For the best experience, open
https://m.samyuktakarnataka.in
on your mobile browser.

ಹದಿಹರೆಯದವರ ಮನಸ್ಸು ಚಂಚಲ

12:42 AM Feb 19, 2024 IST | Samyukta Karnataka
ಹದಿಹರೆಯದವರ ಮನಸ್ಸು ಚಂಚಲ

ಇಬ್ಬರು ತಾಯಂದಿರು ತಮ್ಮ ಮಗು ಟೀನೇಜ್ ತಲುಪುತ್ತಿದ್ದಂತೆ ಅವರ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಅವರೊಂದಿಗೆ ಹೇಗಿರಬೇಕೆಂದು ಮಾತನಾಡುವುದನ್ನು ಕೆಲವರು ಕೇಳಿದ್ದೇವೆ. ಸಾಮಾನ್ಯವಾಗಿ ಹದಿಹರೆಯದವರ ವ್ಯಕ್ತಿತ್ವ ಬೆಳವಣಿಗೆಯ ಈ ಸಂದರ್ಭದಲ್ಲಿ ನಡುವಳಿಕೆಯಲ್ಲಿ ಬದಲಾವಣೆ ಬರುವುದು ಸಹಜ. ಅವರ ಮನಸ್ಸಿನ ಭಾವನೆಗಳಲ್ಲಿ ಏರುಪೇರುಗಳನ್ನು ಕೂಡ ಕಾಣಬಹುದು. ಈ ಮನಸ್ಸಿನ ಏರುಪೇರುಗಳಿಂದ ಕೆಲವೊಮ್ಮೆ ಅವರ ಏಕಾಗ್ರತೆಯಲ್ಲಿ ಕೊರತೆ ಕೂಡ ಉಂಟಾಗಬಹುದು. ಇದೇ ಸಂದರ್ಭದಲ್ಲಿ ಅವರ ಮಿದುಳಿನಲ್ಲಿ ಪ್ರೌಢಾವಸ್ಥೆಗೆ ಸಂಬಂಧಪಟ್ಟ ಜೀವರಾಸಾಯನಿಕಗಳು ಹೆಚ್ಚಾಗುತ್ತಿರುತ್ತವೆ. ದೇಹದಲ್ಲಿ ಕೂಡ ಬದಲಾವಣೆಗಳು ಕಂಡುಬರುತ್ತವೆ.
ಕೆಲವು ಸಂಶೋಧನೆಗಳ ಪ್ರಕಾರ ಹದಿಹರೆಯದವರಲ್ಲಿ ನರಕೋಶಗಳ ನಡುವೆ ಸಂಪರ್ಕಗಳು ಹೆಚ್ಚಾಗುತ್ತಾ ಹೋಗುತ್ತವೆ, ಅದರ ಜೊತೆಗೆ ಬೇಡವಾದ ಕೆಲವು ಸಂಪರ್ಕಗಳು ಹಾಗೂ ನರಕೋಶಗಳು ಕಡಿಮೆಯಾಗಿ ಮಿದುಳಿನ ಗಾತ್ರವು ಸ್ವಲ್ಪಮಟ್ಟಿಗೆ ಕುಗ್ಗುತ್ತದೆ. ಇದೇ ರೀತಿ ಮನಸ್ಸಿನಲ್ಲಿ ಕೂಡ ಬಹಳಷ್ಟು ಬದಲಾವಣೆಗಳು ಆಗುತ್ತವೆ. ತಾವು ಒಂದು ಕಡೆ ಸಣ್ಣ ಮಕ್ಕಳು ಅಲ್ಲ ಇನ್ನೊಂದು ಕಡೆ ಪೂರ್ಣ ಪ್ರಮಾಣದ ವಯಸ್ಕರರೂ ಅಲ್ಲ, ಹಾಗೆಯೇ ಒಮ್ಮೊಮ್ಮೆ ಮಕ್ಕಳ ಹಾಗೆ ಮತ್ತು ಒಮ್ಮೊಮ್ಮೆ ವಯಸ್ಕರ ಹಾಗೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರಬಹುದು ಎಂದು ಅರಿವಿರಬೇಕು.
