ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ವರಾಜ್ಯದ ಗೆಲುವಿಗೆ ಬಲಿದಾನದ ತೋರಣ

03:30 AM Sep 19, 2024 IST | Samyukta Karnataka

ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಮಂಡಲಗಳುಳ್ಳ ಯುವಕರ ಸಿಂಹಸಾಹಸ ಪರಾಕ್ರಮದಿಂದ ಜಗತ್ತನ್ನೇ ಗೆಲ್ಲಬಹುದೆಂಬ ಸ್ವಾಮಿ ವಿವೇಕಾನಂದರ ಅಮರವಾಣಿಯನ್ನು ಸಾರ್ಥಕಗೊಳಿಸಲೆಂದೇ ಮುನ್ನುಗ್ಗಿ ಹೋರಾಡಿದ ತರುಣ ಸಾರಥಿಗಳ ಸಂಖ್ಯೆ ಅಗಣಿತ. ವಿದೇಶೀ ಆಳ್ವಿಕೆಯ ದಾಸ್ಯದಿಂದ ಮುಕ್ತಿಗೊಂಡು ಋಷಿಪ್ರಣೀತ ಜೀವನಮೌಲ್ಯಗಳ ಅಡಿಯಲ್ಲಿ ಸಮೃದ್ಧವಾದ ಜೀವನವನ್ನು ರೂಪಿಸುವುದರ ಜೊತೆಜೊತೆಗೆ ರಾಷ್ಟ್ರೀಯ ಆದರ್ಶಗಳನ್ನೂ ಪುನಃ ಸ್ಥಾಪಿಸುವ ಸ್ವಪ್ನಸಾಕಾರತೆಗಾಗಿ ಮುಂದಡಿಯಿಟ್ಟ ಧೀರರ ಚರಿತ್ರೆಯೇ ರೋಚಕ. ವಿದ್ಯೆ, ವಯಸ್ಸು, ಯಶಸ್ಸು, ಬಲ, ಧನಕನಕಾದಿಗಳೆಲ್ಲವನ್ನೂ ಇತರರ ಹಿತಕ್ಕಾಗಿ ಸಮರ್ಪಿಸುವ ಯೋಚನೆಯನ್ನೇ ಧ್ಯೇಯವನ್ನಾಗಿ ಪರಿವರ್ತಿಸಿದ ಯುವಮುಂದಾಳುಗಳ ತ್ರಿಕರಣಪೂರ್ವಕ ಸಮರ್ಪಣೆಯ ಮೊತ್ತವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯ. ಸರ್ವಾಂಗ ಸುಂದರ ಭಾರತದ ಯಶೋಗಾಥೆಗೆ ಕಪ್ಪುಚುಕ್ಕೆಯಂತಿದ್ದ ಆಕ್ರಮಣಕಾರರ ಕುನೀತಿಯನ್ನೂ, ದೇಶವಿರೋಧೀ ನಡೆಯನ್ನೂ, ಹಿಂದೂ ಸಂಸ್ಕೃತಿಯ ಮೇಲೆಸಗುತ್ತಿದ್ದ ಅಪಚಾರವನ್ನೂ ಖಂಡಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಅತ್ಯುಗ್ರ ಹೋರಾಟ ನಡೆಸಿ ಜೀವಿತದ ಕಡೆ ಘಳಿಗೆಯಲ್ಲೂ ಭಾರತದ ಹಿತವನ್ನೇ ಬಯಸಿ ಅಮರರಾದ ಪಾಂಡುರಂಗ ಮಹಾದೇವ ಬಾಪಟ್ ಮತ್ತು ಧರ್ಮದುಳಿವಿಗಾಗಿ ಆತ್ಮಾರ್ಪಣೆಗೈದ ವಾಂಚಿನಾಥನ್ ಅಯ್ಯರ್ ದೇಶ ಮರೆಯಬಾರದ ಸರ್ವೋತ್ಕ್ರಷ್ಟ ಸೇನಾನಿಗಳು.
