ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹತಾಶ ಮನದ ಮಟಾಷ್ ವರ್ತನೆ

02:00 AM Sep 01, 2024 IST | Samyukta Karnataka

ಎಂದಿನಂತೆ ದಿನಪತ್ರಿಕೆಯನ್ನು ತಿರುವಿ ಹಾಕುತ್ತಿದ್ದಾಗ ಕೆಲವು ಸುದ್ದಿಗಳು ಮನಸ್ಸನ್ನು ಕಲುಕಿದವು. ಮುಖಪುಟದಲ್ಲೇ ಬಿಬಿಎ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನದ ಸುದ್ದಿ ಪ್ರಕಟವಾಗಿತ್ತು. ೨ನೇ ಪುಟದಲ್ಲಿ ಕಾರಿನ ಗಾಜು ಒಡೆದು ಡ್ಯಾಶ್ ಬೋರ್ಡಿನಲ್ಲಿದ್ದ ೩ ಲಕ್ಷ ರೂ. ದೋಚಿದ ಸುದ್ದಿಯಿತ್ತು. ಅದೇ ಪುಟದಲ್ಲಿ ಸಾವಿನ ಸೂತಕವಿದ್ದ ಮನೆಯಲ್ಲೇ ಕಳವು ಮಾಡಿದ ಖದೀಮರ ಕರಾಮತ್ತು ಇತ್ತು. ೫ನೇ ಪುಟದಲ್ಲಿ ೬ ವರ್ಷದ ಮಗುವಿನ ಮೇಲೆ ಅತ್ಯಾಚಾರ, ತಾಯಿ-ಮಗನನ್ನು ಅಪಹರಿಸಿ, ದೌರ್ಜನ್ಯ ನಡೆಸಿದ ದುರುಳರ ಗ್ಯಾಂಗ್‌ನ ವಾರ್ತೆ, ಖೊಟ್ಟಿ ದಾಖಲೆ ಸೃಷ್ಟಿಸಿ ವಾಹನ ನೋಂದಣಿ ಮಾಡಿದ ಮೋಸದ ಸುದ್ಧಿ, ಕಾನೂನು ಉಲ್ಲಂಘಿಸಿದ ಮೈಕ್ರೋ ಫೈನಾನ್ಸ್ ಕಂಪನಿಗಳ ವರದಿ. ೬ನೇ ಪುಟದಲ್ಲಿ ಸೈಬರ್ ಕಳ್ಳರ ಚಮತ್ಕಾರ, ಬ್ಯಾಂಕ್ ಖಾತೆಗಳಿಗೆ ಕನ್ನ, ಪುಟ ೭ರಲ್ಲಿ ಕೃಷಿ ಇಲಾಖೆಯೇ ಅಫೀಮು, ನಾಟಿ ಗಾಂಜಾ, ನೀಲಗಿರಿ ಬೆಳೆಯಲು ಅಸ್ತು ಅಂದದ್ದು, ಕ್ಷೌರದ ವಿಚಾರಕ್ಕೆ ದಲಿತ ಯುವಕನ ಕೊಲೆ, ಕನ್ಯೆ ಸಿಗುತ್ತಿಲ್ಲ ಎಂದು ಯುವಕನ ಆತ್ಮಹತ್ಯೆ, ೯ನೇ ಪುಟದಲ್ಲಿ ಸರಕಾರಿ ಬಸ್‌ನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಏರ್ ಇಂಡಿಯಾ ಮಹಿಳಾ ಸಿಬ್ಬಂದಿಗೆ ಹಿಂಸೆ, ಇತ್ಯಾದಿ ಇತ್ಯಾದಿ. ಇದು ಒಂದು ಪತ್ರಿಕೆಯ ಒಂದು ದಿನದ ಕತೆಯಲ್ಲ. ಇದು ದೇಶದಲ್ಲಿರುವ ಎಲ್ಲ ಭಾಷೆಗಳ, ಎಲ್ಲ ದಿನ/ವಾರ/ಮಾಸ ಪತ್ರಿಕೆಗಳಲ್ಲಿಯ ದಿಗಿಲಾಗಿಸುವ ವ್ಯಥೆ. ಶೇ. ೬೦ಕ್ಕಿಂತಲೂ ಹೆಚ್ಚು ಇಂತಹ ಸುದ್ದಿಗಳದೇ ತಾಂಡವ ನೃತ್ಯ. ಉಳಿದಿದ್ದರಲ್ಲಿ ಜಾಹೀರಾತು ಮತ್ತು ರಾಜಕೀಯ. ನೇಮಕ್ಕಿಷ್ಟು ರಚನಾತ್ಮಕ ವರದಿಗಳು. ಮೊದಲೊಂದು ಕಾಲವಿತ್ತು, ಕ್ರೈಂ ಸುದ್ದಿಗಳಿಗಾಗಿಯೇ ಪ್ರತ್ಯೇಕ ಪತ್ರಿಕೆಗಳಿದ್ದವು. ಆಯ್ದ ಓದುಗರು ಕದ್ದು ಮುಚ್ಚಿ, ಮುಜುಗರದಿಂದ ಅವುಗಳನ್ನು ಓದುತ್ತಿದ್ದರು. ಆದರೆ ಇಂದು ಎಲ್ಲ ಪತ್ರಿಕೆಗಳು ಇಂತಹ ಸುದ್ದಿಗಳಿಂದಲೇ ತುಂಬಿಕೊಂಡು ಕ್ರೈಂ ಸುದ್ದಿ ಪತ್ರಿಕೆಗಳಾಗಿಬಿಟ್ಟಿವೆ. ಯಾರು ಬೇಕಾದರೂ ಎಲ್ಲಿಯಾದರೂ ಯಾವ ಮುಲಾಜಿಲ್ಲದೇ ರಾಜಾರೋಷವಾಗಿ ಓದುವಂತಹ ಸರ್ವೇಸಾಮಾನ್ಯ ಸುದ್ದಿಗಳಾಗಿವೆ. ಇದು ವಾಸ್ತವ, ಸತ್ಯ, ನಿತ್ಯ ಮತ್ತು ನಿರಂತರ.
ಟಿವಿ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳೂ ಇದರಿಂದ ಹೊರತಾಗಿಲ್ಲ. ೨೪*೭ ಸುದ್ದಿ ಚಾನೆಲ್‌ಗಳು ವರ್ಷಗಳವರೆಗೆ ನಡೆಯುವ ಧಾರಾವಾಹಿಗಳ ಕಥಾಹಂದಿರದಲ್ಲಿ, ಕ್ರೌರ್ಯ, ಮೋಸ, ಸಂಚು, ಕಪಟ ನಾಟಕಗಳು, ಬ್ಲಾಕ್‌ಮೇಲ್‌ಗಳು ಆವರಿಸಿಕೊಂಡಿವೆ.
ಹಸುಳೆಗಳ ಮೇಲೆ ಅತ್ಯಾಚಾರ, ಸಾರ್ವಜನಿಕ ಸ್ಥಳ/ವಾಹನಗಳಲ್ಲಿ ಮಾನಹರಣ, ಶಾಲಾ-ಕಾಲೇಜುಗಳಲ್ಲಿ ದೌರ್ಜನ್ಯ, ಕಾವಲುಗಾರನೇ ಕನ್ನ ಹಾಕುವುದು, ಒಡಹುಟ್ಟಿದವರು, ಹೆತ್ತವರನ್ನೇ ಹಣ/ಆಸ್ತಿ/ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡುವುದು, ತಾವೇ ಪ್ರೀತಿಸಿದವರಿಗೆ ಮೋಸ ಮಾಡುವುದು, ಮಹಿಳಾ ಶೌಚಾಲಯಗಳಲ್ಲಿ ಅಡಗಿಸಿದ ಕ್ಯಾಮೆರಾ, ಸೈಬರ್ ನಯವಂಚನೆ, ಇವೆಲ್ಲ ಪ್ರಸಕ್ತ ಸಮಾಜದ ನೈತಿಕ ಅಧಃಪತನವನ್ನು ಎತ್ತಿ ತೋರಿಸುತ್ತವೆ. ನಾವೆತ್ತ ಸಾಗುತ್ತಿದ್ದೇವೆಂದು ಹೇಳುತ್ತವೆ. ನಮ್ಮ ವರ್ತಮಾನದ ಬದುಕಿಗೆ ಆಧಾರವಾದ, ಭವಿಷ್ಯದ ಜೀವನವನ್ನು ಕಟ್ಟಿ ಕೊಡಬೇಕಾದ ಯುವಜನತೆಗೆ ಏನಾಗಿದೆ? ಏಕೆ ಹೀಗಾಗಿದೆ?
