ಹನುಮನ ಜನ್ಮಸ್ಥಳಕ್ಕೆ ಆಗಮಿಸುವ ಮಾಲಾಧಾರಿಗಳಿಗೆ ಎಲ್ಲ ರೀತಿಯಾದ ವ್ಯವಸ್ಥೆ ಕಲ್ಪಿಸಲು ಆಗ್ರಹ
ಬೆಂಗಳೂರು: ವರ್ಷಕ್ಕೊಮ್ಮೆ ನಡುವೆ ಹನುಮ ಮಾಲಾ ಕಾರ್ಯಕ್ರಮವನ್ನು ಸರ್ಕಾರ ವಿಜೃಂಭಣೆಯಿಂದ ಹಾಗೂ ಸಕಲ ರೀತಿಯಾದ ವ್ಯವಸ್ಥೆ, ಸುರಕ್ಷತೆ, ಸೌಲಭ್ಯ ನೀಡಬೇಕಾದದ್ದು ಸರ್ಕಾರದ ಮೂಲಭೂತ ಹಕ್ಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು "ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವು ಹನುಮನ ಜನ್ಮಸ್ಥಳವಾಗಿರುವುದು ನಮಗೆಲ್ಲ ತಿಳಿದಿದೆ. ಪ್ರತಿ ವರ್ಷ ಇಲ್ಲಿ ದೇಶದಾದ್ಯಂತ ಭಕ್ತರು ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಹನುಮ ಮಾಲಾಧಾರಿಗಳು ಕಠಿಣ ವ್ರತವನ್ನು ಆಚರಿಸಿ, ಅಂಜನಾದ್ರಿಗೆ ಬಂದು ಹನುಮನ ದರ್ಶನವನ್ನು ಪಡೆಯುತ್ತಾರೆ. ಹನುಮ ಮಾಲಾಧಾರಿಗಳಿಗೆ ಪ್ರತಿ ವರ್ಷ ಸರ್ಕಾರವೇ ಎಲ್ಲ ರೀತಿಯಾದ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆದರೆ, ಪ್ರಸ್ತುತ ವರ್ಷದಲ್ಲಿ ಸರ್ಕಾರ ಹನುಮ ಮಾಲಾಧಾರಿಗಳಿಗೆ ದೇವಸ್ಥಾನದ ನಿಧಿಯಿಂದ 40 ಲಕ್ಷ ರೂ ಗಳನ್ನು ಸರ್ಕಾರ ನೀಡಿದ್ದು, ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಕ್ಕೆ ಮಂಜೂರು ಆಗಿರುವ ಹಣ ಸಾಲುವುದಿಲ್ಲ, ಮುಜರಾಯಿ ಇಲಾಖೆಯ ಸುಪರ್ಧಿಗೆ ಬರುವ ಈ ಪವಿತ್ರ ದೇವಳಕ್ಕೆ ಲಕ್ಷಾಂತರ ರೂಪಾಯಿ ಕಾಣಿಕೆ ಹರಿದು ಬರುತ್ತದೆ. ವರ್ಷಕ್ಕೊಮ್ಮೆ ನಡುವೆ ಹನುಮ ಮಾಲಾ ಕಾರ್ಯಕ್ರಮವನ್ನು ಸರ್ಕಾರ ವಿಜೃಂಭಣೆಯಿಂದ ಹಾಗೂ ಸಕಲ ರೀತಿಯಾದ ವ್ಯವಸ್ಥೆ, ಸುರಕ್ಷತೆ, ಸೌಲಭ್ಯ ನೀಡಬೇಕಾದದ್ದು ಸರ್ಕಾರದ ಮೂಲಭೂತ ಹಕ್ಕು. ಮೈ ಕೊರೆಯುವ ಚಳಿಯಲ್ಲಿ ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಬರುತ್ತಾರೆ. ಅವರಿಗೆ ವಸತಿ, ಕುಡಿಯುವ ನೀರು, ಆಹಾರ, ಶೌಚಾಲಯ, ವೈದ್ಯಕೀಯ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ, ಈ ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಕರ್ನಾಟಕದ ಶ್ರೇಷ್ಠ ತೀರ್ಥಸ್ಥಳ, ಶ್ರೀ ರಾಮ ದೇವರ ಪರಮಭಕ್ತ ಹನುಮನ ಜನ್ಮಸ್ಥಳಕ್ಕೆ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಎಲ್ಲ ರೀತಿಯಾದ ವ್ಯವಸ್ಥೆ ಕಲ್ಪಿಸಲು ಹಣ ಬಿಡುಗಡೆ ಮಾಡಿ ಅವರಿಗೆ ಎಲ್ಲ ರೀತಿಯಾದ ವ್ಯವಸ್ಥೆ ಮಾಡಿಕೊಡಬೇಕು" ಎಂದಿದ್ದಾರೆ