ಸ್ವರ್ಗದಲ್ಲಿ ಗುಲಾಮನಾಗದೆ ನರಕದಲ್ಲಿ ರಾಜನಾಗುವುದೇ ಲೇಸು!
ಪ್ಯಾರಡೈಸ್ ಲಾಸ್ಟ್' ಬೈಬಲ್ನ ಮೊದಲ ಪುಸ್ತಕ
ಜೆನೆಸಿಸ್'ದ ಕಥೆಯನ್ನು ಅನುಸರಿಸುತ್ತದೆ. ಇದು ಕ್ರೈಸ್ತರ ಬ್ರಹ್ಮಾಂಡದ ಸೃಷ್ಟಿ ಪ್ರಕ್ರಿಯೆಯ ನಿಖರವಾದ ವಿವರಣೆಯನ್ನು ನೀಡುತ್ತದೆ ಮತ್ತು ಮಾನವ ಕುಲದ ಮಹಾ ಪತನವನ್ನು ವಿವರಿಸುತ್ತದೆ.
ಪ್ರತಿಭೆಯಲ್ಲಿ ಶೇಕ್ಸ್ಪಿಯರನ ನಂತರದ ಸ್ಥಾನವನ್ನು ಕವಿ ಮಿಲ್ಟನ್ನಿಗೆ ನೀಡಲಾಗಿದೆ. ತನ್ನ ಮಹಾಕಾವ್ಯಗಳನ್ನು ಬರೆಯಲು ಅವನು ದೀರ್ಘ ಕಾಲದವರೆಗೆ ಸಿದ್ಧತೆ ಮಾಡಿಕೊಂಡ. ಇಂಗ್ಲಿಷ್, ಲ್ಯಾಟಿನ್, ಗ್ರೀಕ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ರಚನೆಯಾದ ಅನೇಕ ಗ್ರಂಥಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ. ಆದರೆ ನಿರಂತರ ಓದು ಮಿಲ್ಟನ್ನನ್ನು ನೇತ್ರಹೀನನಾಗಿ ಮಾಡಿತು. ಮಹಾಕಾವ್ಯದ ಮೊದಲ ಸಾಲು ಬರೆಯುವ ಮೊದಲೇ ಮಿಲ್ಟನ್ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಕುರುಡನಾದ. ಆದರೆ ಅದರಿಂದ ಮಿಲ್ಟನ್ ಧೃತಿಗೆಡಲಿಲ್ಲ, ಆತ್ಮವಿಶ್ವಾಸವನ್ನೂ ಕಳೆದುಕೊಳ್ಳಲಿಲ್ಲ. ಲೋಕವೇ ಬೆರಗಾಗುವಂಥ ಮಹಾಕಾವ್ಯಗಳನ್ನು ಬರೆದ.
ಸೈತಾನ ಸ್ವರ್ಗದಲ್ಲಿ ದೇವತೆಯಾಗಿದ್ದ. ಅಲ್ಲಿ ಅವನಿಗೆ ಲೂಸಿಫರ್ ಎಂದು ಹೆಸರಿತ್ತು. ಆದರೆ ಸ್ವರ್ಗದ ಅಧಿಪತಿಯಾದ ಮಹಾ ದೇವನ ವಿರುದ್ಧ ಅವನು ಪ್ರತಿಭಟಿಸಿದ. ದೇವರ ಆಡಳಿತಾವಧಿ ಕೊನೆಗೊಂಡ ಮೇಲೆ ತಾನೇ ಸ್ವರ್ಗದ ಅಧಪತಿ ಆಗಬೇಕೆಂದು ಲೂಸಿಫರ್ ಬಯಸಿದ್ದ. ಆದರೆ ದೇವರು ತನ್ನ ಮಗನನ್ನೇ ತನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಮುಂದಾದ. ದೇವರ ಈ ಏಕಪಕ್ಷಿಯ ನಿರ್ಣಯದ ವಿರುದ್ಧ ಲೂಸಿಫರ್ ತನ್ನ ಬೆಂಬಲಿಗ ದೇವತೆಗಳೊಂದಿಗೆ ಪ್ರತಿಭಟಿಸಿದ. ಸರ್ವೋಚ್ಚ ದೇವನ ಸಹಾಯಕನಾಗಿರಲು ಬಯಸದೆ ತಾನೇ ದೇವನಾಗಲು ಪ್ರಯತ್ನಿಸಿದ.