ಮೋಸ, ಕಪಟ, ವಂಚನಾ ಕೂಟನೀತಿಯಿಂದ ಬಡ ಭಾರತೀಯರನ್ನು ಶೋಷಿಸಿ ದೇಶವನ್ನು ಕೊಳ್ಳೆಹೊಡೆಯುವ ಬ್ರಿಟಿಷರ ಅಪಾಯಕಾರಿ ಆಟಕ್ಕೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಭಾರತದ ಅಸ್ತಿತ್ವಕ್ಕೆ ಕುತ್ತು ತಪ್ಪಿದ್ದಲ್ಲ. ಪರಸ್ಪರ ಒಳಜಗಳ, ಅಪನಂಬಿಕೆಗಳಿಂದ ಹೊರಬಂದು ದೇಶದ ಶತ್ರುಗಳನ್ನು ಹೊರದಬ್ಬದಿದ್ದರೆ ಇಂಗ್ಲೆಂಡ್ ರಾಣಿಯ ಪಾದಸೇವಾ ಚಾಕರಿಗೆ ಸಿದ್ಧರಾಗಿ. ಇಂಗ್ಲೀಷರ ಆಡಳಿತದ ಕ್ರೂರತೆಯ ಅರಿವಿಲ್ಲದೆ ಬಹುಪರಾಕು ಕೂಗುವ ಮಂದಿಯ ಅಲ್ಪಬುದ್ಧಿಗೆ ಹೇಳುವುದೇನು? ತಮ್ಮ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಿಸಲು ಯಾವುದೇ ದೇಶದ ಜನಜೀವನ ವ್ಯವಸ್ಥೆಯನ್ನು ಹಾಳುಗೆಡವಲು ಹಿಂದೆ ಮುಂದೆ ನೋಡದ ರಾಕ್ಷಸ ಮನೋಭಾವದ ಜನರನ್ನು ಎದುರಿಸಲು ನಾಡಿನ ಯುವಶಕ್ತಿ ಒಂದಾಗಬೇಕು. ದೇಶಕ್ಕಾಗಿ ಹತ್ತು ವರ್ಷಗಳ ಕಾಲ ತರುಣಶಕ್ತಿ ಭೋರ್ಗರೆದರೆ ಭಾರತವನ್ನೇನು, ಇಡೀ ಜಗತ್ತನ್ನೇ ನಾವಾಳಬಹುದು' ಎಂಬ ಪ್ರೇರಣಾದಾಯಿ ಮಾತು ಮತ್ತು ಬರಹದಿಂದ ನಿದ್ರಿತ ಭಾರತೀಯ ಸಮಾಜವನ್ನು ಜಾಗೃತಗೊಳಿಸಿ ಚಿಗುರುಮೀಸೆಯ ಹೈದರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಿದ ಪಾಂಡುರಂಗ ಮಹಾದೇವ ಬಾಪಟ್, ಸೇನಾಪತಿ ಬಾಪಟ್ ಎಂದೇ ಸುಪ್ರಸಿದ್ಧರಾದ ಸ್ವಾತಂತ್ರ‍್ಯ ಹೋರಾಟಗಾರರು. ರತ್ನಗಿರಿ ಮೂಲದ ಮಹಾದೇವ ಬಾಪಟ್ ದಂಪತಿಗಳಿಗೆ ಜನಿಸಿದ ಪಾಂಡುರಂಗರು ಡೆಕ್ಕನ್ ವಿದ್ಯಾಸಂಸ್ಥೆಯಲ್ಲಿ ಅಧ್ಯಯನಗೈದು ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ವಿದ್ಯಾರ್ಥಿವೇತನದ ಸಹಾಯದಿಂದ ಇಂಜಿನಿಯರಿಂಗ್ ಪದವೀಧರರಾಗುವ ಕನಸಿನ ಬೆನ್ನೇರಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ ಬಾಪಟ್, ದೇಸೀ ಹೋರಾಟಕ್ಕೆ ಸಮಯ ಮೀಸಲಿಟ್ಟು ಕಾಲೇಜು ವಿದ್ಯಾಭ್ಯಾಸವನ್ನು ಕಡೆಗಣಿಸಿದ್ದೇ ಹೆಚ್ಚು. ಶ್ಯಾಮಜೀ ಕೃಷ್ಣವರ್ಮರ ಭಾರತ ಭವನದಲ್ಲಿ ರಾಷ್ಟ್ರೀಯ ವಿಚಾರಗಳ ಚಿಂತನ ಮಂಥನ ಸಭೆಗಳಲ್ಲಿ ಭಾಗವಹಿಸಿ ಪೂರ್ಣಪ್ರಮಾಣದ ಕ್ರಾಂತಿಕಾರಿಯಾಗಿ ಬದಲಾದರು. ಇಂಗ್ಲೆಂಡ್‌ನ ಆಡಳಿತದಲ್ಲಿ ವಿದೇಶೀಯರ ಹಸ್ತಕ್ಷೇಪವನ್ನು ಸಹಿಸದ ಇಂಗ್ಲೀಷರು ಪ್ರಪಂಚದಾದ್ಯಂತ ವಸಾಹತುಗಳನ್ನು ಸ್ಥಾಪಿಸಲು ಹವಣಿಸುತ್ತಿರುವುದು ಬಾಪಟ್ ಮನಸ್ಸನ್ನು ಕಲಕಿ ಕ್ರುದ್ಧಗೊಳಿಸಿತು. ತಮ್ಮನ್ನು ಇನ್ನೊಬ್ಬರು ಆಳುವ ವ್ಯವಸ್ಥೆಯನ್ನು ಸಹಿಸದ ಆಂಗ್ಲರು ತಾವು ಮಾತ್ರ ಪ್ರಪಂಚದಾದ್ಯಂತ ತಳ ಊರಬೇಕೆಂದು ಬಯಸುವ ಕುನೀತಿಯನ್ನು ಇಂಗ್ಲೀಷರ ನೆಲದಲ್ಲೇ ಪ್ರಶ್ನಿಸಿದ ಬಾಪಟರ ಧೈರ್ಯ ಶ್ಲಾಘನೀಯ. ಸಾವರ್ಕರ್ ಸಹೋದರರ ಪರಿಚಯದ ಬಳಿಕ ಕ್ರಾಂತಿಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿದ ಬಾಪಟ್, ಬಾಂಬ್ ಇಂಜಿನಿಯರಿಂಗ್ ವಿಧಾನಗಳನ್ನು ಅಭ್ಯಾಸಗೈದರು. ಬಂದೂಕು ಹಿಡಿದು ಬೆದರಿಸುವ ಬ್ರಿಟಿಷರಿಗೆ ಬಾಂಬುಗಳಿಂದಲೇ ಸ್ವಾಗತಿಸಬೇಕೆಂಬ ಅವರ ನಿಲುವು ಆ ಕಾಲಕ್ಕೆ ಹೊಸತೆನಿಸಿದರೂ ಮುಂದಿನ ಮೂರು ದಶಕಗಳ ಕ್ರಾಂತಿಕಾರಿಗಳಿಗೆ ಆ ಮಾತೇ ವೇದವಾಕ್ಯವಾದುದು ಇತಿಹಾಸ. ಬ್ರಿಟಿಷರು ಭಾರತವನ್ನು ಆಳಿದಂತೆ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಯುವಕರು