For the best experience, open
https://m.samyuktakarnataka.in
on your mobile browser.

ಸ್ವಾಮೀಜಿ ಸ್ಪರ್ಧಿಸದಂತೆ ನೋಡಿಕೊಳ್ಳಲು ಬಿಎಸ್‌ವೈಗೆ ಜವಾಬ್ದಾರಿ

04:27 AM Apr 11, 2024 IST | Samyukta Karnataka
ಸ್ವಾಮೀಜಿ ಸ್ಪರ್ಧಿಸದಂತೆ ನೋಡಿಕೊಳ್ಳಲು ಬಿಎಸ್‌ವೈಗೆ ಜವಾಬ್ದಾರಿ

ಸ್ವಾಮೀಜಿ ಅವರ ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದ ಬಿಜೆಪಿ ನಾಯಕರೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿ, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯ ಹಿಂದೆ ಯಡಿಯೂರಪ್ಪ ಅವರ ಕೈವಾಡವಿದೆ. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಯಡಿಯೂರಪ್ಪ ಮೂಲಕವೇ ಸ್ವಾಮೀಜಿ ಅವರನ್ನು ಕಣದಿಂದ ದೂರ ಸರಿಸಲು ಸೂಚಿಸಬೇಕು ಎಂದು ದೂರಿದ್ದಾರೆ ಎನ್ನಲಾಗಿದೆ. ಈ ದೂರು ಹೋದ ಬಳಿಕ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಕರೆ ಮಾಡಿ, ದಿಂಗಾಲೇಶ್ವರ ಸ್ವಾಮೀಜಿ ಮನವೊಲಿಕೆ ನಿಮ್ಮ ಜವಾಬ್ದಾರಿ, ಒಂದು ವೇಳೆ ಸ್ಪರ್ಧೆಗೆ ಇಳಿದರೆ ಲಿಂಗಾಯತ ಮತಗಳು ಹೋಗದಂತೆ ನೋಡಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಯಡಿಯೂರಪ್ಪ ಅವರು ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಲು ಪ್ರಯತ್ನ ಆರಂಭಿಸಿದ್ದಾರೆ. ಅದರ ಭಾಗವಾಗಿಯೇ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ನೀಡುತ್ತಿರುವ ಬೇರೆ ಬೇರೆ ಮಠಾಧೀಶರನ್ನು ಮನವೊಲಿಸಲು ಮುಂದಾಗಿದ್ದಾರೆ. ಪಕ್ಷದ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್ ಅವರನ್ನು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ಭೇಟಿಗೆ ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ವಚನಾನಂದ ಸ್ವಾಮೀಜಿ ಈವರೆಗೆ ಲೆಹರ್‌ಸಿಂಗ್ ಅವರಿಗೆ ಸಮಯಾವಕಾಶ ನೀಡಿಲ್ಲ ಎನ್ನಲಾಗುತ್ತಿದೆ. ಅತ್ತ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗಳ ಮೇಲೂ ಪ್ರಭಾವಿ ಬಿಜೆಪಿ ನಾಯಕರೊಬ್ಬರ ಮೂಲಕ ಒತ್ತಡ ಹೇರಲಾಗುತ್ತಿದೆ. ಅಲ್ಲದೇ ಖುದ್ದು ಯಡಿಯೂರಪ್ಪ ಅವರು ಒಂದೆರಡು ದಿನಗಳಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭೇಟಿಗಾಗಿ ಹುಬ್ಬಳ್ಳಿಗೆ ತೆರಳುವ ನಿರೀಕ್ಷೆ ಇದೆ.