ಶಕ್ತಿ ರಾಜಕಾರಣದಲ್ಲಿ ಅಂತಿಮವಾಗಿ ದೇಶ, ನೈತಿಕತೆ, ಮೌಲ್ಯಗಳ ಪ್ರಶ್ನೆಗಳಿಗಿಂತ ಅಧಿಕಾರದ ಗದ್ದುಗೆ ಹಿಡಿಯುವ ಉದ್ದೇಶವೇ ಮುಖ್ಯವಾಗುತ್ತದೆ. ಈ ಹೊತ್ತಿನ ಉಚ್ಛಾಟಿತ ಬಂಡಾಯ ರಾಜಕಾರಣಿಗಳ ಮತ್ತು ಸ್ವರ್ಗದಿಂದ ಉಚ್ಛಾಟಿತ ದೇವತೆಗಳ ನಡುವಿನ ಸಾಮ್ಯ ಚಕಿತಗೊಳಿಸುತ್ತದೆ.
ಸೈತಾನನ ಪ್ರತಿಭಟನೆಯಿಂದ ಸಿಟ್ಟಿಗೇರಿದ ದೇವತೆ ಅವನಿಗಾಗಿ ಪ್ರತ್ಯೇಕವಾದ ನರಕವನ್ನು ಸೃಷ್ಟಿಸಿ ಅವನೊಂದಿಗೆ ಎಲ್ಲಾ ವಿದ್ರೋಹಿ ದೇವತೆಗಳ ಹೆಡಮುರಿ ಕಟ್ಟಿ ನರಕಕ್ಕೆ ತಳ್ಳುತ್ತಾನೆ. ನರಕದಲ್ಲಿ ನದಿಯೊಂದು ಹರಿಯುತ್ತಿರುತ್ತದೆ. ಅಲ್ಲಿ ಬೆಂಕಿ ನೀರಾಗಿ ಹರಿಯುತ್ತಿರುತ್ತದೆ. ಈ ಉರಿವ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಉಚ್ಛಾಟಿತ ದೇವತೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಪಿಶಾಚಿಗಳಾಗಿ ವರ್ಣಿಸಲಾಗದ ವೇದನೆ ಅನುಭವಿಸುತ್ತಿರುತ್ತವೆ.
ಸೈತಾನ ತನ್ನ ಬೆಂಬಲಿಗರ ನರಳಾಟ, ಚೀರಾಟ, ರಂಪಾಟ ಕೇಳಿಸಿಕೊಳ್ಳುತ್ತಾನೆ. ಅಂಥ ಭೀಕರ, ಭಯಾನಕ ವಾತಾವರಣದಲ್ಲೂ ಸೈತಾನ ಪರಿಣಾಮಕಾರಿ ಭಾಷಣ ಮಾಡುತ್ತಾನೆ. ಉರಿವ ನದಿಯಲ್ಲಿ ಅವನು ತನ್ನ ಮೊದಲ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಾನೆ. ಇಂಥ ಅರಾಜಕ ಪರಿಸ್ಥಿತಿಯನ್ನು ಅನೇಕ ಸಂಸತ್ತುಗಳಲ್ಲೂ ಕಾಣಬಹುದು. ಪ್ರಧಾನಿ ಮಂತ್ರಿಗಳು ಸಂಸತ್ತಿನಲ್ಲಿ ಮಾತನಾಡುವಾಗ ಇದ್ದಕ್ಕಿದ್ದಂತೆ ಪ್ರತಿಪಕ್ಷದ ಸಂಸದರು ಚೀರಾಟ, ರಂಪಾಟ, ಕೂಗಾಟ, ಪ್ರತಿಭಟನೆ ಶುರು ಮಾಡುವುದನ್ನು ನಾವು ಈಗಲೂ ಕಾಣುತ್ತೇವೆ. ತೀವ್ರ ಪ್ರತಿಭಟನೆಯ ನಡುವೆಯೂ ಪ್ರಧಾನಿಗಳು ತಮ್ಮ ಭಾಷಣ ಮುಂದುವರಿಸುತ್ತಾರೆ. ಇಂಥ ಅರಾಜಕ ಪರಿಸ್ಥಿತಿಯನ್ನು ವರ್ಣಿಸಲು ಪೆಂಡಮೊನಿಯಮ್ ಎಂಬ ಪದವನ್ನು ಬಳಸಲಾಗುತ್ತದೆ.