ಒಂದಾಗಿ ಸಶಸ್ತ್ರ ಕ್ರಾಂತಿಗೆ ಮುನ್ನುಡಿ ಬರೆಯುವ ಯೋಚನೆಯನ್ನು ಹರಿಯಬಿಟ್ಟು ಆ ದಿಶೆಯಲ್ಲಿ ಪ್ರಯತ್ನಿಸಿ ಬಾಂಬ್ ತಯಾರಿ ಕಾರ್ಯದಲ್ಲಿ ವ್ಯಸ್ತರಾದ ಬಾಪಟ್, ಅಲಿಪುರ್ ಬಾಂಬ್ ಸ್ಫೋಟದ ತರುವಾಯ ಭಾರತಕ್ಕೆ ವಾಪಸಾದರು. ದೇಶವಾಸಿಗಳ ಮನದಲ್ಲಿ ಮನೆಮಾಡಿದ್ದ ಜಾಡ್ಯತೆ, ಬ್ರಿಟಿಷರ ಬಗೆಗಿನ ಭಯವನ್ನು ಹೋಗಲಾಡಿಸದೆ ಸ್ವಾತಂತ್ರ‍್ಯ ಆಂದೋಲನ ನಿಖರ ಗುರಿ ತಲುಪದೆಂದು ನಿಶ್ಚಯಿಸಿ ಜನಜಾಗೃತಿಯಲ್ಲಿ ತೊಡಗಿದರು. ರಾಜದ್ರೋಹ, ಸಶಸ್ತ್ರ ಕ್ರಾಂತಿಗೆ ಪ್ರೇರಣೆ, ಬಾಂಬ್ ಪಿತೂರಿಯ ಆರೋಪದ ಮೇರೆಗೆ ಮೂರು ವರ್ಷಗಳ ಕಠಿಣ ಜೈಲುಶಿಕ್ಷೆಗೆ ಗುರಿಯಾದ ಬಾಪಟರು, ಬಿಡುಗಡೆಯ ಬಳಿಕ ಲೋಕಮಾನ್ಯ ತಿಲಕರನ್ನು ಭೇಟಿಯಾಗಿ ಗ್ರಾಮಗ್ರಾಮಗಳಲ್ಲಿ ಸ್ಥಾನೀಯ ಸಮಿತಿಗಳನ್ನು ಸ್ಥಾಪಿಸಿ, ಯುವಕರಲ್ಲಿ ರಾಷ್ಟ್ರೀಯತೆಯ ಕಲ್ಪನೆಯನ್ನು ತುಂಬಿ ತನ್ಮೂಲಕ ಹೋರಾಟದ ಹಾದಿಯನ್ನು ಮತ್ತಷ್ಟು ಬಲಪಡಿಸುವ ನೀಲನಕಾಶೆ ಮಂಡಿಸಿದರು. ಗಾಂಧೀಜಿ ಗ್ರಾಮಸ್ವರಾಜ್ಯದ ಚಿಂತನೆಯತ್ತ ಆಸಕ್ತರಾಗಿ ರೈತ ಚಳವಳಿಯಲ್ಲೂ ಭಾಗವಹಿಸಿದ ಸೇನಾಪತಿ ಬಾಪಟ್, ಸ್ವಾತಂತ್ರ‍್ಯಾನಂತರ ಮೂಲೆಗುಂಪಾದುದು ದುರಂತಸತ್ಯ. ರಕ್ಷಣಾ ಇಲಾಖೆ ಅಥವಾ ಗೃಹ ಮಂತ್ರಾಲಯವನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಕರಗತವಾಗಿದ್ದರೂ ಸ್ವಜನ ಪಕ್ಷಪಾತದ ಅಂಧಕಾರದಲ್ಲಿ ಮುಳುಗಿದ್ದ ನಾಯಕರಿಗೆ ಬಾಪಟ್ ಶಕ್ತಿಯ ಅರಿವಾಗದ್ದು ದೇಶಕ್ಕಾದ ನಷ್ಟ. ಸರ್ವಾಂಗೀಣ ಅಭಿವೃದ್ಧಿಯ ಭಾರತದ ಕನಸು ಕಂಡ ಪಾಂಡುರಂಗ ಬಾಪಟ್, ಕ್ಷಾತ್ರಭಾರತದ ಹೆಮ್ಮೆ. ಅತಿಶ್ರೀಮಂತ ಸಂಸ್ಕೃತಿ, ಪರಂಪರೆ, ಇತಿಹಾಸವಿರುವ ಹಿಂದೂಧರ್ಮವನ್ನು ಹೊಸಕಿ ಹಾಕಲು ಸಾವಿರ ವರ್ಷಗಳಿಂದ ಪ್ರಯತ್ನಿಸುತ್ತಿರುವ ದುರುಳರಿಗೆ ಎದುರೆದುರು ನಿಂತು ಹೋರಾಡಿದ ವೀರಧೀರರ ನಾಡು ಭಾರತವನ್ನು ನಾಶಪಡಿಸಲು ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಸಾಧ್ಯ. ದೇಶವನ್ನು ಆಕ್ರಮಿಸಿ ಸನಾತನ ಧರ್ಮ, ಹಿಂದೂ ಜೀವನ ಪದ್ಧತಿಯನ್ನು ನಾಶಮಾಡಲು ಹೊರಟಿರುವ ಶತ್ರುಗಳ ಎದೆಸೀಳುವ ಕೆಲಸಕ್ಕೆ ನಾನು ಸಿದ್ಧ. ಸ್ವರಾಜ್ಯದ ಪ್ರಾಪ್ತಿಗಾಗಿ ನನ್ನ ಬದುಕಿನ ತ್ಯಾಗ ಅನಿವಾರ್ಯವಾದರೆ ನಾನು ಅದಕ್ಕೂ ಸಿದ್ಧ. ನಮ್ಮತನವನ್ನು ಉಳಿಸಿ ಸಂಸ್ಕೃತಿಗೆ ಅಪಚಾರವಾಗದಂತೆ ಬಾಳುವ ಅಥವಾ ಅದರ ರಕ್ಷಣೆಗಾಗಿ ಬಲಿಯಾಗುವ ಎರಡೂ ದಾರಿಗಳು ನನಗೆ ಅತ್ಯಂತ ಪ್ರಿಯ' ಎಂಬ ಕ್ಷಾತ್ರಪೂರ್ಣ ಭಾವನಾತ್ಮಕ ಪತ್ರ ಬರೆದು ದೇಶವಾಸಿಗಳನ್ನು ಬಡಿದೆಚ್ಚರಿಸಿದ ಅತುಲ್ಯ ಕ್ರಾಂತಿಕಾರಿ ವಾಂಚಿನಾಥನ್ ಅಯ್ಯರ್, ಸರ್ವಶ್ರೇಷ್ಠ ಹೋರಾಟದಿಂದ ಯುವಸಮಾಜಕ್ಕೆ ಸ್ಫೂರ್ತಿಯಿತ್ತ ಪ್ರಖರ ದೇಶಭಕ್ತ. ತಮಿಳುನಾಡಿನ ಸಂಪ್ರದಾಯಸ್ಥ ಕುಟುಂಬದ ರಘುಪತಿ ಅಯ್ಯರ್-ರುಕ್ಮಿಣಿ ಅಮ್ಮಾಳ್ ದಂಪತಿಗಳಿಗೆ ಜನಿಸಿದ ಅಯ್ಯರ್ ಬಾಲ್ಯದ ಹೆಸರು ಶಂಕರನ್. ಶಾಲಾ ಶಿಕ್ಷಣದಲ್ಲಿ ವಿಶೇಷ ಆಸಕ್ತಿ ಹೊಂದಿರದಿದ್ದರೂ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಅಪಾರ ಆಸಕ್ತಿ. ಪೋಷಕರಿತ್ತ ಧಾರ್ಮಿಕ ಶಿಕ್ಷಣ, ಸುಂದರ ವಾತಾವರಣದಲ್ಲಿ ಬೆಳೆದು ಧರ್ಮರಕ್ಷಕನ ಹಂತ ತಲುಪಿದ ಅಯ್ಯರ್, ಸರಕಾರಿ ಕೆಲಸಕ್ಕೆ ಸೇರಿದರು. ಯಾವ ಕಚೇರಿಗೆ ತೆರಳಿದರೂ ಭಾರತೀಯರದು