For the best experience, open
https://m.samyuktakarnataka.in
on your mobile browser.

ಹನುಮ ಧ್ವಜದ ಹಾರಾಟ, ಪರ ವಿರೋಧಿ ಹೋರಾಟ

02:04 AM Jan 29, 2024 IST | Samyukta Karnataka
ಹನುಮ ಧ್ವಜದ ಹಾರಾಟ  ಪರ ವಿರೋಧಿ ಹೋರಾಟ

ಮಂಡ್ಯ: ಸರ್ಕಾರಿ ಜಾಗದಲ್ಲಿ ನಿಯಮ ಉಲ್ಲಂಘಿಸಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ತಾಲೂಕು ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿ ರಾಷ್ಟ್ರಧ್ವಜಾರೋಹಣ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಭಾನುವಾರ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಹನುಮಧ್ವಜ ತೆರವಿಗೆ ಹಿಂದುತ್ವವಾದಿ ಕಾರ್ಯಕರ್ತರು ಅಡ್ಡಿಪಡಿಸಿ ದಾಂಧಲೆ ನಡೆಸಿದ್ದು, ಇವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಗ್ರಾಮಕ್ಕೆ ಆಗಮಿಸಿದ್ದ ಬಿಜೆಪಿ ನಾಯಕರಾದ ಆರ್. ಅಶೋಕ್, ಅಶ್ವಥ್ ನಾರಾಯಣ್, ಮಾಜಿ ಶಾಸಕ ಸುರೇಶ್‌ಗೌಡ, ಮುಖಂಡರಾದ ಅಶೋಕ್‌ಜಯರಾಂ, ಇಂದ್ರೇಶ್ ಅವರನ್ನೂ ವಶಕ್ಕೆ ಪಡೆದರು. ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ೧೪೪ ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಹನುಮ ಧ್ವಜ ತೆರವುಗೊಳಿಸಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ನಿವಾಸದ ಮುಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.
ಬೆಳವಣಿಗೆಗೆ ದಾರಿ: ಜನವರಿ ೨೨ರಂದು ಅಯೋಧ್ಯೆಯಲ್ಲಿ ನಡೆದ ರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ೧೦೮ ಅಡಿ ಧ್ವಜಸ್ತಂಭ ನಿರ್ಮಿಸಿ ಹಿಂದುತ್ವವಾದಿ ಕಾರ್ಯಕರ್ತರು ಕೇಸರಿ ಧ್ವಜ ಹಾರಿಸಿದ್ದರು. ತೆರವುಗೊಳಿಸಲು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಿದ್ದರು. ತಾ ಪಂ ಅಧಿಕಾರಿ ವೀಣಾ ಅವರು ಭಾನುವಾರ ಗ್ರಾಮಕ್ಕೆ ತೆರಳಿ, ಹನುಮಧ್ವಜ ಮತ್ತು ಧ್ವಜಸ್ತಂಭ ತೆರವಿಗೆ ಮುಂದಾಗಿದ್ದಾರೆ. ಆದರೆ, ಬಜರಂಗ ದಳದ ಕಾರ್ಯಕರ್ತರು ತೆರವಿಗೆ ಅಡ್ಡಿಪಡಿಸಿ, ಪ್ರತಿಭಟಿಸಿದ್ದು ಹಲವು ಬೆಳವಣಿಗೆಗೆ ದಾರಿಯಾಯಿತು.