ಹನುಮ ಧ್ವಜ ತೆರವು ಖಂಡಿಸಿ ಪಾದಯಾತ್ರೆ: ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಹರಿದು ಆಕ್ರೋಶ
ಮಂಡ್ಯ :- ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬದಿಂದ ಹನುಮ ಧ್ವಜ ಕೆಳಕ್ಕೆ ಇಳಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ನಡೆದ ಪಾದಯಾತ್ರೆ ವೇಳೆ ಕಾಂಗ್ರೆಸ್ ನಾಯಕರ ಭಾವಚಿತ್ರ ಇದ್ದ ಫ್ಲೆಕ್ಸ್ ಹರಿದು,ಸುಟ್ಟು ಹಾಕಿ ಪಾದಯಾತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೆರಗೋಡು ಗ್ರಾಮದಿಂದ ಆರಂಭಗೊಂಡು ಹೆದ್ದಾರಿಯಲ್ಲಿ ಮಂಡ್ಯದತ್ತ ಸಾಗಿದಾಗ ಪಾದಯಾತ್ರಿಗಳ ಕಣ್ಣಿಗೆ ಬಿದ್ದ ಶಾಸಕ ರವಿಕುಮಾರ್ ಗಣಿಗ ಹಾಗೂ ಕಾಂಗ್ರೆಸ್ ನಾಯಕರು ಭಾವಚಿತ್ರ ಇದ್ದ ಫ್ಲೆಕ್ಸ್ ಗಳನ್ನು ದಹನ ಮಾಡಲಾಯಿತು.
ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ಹೆದ್ದಾರಿ ಬದಿಯಲ್ಲಿ ಕಟ್ಟಲಾಗಿದ್ದ ಹಾಗೂ ಮಂಡ್ಯ ನಗರದಲ್ಲಿ ಹಾಕಲಾಗಿದ್ದ ಪ್ಲೆಕ್ಸ್ ಗಳನ್ನು ಹರಿದು, ಸುಟ್ಟುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು,
ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಸಾಗಿದರೆ, ಅಲ್ಲಲ್ಲಿ ಕಾಣುತ್ತಿದ್ದ ಕಾಂಗ್ರೆಸ್ ನಾಯಕರ ಫ್ಲಕ್ಸ್ ಗಳನ್ನ ಕಿತ್ತಾಕುತ್ತಿದ್ದರು, ಪೊಲೀಸರು ತಡೆಯಲು ಮುಂದಾದರು ಸಹ ಲೆಕ್ಕಿಸದೆ ಹಲವು ಕಡೆ ಫ್ಲೆಕ್ಸ್ ಗಳಿಗೆ ಬೆಂಕಿ ಹಾಕಿದ್ದು, ತಕ್ಷಣ ಪೊಲೀಸರು ನೀರು ಹಾಕಿ ಬೆಂಕಿ ನಂದಿಸಲು ಮುಂದಾಗಿದ್ದರು.
ಮಂಡ್ಯ ನಗರದ ಬೆಂಗಳೂರು -ಮೈಸೂರು ಹೆದ್ದಾರಿ, ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಹಾಕಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಏನ್ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಭಾವಚಿತ್ರ ಇದ್ದ ಫಲ ಪುಷ್ಪ ಪ್ರದರ್ಶನದ ಫ್ಲೆಕ್ಸ್ ಹಾಗೂ ಸಚ್ಚಿದಾನಂದ ಹಿತೈಷಿ ಬಳಗ ಹಾಕಿದ್ದ ಉಪಾಧ್ಯಕ್ಷ ಸಿನಿಮಾದ ಫ್ಲೆಕ್ಸ್ ಸೇರಿ ಹಲವಾರು ಫ್ಲೆಕ್ಸ್ ಗಳನ್ನ ಪ್ರತಿಭಟನಾ ಕಾರರು ಹರಿದು ಹಾಕಿದರು.
ಮಹಾವೀರ ವೃತ್ತದಲ್ಲಿ ಸಚಿವ ಚೆಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್ ಹರಿಯಲು ಮುಂದಾದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು, ಆದರೂ ಸಹ ದಾರಿಯುದ್ದಕ್ಕೂ ಫ್ಲೆಕ್ಸ್ ಗಳು ಪ್ರತಿಭಟನಾಕಾರರು ಹರಿದು ಹಾಕಿದರು.