ಈ ಶಬ್ದವನ್ನು ಮಿಲ್ಟನ್ ಮೊದಲ ಬಾರಿಗೆ ಪ್ಯಾರಡೈಸ್ ಲಾಸ್ಟ್' ಮಹಾಕಾವ್ಯದಲ್ಲಿ ಬಳಸಿದ. ಇದು ಅವನು ಸೃಷ್ಟಿಸಿದ ಹೊಸ ಶಬ್ದ. ಇದು ಪಿಶಾಚಿಗಳ ವಾಸಸ್ಥಾನ ನರಕದ ರಾಜಧಾನಿಯ ಹೆಸರು. ಈ ಶಬ್ದದ ಮೂಲ ಲ್ಯಾಟಿನ್ ಭಾಷೆಯಲ್ಲಿದೆ. ಪಿಶಾಚಿಗಳು ಸೇರುವ ಸ್ಥಳಕ್ಕೆ ಪೆಂಡಮೊನಿಯಮ್ ಎಂದು ಕರೆಯಲಾಗುತ್ತದೆ. ಪೆಂಡಮೊನಿಯಮ್ನಲ್ಲಿ ಸೈತಾನ ಮಾಡುವ ಭಾಷಣ ಸಮಕಾಲೀನ ರಾಜಕಾರಣದ ಅನೇಕ ಚಹರೆಗಳನ್ನು ನಮ್ಮೆದುರು ತೆರೆದಿಡುತ್ತದೆ. ಆದರೆ ದೇವತೆ ಮತ್ತು ಸೈತಾನರ ಮಾತುಗಳ ನಡುವಿನ ಅಂತರ ತಿಳಿಯದ ಗೊಂದಲಮಯ ಸ್ಥಿತಿಯಲ್ಲಿ ಜನರಿದ್ದಾರೆ. ನಾಯಕ-ಪ್ರತಿನಾಯಕ, ನಾಯಕ-ಖಳನಾಯಕರ ತರ್ಕ ಮತ್ತು ಉದ್ದೇಶದ ನಡುವಿನ ಸೂಕ್ಷ್ಮ ವ್ಯತ್ಯಾಸ ಅರಿಯದ ಕಾರಣ ಅನೇಕ ತಾತ್ವಿಕ, ಬೌದ್ಧಿಕ ಮತ್ತು ನೈತಿಕ ಬಿಕ್ಕಟ್ಟುಗಳನ್ನು ಜನರು ಎದುರಿಸುತ್ತಿದ್ದಾರೆ. ಭಿನ್ನಮತ ತಪ್ಪು ಅಲ್ಲದಿದ್ದರೂ ಸತ್ಯ ಪ್ರತಿಪಾದನೆಯಲ್ಲಿ, ದೇಶದ ಅಸ್ಮಿತೆ ಕಟ್ಟುವಲ್ಲಿ, ದೇಶದ ಸಾರ್ವಭೌಮತ್ವ ರಕ್ಷಿಸುವಲ್ಲಿ ಭಿನ್ನಮತ ಸಹಿಸಲಾಗದು. ನರಕದಲ್ಲಿ ಉರಿವ ನದಿಯಲ್ಲಿ, ನರಳಾಟ, ಚೀರಾಟದ ನಡುವೆಯೂ ಸತ್ಯ ಮತ್ತು ಶಿವನನ್ನು ಸೋಲಿಸುವ, ಧ್ವಂಸಗೊಳಿಸುವ ಮಾತು ಸೈತಾನ್ ಆಡುತ್ತಾನೆ. ``ಎಚ್ಚರಗೊಳ್ಳಿರಿ, ಎದ್ದೇಳಿರಿ ಅಥವಾ ಕಾಯಂ ಆಗಿ ಹೀಗೆಯೇ ಬಿದ್ದುಕೊಂಡಿರಿ. ಎಲ್ಲವೂ ಕಳೆದುಕೊಂಡಿಲ್ಲ. ಯಾರೂ ಗೆಲ್ಲದ ಇಚ್ಛಾಶಕ್ತಿ, ಪ್ರತಿಕಾರದ ಧ್ಯಾನ, ದೇವತ್ವದ ತಿರಸ್ಕಾರ, ಶರಣಾಗದ, ತಲೆಬಾಗದ ಆಗಾಧ ಆತ್ಮಸ್ಥ್ಯೆರ್ಯ. ಘಾತುಕ ತಿರಸ್ಕಾರದ ಗಾಯಗಳು ಆಳಕ್ಕೆ ಇಳಿದಲ್ಲಿ ನಿಜವಾದ ಹೊಂದಾಣಿಕೆ ಎಂದೆಂದಿಗೂ ಸಾಧ್ಯವಾಗದು'' ಎಂದು ಸೈತಾನ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾನೆ. ಕಾಲ ದೇಶ ಮನಸ್ಸನ್ನು ಬದಲಿಸದು. ಸ್ವರ್ಗವನ್ನು ನರಕವನ್ನಾಗಿಸುವ, ನರಕವನ್ನು ಸ್ವರ್ಗವನ್ನಾಗಿಸುವ ಮನಸ್ಸು ತನಗಿದೆಯೆಂದು ಸೈತಾನ್ ಹೇಳುತ್ತಾನೆ. ಸ್ವರ್ಗದಲ್ಲಿ ಗುಲಾಮನಾಗುವುದಕ್ಕಿಂತ ನರಕದಲ್ಲಿ ರಾಜನಾಗುವುದು ಮಿಗಿಲು ಎಂದು ಹೇಳಿ ತನ್ನ ಬಲಗೈ ಬಂಟ ಬಿಲ್ಜಬ್ನನ್ನು ಒಳಗೊಂಡಂತೆ ನರಕದಲ್ಲಿನ ಉರಿವ ನದಿಯಲ್ಲಿ ಬಿದ್ದು ನರಳಾಡುತ್ತಿದ್ದ ತನ್ನ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡುತ್ತಾನೆ. ದೇವರ ಸೃಷ್ಟಿಯ ವಿನಾಶವೇ ತನ್ನ ಮುಖ್ಯ ಧ್ಯೇಯ ಎಂದು ಸೈತಾನ ಬಲವಾಗಿ ನಂಬಿರುತ್ತಾನೆ. ತನ್ನ ಸ್ಥಾನ ತುಂಬಲು ಆಡಮ್ ಮತ್ತು ಈವ ಎಂಬ ಮೊದಲ ಮಾನವ ಗಂಡು ಮತ್ತು ಹೆಣ್ಣನ್ನು ದೇವರು ಸೃಷ್ಟಿಸಿ ಅವರನ್ನು ಈಡನ್ ಗಾರ್ಡನ್ದಲ್ಲಿಡುತ್ತಾನೆ. ಅವರಿಗೆ ದೇವಲೋಕದಲ್ಲಿ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟಿದ್ದರೂ ಈಡನ್ ಗಾರ್ಡನ್ದಲ್ಲಿನ ಜ್ಞಾನವೃಕ್ಷದ ಹಣ್ಣು ತಿನ್ನದಂತೆ ನಿರ್ಬಂಧಿಸಿರುತ್ತಾನೆ. ಈ ವಿಷಯ ತಿಳಿದ ಸೈತಾನ ಹಾವಿನ ರೂಪ ತಾಳಿ ಇವಳ ಮನಸ್ಸು ಕೆಡಿಸಿ, ಅವಳು ಆಡಮ್ನ ಮನಸ್ಸು ಕೆಡಿಸುವಂತೆ ಪ್ರೇರೇಪಿಸುತ್ತಾನೆ. ಸೈತಾನನ ಪ್ರಭಾವಕ್ಕೆ ಒಳಗಾದ ಆಡಮ್ ಮತ್ತು ಈವ್ ಮೊದಲ ಪಾಪ ಎಸಗಿ ಈಡನ್ ಗಾರ್ಡನ್ದಿಂದ ಹೊರ ತಳ್ಳಲ್ಪಡುತ್ತಾರೆ. ಆಗ ದೇವರು ಅವರಿಗಾಗಿ ಭೂಮಿಯನ್ನು