For the best experience, open
https://m.samyuktakarnataka.in
on your mobile browser.

ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ

03:43 PM Oct 16, 2024 IST | Samyukta Karnataka
ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ

ಮಂಗಳೂರು: ಹಣಕಾಸಿನ ಹಂಚಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಮೋಸ ಆಗಿದೆ. ಕೇಂದ್ರ ಸರಕಾರದ ಮಾಡಿರುವ ಅನ್ಯಾಯದಿಂದಾಗಿ ಕರ್ನಾಟಕ ಹಣಕಾಸಿನ ತೀವ್ರ ಭಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯಕ್ಕೆ ನ್ಯಾಯದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಲೋಕಸಭಾ ಸದಸ್ಯರೊಂದಿಗೆ , ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧ್ವನಿಗೂಡಿಸಬೇಕು. ಅದರಲ್ಲೂ ಕರ್ನಾಟಕದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಸಕ್ತಿ ವಹಿಸಬೇಕು. ಎಂದು ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಝಾನ ಆಗ್ರಹಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೈಗೊಂಡಿರುವ 'ನಮ್ಮ ತೆರಿಗೆ ನಮ್ಮ ಹಕ್ಕು 'ಎಂಬ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು

ಕೇಂದ್ರದಿಂದ ಉತ್ತರ ಪ್ರದೇಶಕ್ಕೆ 31,962 ಕೋಟಿ ರೂ. ಪಾಲು ನೀಡಲಾಗಿದೆ. ಬಿಹಾರಕ್ಕೆ 17,921 ಕೋಟಿ ರೂ, ಮಧ್ಯಪ್ರದೇಶಕ್ಕೆ 13, 987 ಕೋಟಿ ರೂ, ರಾಜಸ್ಥಾನಕ್ಕೆ 10,737 ಕೋಟಿ ರೂ, ಆದರೆ ಕರ್ನಾಟಕಕ್ಕೆ ಕೇವಲ 6,493 ಕೋಟಿ ರೂ. ನೀಡಲಾಗಿದೆ. ಇದರೊಂದಿಗೆ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದರು. ಆಡಳಿತ ನಡೆಸುವವರು ಯಾವತ್ತೂ ರಾಜಧರ್ಮವನ್ನು ಮರೆಯಬಾರದು. ಕರ್ನಾಟಕದಲ್ಲಿ ರಾಜ್ಯ ಸರಕಾರ ಬಡವರ ಪರ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಲೇವಡಿ ಮಾಡುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಯಾಕೆ ವೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
15ನೇ ಹಣಕಾಸು ಯೋಜನೆ ಜಾರಿ ಬಳಿಕ ಮೋಸ: ಹಿಂದೆ ನಾವು ಕೇಂದ್ರಕ್ಕೆ ನೀಡಿದ ತೆರಿಗೆ ದುಡ್ಡಿನಲ್ಲಿ ನಮಗೆ ಶೇ 4.07 ರಷ್ಟು ತೆರಿಗೆ ದುಡ್ಡು ವಾಪಸ್ ಬರುತ್ತಿತ್ತು. ಆದರೆ ಈಗ ಬರುವುದು ಶೇ 3.64ರಷ್ಟು ದುಡ್ಡು ಮಾತ್ರ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯೋಜನಾ ಆಯೋಗ ರದ್ಧು ಮಾಡಿ ನೀತಿ ಆಯೋಗ ಜಾರಿಗೊಳಿಸುವಾಗ ಎಲ್ಲರೂ ಭಾರೀ ನಿರೀಕ್ಷೆಯಲ್ಲಿದ್ದರು. ವಿಕೇಂದ್ರಿಕರಣ ಆಗುತ್ತದೆ. ಎಲ್ಲ ರಾಜ್ಯಗಳಲ್ಲಿ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಅಂದುಕೊಂಡಿದ್ದರು. ಸಂಪತ್ತನ್ನು ಹಂಚಿ ತಿನ್ನುವ ಯೋಜನೆ ಎಂದು ಜನರು ಭಾವಿಸಿದ್ದರು. ಆದರೆ ಆದದ್ದು ಬೇರೆ. ಅದುವರೆಗಿನ ಹಣಕಾಸಿನ ಆಯೋಗಗಳು 1971ರ ಜನಗಣತಿಯ ಆಧಾರದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿತ್ತು. 