ಬಹಳಷ್ಟು ಹದಿಹರೆಯದವರಲ್ಲಿ ವಯಸ್ಕರಂತೆ ಸ್ವಂತ ನಿರ್ಧಾರಕ್ಕೆ ಶಕ್ತರೆಂದು, ತಾವೇ ತಮಗೋಸ್ಕರ ಏನು ಬೇಕೆಂದು ನಿರ್ಧಾರ ಮಾಡಿ ಬಿಡುವುದು ಹಾಗೂ ಪೋಷಕರ ಸಲಹೆಯನ್ನು ನಿರ್ಲಕ್ಷಿಸಿಸುವುದು ಸಾಮಾನ್ಯವಾಗಿ ಬಿಡುತ್ತದೆ. ಅದೇ ಸಲಹೆಯನ್ನು ಒಂದು ವೇಳೆ ತಮ್ಮ ಗೆಳೆಯ ಅಥವಾ ಗೆಳತಿಯು ಕೊಟ್ಟರೆ ಅದು ವೇದವಾಕ್ಯ ಕೂಡ ಆಗಿಬಿಡಬಹುದು. ಮನಸ್ಸಿನಲ್ಲಿ ಈ ವಯಸ್ಸಿನಲ್ಲಿ ಭಾವನೆಗಳಲ್ಲಿ ಏರುಪೇರುಗಳಿಂದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪಮಟ್ಟಿಗೆ ಕಷ್ಟಕರವಾಗಬಹುದು. ಆದ್ದರಿಂದ ಪೋಷಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಈ ಸಮಯದಲ್ಲಿ ರಿಸ್ಕ್ ಟೇಕಿಂಗ್ ಬಿಹೇವಿಯರ್ ಅಂದರೆ ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಕೆಲವೊಬ್ಬರಿಗೆ ಮನಸ್ಸು ಪ್ರೇರೇಪಿಸುತ್ತದೆ. ಬಹಳ ಹೆಚ್ಚಿನ ಕುತೂಹಲದಿಂದ ಯಾವುದಾದರೂ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿದಿರಬೇಕು. ಉದಾಹರಣೆಗೆ ಪ್ರಾಯೋಗಿಕವಾಗಿ ತಂಬಾಕು ಸೇವನೆ ಅಥವಾ ಸಿಗರೇಟ್ ಸೇದಿ ಬಿಡಬಹುದು. ಈ ಸಮಯದಲ್ಲಿ ಗುಂಪುಗಳಲ್ಲಿ ಕೂಡಿಕೊಂಡು ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದು. ಆ ಗುಂಪಿನ ಸದಸ್ಯರ ಮನ ಮೆಚ್ಚಿಸಲು ಮನಸ್ಸು ಬೇಡವೆಂದರೂ ಕೆಲವೊಂದು ಚಟುವಟಿಕೆಗಳಲ್ಲಿ ಭಾಗಿಯಾಗಿಬಿಡಬಹುದು. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಬೇರೆಯವರು ಯಾರೂ ಮಾಡಿಲ್ಲದೆ ಇರುವುದನ್ನು, ಯಾವುದೇ ಕಾರ್ಯವನ್ನು ಮಾಡಿ ತೋರಿಸಿ ಎಲ್ಲರೂ ತಮ್ಮನ್ನು ಅಥವಾ ತಮ್ಮ ಸ್ನೇಹಿತರ ಗುಂಪನ್ನು ನೋಡುವಂತೆ ಹಾಗೂ ಶಭಾಷ್ ಎನ್ನುವಂತೆ ಮಾಡುವ ಹಂಬಲವಿರುತ್ತದೆ.
ಇದರಿಂದ ಕೂಡ ಅಪಾಯಕ್ಕೆ ಸಿಲುಕಬಹುದು. ಗುಂಪುಗಳಲ್ಲಿ ಇದ್ದಾಗ ತಮ್ಮ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಂಡು ಯಾವುದಾದರೂ ತಪ್ಪಿದ್ದರೆ ಅದನ್ನು ತಪ್ಪು ಎಂದು ಹೇಳಿ ಅದನ್ನು ತಮಗೆ ಮಾಡಲು ಇಷ್ಟವಿಲ್ಲವೆಂದು ಖಡಾ ಖಂಡಿತವಾಗಿ ಹೇಳಬೇಕು ಹಾಗೂ ಬೇರೆಯವರು ಕೂಡ ಅದನ್ನು ಮಾಡಬಾರದೆಂದು ತಿಳಿ ಹೇಳಲು ಪ್ರಯತ್ನಿಸಬೇಕು.
ಹದಿಯರೆಯದವರ ಬ್ರೇಕ್, ಎಕ್ಸಲರೇಟರ್ ಯಾವುದು?
ಮಿದುಳಿನ ಮುಂಭಾಗ ಅಂದರೆ ಫ್ರಾಂಟಲ್ ಲೋಬ್ ಇನ್ನೂ ಬೆಳವಣಿಗೆ ಆಗುತ್ತಿರುತ್ತದೆ. ಇದರ ಮುಖ್ಯ ಕೆಲಸವೆಂದರೆ ಯಾವುದೇ ಕಾರ್ಯವನ್ನು ಬೇಡ, ಇದು ನನಗೆ ಸರಿ ಇಲ್ಲ ಎಂದು ತಿಳಿ ಹೇಳಿ ನಿರ್ಧಾರ ತೆಗೆದುಕೊಳ್ಳುವಂತಹ ಭಾಗ. ಅಂದರೆ ವಾಹನದಲ್ಲಿನ ಬ್ರೇಕ್ ಇದ್ದಂತೆ. ಸರಿಯಾದ ಸಮಯಕ್ಕೆ ಬ್ರೇಕ್ ಹಾಕುವುದು ಮುಖ್ಯವಾಗಿರುತ್ತದೆ. ಅದೇ ರೀತಿ ಮಿದುಳಿನ ಒಳಗಡೆ ಅಮಿಗ್ಡಾಲಾ ಎಂಬ ಭಾಗವು ಭಾವನೆಗಳಿಗೆ ಸಂಬಂಧಪಟ್ಟಿರುತ್ತದೆ ಹಾಗೂ ಹದಿಹರೆಯದವರಲ್ಲಿ ಈ ಭಾಗವು ಚುರುಕಾಗಿರುತ್ತದೆ. ಈ ಭಾಗವು ವಾಹನದಲ್ಲಿನ ಎಕ್ಸಲರೇಟರ್ ಇದ್ದಂತೆ. ಈ ಭಾಗವು ಚುರುಕಾಗಿರುವುದರಿಂದ ಹದಿಹರೆಯದವರ ಬ್ರೇಕ್ ಕಡಿಮೆ ಇರುವುದರಿಂದ ಕೆಲವೊಮ್ಮೆ ಇಷ್ಟವಿಲ್ಲದ ಹಾಗೂ ಮನಸ್ಸಿನ ಚಂಚಲತೆಯನ್ನು ನಿಯಂತ್ರಣ ಮಾಡಿಕೊಳ್ಳಲಾಗದೆ ಕೆಲವು ತೊಂದರೆಗಳಿಗೆ ಹಾಗೂ ಮನಸ್ಸಿನ ತೊಂದರೆ ಹೆಚ್ಚಾದರೆ ಅವರಿಗೆ ಮನೋವೈದ್ಯರ ಸಲಹೆ ಬೇಕಾಗುತ್ತದೆ. ಇದಕ್ಕೂ ಮೊದಲು ಹದಿಹರೆಯದವರಿಗೆ ಬೇಕು ಪೋಷಕರ ಹಾಗೂ ಅವರ ಶಿಕ್ಷಕರ ಸೂಕ್ತ ಮಾರ್ಗದರ್ಶನ.