For the best experience, open
https://m.samyuktakarnataka.in
on your mobile browser.

ಹರಿಯಾಣದ ಮೂರು ದಾರಿ

02:00 AM May 10, 2024 IST | Samyukta Karnataka
ಹರಿಯಾಣದ ಮೂರು ದಾರಿ

ಸುಮಾರು ಎಂಟತ್ತು ವರ್ಷಗಳಿಂದ ಸಮಸ್ಥಿತಿಯಲ್ಲಿದ್ದ ಹರಿಯಾಣ ರಾಜ್ಯದ ರಾಜಕೀಯ ಪರಿಸ್ಥಿತಿ ಲೋಕಸಭಾ ಚುನಾವಣೆಯ ನಡುವೆ ಅತಂತ್ರಕ್ಕೆ ತಿರುಗಿರುವುದು ರೂಪಾಂತರಗೊಳ್ಳುತ್ತಿರುವ ರಾಜಕೀಯ ವಿದ್ಯಮಾನದ ದಿಕ್ಸೂಚಿ. ಮನೋಹರ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಬದಲಾವಣೆಯ ನಂತರ ಅಧಿಕಾರಕ್ಕೆ ಬಂದ ನಯಾಜ್ ಸಿಂಗ್ ಸೈನಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಆಡಳಿತದ ಚುಕ್ಕಾಣಿಯ ಲಗುಬಿಗುವನ್ನು ಅರ್ಥ ಮಾಡಿಕೊಳ್ಳುವ ಬೆನ್ನಹಿಂದೆಯೇ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಪರಿಣಾಮವಾಗಿ ಸರ್ಕಾರ ತ್ರಿಶಂಕು ಸ್ಥಿತಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿ ಮೊದಲಿನಿಂದಲೂ ರಾಜಕೀಯ ಅಸ್ಥಿರತೆ ಇದ್ದದ್ದೆ. ಬರಗಾಲದಲ್ಲಿ ಬಾಯಿದ್ದವನೇ ಜಾಣ ಎನ್ನುವಂತೆ ಹರಿಯಾಣದಲ್ಲಿ ಪಕ್ಷಾಂತರ ಪ್ರವೀಣನೇ ಜಾಣರ ಜಾಣ ಎಂಬ ನಾಣ್ಣುಡಿ ಜನಜನಿತವಾಗುತ್ತಿರುವ ಸಂದರ್ಭದಲ್ಲಿ ದೇವಿಲಾಲ್ ಕುಟುಂಬದ ನಿಯಂತ್ರಣದಲ್ಲಿರುವ ರಾಜಕೀಯ ತಕ್ಕಡಿ ಯಾವ ಕಡೆ ವಾಲುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಮೊದಲಿನಿಂದಲೂ ದೇವಿಲಾಲ್ ನಂತರ ಓಂಪ್ರಕಾಶ್ ಚೌತಾಲ ಸರ್ಕಾರಗಳು ಸತತವಾಗಿ ಅಧಿಕಾರದಲ್ಲಿದ್ದರೂ ಅದನ್ನು ಉರುಳಿಸುವ ಮತ್ತು ಹೊಸ ವ್ಯವಸ್ಥೆಯನ್ನು ಅರಳಿಸುವ ರಾಜಕೀಯ ಶಕ್ತಿಗಳು ಜನತಾ ಪರಿವಾರದಲ್ಲಿಯೇ ಇದ್ದವು ಎಂಬುದು ಗುರುತಿಸಬೇಕಾದ ಅಂಶ. ಈಗ ಸರ್ಕಾರದ ಉಳಿವು ಮತ್ತು ಅಳಿವು ನಿರ್ಣಯವಾಗುವುದು ದೇವಿಲಾಲ್ ಮೊಮ್ಮಗ ದುಶ್ಶಂತ್ ಚೌತಾಲ ಕೈಗೊಳ್ಳುವ ನಿರ್ಧಾರದ ಮೇಲಿದೆ. ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಬಲಾಬಲ ಪರೀಕ್ಷೆ ನಡೆಯಲು ವಿಧಾನ ಮಂಡಲದ ಅಧಿವೇಶನವನ್ನು ತುರ್ತಾಗಿ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಚೌತಾಲ ಬೆಂಬಲಿಗರು ರಾಜ್ಯಪಾಲರ ಮುಂದಿಟ್ಟಿದ್ದಾರೆ. ಇದರಿಂದಾಗಿ ಸರ್ಕಾರದ ಏಳುಬೀಳು ಏನೆಂಬುದು ಸ್ಪಷ್ಟವಾಗುತ್ತಿಲ್ಲ. ಕುದುರೆ ವ್ಯಾಪಾರ ಶುರುವಾಗಿರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.
