ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ವೇಳೆ ವಿದ್ಯುತ್ ತಗುಲಿ ಇಬ್ಬರು ಸಾವು
ಪಾಂಡವಪುರ: ತಾಲೂಕಿನ ಹಳೆಬೀಡು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಕ್ಕೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ಧತೆ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಒಬ್ಬ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಅವಘಡದಲ್ಲಿ ಹಳೆಬೀಡು ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ಗಳಾದ ವೆಂಕಟೇಶ್(41) ಮೃತನಾಗಿದ್ದು, ಮತ್ತೋರ್ವ ಲೋಕೇಶ್(38) ಗಂಭೀರವಾಗಿ ಗಾಯಗೊಂಡಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಕಟ್ಟಡವನ್ನು ವಿದ್ಯುತ್ ದೀಪಾಲಂಕಾರ ಮಾಡಲು ಸಿದ್ಧತೆ ನಡೆಸುವ ವೇಳೆ ಕಟ್ಟಡದ ಸಮೀಪವಿದ್ದ 11 ಕೆವಿ ವಿದ್ಯುತ್ ತಂತಿ ತಗುಲಿ ಘಟನೆ ಸಂಭವಿಸಿದೆ. ತಕ್ಷಣ ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಮೃತಪಟ್ಟಿದ್ದಾರೆ. ಮತ್ತೋರ್ವ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.