ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸ್ವಾತಂತ್ರ್ಯದ ಮಹೋತ್ಸವ ವೀರ ಸಂಕಲ್ಪದ ಉತ್ಸಾಹ

02:01 AM Aug 15, 2024 IST | Samyukta Karnataka

ಬೇರೆಯವರ ಹಕ್ಕು ಮತ್ತು ಗೌರವಗಳನ್ನು ರಕ್ಷಿಸುವ ಮನೋಧರ್ಮ ರೂಡಿಸಿಕೊಳ್ಳುವುದು ನಿಜವಾದ ಅರ್ಥದ ಸ್ವಾತಂತ್ರ್ಯ. ಉಳಿದವರ ಹಕ್ಕು ಮತ್ತು ಗೌರವಗಳ ರಕ್ಷಣೆಯ ಸಂಕಲ್ಪವೇ ರಾಜ್ಯಾಂಗ ಒತ್ತಿ ಹೇಳುವ ಕರ್ತವ್ಯ. ಆದರೆ, ಭಾವಲಹರಿಯ ವೈಚಾರಿಕತೆಯಲ್ಲಿ ಸ್ವಾತಂತ್ರ್ಯದ ಗೊತ್ತು ಗುರಿಗಳು ಚೆಲ್ಲಾಪಿಲ್ಲಿಯಾಗಿ ಹೋದರೆ ಆಗ ಸೃಷ್ಟಿಯಾಗುವುದು ಸ್ವೇಚ್ಚಾಚಾರ. ಹಾಗೊಮ್ಮೆ ಇಂತಹ ಸ್ವೇಚ್ಚಾಚಾರವನ್ನು ಪ್ರಶ್ನಿಸಲು ಮುಂದಾದರೆ ಅಂತಹವರಿಗೆ ಕೇಡಿಗರ ಪಟ್ಟ. ಇದು ಭಾವಾವೇಶ ಮೈಮನದುಂಬಿಸಿಕೊಂಡಾಗ ಸೃಷ್ಟಿಯಾಗುವ ಒಂದು ರೀತಿಯ ಮಂಪರು. ಅನೇಕ ಸಂದರ್ಭಗಳಲ್ಲಿ ಸ್ವಾತಂತ್ರ್ಯವೆಂಬುದು ತಪ್ಪು ವ್ಯಾಖ್ಯಾನಗಳಿಗೆ ಕಾರಣವಾಗಿ ರಾಷ್ಟ್ರ, ರಾಷ್ಟ್ರಭಕ್ತಿ ಹಾಗೂ ರಾಷ್ಟ್ರೀಯತೆಯ ವಿಚಾರಗಳನ್ನು ಅತಿರೇಕಕ್ಕೆ ತೆಗೆದುಕೊಂಡು ಹೋದಾಗ ನಿಷ್ಠಾವಂತ ಸ್ವಾತಂತ್ರ್ಯ ಪ್ರಿಯರಿಗೆ ಇರಿಸುಮುರಿಸು. ೭೭ ವರ್ಷಗಳ ಸ್ವಾತಂತ್ರ್ಯದ ಅನುಭವದಲ್ಲಿ ದೇಶದ ರೀತಿ ನೀತಿ ಹಾಗೂ ದೇಶವಾಸಿಗಳ ವೃತ್ತಿ ಪ್ರವೃತ್ತಿಗಳ ಆಧಾರದ ಮೇರೆಗೆ ಹೇಳಬಹುದಾದ ಮಾತೆಂದರೆ ಮಾಡಲೇಬೇಕಾದ ಕೆಲಸಗಳನ್ನು ಬದಿಗೊತ್ತಲು ಸ್ವಾತಂತ್ರ್ಯದ ಗುರಾಣಿ ಬಳಸಿಕೊಂಡು ಮಾಡಬಾರದ ಕೆಲಸಗಳಿಗೆ ಸ್ವಾತಂತ್ರ್ಯ ಒದಗಿಸಿರುವ ಹಕ್ಕಿನ ಚಲಾವಣೆಯ ಮಾರ್ಗ ಅನುಸರಿಸುತ್ತಿರುವುದರಿಂದ ಒಂದು ರೀತಿಯ ವೈಚಾರಿಕ ಕ್ಷೋಭೆ ಆವರಿಸಿರುವುದು ನಿಜ. ಆದರೆ, ಇಂತಹ ಕ್ಷೋಭೆಯ ನಿವಾರಣೆಗೆ ಬೇಕಾದದ್ದು ಶಿಕ್ಷೆಯಲ್ಲ - ಬದಲಿಗೆ ಬೇಕಾದದ್ದು ಚಿಕಿತ್ಸೆ.