15ನೇ ಹಣಕಾಸು ಆಯೋಗ ಜಾರಿಗೆ ಬಂದ ಬಳಿಕ ನಮಗೆ ಮೋಸ ಆಗಿದೆ. 4 ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ. ಅಂದಾಜಿನ ಪ್ರಕಾರ 62,098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಿದೆ. 2020-25ರ ವರೆಗಿನ 15ನೇ ಹಣಕಾಸು ಆಯೋಗದ ಸಹಾಯಧನ ಮತ್ತು ಜಿಎಸ್‌ಟಿ ಪರಿಹಾರ ಸೇರಿದಂತೆ ಒಟ್ಟು 73, 593 ಕೋಟಿ ರೂ ರಾಜ್ಯಕ್ಕೆ ಬಂದಿಲ್ಲ ಎಂದು ವಿವರಿಸಿದರು.
14ನೇ ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇ 4.71 ರಿಂದ ಶೇ 3.74ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲು ಶಿಫಾರಸು ಮಾಡಲಾಗಿತ್ತು. ಆದರೆ ಈ ವರೆಗೂ ಹಣ ಬಂದಿಲ್ಲ ಎಂದು ಮಾಹಿತಿ ನೀಡಿದರು.
ತಂಟೆಕೋರ ಮಕ್ಕಳು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಚುಕ್ಕಾಣಿ ಹಿಡಿದ ದಿನದಿಂದಲೇ ಬಿಜೆಪಿ ಮತ್ತು ಜೆಡಿಎಸ್ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡದೆ ತೊಂದರೆ ಕೊಡುತ್ತಿದೆ. ಒಂದು ರೀತಿಯಲ್ಲಿ ಮನೆಯಲ್ಲಿ ಅಮ್ಮನಿಗೆ ಅಡುಗೆ ಮಾಡಲು ಬಿಡದೆ ಕಾಡುವ ತಂಟೆಕೋರ ಮಕ್ಕಳಂತೆ ಕಾಡುತ್ತಿದ್ದಾರೆ, ದುಷ್ಟಶಕ್ತಿಗಳನ್ನು ಮೈಗೂಡಿಸಿದಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು.
*ಕೇಂದ್ರ ಪುರಸ್ಕೃತ 65 ಯೋಜನೆಗಳಿಗೆ ಹಣ ಬಂದಿಲ್ಲ: ನೆರೆಪರಿಹಾರಕ್ಕೆ ಸಮೀಕ್ಷೆ ನಡೆಸಿ ಸಲ್ಲಿಕೆಯಾದ ವರದಿಯಂತೆ 7,476 ಕೋಟಿ ನೀಡಬೇಕಿತ್ತು. ಆದರೆ ಕೊಟ್ಟದ್ದು 918 ಕೋಟಿ ರೂ., ಬೆಂಗಳೂರಿನ ರಿಂಗ್ ರಸ್ತೆ ಗೆ 3 ಸಾವಿರ ಕೋಟಿ ರೂ, ಜಲಮೂಲಗಳ ಅಭಿವೃದಿ ್ಧಮತ್ತು ಕೆರೆಗಳ ಸಂರಕ್ಷಣೆಗೆ 3 ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರಕಾರ ಈ ವಿಚಾರದಲ್ಲಿ ಏನನ್ನು ನೀಡಿಲ್ಲ. 'ಬೇಟಿ ಬಚಾವೋ , ಬೇಟಿ ಪಡಾವೋ' ಯೋಜನೆಯಲ್ಲಿ ಒಂದು ರೂಪಾಯಿ ಕೂಡ ರಾಜ್ಯಕ್ಕೆ ದುಡ್ಡು ಬಂದಿಲ್ಲ. ಈ ಯೋಜನೆಯ ಶೇ 85ರಷ್ಟು ದುಡ್ಡು ಜಾಹೀರಾತಿಗೆ ಬಳಕೆಯಾಗಿದೆ ಎಂಬ ವರದಿಯನ್ನು ಸದನದ ಸಮಿತಿಯ ನೀಡಿದೆ. ಇದು ಎಂತಹ ವಿಪರ್ಯಾಸ. ಕೇಂದ್ರ ಪುರಸ್ಕೃತ 65 ಯೋಜನೆಗಳಿಗೆ ಕೇಂದ್ರ ಸರಕಾರ ಹಣ ನೀಡಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಕವಿತಾ ವಾಸು, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ, ಮಹಿಳಾ ಕಾಂಗ್ರೆಸ್‌ನ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷೆ ರೂಪಾ ಚೇತನ್ ಪೂಜಾರಿ ಮತ್ತು ದಕ್ಷಿಣ ಬ್ಲಾಕ್‌ನ ಅಧ್ಯಕ್ಷೆ ಚಂದ್ರಕಲಾ ಜೋಗಿ, ಉಪಸ್ಥಿತರಿದ್ದರು.