ಹಣ, ಅಧಿಕಾರ ಮೇಳೈಸಿದೊಡೆ ಇಂಥ ಹನನವೇ?
ಸಂಪತ್ತು, ಅಂತಸ್ತು, ದರ್ಪ, ದುರಹಂಕಾರ, ದುರ್ವ್ಯಸನ ಇವುಗಳೊಂದಿಗೆ ಅಧಿಕಾರವೂ ದೊರೆತರೆ ಏನಾದೀತು?
ಪ್ರಜ್ವಲ್ ರೇವಣ್ಣ...!
ತಾತ, ಅಪ್ಪ ಗಳಿಸಿದ ಸಂಪತ್ತು ಬಳುವಳಿಯಾಗಿ ಬಂದ ಅಂತಸ್ತು, ಅದು ದುರಹಂಕಾರ, ದುರ್ವ್ಯಸನ, ಮೈಸೊಕ್ಕು ಬೆಳೆಸಿತು. ಮನುಷ್ಯತ್ವ ನೈತಿಕತೆ, ಎಲ್ಲವೂ ಕಳೆದು ಹೋದವು. ಹೇರಳವಾದ ಅವಕಾಶವಿರುವಾಗಲೇ ಅಧಿಕಾರವೂ ಲಭಿಸಿತು. ಹೀಗಿದ್ದಾಗ ಮನುಷ್ಯ ಸಂಬಂಧ, ಸಮಾಜ ಮತ್ತು ನೈತಿಕತೆಗೆ ಎಲ್ಲಿದೆ ಸ್ಥಾನ?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ನೀಲಿ ಚಿತ್ರಗಳು ಈಗ ಸುದ್ದಿಯಲ್ಲಿವೆ. ಈ ಸಂಬಂಧ ಇದರ ನೈಜತೆ ಹಾಗೂ ಅಧಿಕಾರ ದುರ್ಬಳಕೆಯ ಆರೋಪಗಳ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ. ತನಿಖೆಯೇನೋ ಆರಂಭವಾಗಿದ್ದರೆ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ.
ಈ ನೀಲಿ ಚಿತ್ರಗಳು ಅವರದ್ದೇ, ಅವರೇ ನೂರಾರು ಹೆಣ್ಣು ಮಕ್ಕಳನ್ನು ತನ್ನ ಅಧಿಕಾರ, ಅಂತಸ್ತು, ಹಣದ ಥೈಲಿಯಿಂದ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಈಗ ಬಂದಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆಯಾಗಬೇಕಾಗಿದೆ. ಆದರೆ ಈವರೆಗೆ ಅವರ ಅಪ್ಪನಾಗಲೀ, ಚಿಕ್ಕಪ್ಪನಾಗಲೀ, ಪ್ರಜ್ವಲ್ ಹೀಗೆ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿಲ್ಲ. ಬದಲು ಎಂದೋ ಆಗಿರುವುದು ಈಗ ಚುನಾವಣೆಯ ವೇಳೆ ಬಯಲಾಗಿದೆ. ಬಯಲು ಮಾಡಿದರ‍್ಯಾರು? ಲಕ್ಷಾಂತರ ಪೆನ್‌ಡ್ರೈವ್‌ಗಳನ್ನು ಮತದಾರರಿಗೆ ತಲುಪಿಸಿದರ‍್ಯಾರು? ಇದು ರಾಜಕೀಯ ಪ್ರೇರಿತ. ಇದರ ಬಗ್ಗೆ ತನಿಖೆಯಾಗಲಿ, ಸಾಬೀತಾದರೆ ಗಲ್ಲಿಗೇರಿಸಲಿ ಎನ್ನುವ ಮಾತನ್ನು ಹೇಳುತ್ತಿದ್ದಾರೆ.
ಎಸ್‌ಐಟಿ ಈ ರಾಜಕೀಯ ಕೆಸರಾಟ, ಆರೋಪ, ಪ್ರತ್ಯಾರೋಪಗಳನ್ನು ಬದಿಗಿಟ್ಟು ಅಧಿಕಾರ ದುರುಪಯೋಗಿಸಿಕೊಂಡು ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದರೇ, ಅದನ್ನು ಅವರೇ ಚಿತ್ರೀಕರಿಸಿದ್ದರೆ, ಈ ಅವಾಂತರಕ್ಕೆ ಕಾರಣ, ಅವಕಾಶ ಮತ್ತು ಮತದಾರರ ಮುಂದೆ ಮರೆಮಾಚಿದರೇ ಎನ್ನುವುದನ್ನು ಪ್ರಥಮ ತನಿಖೆ ನಡೆಸಬೇಕಿದೆ.