ಸ್ವಾತಂತ್ರ್ಯ ಬಂದ ನಂತರ ಭಾರತಕ್ಕೆ ಒಂದು ದೇಶದ ಖಚಿತ ಸ್ವರೂಪ ಸಿಕ್ಕಿರುವುದನ್ನು ಮರೆಯುವಂತಿಲ್ಲ. ಹಾಗೆಂದಾಕ್ಷಣ, ಈ ಹಿಂದೆ ದೇಶದ ಕಲ್ಪನೆ ಭಾರತ ಅಥವಾ ಹಿಂದೂಸ್ತಾನ ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶದಲ್ಲಿ ಇರಲಿಲ್ಲ ಎಂದಲ್ಲ. ಆದರೆ, ಅವೆಲ್ಲವೂ ಕೂಡಾ ಚಕ್ರವರ್ತಿಗಳು, ಸುಲ್ತಾನರು, ಮಾಂಡಲಿಕರು, ಪಾಳೆಗಾರರ ರಾಜ್ಯಭಾರಗಳಿಂದ ಒಡಗೂಡಿತ್ತು. ಸಂಸ್ಕೃತಿ ಎಂಬ ಚೈತನ್ಯ ಈ ಇಷ್ಟೂ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಒಂದು ಧನಾತ್ಮಕ ಶಕ್ತಿಯಾಗಿತ್ತು ನಿಜ. ಆದರೆ, ಅದಕ್ಕೆ ಸಮಗ್ರ ರಾಜಕೀಯ ದೃಷ್ಟಿಕೋನ ಅಷ್ಟಾಗಿ ಇರಲಿಲ್ಲ. ಪಾಶ್ಚಾತ್ಯರು ಹಾಗೂ ಅರಬ್ ದೇಶಗಳವರ ದುರಾಕ್ರಮಣದ ನಂತರ ಈಗ ಭಾರತ ಎಂದು ಗುರುತಿಸಲಾಗುವ ಪ್ರದೇಶದ ಜನ ಪಡಬಾರದ ಸಂಕಟವನ್ನು ಪಟ್ಟ ನಂತರ ಆಗಿರುವ ಬೆಳವಣಿಗೆ ಎಂದರೆ ಸಮಭಾವ, ಸಹಬಾಳ್ವೆಯ ತತ್ವದಿಂದ ಉದಯಿಸಿರುವ ದೇಶ. ಹಲವು ಹತ್ತು ಅಗ್ನಿಪರೀಕ್ಷೆಗಳಿಗೆ ಒಳಗಾಗಿ ಜನ್ಮ ತಳೆದಿರುವ ಈ ದೇಶದ ಜನ ನಿಜವಾದ ಅರ್ಥದಲ್ಲಿ ವಿಚಾರವಂತ ಹಾಗೂ ಆಚಾರವಂತ ನೆಲೆಗಟ್ಟಿನವರಾಗಲು ಅದಕ್ಕೆ ಭವ್ಯ ಪರಂಪರೆ ಮತ್ತು ಆಧ್ಯಾತ್ಮಿಕತೆಯೇ ಪ್ರೇರಣೆ. ಜನತಂತ್ರ ಬೇರೂರಿ ಭವ್ಯ ಮರವಾಗಿ ಬೆಳೆಯಲು ವರ್ಷಗಳು ಉರುಳಬೇಕು. ಫ್ರಾನ್ಸ್ ಹಾಗೂ ಇಂಗ್ಲೆಂಡ್‌ನಲ್ಲಿ ಜರುಗಿರುವ ವಿಪ್ಲವಗಳ ಚರಿತ್ರೆಯನ್ನು ತಿರುವಿಹಾಕಿದಾಗ ಜನತಂತ್ರ ನೆಲೆಯೂರಲು ಎಷ್ಟೊಂದು ಅವತಾರದ ಚಳವಳಿಗಳು ನಡೆದು ಎಷ್ಟೊಂದು ಧೀಮಂತ ನಾಯಕರು ಶ್ರಮಿಸಿದ್ದಾರೆ ಎಂಬುದರ ಅರಿವಾಗುತ್ತದೆ. ಶತಮಾನಗಳ ಇತಿಹಾಸದ ನಡುವೆಯೂ ಕೂಡಾ ಫ್ರಾನ್ಸ್ ಹಾಗೂ ಇಂಗ್ಲೆಂಡ್‌ನಲ್ಲಿ ಈಗಲೂ ಕೂಡಾ ಜನತಂತ್ರ ಪದ್ಧತಿ ಆಚಾರದಲ್ಲಿ ಯಶಸ್ವಿಯಾಗಿದೆ ಎಂದು ಹೇಳುವುದು ಕಷ್ಟವೇ. ಆದರೆ, ವಿಚಾರದ ದೃಷ್ಟಿಯಿಂದ ಯಶಸ್ವಿಯಾಗಿದೆ ಎಂಬುದನ್ನು ಒಪ್ಪಬಹುದು. ಸುದೀರ್ಘ ಇತಿಹಾಸವಿರುವ ದೇಶಗಳ ಸ್ಥಿತಿಯೇ ಹೀಗಿರುವಾಗ ಇನ್ನು ಕೇವಲ ೭೮ ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸ ಹೊಂದಿರುವ ಭಾರತದಲ್ಲಿ ಅಪ್ರತಿಮ ಸಾಧನೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಪಾಶ್ಚಾತ್ಯ ರಾಷ್ಟ್ರಗಳ ಜನಸಂಖ್ಯೆಗೆ ಹೋಲಿಸಿದರೆ ಭಾರತದ ಜನಸಂಖ್ಯೆ ಪರ್ವತದಷ್ಟು ಹೆಚ್ಚು. ಪರಿಹಾರಗಳನ್ನು ಎಷ್ಟೇ ಪಟ್ಟು ಸೃಷ್ಟಿಸಿದರೂ ಅದರ ನೂರ್ಪಟ್ಟು ಸಮಸ್ಯೆಗಳು ಸೃಷ್ಟಿಯಾಗುವುದು ವಾಸ್ತವಿಕ ಬೆಳವಣಿಗೆ. ಸಹಜವಾಗಿಯೇ ಇಂತಹ ಸಂದರ್ಭದಲ್ಲಿ ನಿರಾಸೆ ಹಾಗೂ ಹತಾಶೆಗಳು ತಲೆದೋರಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟುವ ಸ್ಥಿತಿ ಬರುವುದು ನಿಜ. ಮುನ್ನೋಟ ಮುಖ್ಯವೇ. ಆದರೆ, ಹಿನ್ನೋಟವಿಲ್ಲದ ಮುನ್ನೋಟ ಕೇವಲ ಚೆಲುವು ನೋಟವಾಗುತ್ತದೆ ಅಷ್ಟೆ. ಹಿನ್ನೋಟದಲ್ಲಿ ಕಂಡಿರುವ ಕಹಿ ಸತ್ಯಗಳ ಆಧಾರದ ಮೇರೆಗೆ ಮುನ್ನೋಟವನ್ನು ರೂಡಿಸಿಕೊಳ್ಳುವುದು ನಮ್ಮೆಲ್ಲರ ಗುರಿಯಾಗಬೇಕು.
ಸರ್ಕಾರ ಎಂಬುದು ಜನತೆಯ ಸೃಷ್ಟಿ. ಕೇಂದ್ರವೂ ಅಷ್ಟೆ ರಾಜ್ಯವೂ ಅಷ್ಟೆ. ಸೃಷ್ಟಿಕರ್ತರಾದ ಪ್ರಜೆಗಳು ಮನಸ್ಸು ಮಾಡಿದರೆ ಬ್ರಹ್ಮಾಂಡವನ್ನೇ ಸೃಷ್ಟಿಸಿ ಅದ್ಭುತ ರಮ್ಯಲೋಕದಲ್ಲಿ ವಿಹರಿಸಬಹುದು. ಆದರೆ, ಪ್ರಜೆಗಳ ಮನಸ್ಸಿಗೆ ಯಾವಾಗಲೂ ಸಂಚಾರಿ ಭಾವ. ದಿಕ್ಕುದೆಸೆ ಸ್ಪಷ್ಟವಿರುವುದಿಲ್ಲ. ಸ್ಪಷ್ಟ ಇದ್ದರೆ ಅದು ಏಕಮುಖ ಬೆಳವಣಿಗೆಯೂ ಆಗಬಹುದು. ಬಹುತ್ವ ವಾದವನ್ನು ಬಯಸುವವರು ಪ್ರಜೆಗಳ ಸಂಚಾರಿ ಭಾವವನ್ನೇ ಗೌರವಿಸಿ ಈ ಸಂಚಾರಿ ಭಾವದಲ್ಲಿ ಸತ್ವ ಮತ್ತು ಸತ್ಯದ ನೆಲೆ ಇರುವಂತೆ ನೋಡಿಕೊಳ್ಳುವುದು ಮಹತ್ತರ ಜವಾಬ್ದಾರಿ. ೭೮ನೆಯ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಕೇವಲ ಉತ್ಸವ, ಸಂಭ್ರಮ ಹಾಗೂ ವೈಭವಗಳಿಗೆ ಮಾತ್ರ ಬೆಲೆ ಕೊಡದೆ ಉತ್ಸವಕ್ಕೆ ಆಧಾರಸ್ತಂಬವಾಗಿ ಉತ್ಸಾಹ ಹಾಗೂ ಸಂಕಲ್ಪವನ್ನು ಸಮಸಮನಾಗಿ ಬೆರೆಸಿಕೊಂಡಾಗ ಮಾತ್ರ ದೇಶ ಒಂದು ನಿರೀಕ್ಷಿತ ಘಟನಾವಳಿಯ ದೇಶವಾಗಿ, ಜನಗಳ ದೃಷ್ಟಿಯಲ್ಲಿ ದೇಶಬಂಧು ಸಮಾಜವಾಗಿ, ಸಂವಿಧಾನಬದ್ಧ ಪರಮಾಧಿಕಾರದ ರಾಷ್ಟçವಾಗಿ ಜಗತ್ತಿನಲ್ಲಿ ವಿರಾಜಿಸುವುದು ಖಂಡಿತ.

Next Article