ಆಧುನಿಕತೆಯ ತಂತ್ರಜ್ಞಾನದ ಹೆಸರಿನಲ್ಲಿ ವೇಗವಾಗಿ ಮುಂದೆ ನುಗ್ಗುತ್ತಿರುವ ಈ ಪೀಳಿಗೆಗೆ ತಾಳ್ಮೆ ತುಸು ಕಡಿಮೆ. ತಾನಂದುಕೊಂಡ ಸಮಯದಲ್ಲಿ ತಾನೆಣಿಸಿದಂತೆ ತನಗೆ ಬೇಕಾದ ಸಂಗತಿಗಳು ದೊರಕದಿದ್ದರೆ ಆತ/ಆಕೆ ತಕ್ಷಣ ತಾಳ್ಮೆಗೆಡುತ್ತಾರೆ. ಹತಾಶಭಾವ ತಾಳುತ್ತಾರೆ. ಅವರ ತಾಳ್ಮೆಗೆಟ್ಟ ನಡತೆ ಇಂತಹ ದುಷ್ಕೃತ್ಯದಲ್ಲಿ ಪರ್ಯವಸನಗೊಳ್ಳುತ್ತದೆ. ವಿಕೃತ ಕೃತ್ಯಕ್ಕೆಳೆಸುತ್ತದೆ. ಒಮ್ಮೊಮ್ಮೆ ಅದು ಸಾಮೂಹಿಕ ಉನ್ಮಾದವಾಗಿಯೂ ರೂಪ ತಾಳುತ್ತದೆ. ಈ ವಿಷ ವರ್ತುಲದಲ್ಲಿ ಸಿಲುಕಿಕೊಂಡ ಅವರಿಗೆ ಹೆತ್ತವರು, ಹೊತ್ತವರು, ಒಡಹುಟ್ಟಿದವರು, ಜೊತೆಗಾರರು, ನೆರೆಹೊರೆಯವರು, ಊರವರು, ತನ್ನವರೆನ್ನುವ ಭಾವನೆ ಇರುವುದಿಲ್ಲ. ಶತಾಯಗತಾಯ ತನ್ನಾಸೆಯನ್ನು ಪೂರೈಸಿಕೊಳ್ಳುವುದೊಂದೇ ಅವರ ಅಂತಿಮ ಲಕ್ಷ್ಯವಾಗಿರುತ್ತದೆ. ಅವರಾಸೆಗಳು ಸುಲಭವಾಗಿ ಈಡೇರದಿದ್ದಾಗ ನಿರಾಸೆಯಾಗಿ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ. ತಮ್ಮ ಪ್ರಯತ್ನಗಳು ಫಲಿಸದಿದ್ದಾಗ ಹತಾಶೆಗೊಂಡು ಆತ್ಮಹತ್ಯೆಗೆ ಎಳೆಸುವವರಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಿಗೇ ಹೆಚ್ಚು. ಆ ಪ್ರಮಾಣ ಶೇ. ೪ರಷ್ಟು ಹೆಚ್ಚಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ಇಂದಿನ ಪೀಳಿಗೆ ಜಗತ್ತಿಗೇ ಮಾದರಿಯಾಗಿದ್ದ ಭಾರತೀಯ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಗಳನ್ನು ಅಲಕ್ಷಿಸಿದೆಯೇ? ಇದರಿಂದಾಗಿ ಅದು ಇಂದು ದಿಕ್ಕು ತಪ್ಪುತ್ತಿದೆಯೇ? ಆಧುನಿಕತೆ, ತಾಂತ್ರಿಕತೆ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳ ಹೆಸರಿನಲ್ಲಿ ಮನುಷ್ಯ ಒಂಟಿ ಗೂಬೆಯಾಗುತ್ತಿದ್ದಾನೆಯೇ? ಅವನಿ/ಳಿಗೆ ತಾನು ಯಾರ ಮೇಲೂ ಅವಲಂಬಿಸಿಲ್ಲ, ತನ್ನಷ್ಟು ಸರಿ ಯಾರೂ ಇಲ್ಲ ಎನ್ನುವ ನೈತಿಕ ಅಹಂಕಾರವೇ? ಮಗುವೊಂದು ಆದನಂತರ ಜೊತೆಗಾರನ/ಳ ಹಂಗೇಕೆ ಎನ್ನುವ ಒಂಟಿ ಪಾಲಕ ಪ್ರವೃತ್ತಿಯು ಹೊಣೆಗೇಡಿತನದ ಪರಮಾವಧಿ ಅಲ್ಲವೇ? ತಂದೆ-ತಾಯಿಗಳಿದ್ದೂ, ಸಂಬಂಧಿಕರಿದ್ದೂ ಮಗುವು ಅನಾಥ ಬವಣೆಯನ್ನು ಅನುಭವಿಸುವುದು ತರವೇ?
