ಸ್ವಾಮೀಜಿ ಮಾತನಾಡಿದರೆ ರಾಜಕಾರಣ ಆಗುತ್ತಾ.?
ಹಾವೇರಿ: ಮುಖ್ಯಮಂತ್ರಿ ಬದಲಾವಣೆ ಕುರಿತು ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ವಿಚಾರ ಹೇಳಿದ್ದು, ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ. ಅದು ಆಗೋದಾ.? ಹೋಗೋದಾ.? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಮಾತನಾಡಿದರು ಅಂತಾ ಅದಕ್ಕೆ ಯಾಕೆ ಪ್ರತಿಕ್ರಿಯೆ ಕೊಡಬೇಕು. ಒಬ್ಬರು ಸ್ವಾಮೀಜಿ ಮಾತನಾಡಿದರೆ ರಾಜಕಾರಣ ಆಗುತ್ತಾ.? ಸ್ವಾಮೀಜಿಗಳ ಮಾತು ಅಲ್ಲೇ ಕೇಳಿ ಅಲ್ಲೇ ಬಿಡಬೇಕು. ಅದು ಯಾರು ಅವರನ್ನು ಬಳಸಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಸ್ವಾಮೀಜಿಗಳು ರಾಜಕಾರಣ ಮಾತನಾಡಬಾರದು, ರಾಜಕಾರಣ ಮಾತನಾಡಬಾರದು. ರಾಜಕಾರಣಿ ಮಾತನಾಡಿದರೆ ಅದಕ್ಕೊಂದು ಬೆಲೆ ಇದೆ ಎಂದರು.
ಸಿಎಂ ಬದಲಾವಣೆ ವಿಚಾರ ಸರ್ಕಾರ ಪತನದ ಮುನ್ನುಡಿ ಆಗುತ್ತಾ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಮಾತನಾಡಿದರೆ ಅದ್ಯಾಕೆ ಮುನ್ನುಡಿ ಆಗುತ್ತದೆ, ಯಾವ ಕಾರಣಕ್ಕೂ ಅದು ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿಗ್ಗಾವಿ ವಿಧಾನಸಭಾ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಪಕ್ಷ ಯಾರಿಗೆ ಟಿಕೆಟ್ ನೀಡಲು ನಿರ್ಣಯ ಮಾಡ್ತಾರೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಯಾರಿಗೆ ಕೊಡುವಂತೆ ಹೇಳ್ತಾರೋ ಅವರಿಗೆ ಕೊಡುತ್ತೇವೆ. ನಾವೆಂದೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ನಾನಿದ್ದಾಗ ಅದು ಆಗೋದಿಲ್ಲ ಎಂದರು