ಹಣ ಕೇಳಿದ್ದಕ್ಕೆ ಕಚ್ಚಿ ಮೂಗನ್ನೇ ಕತ್ತರಿಸಿದ ಭೂಪ
ಬೀದರ್ (ಜಿಲ್ಲೆ) ಹುಮ್ನಾಬಾದ್: ತನಗೆ ಬರಬೇಕಾದ ಹಣವನ್ನು ಮರಳಿಸುವಂತೆ ಕೇಳಿದ್ದಕ್ಕೆ ಭೂಪನೊಬ್ಬ ಹಲ್ಲಿನಿಂದ ಕಚ್ಚಿ ಮೂಗನ್ನೇ ಕತ್ತರಿಸಿ ಹಾಕಿದ ಪೈಶಾಚಿಕ ಘಟನೆ ಪಟ್ಡಣದ ಹತ್ತಿ ಓಣಿಯಲ್ಲಿ ಮಂಗಳವಾರ ರಾತ್ರಿ 9:30ಕ್ಕೆ ಸಂಭವಿಸಿದೆ.
ಹಲ್ಲಿನಿಂದ ಕಚ್ಚಿ ಮೂಗು ಕತ್ತರಿಸಿದ ವ್ಯಕ್ತಿಯನ್ನು ಸತೀಶ ಬದವರಾಜ ತಾಂಡೂರ ಎಂದು ತಿಳುದುಬಂದಿದೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ವಿರೇಶ ಅನೀಲ ಹತ್ತಿ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ಗಾಯಾಳು ವಿರೇಶ ಅನೀಲ ಹತ್ತಿ ಅವರು ತುರ್ತು ಸಂದರ್ಭದಲ್ಲಿ ಸತೀಶ ಬಸವರಾಜ ತಾಂಡೂರಗೆ ₹ 10ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಆ ಪೈಕಿ ₹ 7ಸಾವಿರ ಮರಳಿಸಿದ್ದ. ಬಾಕಿ ₹3ಸಾವಿರ ಕೊಡುವಂತೆ ಆಗಾಗ ಕೇಳಿದರೂ ಗಂಭೀರ ಪರಿಗಣಿಸದೇ ಹಾರಿಕೆ ಮಾತನಾಡುತಿದ್ದ ಎನ್ನಲಾಗಿದೆ. ಹೀಗಿರುವಾಗ ಮಂಗಳವಾರ ರಾತ್ರಿ ಹಣದ ಅವಶ್ಯಕತೆ ಇರುವ ಕಾರಣ ಮರಳಿಸುವಂತೆ ಕೇಳಿದ್ದಕ್ಕೆ ಸತೀಶ ಈ ಕೃತ್ಯ ಗೈದಿದ್ದಾನೆ ಎಂದು ತಿಳುದುಬಂದಿದೆ. ಗಾಯಾಳುವಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕಲ್ಬುರ್ಗಿ ಕಳಿಸಲಾಗಿತ್ತು. ಇಂದು ಬೆಳಿಗ್ಗೆ ಹೈದ್ರಾಬಾದ್‌ಗೆ ಕಳಿಸಲಾಗಿದೆ. ಘಟನೆ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಎಲ್.ಸಿ ಭೇಟಿ: ಸ್ಥಳಕ್ಕೆ ಭೇಟಿನೀಡಿದ ಎಂ.ಎಲ್.ಸಿ ಭೀಮರಾವ ಪಾಟೀಲ ಗಾಯಾಳುವನ್ನು ಚಿಕಿತ್ಸೆಗಾಗಿ ಕಲ್ಬುರ್ಗಿ ಕಳಿಸಿದ್ದಾರೆ. ಚಿಕಿತ್ಸೆಗೆ ತಗಲುವ ವೆಚ್ಚ ಬಸವರಾಜ ಪಾಟೀಲ ಟ್ರಸ್ಟ್ ವತಿಯಿಂದ ಭರಿಸುವುದಾಗಿ ಅಭಯ ನೀಡಿದ್ದಾರೆ. ಆದರೇ ತಪ್ಪಿತಸ್ತ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂಯುಕ್ತ ಕರ್ನಾಟಕ ಮೂಲಕ ಪೊಲೀಸರಿಗೆ ಸೂಚಿಸಿದರು.