ರಾಜಕಾರಣವೇ ಹೀಗೆ. ತಮಗನುಕೂಲವಾಗುತ್ತದೆ ಎಂದರೆ ಎಲ್ಲವನ್ನೂ ಯಾವ ಕರುಣೆ ಇಲ್ಲದೇ ಬಳಸಿಕೊಳ್ಳುವುದು. ಈಗ ಆಗಿರುವುದೂ ಇಷ್ಟೇ. ಪ್ರಜ್ವಲ್ ರೇವಣ್ಣ ಅವರಿಗೆ ಹುಟ್ಟಿದಾಗಲೇ ಅಜ್ಜ, ಅಪ್ಪ, ಚಿಕ್ಕಪ್ಪನ ಅಧಿಕಾರದ ತೊಟ್ಟಿಲು ತೂಗಿಸಿಕೊಂಡವರು. ಹೇರಳ ಸಂಪತ್ತು, ಆಸ್ತಿ-ಪಾಸ್ತಿ. ಬೆಳೆದದ್ದು ಕೂಡ ಸಂಗತಿ- ಸಹವಾಸಗಳ ಸಂಬಂಧಗಳೊಂದಿಗೆ. ಇನ್ನೇನು ಬೇಕು? ಇದರೊಟ್ಟಿಗೆ ಸಂಸತ್ ಸದಸ್ಯನಾದಾಗ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ಚಲಾಯಿಸಲು, ಕೆಟ್ಟದ್ದೋ ಒಳ್ಳೆಯದೋ, ಅಧಿಕಾರ ದೊರೆಯಿತು.
ಇಷ್ಟು ಸಾಕಲ್ಲವೇ? ಜನರ ಕಷ್ಟ ಕಾಣದ, ಎಂದೂ ಜನರೊಂದಿಗೆ ಬೆಳೆಯದ, ಅಪ್ಪ- ತಾತಂದಿರ ಕುಟುಂಬದ ಅಧಿಕಾರ, ದರ್ಪ ಕಂಡುಂಡು ತಾವು ಏನೂ ಅಲ್ಲದಿದ್ದರೂ ಚಲಾವಣೆ ಮಾಡಿದ್ದು... ಇವೆಲ್ಲವನ್ನೂ `ಮೈ'ಗೆ ಹಚ್ಚಿಕೊಂಡು ಯೌವನದ ಸೊಕ್ಕಿಗೆ ದೇಹ ತೆರೆದುಕೊಂಡಿತೇ?
ಆಗಿದ್ದು ಇಷ್ಟೇ ಅನಿಸುತ್ತದೆ. ದೇವೇಗೌಡರು ಮಹಿಳೆಯರು ಮತ್ತು ನೈತಿಕತೆಯಲ್ಲಿ, ಸ್ವಜಾತಿ ಪ್ರೇಮ ಬದಿಗಿಟ್ಟು, ನಿಜಕ್ಕೂ ಆದರ್ಶಪ್ರಾಯರೇ. ಇಡೀ ಜೀವನ ಕಟ್ಟಿಕೊಂಡು ಬಂದ ಬಗೆ, ಆಡಳಿತ ಅನುಭವ, ಹೋರಾಟ, ನೆಲ-ಜಲದ ರಕ್ಷಣೆಗೆ ಅವರ ಪಣ ಓಹ್... ನಿಜಕ್ಕೂ ಅವರು ನಾಡು ಕಂಡ ಮಣ್ಣಿನ ಮಗನೇ.
ದೋಷ ಎಂದರೆ ಮಕ್ಕಳಿಗೂ ಅಧಿಕಾರ ಹಂಚಿದ್ದು. ಮೊಮ್ಮಕ್ಕಳಿಗೂ, ಸೊಸೆಯಂದಿರಿಗೂ ಸಂಸತ್ತು, ವಿಧಾನ ಸಭೆ, ಜಿಲ್ಲಾಡಳಿತ ಸ್ಥಾನಮಾನ ಎಲ್ಲವನ್ನೂ ದಯಪಾಲಿಸಿದ್ದು. ಅಂತಹ ಆಡಳಿತ ಅನುಭವಸ್ಥ, ದೇಶದ ಪ್ರಧಾನಿ ಗದ್ದುಗೆಗೆ ಏರಿದವರ ಮೊಮ್ಮಗ ಹೀಗೆ ಮಾಡಿದರಾ?
