For the best experience, open
https://m.samyuktakarnataka.in
on your mobile browser.

ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡ ಸರ್ಕಾರ

01:55 PM Aug 05, 2024 IST | Samyukta Karnataka
ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡ ಸರ್ಕಾರ

ಮಂಗಳೂರು: ರಾಜ್ಯವನ್ನು ಲೂಟಿ ಹೊಡೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡಿದೆ. ದಿನ ಬೆಳಗಾದರೆ ಸರ್ಕಾರದ ಹೊಸ ಹಗರಣ ಬೆಳಕಿಗೆ ಬರುತ್ತಿದೆ. ದಲಿತರ ಶೋಷಣೆ, ಕಾಂಗ್ರೆಸ್ ಶಾಸಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು; ರಾಜ್ಯ ಕಂಡು ಕೇಳರಿಯದ ಪರಿಸ್ಥಿತಿಗೆ ತಲುಪಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಸಂಬಂಧಿಸಿ ಪ್ರಾಮಾಣಿಕ ಅಧಿಕಾರಿಯೋರ್ವರ ಆತ್ಮಹತ್ಯೆಯಿಂದ ಬುಡಕಟ್ಟು ಸಮುದಾಯದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ೧೮೭ ಕೋಟಿ ರೂ ವನ್ನು ಸರ್ಕಾರವೇ ಲೂಟಿ ಹೊಡೆಯಲು ನಿಂತಿದ್ದ ಪ್ರಕರಣ ಬೆಳಕಿಗೆ ಬಂತು. ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ೨೫ ಸಾವಿರ ಕೋಟಿ ರೂ ಅಧಿಕ ಮೊತ್ತವನ್ನು ನಿಯಮ ಬಾಹಿರವಾಗಿ ಗ್ಯಾರಂಟಿ ಯೋಜನೆ ಹಾಗೂ ಇತರ ಉದ್ದೇಶಗಳಿಗೆ ಬಳಸಿದೆ. ೪,೦೦೦ ಕೋಟಿಯ ಮೈಸೂರು ಮುಡಾ ಸೈಟ್ ಹಗರಣದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿದ್ದು, ಮೈಸೂರಿನಲ್ಲಿ ತಮ್ಮ ಈ ಹಿಂದಿನ ಆಸ್ತಿಯ ಬದಲಿಗೆ, ನಾಲ್ಕೈದು ಪಟ್ಟಿಗೂ ಅಧಿಕ ಮೌಲ್ಯದ ೧೪ ನಿವೇಶನಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ಮಧ್ಯಾಹ್ನದ ಊಟಕ್ಕೆ ಒಂದು ಕೆಜಿ ಅಕ್ಕಿಯನ್ನು ೨೯ ರೂ.ಗೆ ಖರೀದಿಸುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಗೆ ಒಂದು ಕೆಜಿ ಅಕ್ಕಿಯನ್ನು ೩೪ ರೂ.ಗೆ ಖರೀದಿಸುತ್ತಿದೆ. ಇದರಿಂದ ಒಂದೇ ರಾಜ್ಯದಲ್ಲಿ ಎರಡು ಬೆಲೆಯಲ್ಲಿ ಅಕ್ಕಿ ಖರೀದಿಯ ಮಹಾ ಮೋಸ ಬಯಲಾಗಿದೆ ಎಂದು ಅವರು ಪಟ್ಟಿ ಮಾಡಿದರು. ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಭ್ರಷ್ಟಾಚಾರದ ಸರಮಾಲೆ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟಿಲ್ಲ. ಜಿಲ್ಲೆಯ ಪ್ರಮುಖ ವೆನ್ಲಾಕ್ ಸ್ಪತ್ರೆಯಲ್ಲಿ ಬಡ ರೋಗಿಗಳ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ಪ್ರಕರಣ ಸಂಬಂಧಿಸಿ ಕೇವಲ ಕಚೇರಿ ಅಧೀಕ್ಷಕರೊಬ್ಬರನ್ನು ಮಾತ್ರ ಅಮಾನತುಗೊಳಿಸಿ ಹಗರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಅಪೆಕ್ಸ್ ಬ್ಯಾಂಕಿನ ೨ ಸಾವಿರ ಕೋಟಿ ಅವ್ಯವಹಾರ ಆರೋಪಕ್ಕೆ ಹಲವು ಸಾಕ್ಷ್ಯ ಸಿಕ್ಕಿದ್ದು ಕೂಡಲೇ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದ್ದು ಕಾಂಗ್ರೆಸ್ಸಿನ ಮತ್ತೊಬ್ಬ ಸಚಿವರ ಹಗರಣ ಬೆಳಕಿಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಕರಾವಳಿ ಭಾಗದಲ್ಲಿ ಅಪರಿಚಿತ ಮುಸುಕುಧಾರಿ ಆಗಂತುಕರ ಹಾವಳಿ ವಿಪರೀತವಾಗಿ ಜನತೆಯಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿದ್ದು, ಮಧ್ಯರಾತ್ರಿಯಲ್ಲಿ ಮನೆಗಳಿಗೆ, ಫ್ಲ್ಯಾಟುಗಳಿಗೆ ನುಗ್ಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ರಾಜ್ಯದಲ್ಲಿ ಹುಬ್ಬಳ್ಳಿಯ ನೇಹಾ ಕೊಲೆ, ಅಂಜಲಿ ಕೊಲೆ, ಮಡಿಕೇರಿಯಲ್ಲಿ ರುಂಡ ಕತ್ತರಿಸಿ ಕೊಲೆ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಕೊಲೆ, ಹೀಗೆ ಸಾಲು ಸಾಲು ದಾರುಣ ಹತ್ಯೆ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಈಗ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಅದೇ ಅಕ್ಷಮ್ಯ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದ್ದು ಅದಕ್ಕೆ ಯಾದಗಿರಿ ಪಿಎಸ್‌ಐ ಪರಶುರಾಮ ಅನುಮಾನಾಸ್ಪದ ಸಾವು ಮತ್ತೊಂದು ಉದಾಹರಣೆಯಾಗಿದೆ. ಅವರ ಏಳು ತಿಂಗಳ ಗರ್ಭಿಣಿ ಪತ್ನಿ ಮಾಧ್ಯಮಗಳ ಮುಂದೆ ೩೦ ಲಕ್ಷ ಕೊಡು, ಇಲ್ಲವಾದರೆ ಜಾಗ ಖಾಲಿ ಮಾಡು ಎಂದು ನನ್ನ ಪತಿಗೆ ಇಲ್ಲಿನ ಶಾಸಕರು ಹಾಗೂ ಅವರ ಮಗ ಅವಮಾನ ಮಾಡಿದ್ದರಿಂದ ಸಾಕಷ್ಟು ನೊಂದಿದ್ದರು ಎಂದು ಆರೋಪಿಸಿದ್ದಾರೆ.
ಈ ಸರ್ಕಾರದಲ್ಲಿ ಜನರಿಗೆ ಮಾತ್ರವಲ್ಲ ನಿಷ್ಠಾವಂತ ಅಧಿಕಾರಿಗಳಿಗೂ ರಕ್ಷಣೆ ಇಲ್ಲ. ಕಾಂಗ್ರೆಸ್ ಡಿಎನ್‌ಎ ಯಲ್ಲಿಯೇ ಭ್ರಷ್ಟಾಚಾರವಿದೆ ಎನ್ನುವುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಡೀ ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ ಮುಖ್ಯಮಂತ್ರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನ್ಯಾಯವಾಗಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Tags :