ಸೃಷ್ಟಿಸುತ್ತಾನೆ. ಮೊದಲ ಪಾಪದ ಪ್ರತಿಫಲವಾಗಿ ಭೂಮಿಯ ಮೇಲೆ ಸಾವು, ನೋವು, ಮೋಸ, ವಂಚನೆ ಕಾಲಿಡುತ್ತದೆ. ಅಧಿಕಾರ ಪಡೆಯುವುದೇ ಜೀವನದ ಏಕಮಾತ್ರ ಗುರಿಯಾಗಬಾರದು. ಏತಕ್ಕಾಗಿ ಅಧಿಕಾರ ಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಅಧಿಕಾರ ಪಡೆಯಲು ಪ್ರಯತ್ನಿಸಬಾರದು. ಲೋಕಕಲ್ಯಾಣದ, ದೇಶದ ಬಲವರ್ಧನೆಯ ಉದ್ದೇಶಕ್ಕಾಗಿ ಅಧಿಕಾರ ಹಿಡಿಯಬೇಕು. ಕುಟುಂಬ ಕಲ್ಯಾಣಕ್ಕಾಗಿ, ಪ್ರತೀಕಾರ ತೀರಿಸಿಕೊಳ್ಳಲು ಅಥವಾ ಸ್ವಾರ್ಥ ಸಾಧನೆಗಾಗಿ ಅಧಿಕಾರ ಹಿಡಿಯಬಾರದು. ಆದರೆ ಅಧಿಕಾರವೇ ಸರ್ವ ಶ್ರೇಷ್ಠ ಪುರುಷಾರ್ಥವಲ್ಲ. ಅಧಿಕಾರಕ್ಕಿಂತ ಹೆಚ್ಚು ಘನವಾದ ಪುರುಷಾರ್ಥಗಳೂ ಇವೆ. ಆಧ್ಯಾತ್ಮಿಕ ಸಾಧನೆಗೆ ಅಧಿಕಾರ ಸಹಕಾರಿಯಾಗುವುದಿಲ್ಲ. ದೇವರ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ ಸಾಮಾನ್ಯ ಆತ್ಮವನ್ನು ಬ್ರಹ್ಮನೊಂದಿಗೆ ಬೆಸೆಯುತ್ತದೆ. ಇದಕ್ಕೆ ಅಧಿಕಾರ ಬೇಕಾಗಿಲ್ಲ. ಅದ್ಭುತವಾದ ಸಾಹಿತ್ಯ ಸೃಷ್ಟಿಸಲು, ಕಲಾಕೃತಿ ಕೆತ್ತಲು, ರಾಗ ಸೃಷ್ಟಿಸಲು ಅಧಿಕಾರ ಬೇಕಾಗಿಲ್ಲ. ಒಳಾಂಗಣ ಶುಚಿಗೊಳಿಸಲು, ಆತ್ಮದ ಕಲ್ಮಶಗಳನ್ನು ಕಿತ್ತು ಹಾಕಲು ಅಧಿಕಾರ ಬೇಕಾಗಿಲ್ಲ. ಅದಕ್ಕೆ ತ್ಯಾಗ, ಪರಿಶ್ರಮ, ತಪಸ್ಸು ಬೇಕು. ಆದರೆ ಅಧಿಕಾರ ವ್ಯಾಮೋಹ ಮನುಷ್ಯರ ದೌರ್ಬಲ್ಯವಾಗಿರುವಂತೆ ದೇವತೆಗಳ ದೌರ್ಬಲ್ಯವೂ ಆಗಿದೆ.ಸ್ವರ್ಗದ ಅಧಿಪತಿ ಇಂದ್ರ ತನ್ನ ಅಧಿಕಾರದ ಸ್ಥಾನವನ್ನು ಭದ್ರಗೊಳಿಸಲು ಮಾಡಬಾರದ್ದನ್ನು ಮಾಡಿ ಅಸುರರ ಮುಂದೆ ತಲೆ ತಗ್ಗಿಸಿ ನಿಂತ ನಿದರ್ಶನಗಳಿವೆ.
