ಹತ್ತು ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನಾಮ ನಿರ್ದೇಶನ
ಬೆಂಗಳೂರು: ರಾಜ್ಯ ಸರ್ಕಾರ ಕನ್ನಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ೧೦ ವಿಶ್ವ ವಿದ್ಯಾಲಯಗಳಿಗೆ ಒಟ್ಟು ೬೬ಮಂದಿ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ೮ ಮಂದಿ, ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ೬ ಮಂದಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ೬, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ೧೦, ಕುವೆಂಪು ವಿಶ್ವವಿದ್ಯಾಲಯ ೬, ಗುಲ್ಬರ್ಗಾ ವಿಶ್ವವಿದ್ಯಾಲಯ ೬, ರಾಯಚೂರು ವಿಶ್ವವಿದ್ಯಾಲಯ ೬, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ೬, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ೬ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ೬ ಮಂದಿ ಸದಸ್ಯರನ್ನು ಸರ್ಕಾರ ೩ ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿದೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ.ಬಂಜಗೆರೆ ಜಯಪ್ರಕಾಶ್ ಅವರನ್ನು ಹಿಂದುಳಿದ ವರ್ಗಗಳ ಕೋಟಾದಡಿ, ಡಾ.ನಟರಾಜ್ ಹುಳಿಯಾರ್ ಅವರನ್ನು ಸಾಮಾನ್ಯ ಕೋಟದಡಿ ನಾಮ ನಿರ್ದೇಶನ ಮಾಡಲಾಗಿದೆ. ಜಾನಪದ ವಿವಿಗೆ ಸಾಹಿತಿ ಡಾ. ಮೊಗಳ್ಳಿ ಗಣೇಶ್, ಜನಪದ ಕಲಾವಿದ ಗೊರವಾಲೆ ಚಂದ್ರಶೇಖರ್, ವಿಜಯ ನಗರ ಶ್ರೀಕೃಷ್ಣದೇವರಾಯ ವಿವಿಗೆ ಪತ್ರಕರ್ತ ಚ.ಹ.ರಘುನಾಥ್, ಡಾ. ಅಮರೇಶ ನುಗಡೋಣಿ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.