ಬಹುಶಃ ಅವರಷ್ಟು ಹಳಹಳಿಸಿ ದುಃಖಿಸಿದವರು ಇನ್ಯಾರೂ ಇರಲಿಕ್ಕಿಲ್ಲ. ಇದೇ ಮಾತನ್ನು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಈ ಕಥೆಯನ್ನು ದೇವೇಗೌಡರ ರೀತಿ ನೋಡಿದ್ದಾರೆ ಎಂದು ಊಹಿಸಲು ಸಾಧ್ಯವಿಲ್ಲ.
ದೇವೇಗೌಡರು ಇಡೀ ಕುಟುಂಬಕ್ಕೆ ಹಾಗೂ ಅವರಿಗಾಗಿ ಗಳಿಸಿದ್ದೆಲ್ಲವೂ ಸ್ವಯಾರ್ಜಿತ. ಅಧಿಕಾರ, ಅಂತಸ್ತು, ಆಸ್ತಿಪಾಸ್ತಿ, ಎಲ್ಲಕ್ಕೂ ಹೆಚ್ಚಾಗಿ ನೈತಿಕ- ದಿಟ್ಟ ಸಮಯೋಚಿತ ರಾಜಕಾರಣ. ಸೇರಿದಂತೆ. ಇದನ್ನು ಮಕ್ಕಳು, ಮೊಮ್ಮಕ್ಕಳು ಪಾಲಿಸಿದ್ದಾರೆಂದರೆ ಪೂರ್ಣ ಸರಿಯೂ ಅಲ್ಲ. ತಪ್ಪಾದೀತು.
ಇಷ್ಟಕ್ಕೂ ಏಳುವ ಪ್ರಶ್ನೆ ಎಂದರೆ, ತಂದೆ- ತಾಯಿ ಮತ್ತು ಕುಟುಂಬಸ್ಥರಿಗೆ ಪ್ರಜ್ವಲ್ ರೇವಣ್ಣ ಅವರ ಈ ಸಂಗತಿಗಳು ಗೊತ್ತಿಲ್ಲವೇ? ಗೊತ್ತಿದ್ದರೂ ನಿಯಂತ್ರಿಸಿಲ್ಲವೇಕೆ? ದೆಹಲಿಯಿಂದ ಹೊಳೆನರಸೀಪುರದವರೆಗೆ ಹಬ್ಬಿದ್ದ, ಆರು ತಿಂಗಳ ಹಿಂದೆಯೇ ಅಶ್ಲೀಲ ಚಿತ್ರಗಳು ಹೊರಬರಬಾರದೆಂದು ನ್ಯಾಯಾಲಯದ ಮೊರೆ ಹೋಗಿದ್ದಾಗಲೂ ಮಗ- ಮೊಮ್ಮಗನಿಗೆ ಕರೆದು ನಿಯಂತ್ರಿಸಿಲ್ಲವೇ? ಎಂಬ ಜನಸಾಮಾನ್ಯರ ಪ್ರಶ್ನೆಗಳಿಗೆ ಈಗ ಇಡೀ ಕುಟುಂಬದ ಅಧಿಕಾರಸ್ಥರೇ ಉತ್ತರಿಸಬೇಕಿದೆ.
ಹಣ, ಅಂತಸ್ತು ಮತ್ತು ಅಧಿಕಾರ ಮೂರೂ ಮೇಳೈಸಿದಾಗ ತಾನು ಏನು ಮಾಡಿದರೂ ನಡೆದೀತು ಎನ್ನುವ ದುಷ್ಟತನ ಬೆಳೆಸಿಕೊಂಡು ಇಂತಹ ಹಗರಣಗಳಲ್ಲಿ ಸಿಲುಕಿಕೊಂಡ ಅನೇಕ ಉದಾಹರಣೆಗಳು ಈ ದೇಶದಲ್ಲಿವೆ. ವಿದೇಶಗಳಲ್ಲಿಯೂ ಇವೆ.
ಇದಕ್ಕೆ ಪಕ್ಷ, ಪಂಗಡ, ಜಾತಿ ತಗಲದು. ಎಲ್ಲ ಪಕ್ಷಗಳಲ್ಲಿಯೂ, ಎಲ್ಲ ಜಾತಿಗಳಲ್ಲಿಯೂ ಇಂಥವರಿದ್ದಾರೆ. ಸಿಕ್ಕಿಕೊಂಡಿದ್ದಾರೆ.