ಪೆರಡೈಸ್ ಲಾಸ್ಟ'ದಲ್ಲಿ ಲೂಸಿಫರ್ ದೇವಲೋಕದ ಪಟ್ಟ ತನಗೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ದೇವಲೋಕದ ಬದಲಿಗೆ ನರಕ ಆಯ್ಕೆ ಮಾಡಿಕೊಳ್ಳುತ್ತಾನೆ. ಆಗಲೂ ಅಧಿಕಾರದ ವ್ಯಾಮೋಹದಿಂದ ಅವನು ಬಿಡುಗಡೆ ಹೊಂದುವುದಿಲ್ಲ. ಅಧಿಕಾರ ಸಿಗುವುದಾದರೆ ನರಕವೇ ತನ್ನ ಪಾಲಿನ ಸ್ವರ್ಗ ಎನ್ನುತ್ತಾನೆ. ದೇವರ ಸೃಷ್ಟಿಯ ಸರ್ವನಾಶವೇ ತನ್ನ ಗುರಿ ಎಂದು ಹೇಳುತ್ತಾನೆ.
ಸೈತಾನನ ಬಂಡಾಯಕ್ಕೂ ಸಮಕಾಲೀನ ರಾಜಕಾರಣಕ್ಕೂ ಮಹತ್ತರ ವ್ಯತ್ಯಾಸವಿಲ್ಲ. ತಮಗೆ ಅಧಿಕಾರ, ಮಾನ ಸನ್ಮಾನ ನೀಡಿದ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೆ ರಾಜಕಾರಣಿಗಳು ಒಡನೆಯೇ ತಮ್ಮ ಪಕ್ಷದ ವಿರುದ್ಧ ಬಂಡಾಯ ಹೂಡುತ್ತಾರೆ. ಪಕ್ಷದ ತತ್ವಗಳ ವಿರುದ್ಧ, ಪಕ್ಷದ ಧುರೀಣರ ವಿರುದ್ಧ, ತಮ್ಮನ್ನು ಮಗನಂತೆ ಕಂಡ ನೇತಾರರ ವಿರುದ್ಧ ಪ್ರತಿಭಟಿಸುತ್ತಾರೆ. ತಮ್ಮದೇ ಪಕ್ಷದ ಸರ್ವನಾಶಕ್ಕಾಗಿ, ಸೋಲಿಗಾಗಿ ಕಟಿಬದ್ಧವಾಗಿ ನಿಲ್ಲುತ್ತಾರೆ. ಇಂಥ ಬಂಡಾಯಗಾರರು ತಮ್ಮ ಸ್ವಾರ್ಥದ ಮೇಲೆ ಕಪ್ಪು ಬಟ್ಟೆ ಹಾಕಿ, ತಮಗಾದ ಅನ್ಯಾಯ ಮುಂದೆ ಮಾಡಿ, ಅಮಾಯಕರನ್ನು ಕಟ್ಟಿಕೊಂಡು, ಅಧಿಕಾರ ಮೋಹಿಗಳ, ಭ್ರಷ್ಟರ ಬಳಗ ಕಟ್ಟಿಕೊಂಡು ತಮ್ಮದೇ ಪಕ್ಷದ ನಾಯಕರ ವಿರುದ್ಧ ಷಡ್ಯಂತ್ರ ಹೂಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ಹೂಡುತ್ತಾರೆ.
ಮಿಲ್ಟನ್ನ ಮಹಾಕಾವ್ಯ ಮೊದಲ ಪಾಪದ ಬಗ್ಗೆ, ಮೊದಲ ಹತ್ಯೆಯ ಬಗ್ಗೆ ಹೇಳುವಂತೆ ಮಾನವನ ಇತಿಹಾಸದ ಮೊದಲ ಶಕ್ತಿ ರಾಜಕಾರಣದ ಬಗ್ಗೆಯೂ ಹೇಳುತ್ತದೆ. ಈ ಕಾವ್ಯದ ಈ ಹೊತ್ತಿನ ಓದು ನಮ್ಮ ಮನಸ್ಸಿನಲ್ಲಿ, ನಮ್ಮ ಬುದ್ಧಿಯಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.