ತೃತೀಯ ದರ್ಜೆಯ ಕೆಲಸ. ಬ್ರಿಟಿಷರೇ ಮೇಲಧಿಕಾರಿಗಳು. ವಿದೇಶೀಯರ ಆಜ್ಞೆಗೆ ತಲೆಬಾಗಿ ಜೀ ಹುಜೂರ್ ಎನ್ನುವ ದೈನ್ಯಸ್ಥಿತಿಗೆ ಮನನೊಂದ ಅಯ್ಯರ್, ಸ್ವಲ್ಪ ಸಮಯದಲ್ಲೇ ಕೆಲಸಕ್ಕೆ ರಾಜೀನಾಮೆಯಿತ್ತು ಸ್ವಾತಂತ್ರ‍್ಯ ಹೋರಾಟಕ್ಕೆ ಧುಮುಕಿದರು. ಬ್ರಿಟಿಷರ ಮೋಸ, ಹಿಂದೂಧರ್ಮಕ್ಕೆ ಎದುರಾಗಿರುವ ಸಂಕಟ, ಮತಾಂತರಕ್ಕೆ ನೀಡುವ ಪ್ರೋತ್ಸಾಹ, ದೇವಸ್ಥಾನಗಳ ಜಮೀನನ್ನು ಮಿಶನರಿ ಚಟುವಟಿಕೆಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ನೀಡುತ್ತಿರುವ ಪ್ರೋತ್ಸಾಹದಿಂದ ನೊಂದು ಕ್ರುದ್ಧರಾದ ಅಯ್ಯರ್, ಈ ಅಪಸವ್ಯಗಳಿಗೆಲ್ಲ ಪರಿಹಾರ ಕಂಡುಹುಡುಕಲು ನಿರ್ಧರಿಸಿದರು.
ವಿ.ವಿ.ಎಸ್. ಅಯ್ಯರ್, ನೀಲಕಂಠ ಬ್ರಹ್ಮಚಾರಿ ಮೊದಲಾದ ಕ್ರಾಂತಿಕಾರಿಗಳ ಸಂಪರ್ಕದಿಂದ ಸ್ವಾತಂತ್ರ‍್ಯ ಹೋರಾಟದ ಸಮಗ್ರ ಆಳ ತಿಳಿದ ಅಯ್ಯರ್, ಭಾರತ ಮಾತಾ ಸಂಘ ಸ್ಥಾಪಿಸಿ ಬ್ರಿಟಿಷರ ಸರ್ವನಾಶದ ದೀಕ್ಷೆ ತೊಟ್ಟರು. ಗೋಹತ್ಯೆಯನ್ನು ಪ್ರೋತ್ಸಾಹಿಸಿ, ಹಿಂದೂಗಳ ಭಾವನೆಗಳ ಜೊತೆ ಆಟವಾಡುವ ಪಂಚಮ ಜಾರ್ಜ್ ಪರಮ ಆರಾಧಕ, ಕಲೆಕ್ಟರ್ ದೊರೆ, ಬಡ ಭಾರತೀಯ ರೈತರ ರಕ್ತ ಹೀರಿ ತೆರಿಗೆ ದೋಚುತ್ತಿದ್ದ ರಾಬರ್ಟ್ ಆ್ಯಶ್ ಹತ್ಯೆಗೆ ಮುಹೂರ್ತ ಬರೆದ ಅಯ್ಯರ್, ಶ್ರೀರಾಮ, ಶ್ರೀಕೃಷ್ಣ, ಗುರುಗೋವಿಂದ ಸಿಂಹ, ಛತ್ರಪತಿ ಶಿವಾಜಿ ಮಹಾರಾಜರಾದಿಯಾಗಿ ವೀರಾಧಿವೀರ ನಾಯಕರು ಆಳಿದ ಭಾರತದ ಮೇಲೆ ಬೇರಾವುದೇ ಹಿನ್ನೆಲೆಯ ಧ್ವಜ ಹಾರಾಡಬಾರದೆಂದು ಘೋಷಿಸಿದರು. ಅತ್ಯಂತ ಕಡಿಮೆ ಜೊತೆಗಾರರಿದ್ದರೂ ಯೋಜನಾಬದ್ಧ ಕಾರ್ಯಗಳನ್ನು ಸಂಘಟಿಸಿ ನಿದ್ರಿತ ಭಾರತೀಯ ತರುಣರನ್ನು ಜಾಗೃತಗೊಳಿಸಿದ ಅಯ್ಯರ್ ಸಾಹಸ, ತ್ಯಾಗ ವರ್ಣನಾತೀತ. ಭಾರತೀಯತೆಗೆ ಕೊಂಚ ಧಕ್ಕೆಯಾದರೂ ಸಿಡಿದೇಳುತ್ತಿದ್ದ ತರುಣನಲ್ಲಿ ಧಾರ್ಮಿಕತೆಯನ್ನೇ ಉಸಿರಾಗಿಸಿದ ರಾಷ್ಟ್ರವನ್ನು ನಿರ್ಮಿಸುವ ಕನಸು ಮನೆಮಾಡಿತ್ತು. ಹಿಂದೂ ಪರಂಪರೆಯ ಮೇಲೆ ಬ್ರಿಟಿಷ್ ಅಧಿಕಾರಿಗಳು ನಡೆಸುವ ದೌರ್ಜನ್ಯವನ್ನು ಯಾವುದೇ ಅನುಮಾನವಿಲ್ಲದಂತೆ ಖಂಡಿಸುತ್ತಿದ್ದ ವಾಂಚಿನಾಥನ್, ಬದುಕಿನ ಕೊನೆಯ ಕ್ಷಣವೂ ಧರ್ಮಕ್ಕಾಗಿಯೇ ಮೀಸಲೆಂದು ನಿರ್ಧರಿಸಿ ಮುನ್ನುಗ್ಗಿದರು. ಆ್ಯಶ್ ಪ್ರವಾಸದ ಸರಿಯಾದ ಮಾಹಿತಿ ಪಡೆದು ರೈಲ್ವೆ ನಿಲ್ದಾಣದಲ್ಲೇ ಆತನನ್ನು ಹೊಡೆದುರುಳಿಸಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಕಠಿಣ ಸಂದೇಶ ರವಾನಿಸಿದ ಇಪ್ಪತ್ತೈದರ ತರುಣ ಅನ್ಯರ ಕೈಗೆ ತಮ್ಮ ಶರೀರ ಸಿಗಬಾರದೆಂದು ನಿರ್ಧರಿಸಿ ಆತ್ಮಾರ್ಪಣೆಯ ಹಾದಿ ಹಿಡಿದರು.
ಯಾವುದೇ ಸುಳಿವನ್ನು ನೀಡದೆ, ಇನ್ನಾರ ಮೇಲೂ ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕೆ ಕೊಂಚ ಸಾಕ್ಷಿಯನ್ನೂ ಬಿಡದೆ ಬಲಿದಾನಗೈದ ಅಯ್ಯರ್ ಕೆಚ್ಚಿಗೆ ಎಣೆಯಿಲ್ಲ.
ಕುಡಿಮೀಸೆ ಮೂಡಿ, ನಾಲ್ಕು ಕಾಸು ಸಂಪಾದಿಸಿ, ನೆಲ ಕಾಣದಂತೆ ಗಾಡಿ ಓಡಿಸುವುದನ್ನೇ ಪೌರುಷವೆಂದೂ, ಹೊಡಿ-ಬಡಿಗಳನ್ನೇ ಯೌವನದ ಸಂಕೇತವೆಂದೂ ಭಾವಿಸುವ ಈ ಹೊತ್ತಲ್ಲಿ ದೇಶಕ್ಕಾಗಿ ಬದುಕುವ ಮತ್ತು ಆತ್ಮಾರ್ಪಣೆಗೈಯುವ ಧೀಮಂತಿಕೆಯೇ ಎಲ್ಲಕ್ಕೂ ಮಿಗಿಲೆಂಬುದನ್ನು ತೋರಿದ ಸೇನಾಪತಿ ಬಾಪಟ್ ಮತ್ತು ವಾಂಚಿನಾಥನ್ ಅಯ್ಯರ್ ಅವರ ಬಾಳ್ವೆ ನಾಡಿಗೆ ಬೆಳಕು.

Next Article