ಸಂಘ ಪರಿವಾರದ ಸಿದ್ಧಾಂತ- ನೈತಿಕತೆಯ ಮುಂದೆ ಇನ್ನೇನಿದೆ? ಇದರ ನೈತಿಕತೆಯನ್ನು ಪ್ರಶ್ನಿಸಿದವರನ್ನೇ ಕೆಂಗಣ್ಣಿನಿಂದ ನೋಡುವುದು ಸಹಜ. ಸಂಘ ಪರಿವಾರ ಎಂದರೆ ಸಂಸ್ಕೃತಿ, ನೈತಿಕತೆಯ ರಕ್ಷಕ ಎನ್ನುವ ಭಾವನೆಯಿದೆ.
ಈ ಹಿಂದೆ ಸಂಸದ ಸಂಜೀವ್ ಜೋಶಿ ಲೈಂಗಿಕ ಹಗರಣವಾದಾಗ ಎಲ್ಲರೂ ಹುಬ್ಬೇರಿಸಿದ್ದರು. ತಾನು ಹಾಗಲ್ಲ ಎಂದು ಜೋಶಿ ಹೇಳಿದ್ದರೂ ಜನ ನಂಬುವ ಸ್ಥಿತಿ ಇರಲಿಲ್ಲ. ವಯೋವೃದ್ಧ ಎನ್.ಡಿ.ತಿವಾರಿ ಪ್ರಕರಣ ಎಲ್ಲರಿಗೂ ಗೊತ್ತು. ಮುಖ್ಯಮಂತ್ರಿ, ರಾಜ್ಯಪಾಲ ಎಲ್ಲ ಅಧಿಕಾರ ಅನುಭವಿಸಿದ ತಿವಾರಿ ಅವರೇ ನನ್ನ ಅಪ್ಪ ಎಂದು ಅವರ ಮನೆ ಕೆಲಸದವಳ ಮಗನೇ ಚಾಲೆಂಜ್ ಹಾಕಿ, ಡಿಎನ್‌ಎ ಟೆಸ್ಟ್ ಮಾಡಿಸಿದ ಉದಾಹರಣೆ ಇದೆ. ಅದೂ ಕೂಡ ಹಣ, ಅಧಿಕಾರ, ಅಂತಸ್ತುಗಳ ಪ್ರಭಾವದಿಂದ ಎಲ್ಲವನ್ನೂ ಮುಚ್ಚಿ ಹಾಕಿಕೊಳ್ಳಬಹುದೆಂಬ ಧಾಷ್ಪರ್ಯತನದ ಪ್ರಕರಣವೇ ಆಗಿತ್ತು.
ಕರ್ನಾಟಕದಲ್ಲಿಯೇ ಹತ್ತಾರು ಪ್ರಕರಣಗಳು ನಡೆದಿವೆ. ಆರ್.ಡಿ.ಕಿತ್ತೂರ, ಹರತಾಳು ಹಾಲಪ್ಪ ಪ್ರಕರಣ, ರೇಣುಕಾಚಾರ್ಯ, ರಾಮದಾಸ, ಎಚ್.ವೈ.ಮೇಟಿ, ರಮೇಶ ಜಾರಕಿಹೊಳಿ ಸೇರಿದಂತೆ ಹಲವು ಪ್ರಕರಣಗಳು ಇನ್ನೂ ಜನಮಾನಸದಲ್ಲಿ ಹಸಿರಾಗಿವೆ. ಆಗಾಗ ಪ್ರತಿಪಕ್ಷಗಳು ಅವುಗಳನ್ನು ಕೆದಕುತ್ತಲೇ ಇರುತ್ತವೆ. ವಿರೋಧಿಗಳ ವಾಗ್ಬಾಣಕ್ಕೆ ಇವು ಬಳಕೆಯಾಗುತ್ತಿರುತ್ತವೆ.
ಬಾಂಬೇ ಬಾಯ್ಸ್ ಎಂದೇ ಪ್ರಸಿದ್ಧವಾಗಿದ್ದ, ಸಮ್ಮಿಶ್ರ ಸರ್ಕಾರ ಕೆಡವಿ, ಬಿಜೆಪಿಯೊಂದಿಗೆ ಸೇರಿಕೊಂಡ ಸುಧಾಕರ, ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ ಮೊದಲಾದ ಹತ್ತಕ್ಕೂ ಹೆಚ್ಚು ಶಾಸಕರು, ತಮ್ಮ ಖಾಸಗಿ ಬದುಕು ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಬಯಲು ಮಾಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇನ್ನೂ ಮಾಧ್ಯಮಗಳ ಮೇಲೆ ಇದು ಜಾರಿಯಲ್ಲಿವೆ.
