಯುವ ವಿನೀತಶಿಷ್ಯರು ತಮ್ಮನ್ನು ಪೊರೆದ ಗುರುವಿಗೆ ಸುರಾಜ್ಯದ ಉಡುಗೊರೆಯಿತ್ತು ಧನ್ಯತೆಯ ಭಾವಗಂಗೆಯಲ್ಲಿ ಮಿಂದೆದ್ದು ಪುನೀತರಾದ ದೃಷ್ಟಾಂತಗಳು ಅಸಂಖ್ಯ. ಆ ಅಸ್ಖಲಿತ ರಾಷ್ಟçಧರ್ಮನಿಷ್ಠೆಯ ಪಾಠಕ್ಕೆ ದಕ್ಷಿಣೆಯ ರೂಪದಲ್ಲಿ ಸುಭದ್ರ ಹೈಂದವೀಸಾಮ್ರಾಜ್ಯದ ಅಸ್ತಿತ್ವವನ್ನೇ ನೀಡಿದ ಶಿಷ್ಯಶ್ರೇಷ್ಠ ಸಮರವೀರ ಬಾಜಿಪ್ರಭು ದೇಶಪಾಂಡೆ ಮತ್ತು ಭಾರತದ ಸರ್ವಪ್ರಥಮ ನಾಗರಿಕ ಸಂಹಿತೆಯನ್ನು ರಚಿಸಿದ ಅಮಾತ್ಯ ರಾಮಚಂದ್ರ ನೀಲಕಂಠ ಪಂತ್ ಹಿಂದುಸ್ಥಾನವೆಂದೂ ಮರೆಯಬಾರದ ಮಹಾಮಾಣಿಕ್ಯಗಳು.
'ನಮ್ಮ ಕಣ್ಣೆದುರೇ ನಡೆಯುತ್ತಿರುವ ಮಾತಾಭಗಿನಿಯರ ಅತ್ಯಾಚಾರ, ಗೋವಂಶದ ನಾಶ, ದೇವಸ್ಥಾನಗಳ ಧ್ವಂಸವೇ ಮೊದಲಾದ ಅನೇಕ ಅನ್ಯಾಯಗಳನ್ನು ಸಹಿಸಿ ಸುಮ್ಮನಿರುವುದೆಂತು? ದೇವಭೂಮಿಯನ್ನು ಮಣಿಸಲು ಹವಣಿಸುತ್ತಿರುವ ಮೊಘಲರಿಗೂ, ಸುಲ್ತಾನರಿಗೂ ಪಾಠ ಕಲಿಸುವ ಯೋಚನೆ ನಮ್ಮ ಮನದಲ್ಲಿ ಮೂಡದಿದ್ದರೆ ಭವಿಷ್ಯದ ದಿನಗಳು ಕರಾಳವಾಗದೇ? ಹಿಂದುತೇಜದ ಜಾಗೃತಿಗಾಗಿ ಕಟಿಬದ್ಧರಾದ ಶಿವಾಜಿಯ ಕೈ ಬಲಪಡಿಸಿ ವಿದೇಶೀಯರನ್ನು ಸೋಲಿಸೋಣ. ಗೆಲುವಿನ ಘೋಷ ಮೊಳಗಲು ಒಂದೊಮ್ಮೆ ನಿನ್ನ ಪ್ರಾಣದರ್ಪಣೆ ಅನಿವಾರ್ಯವಾದರೆ ಪುಷ್ಪದಂತೆ ಅದನ್ನು ಸಮರ್ಪಿಸು' ಎಂಬ ಗಂಭೀರನಿಲುವಿನ ಮಹಾಗುರು ವಿಶ್ವನಾಥ ಪಂಡಿತರ ನಿರ್ಭೀತ ಸ್ಫೂರ್ತಿನುಡಿಗೆ ನಿಬ್ಬೆರಗಾಗಿ, ಅದನ್ನು ಶಿರಸಾ ವಹಿಸಿ ಜೊತೆಗಾರ ಸೈನಿಕರಲ್ಲಿ ಅಸಾಮಾನ್ಯ ಸಾಮರ್ಥ್ಯ ತುಂಬಿ ಪನ್ನಾಳಗಢದ ರಕ್ಷಣೆ, ಸ್ವಾಮಿಯ ಕ್ಷೇಮ ಹಾಗೂ ಹಿಂದೂ ಸಾಮ್ರಾಜ್ಯದ ಉದಯಕ್ಕಾಗಿ ಬಲಿದಾನಗೈದ ವೀರಸೇನಾನಿ ಬಾಜಿಪ್ರಭು ದೇಶಪಾಂಡೆ, ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಯುದ್ಧ ಮಾಡಿದ ಜಗದೇಕವೀರ. ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಾಜಿಪ್ರಭು ಕ್ಷಾತ್ರಧರ್ಮವನ್ನು ಮೈಗೂಡಿಸಿದ ಬಗೆಯೇ ಅತಿವಿಶಿಷ್ಟವಾದುದು. ಹಿಂದೂಧರ್ಮದ ಮೇಲೆ ನಡೆಯುತ್ತಿದ್ದ ನಿರಂತರ ಆಕ್ರಮಣ, ಶತ್ರುಶಾಸಕರು ಎಸಗುತ್ತಿದ್ದ ಅನ್ಯಾಯವನ್ನು ಕಣ್ಣಾರೆ ಕಂಡ ಬಾಜಿಪ್ರಭು, ಶತ್ರುಗಳ ಕುನೀತಿಯ ವಿರುದ್ಧ ಸಿಡಿದೆದ್ದರು. ಒಂದೆಡೆ ಅದಿಲ್ ಶಾಹಿಯ ಆರ್ಭಟ, ಇನ್ನೊಂದೆಡೆ ಮೊಘಲ್ ದೊರೆಗಳ ಅಟ್ಟಹಾಸದಿಂದ ರೊಚ್ಚಿಗೆದ್ದು ಪ್ರತಿದಿನವೂ ಹನ್ನೆರಡು ಗಂಟೆಗಳ ಕಾಲ ಕತ್ತಿವರಸೆಯಲ್ಲಿ ತೊಡಗಿಸಿದರು. ತಾನು ಸಂಪಾದಿಸಿದ ವಿದ್ಯೆಯು ಒಂದಲ್ಲ ಒಂದು ದಿನ ದೇಶರಕ್ಷಣೆಗಾಗಿ ಉಪಯೋಗವಾಗುವುದೆಂಬ ಅಚಲ ಶ್ರದ್ಧೆಯಿದ್ದ ಬಾಜಿಪ್ರಭು ಸ್ವರಾಜ್ಯಾಪೇಕ್ಷೆಯ ಸಮಾನಮನಸ್ಕ ತರುಣರ ಹುಡುಕಾಟದಲ್ಲಿದ್ದರು. ದಾಸ್ಯವೃತ್ತಿಯಿಂದ ಸಂಪೂರ್ಣವಾಗಿ ಹೊರಬಂದು ಪೂರ್ಣ ಸ್ವಾತಂತ್ರ್ಯ ಘೋಷಿಸುವ ಜೊತೆಜೊತೆಗೆ ವಿದೇಶೀ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವ ಛಾತಿಯುಳ್ಳ ಯುವಶಕ್ತಿಯ ನಿರೀಕ್ಷೆಯಲ್ಲಿದ್ದ ಬಾಜಿಪ್ರಭು, ತನ್ನ ಗುರುವಿನ ಆಶೀರ್ವಾದಪೂರ್ವಕ ಮಾತಿನಂತೆ ಶಿವಾಜಿ ಮಹಾರಾಜರ ಮರಾಠಾ ಸೇನೆಯ ದಂಡನಾಯಕರಾಗಿ ನಿಯುಕ್ತರಾದರು.
ಛತ್ರಪತಿಯನ್ನು ಸಾಯಿಸಲು ಹೊಂಚು ಹಾಕಿದ್ದ ಅಫಜಲಖಾನನ ಅಂತರಂಗವರಿತ ಬಾಜಿಪ್ರಭು, ಮರಾಠಾವೀರನ ರಕ್ಷಣೆಗೆ ವಿಶೇಷ ಕಾರ್ಯಪಡೆ ನಿಯೋಜಿಸಿದರು. ಅಫಜಲನ ವಧೆಯೊಂದಿಗೆ ಆರಂಭವಾದ ಹಿಂದುವಿಜಯಕ್ಕೆ ಸವಾಲೆಸೆದ ಆದಿಲ್ ಶಾಹಿಯ ಕೈಯಲ್ಲಿದ್ದ ಪನ್ನಾಳಗಡವನ್ನು ವಶಪಡಿಸಿದ ಶಿವಾಜಿ ಮಹಾರಾಜರ ನೇತೃತ್ವದ ಸೇನೆಯನ್ನು ಸಿದ್ಧಿ ಜೋಹರ್ ತನ್ನ ನಲ್ವತ್ತು ಸಾವಿರ ಸೈನಿಕರ ಬಲದಿಂದ ತಿಂಗಳುಗಟ್ಟಲೆ ಕೋಟೆಯೊಳಗೆ ಬಂಧಿಸಿದಾಗ ಹಿಂದುವೀರರಲ್ಲಿ ಮನೆಮಾಡಿದ್ದ ಆತಂಕ ದೂರೀಕರಿಸಿದ ಕೀರ್ತಿ ಬಾಜೀಪ್ರಭು ದೇಶಪಾಂಡೆಗೆ ಸಲ್ಲುತ್ತದೆ. ಮಹಾರಾಜರನ್ನು ಕ್ಷೇಮವಾಗಿ ವಿಶಾಲಗಢಕ್ಕೆ ತಲುಪಿಸುವ ಜೊತೆಗೆ ಪನ್ನಾಳವನ್ನೂ ರಕ್ಷಿಸುವ ಹೊಣೆಹೊತ್ತ ದೇಶಪಾಂಡೆ ಮೂರುಬಾರಿ ತೋಪಿನ ಸದ್ದು ಕೇಳುವವರೆಗೆ ತನ್ನ ಕೈ ನಿಲ್ಲದೆಂದು ಪ್ರತಿಜ್ಞೆಗೈದರು. ಮುನ್ನೂರು ಜನರ ಪುಟ್ಟ ಸೇನೆಯ ನಾಯಕತ್ವ ವಹಿಸಿ ಜೋಹರನ ಬೃಹತ್ ಸೈನ್ಯವನ್ನೆದುರಿಸಿದ ಬಾಜಿಪ್ರಭು ಸಾಹಸಕ್ಕೆ ಶತ್ರುಪಡೆ ಬೆಚ್ಚಿಬಿತ್ತು. ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಅಸಂಖ್ಯ ಶತ್ರುಗಳ ತಲೆಕಡಿದ ಬಾಜಿಪ್ರಭು ಕ್ಷಣಕಾಲವೂ ವಿರಮಿಸದೆ ಗಂಟೆಗಟ್ಟಲೆ ಹೋರಾಡಿ ಕೋಟೆಯನ್ನೂ, ಸ್ವಾಮಿಯನ್ನೂ, ಹಿಂದೂ ಅಸ್ಮಿತೆಯನ್ನೂ ರಕ್ಷಿಸಿದರು. ನಿರಂತರ ಯುದ್ಧದಿಂದ ಬಳಲಿದ್ದರೂ ಅದನ್ನು ತೋರ್ಪಡಿಸದೆ ವಿಶಾಲಗಡದಿಂದ ತೋಪಿನ ಸದ್ದು ಕೇಳುತ್ತಿದ್ದಂತೆ ವೀರಸ್ವರ್ಗ ಸೇರಿದ ದೇಶಪಾಂಡೆ, ಶೌರ್ಯಸಾಹಸಗಳಿಗೆ ಪರ್ಯಾಯ. ನಾಡಿನ ರಕ್ಷಣೆಯ ದೀಕ್ಷೆಯಿತ್ತ ತನ್ನ ಗುರುವಿನ ಮಾತಿನಂತೆ ನಡೆದು, ದುಡಿದು, ಮಡಿದ ಬಾಜಿಪ್ರಭು ಸದಾ ಸ್ಮರಣೀಯ ವೀರಸೇನಾನಿ.
'ಭಾರತೀಯ ಪರಂಪರೆಯ ಮೇಲೆ ಶತಮಾನಗಳ ಕಾಲ ನಡೆದ ದಾಳಿಗೆ ಪ್ರತ್ಯುತ್ತರವೆಂಬಂತೆ ನಿರ್ಮಾಣಗೊಂಡಿರುವ ಹೈಂದವೀ ಸ್ವರಾಜ್ಯವು ಆಪತ್ತಿನಲ್ಲಿರುವಾಗ ನಿನ್ನ ಅಮಾತ್ಯ ಪೋಷಾಕನ್ನು ಕಳಚಿಟ್ಟು ಯೋಧನಾಗಿ ಸಮರಭೂಮಿಗಿಳಿ. ಹಿಂದುಗಳಿಗಿರುವ ಈ ನೆಲವನ್ನು ಇಂದು ಉಳಿಸದಿದ್ದರೆ ಮುಂದೊಮ್ಮೆ ಪಶ್ಚಾತ್ತಾಪ ಪಡುವ ಕಾಲ ಎದುರಾದೀತು. ಶಿವಾಜಿ ಮಹಾರಾಜರು ರಕ್ತವನ್ನು ಬೆವರಾಗಿಸಿ ಕಟ್ಟಿದ ಈ ಸಾಮ್ರಾಜ್ಯವು ಮೊಘಲರ ಎದೆ ಬಿರಿಯುವ ಶಕ್ತಿಶಾಲಿ ಸಂಸ್ಥಾನವಾಗಬೇಕೇ ಹೊರತು ಶತ್ರುಗಳ ಆಳ್ವಿಕೆಗೆ ಹೆದರಿ ಅಡಗುವ ಹೇಡಿಗಳ ರಾಜ್ಯವಾಗಬಾರದು. ಇನ್ನೂ ಕಾಲ ಮಿಂಚಿಲ್ಲ. ಇದುವರೆಗೆ ಬೌದ್ಧಿಕವಾಗಿ ರಾಜ್ಯ ಸಂರಕ್ಷಣೆಯ ಜವಾಬ್ದಾರಿ ಹೊತ್ತ ನೀನು ಈಗ ರಣಾಂಗಣಕ್ಕೆ ಧುಮುಕಿ ನಿನ್ನ ಕ್ಷಾತ್ರತೇಜಸ್ಸನ್ನು ಪ್ರಕಟೀಕರಿಸು' ಎಂಬ ಸಮರ್ಥ ರಾಮದಾಸರ ಶಿಷ್ಯ ಹಾಗೂ ತನ್ನ ಗುರುವಾದ ಹರಿನಾರಾಯಣದಾಸರ ಶೌರ್ಯದ ಮಾತಿನಿಂದ ಅಮಾತ್ಯರ ಪಡೆಯನ್ನು ಯೋಧಪಡೆಯನ್ನಾಗಿ ಪರಿವರ್ತಿಸಿ ಪನ್ನಾಳಗಢವನ್ನು ಉಳಿಸಿದ ರಾಮಚಂದ್ರ ನೀಲಕಂಠ ಪಂತ್, 'ಮರಾಠಾ ಸಾಮ್ರಾಜ್ಯದ ಆಧಾರಸ್ತಂಭ'ವೆಂದೇ ಸುಪ್ರಸಿದ್ಧರು. ವೈದಿಕ ಮನೆತನದ ನೀಲಕಂಠ ಪಂತ್ ದಂಪತಿಗಳಿಗೆ ಜನಿಸಿದ ರಾಮಚಂದ್ರರು ವೇದವಿದ್ಯೆಯೊಡನೆ ರಾಷ್ಟ್ರೀಯತೆಯ ಶಿಕ್ಷಣವನ್ನೂ ಪಡೆದರು. ಔರಂಗಜೇಬನ ವಿರುದ್ಧ ಗೆದ್ದ ಪುಟ್ಟ ಹುಡುಗರ ಕಥೆಯಿಂದ ಪ್ರೇರಿತರಾಗಿ ಅತಿ ಕಿರಿಯ ವಯಸ್ಸಿನಲ್ಲೇ ಶಿವಾಜಿ ಮಹಾರಾಜರ ಸಲಹೆಗಾರರಾಗಿ ನೇಮಕಗೊಂಡರು. ಹಿಂದೂ ಸಿಂಹಾಸನವು ಅಧಿಕೃತವಾಗಿ ಸ್ಥಾಪನೆಯಾದ ಬಳಿಕ ಅಷ್ಟಪ್ರಧಾನರಲ್ಲಿ ಒಬ್ಬರಾಗಿ ರಾಜ್ಯದ ಆರ್ಥಿಕ ನೀತಿಗಳನ್ನು ನೋಡಿಕೊಂಡ ಪಂತರು, ಮಹಾರಾಜರ ಆಡಳಿತದುದ್ದಕ್ಕೂ ಅವರ ಬೆಂಗಾವಲಾದರು. ದೇಹಿ ಎಂದವನಿಗೆ ನಾಸ್ತಿ ಎಂಬ ಉತ್ತರ ನೀಡಕೂಡದೆಂಬ ರಾಜವಾಣಿಯನ್ನು ಯಥಾವತ್ ಮುನ್ನಡೆಸಿ ಸಂಪದ್ಭರಿತ ಸಂಸ್ಥಾನವನ್ನು ಸಂರಚಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು. ತೆರಿಗೆ ನಿರ್ವಹಣೆ, ಕೃಷಿಕರ ಪರವಾದ ರಾಜನೀತಿ, ಬಡಜನರಿಗೆ ನೆರವಾಗುವ ಆಡಳಿತ, ಗೋವಂಶದ ಸುರಕ್ಷತೆಗಾಗಿ ಪ್ರತ್ಯೆಕ ಆರ್ಥಿಕ ಸೂತ್ರಗಳನ್ನು ಹಣೆದ ಪಂತರು, ರಾಜ್ಯದ ಗಡಿಗಳನ್ನು ರಕ್ಷಿಸುವ ಸೈನಿಕರಿಗೆ ಹಾಗೂ ಅವರ ಪರಿವಾರದವರಿಗೆ ಅತ್ಯುನ್ನತ ಗೌರವ ದೊರಕುವಲ್ಲಿ ನಿರ್ವಹಿಸಿದ ಪಾತ್ರ ಅನನ್ಯ. ಸೈನಿಕರಿಗೆ ಪ್ರಥಮ ಪ್ರಾಶಸ್ತ್ಯ ನೀಡುವ ಠರಾವನ್ನೂ ಮಂಡಿಸಿದ ಆರ್ಥಿಕ ಸಚಿವ ಪಂತರು ರಚಿಸಿದ ಆಜ್ಞಾಪತ್ರವು ನಾಗರಿಕ ಕಾನೂನು ಹಾಗೂ ಸೇನಾ ಸಂಹಿತೆಯ ಕುರಿತಾಗಿ ಬರೆದ ಮೌಲಿಕ ಕೃತಿ.