ಜನಪ್ರಿಯ ನಟನೆಂದ ಮಾತ್ರಕ್ಕೆ, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದನೆಂದ ಕಾರಣಕ್ಕೆ, ಜನನಾಯಕನೆಂದ ಮಾತ್ರಕ್ಕೆ ಏನನ್ನಾದರೂ ಮಾಡಬಹುದೇ? ಅವರು ಎಸಗಿದ ಬಾರಾ ಖೂನ್‌ಗಳನ್ನು ಮಾಫ್'' ಮಾಡಬೇಕೆ? ಮಾಡಬಾರದ ಕೆಲಸಗಳನ್ನು ಮಾಡಿ, ಹಣ ಕೊಟ್ಟು ಜಯಕಾರ, ಮೆರವಣಿಗೆ ಮಾಡಿಸಿಕೊಂಡರಾಯಿತೆ? ಪೈಶಾಚಿಕ ಕೃತ್ಯವೆಸಗಿದ್ದರೂ ಅವರ ಬಗೆಗೆ ಸಹಾನುಭೂತಿ ವ್ಯಕ್ತಪಡಿಸುವುದು, ಅವನನ್ನು ಅಮಾಯಕ, ಮುಗ್ಧನೆಂದು ಸಾರ್ವಜನಿಕವಾಗಿ ಸಮರ್ಥಿಸುವುದು,ತಮ್ಮ ಹೀರೋ ಎಲ್ಲಿದ್ದರೂ ಹೀರೋ'' ಎನ್ನುವುದು, ಹೊರನೋಟಕ್ಕೆ ಅಪರಾಧಿಯೆಂದು ಗೊತ್ತಿದ್ದರೂ, ಜೈಲಿನಲ್ಲಿದ್ದರೂ ರಾಜೋಪಚಾರ ನೀಡುವುದು ಪ್ರಚಾರಕ್ಕಾಗಿ ಭೇಟಿಗೆ ಹೋಗುವುದು. ಇವೆಲ್ಲ ನಮ್ಮ ಸಮಾಜ, ಜನತೆ ಎಷ್ಟೊಂದು ನೈತಿಕ ಅಧಃಪತನಕ್ಕೆ ಇಳಿದಿದೆ ಎಂದು ತೋರಿಸುತ್ತದೆ.
ಈ ಕಾಲದ ಹದಿಹರೆಯದ ಮನಸ್ಸುಗಳಿಗೆ ಏನೋ ಆಗಿದೆ. ಅವರ ಭಾವನೆ, ತುಮುಲಗಳನ್ನು ಅರಿಯುವಲ್ಲಿ ಸಮಾಜ ಸೋತಿದೆ. ಅವುಗಳಿಗೆ ತಕ್ಕಂತೆ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ವಾತಾವರಣವನ್ನು ಕಲ್ಪಿಸಬೇಕಿದೆ. ಜಗತ್ತಿನಲ್ಲಿ ಸುದ್ದಿ ಸಂವಹನ, ಪ್ರಯಾಣ, ಅನೇಕ ಸಂಗತಿಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಅದಕ್ಕೆ ತಕ್ಕಂತೆ ವೇಗವಾಗಿ ಈಗಿನ ಜನಾಂಗ ಯೋಚಿಸುತ್ತಿದೆ. ಧಿಡೀರ್ ಪರಿಹಾರಗಳನ್ನು ಬಯಸುತ್ತದೆ. ಹದಿಹರೆಯದವರ ಆತುರ, ಅಸಹನೆ, ಹತಾಶೆಗಳನ್ನು ನೋಡಿದರೆ ಅವರ ಮದುವೆಯ ವಯಸ್ಸಿನ ಬಗೆಗೂ ಪುನರ್ವಿಮರ್ಶೆ ಮಾಡಬೇಕೆನಿಸುತ್ತದೆ. ಮದುವೆಯಾಗಲು ಗಂಡಿಗೆ ಕನಿಷ್ಟ ೨೧ ಮತ್ತು ಹೆಣ್ಣಿಗೆ ಕನಿಷ್ಟ ೧೮ ವರ್ಷಗಳಾಗಿರಬೇಕೆಂದು ಕಾನೂನು ಹೇಳುತ್ತದೆ. ವಾಸ್ತವವಾಗಿ ನಗರ ಪ್ರದೇಶಗಳಲ್ಲಿ, ಸುಶಿಕ್ಷಿತರಲ್ಲಿ ಇದು ಇನ್ನೂ ಹೆಚ್ಚಾಗಿಯೇ ಇರುತ್ತದೆ. ಶಿಕ್ಷಣದ ಮುಂದುವರಿಕೆ, ನಿರುದ್ಯೋಗ, ಆರ್ಥಿಕ ಪರಿಸ್ಥಿತಿ, ಅವರಿಗಿಂತ ಹಿರಿಯರಾಗಿರುವವರ ಮದುವೆ ಆಗಿರದಿರುವ ಕಾರಣಗಳಿಂದ ಮದುವೆಗೆ ವಿಳಂಬವಾಗುತ್ತಿರುವುದು ಅವರನ್ನು ಧೃತಿಗೆಡಿಸಿರಬಹುದು. ಮಾಡಲು ಕೆಲಸವಿಲ್ಲದೇ, ಯೋಚಿಸಲು ಸಕಾರಾತ್ಮಕ ವಿಷಯ ತೋಚದೇ ಖಾಲಿ ಮನಸು ಭೂತದ ಅಂಗಡಿಯಂತೆ ವ್ಯವಹಾರ ಮಾಡತ್ತಿರಬಹುದು. ಇದರಿಂದಾಗಿ ಅವರು ಅನಪೇಕ್ಷಿತ ಕೃತ್ಯಗಳಲ್ಲಿ ತೊಡಗಿರಬಹುದು. ಗಂಡು-ಹೆಣ್ಣುಗಳ ಸಹಜ ಸಹಜೀವನದ ಪಾಠವನ್ನು ಅವರಿಗೆ ಹೇಳಿಕೊಡಬೇಕಿದೆ. ಅವರಿಬ್ಬರ ಮಧ್ಯೆ ಭೌತಿಕವಾದ, ಬಾಹ್ಯ ಬೇರ್ಪಡಿಕೆಗಿಂತಲೂ ಮಾನಸಿಕ ಸ್ವಯಂ ನಿಯಂತ್ರಣದ ಪರಿಪಾಠ ಬೆಳೆಸಬೇಕಿದೆ. ದೌರ್ಜನ್ಯ, ಅತ್ಯಾಚಾರಗಳ ವಿಚಾರವು ಮೊಳಕೆ ಒಡೆಯುವ ಮೊದಲೇ ಎಚ್ಚರಿಕೆಯ ಉಪಾಯ ಮಾಡಬೇಕಿದೆ. ಈ ಎಲ್ಲ ಸಂಗತಿಗಳು ಶಿಕ್ಷಣತಜ್ಞರು, ಪಾಲಕರು, ಮನೋವೈದ್ಯರು, ಮನೋಶಾಸ್ತ್ರಜ್ಞರು, ಸಾಮಾಜಿಕ ಚಿಂತಕರು, ಕೌಟುಂಬಿಕ ವಿಶ್ಲೇಷಕರು, ಭಾರತೀಯ ಪರಂಪರೆಯ ಹಿತಚಿಂತಕರು, ಆಪ್ತ ಸಲಹಾಕಾರರು, ಮೆಂಟಸ್‌ಗಳು ಬಹಳ ಗಂಭೀರವಾಗಿ ಯೋಚಿಸಬೇಕಾದ ಸಂಗತಿಗಳು. ಇದು ಈ ಸಮಯದ ತುರ್ತು ಸಂಗತಿ ಕೂಡ. ಕ್ಷಣ ಕ್ಷಣಕ್ಕೂ ತೀವ್ರವಾಗಿ ಹದಗೆಡುತ್ತಿರುವ ಇಂದಿನ ಈ ವಾತಾವರಣಕ್ಕೆ ಯುದ್ಧೋಪಾದಿಯಲ್ಲಿ ಇವರು ಮದ್ದು ಕಂಡುಹಿಡಿಯಬೇಕಾಗಿದೆ.

Next Article