ಬೆಂಕಿ ಇಲ್ಲದೇ ಹೊಗೆಯಾಡದು ಅಲ್ಲವೇ? ಈ ಆಪಾದನೆಗಳಿಂದ ಸಚ್ಚಾರಿತ್ಯವಂತರಾಗಿ, ಆಪಾದನೆ-ರಹಿತರಾಗಿ ಹೊರಬರುವ ಸೀತಾರಾಮಚಂದ್ರರೂ ಈಗಿಲ್ಲ. ಮಾಜಿ ಮುಖ್ಯಮಂತ್ರಿಗಳಿಬ್ಬರ ಮೇಲೂ ಇನ್ನೂ ಆರೋಪಗಳಿವೆ.
ಅಧಿಕಾರಸ್ಥರ ಸ್ವೇಚ್ಛಾಚಾರಕ್ಕೆ ಇವಷ್ಟೇ ಉದಾಹರಣೆಗಳಿಲ್ಲ. ಸಾಕಷ್ಟಿವೆ. ಶಾಸಕಿಯನ್ನು, ಮಂತ್ರಿಯನ್ನು, ಅಧಿಕಾರಿಣಿಯನ್ನು, ಅಪಹರಿಸಿ ಅಥವಾ ಇನ್ನೇನೇನೋ ಅಧಿಕಾರ ದುರುಪಯೋಗಪಡಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ.
ನೀತಿವಂತ, ಮೌಲ್ಯಯುತ, ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಮಾತು ಬೂಟಾಟಿಕೆ ಅಷ್ಟೇ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳು, ಚಿತ್ರಗಳು ಇನ್ನಷ್ಟೇ ತನಿಖೆಯಾಗಬೇಕಿದೆ. ಇವು ಅವರದ್ದೇ, ಅಥವಾ ಒಟ್ಟಾರೆ ಘಟನಾವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ? ಅಥವಾ ದುರುದ್ದೇಶಪೂರಿತವೋ ಎನ್ನುವುದು ಬಯಲಿಗೆ ಬರಬೇಕಾಗಿದೆ. ಆದರೆ ಈಗ ಕೆಸರು ಎರಚಾಟ ಆರಂಭವಾಗಿರುವುದು, ಅವು ಹೇಗೆ ಬಯಲಾದವು? ಮತದಾನಕ್ಕೆ ಪೂರ್ವ ಏಕೆ? ಇದು ಮೊದಲೇ ಗೊತ್ತಿದ್ದೂ ನೈತಿಕತೆಯ, ನಾರಿಶಕ್ತಿಯ ಬಗ್ಗೆ ಗೌರವ ಕೊಡುವ ಮುತ್ಸದ್ದಿಗಳು ಹೇಗೆ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟರು? ಯಾಕೆ ಕೊಟ್ಟರು ಎನ್ನುವ ಮಾತುಗಳೇ ಜೋರಾಗಿವೆ.
ಪ್ರತಿಸ್ಪರ್ಧಿಯ ಅವಗುಣಗಳನ್ನು ಸಕಾಲಕ್ಕೆ ಬಳಸಿಕೊಳ್ಳುವುದು ಪ್ರತಿಪಕ್ಷದವರಿಗೆ ಸಹಜ. ಹಾಗೇ ಇದು ಗೊತ್ತಿದ್ದೂ, ಈ ಹಿಂದೆ ಹಲವು ಸಾರೆ ಇದನ್ನು ಸ್ವತಃ ಬಳಕೆ ಮಾಡಿಕೊಂಡಿರುವ ಸಂಗತಿ ಇದ್ದಾಗಲೂ ನಿಯಂತ್ರಿಸಿಲ್ಲವೇಕೆ? ಟಿಕೆಟ್ ನೀಡಿದರೇಕೆ? ಈಗ ಸಮರ್ಥಿಸಿಕೊಳ್ಳುವುದೇಕೆ? ಲಕ್ಷಾಂತರ ಪೆನ್‌ಡ್ರೈವ್‌ಗಳನ್ನು ಜನರಿಗೆ ಹಂಚಿದವರ ಮೇಲೆ ಮೊದಲು ಕ್ರಮವಾಗಲಿ ಎಂಬ ಒತ್ತಾಯ ಜೋರಾಗಿದೆ. ಆಗಲೇ ಬೇಕು. ನಿಜ. ಆದರೆ ಪ್ರಮುಖವಾಗಿ ಇಂತಹ ಅಧಿಕಾರ ದುರ್ಬಳಕೆ ಮತ್ತು ಅನೈತಿಕ ವ್ಯವಹಾರಗಳ ಕುರಿತು ಆದ್ಯತೆ ಮೇಲೆ ತನಿಖೆಯಾಗಲೇಬೇಕಲ್ಲವೇ?
ಇದರಲ್ಲೊಂದು ಸೂಕ್ಷ್ಮತೆ ಇದೆ. ಲಕ್ಷಾಂತರ ಪೆನ್‌ಡ್ರೈವ್‌ಗಳನ್ನು ಮತದಾರರಿಗೆ, ಜನರಿಗೆ ಈಗ ಪ್ರಜ್ವಲರದ್ದು ಎನ್ನಲಾದ ಚಿತ್ರಗಳು ಈಗ ಬೆಳಕಿಗೆ ಬಂದಿವೆ. ನೋಡಿದ್ದಾರೆ. ಇಷ್ಟಿದ್ದಾಗ್ಯೂ ಅಲ್ಲಿರುವ ಹೆಣ್ಣು ಮಕ್ಕಳ, ತಾಯಂದಿರ ಸ್ಥಿತಿ ಏನು? ಅವರ ಮರ್ಯಾದೆ, ಬದುಕಿನ ಪ್ರಶ್ನೆ. ಈ ಸೂಕ್ಷ್ಮತೆಯನ್ನು ಗಮನಿಸಿದರೆ ಬಹುಶಃ ತೀವ್ರ ಆಘಾತ, ಆ ಸಂತ್ರಸ್ತರ ಮೇಲಾಗುತ್ತದೆ.
ಒಮ್ಮೆ ಅವರನ್ನು ಬಳಕೆ ಮಾಡಿಕೊಂಡಿದ್ದರೆ, ದೌರ್ಜನ್ಯ ಎಸಗಿದ್ದರೆ ಅಂತಹ ಪಾಪ, ದುಷ್ಕೃತ್ಯ ಇನ್ನೊಂದಿಲ್ಲ. ಹಾಗೇ, ಆಗಿಲ್ಲದಿದ್ದರೆ ಅವರ ಮರ್ಯಾದೆ, ಮಾನ ಕಳೆಯುವುದು ದುಷ್ಕೃತ್ಯವೇ. ಈ ಸಂತ್ರಸ್ತರ ಬದುಕಿಗೆ ಈಗ ರಕ್ಷಣೆ ಕೊಡುವರ‍್ಯಾರು?
ದುರಂತ ಎಂದರೆ ಪ್ರಭಾವಿ, ಅಧಿಕಾರಸ್ಥ ಎಲ್ಲವನ್ನೂ ದಕ್ಕಿಸಿಕೊಂಡು ಮತ್ತೆ ಮೆರೆದಾನು. ಆದರೆ ಎಲ್ಲ ದೌರ್ಜನ್ಯಕ್ಕೆ ಒಳಗಾಗಿ ನಂತರ ಬಟಾಬಯಲಾಗಿಸಿ ಕೊಂಡ ಸಂತ್ರಸ್ತರ ಭವಿಷ್ಯ, ಬದುಕು, ಸಮಾಜದಲ್ಲಿಯ ಅವರ ಸ್ಥಿತಿ ಬಹುಶಃ ಊಹಿಸಲಸಾಧ್ಯ. ಅದೇ ಅಂತಸ್ತು, ಹಣ, ದರ್ಪ, ಅಧಿಕಾರಗಳೆಲ್ಲ ಮೇಳೈಸಿದರೆ ಸಮಾಜ ಕಂಟಕತನಕ್ಕೆ ಕಾರಣವಾಗುತ್ತವೆ ಅಲ್ಲವೇ? ತನಿಖೆಯಾಗಲಿ ಬಿಡಿ. ತಕ್ಷಣಕ್ಕೆ ಆಗಬೇಕಾಗಿರುವುದು ಮಹಿಳೆಯರ ಗೌಪ್ಯ ಕಾಪಾಡಲು ಏನಾದರೊಂದು ಉಪಕ್ರಮವಾಗಲಿ. ಇಷ್ಟರ ಮಟ್ಟಿಗಾದರೂ ಅವರ ಗೌರವ ಕಾಪಾಡಲಿ.