ಸಂಭಾಜಿ, ರಾಜಾರಾಮ, ದ್ವಿತೀಯ ಶಿವಾಜಿ, ದ್ವಿತೀಯ ಸಂಭಾಜಿಯ ಕಾಲದಲ್ಲೂ ತಮ್ಮ ಸೇವೆ ಸಲ್ಲಿಸಿ ಮೂವತ್ನಾಲ್ಕು ವರ್ಷಗಳ ಕಾಲ ಹೈಂದವೀ ಸ್ವರಾಜ್ಯವನ್ನು ಅನೇಕ ಸಂದರ್ಭಗಳಲ್ಲಿ ಆಪತ್ತಿನಿಂದ ಪಾರುಮಾಡಿದ ಪಂತರು, ಬಹು ಜಾಗರೂಕತೆಯಿಂದ ಆಡಳಿತ ನಡೆಸಿದರು. ಮೊಘಲರ ಕಪಿಮುಷ್ಟಿಯಲ್ಲಿ ನಲುಗಿದ್ದ ಪನ್ನಾಳವನ್ನು ರಕ್ಷಿಸಲು ಯುದ್ಧರಂಗಕ್ಕಿಳಿದ ಪಂತರು ಮುಂದೆ ವಿವಿಧ ಹೋರಾಟಗಳಲ್ಲಿ ಭಾಗಿಯಾದರು. ಒಂದೆಡೆ ಸಂಘರ್ಷದ ಕಾರಣದಿಂದಾಗಿ ಕುಸಿಯುತ್ತಿದ್ದ ಆದಾಯ ಹಾಗೂ ಮತ್ತೊಂದೆಡೆ ರಾಜ್ಯಲಕ್ಷ್ಮೀಯನ್ನೇ ಕಳೆದುಕೊಳ್ಳುವ ಭೀತಿ ಎದುರಾದಾಗ ಅದನ್ನು ಬಹುಜಾಣ್ಮೆಯಿಂದ ನಿಭಾಯಿಸಿ ತನ್ನ ಗುರುವಿಗೆ ನೀಡಿದ ವಚನವನ್ನು ಉಳಿಸಿದರು. ಐವರು ರಾಜರ ಸಲಹೆಗಾರರಾಗಿ ಹಿಂದೂ ಅಸ್ಮಿತೆ, ಅಸ್ತಿತ್ವಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಕರ್ತವ್ಯ ಪಾಲಿಸಿ ಆದರ್ಶಮಯ ಬದುಕನ್ನು ನಡೆಸಿದ ಅಮಾತ್ಯ ರಾಮಚಂದ್ರ ನೀಲಕಂಠ ಪಂತ್, ಆಳುವ ವರ್ಗದವರೆಲ್ಲರೂ ಅನುಕರಿಸಲೇಬೇಕಾದ ದೇಶಭಕ್ತ.
ಇಂದು ನಾಡಿನೆಲ್ಲೆಡೆ ಆಚರಿಸುವ ಶಿಕ್ಷಕದಿನವು ಒಂದು ದಿನದ ಹೊಗಳಿಕೆ, ಹಾರತುರಾಯಿ ಸನ್ಮಾನಗಳಿಗಷ್ಟೇ ಮೀಸಲಾದರೆ ಅದು ಗುರುಪರಂಪರೆಗೆಸಗುವ ಅಪಚಾರ. ಸಮಾಜ ದಾರಿ ತಪ್ಪಿದಾಗ ತಿದ್ದಿ, ತೀಡುವ ಗುರುವಿನ ಸ್ಥಾನ ಹಿರಿದಷ್ಟೇ ಅಲ್ಲ, ಜವಾಬ್ದಾರಿಯುತವೂ ಹೌದು. ಸಮರ್ಥ ಶಿಕ್ಷಕರೇ ರಾಷ್ಟ್ರರಕ್ಷಕರೆಂಬ ಮಾತು ಆವರ್ಷ ಅನುರಣನಗೊಳ್ಳಬೇಕಿರುವುದು ಅತ್ಯಗತ್ಯ. ಗುರುಗಳ ಸ್ಫೂರ್ತಿನುಡಿಯಿಂದ ರೂಪುಗೊಂಡು ದೇಶದ ರಕ್ಷಣೆಗಾಗಿ ಸರ್ವಸ್ವವನ್ನೂ ಧಾರೆಯೆರೆದ ಬಾಜಿಪ್ರಭು ದೇಶಪಾಂಡೆ ಮತ್ತು ರಾಮಚಂದ್ರ ನೀಲಕಂಠ ಪಂತರಂತೆ ಈ ತಲೆಮಾರಿನ ವಿದ್ಯಾರ್ಥಿಗಳೂ ದೇಶದೇಳಿಗೆಯ ಪ್ರೇರಣೆ ಪಡೆದು ಸಕ್ಷಮ ಭಾರತ ನಿರ್ಮಿತಿಗೆ ಹೆಜ್ಜೆಯಿಡುವುದೇ ಆ ಮಹಾನುಭಾವರಿಗೆ ಸಲ್ಲಿಸುವ ಜನ್ಮೋತ್ಸವ ಕಾಣಿಕೆ.