ತೊಂಬತ್ತು ಮಂದಿ ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ೪೫ ಸದಸ್ಯರ ಬೆಂಬಲ ಅಗತ್ಯ. ಅಧಿಕಾರರೂಢ ಬಿಜೆಪಿ ಬಲ ೪೩ ಮಾತ್ರ. ಇಬ್ಬರು ಶಾಸಕರು ಬೆಂಬಲಿಸಿದರೆ ಸರ್ಕಾರ ಉಳಿಯಬಹುದು. ಕಾಂಗ್ರೆಸ್ ಸದಸ್ಯತ್ವದ ಬಲ ೩೦. ಜೆಜೆಪಿ ಬಲ ೧೦. ತಂತಿಯ ಮೇಲಿನ ನಡಿಗೆಯಂತಿರುವ ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದೇ ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ವಿಧಾನಸಭೆಯ ಅವಧಿ ಅಕ್ಟೋಬರ್ ತಿಂಗಳವರೆಗೆ ಇದೆ. ಚುನಾವಣೆಯವರೆಗೆ ಹೇಗಾದರೂ ಮಾಡ ಸರ್ಕಾರವನ್ನು ಮುಂದುವರಿಸಬೇಕು. ಇಲ್ಲವೇ ರಾಷ್ಟçಪತಿ ಆಡಳಿತ ಹೇರಿ ಚುನಾವಣೆ ಎದುರಿಸಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಖಚಿತ ನಿಲುವು ವ್ಯಕ್ತವಾಗುತ್ತಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ಓಂಪ್ರಕಾಶ್ ಚೌತಾಲ ಪುತ್ರ ಅಭಯ ಸಿಂಗ್ ಚೌತಾಲ ಅವರು ಸರ್ಕಾರದ ಕಡು ವಿರೋಧಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಬೆಂಬಲ ಕೊಡಬಾರದು ಎಂಬುದು ಅವರ ನಿಲುವು. ಆದರೆ, ಜೆಜೆಪಿಯಲ್ಲಿ ಈ ವಿಚಾರದ ಬಗ್ಗೆ ಸಹಮತವಿಲ್ಲ. ಮುಖ್ಯಮಂತ್ರಿ ಸಾಯಿದ್ ಸಿಂಗ್ ಸೈನಿ ಶಾಸಕರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸಮಾಲೋಚನೆಯ ಮಾರ್ಗವನ್ನು ಮುಂದುವರಿಸಿದ್ದಾರೆ. ಲೋಕಸಭಾ ಚುನಾವಣೆಯ ಗಡಿಬಿಡಿಯಲ್ಲಿ ಮುಳುಗಿರುವ ವರಿಷ್ಠ ಮಂಡಳಿ ಹರಿಯಾಣದ ಬೆಳವಣಿಗೆ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ರಾಜ್ಯದ ಪರಿಸ್ಥಿತಿ ಹೊಸ ರೂಪ ಪಡೆಯುತ್ತಿದೆ.
ಒಂದು ದೇಶ ಒಂದು ಚುನಾವಣೆ ಎಂಬ ಘೋಷ ವಾಕ್ಯದ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿರುವ ಬೆನ್ನ ಹಿಂದೆಯೇ ೨೦೨೯ರ ನಂತರ ಈ ಘೋಷ ವಾಕ್ಯವನ್ನು ಶಾಸನದ ಮೂಲಕ ಜಾರಿಗೆ ತರಲಾಗುವುದು ಎಂಬ ಕೇಂದ್ರ ಸರ್ಕಾರದ ಘೋಷಣೆಯ ನಡುವೆ ಸರ್ಕಾರ ಅವಧಿಗೆ ಮೊದಲೇ ಉರುಳುತ್ತಿರುವ ಬೆಳವಣಿಗೆ ಒಂದು ದೇಶ ಒಂದು ಚುನಾವಣೆ ಎಂಬ ನೀತಿಯ ಸಿಂಧುತ್ವವನ್ನು ಪ್ರಶ್ನಿಸಿದಂತಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸುಭದ್ರ ಸರ್ಕಾರಗಳನ್ನು ನಡೆಸುವುದು ಕಷ್ಟ.
ವಸ್ತುಸ್ಥಿತಿ ಹೀಗಿರುವಾಗ ಯಾವ ಆಧಾರದ ಮೇರೆಗೆ ಈ ನೀತಿಯನ್ನು ಜಾರಿಗೆ ತರುತ್ತಾರೆ ಎಂಬುದು ರಾಜಕೀಯ ತಜ್ಞರ ಕಳವಳವಾಗಿದೆ. ಬಹುಶಃ ಹರಿಯಾಣ ಸರ್ಕಾರದ ಬಿಕ್ಕಟ್ಟಿಗೆ ರೂಪಿಸುವ ಪರಿಹಾರ ಒಂದೇ ಚುನಾವಣೆ ಒಂದೇ ದೇಶ ಎಂಬ ನಿಲುವಿಗೆ ಅಗ್ನಿಪರೀಕ್ಷೆಯಾಗಬಹುದೇನೋ. ರಾಷ್ಟ್ರಪತಿ ಆಡಳಿತ ಆಳ್ವಿಕೆ ಜಾರಿಗೆ ತರುವ ಬಗ್ಗೆ ರಾಜಕೀಯ ಪಕ್ಷಗಳಿಗೆ ಸಹಮತವಿಲ್ಲ. ಇದು ಹಿಂಬಾಗಿಲ ಮೂಲಕ ಕೇಂದ್ರ ಸರ್ಕಾರಕ್ಕೆ ಅವಕಾಶ ಕೊಟ್ಟಂತಾಗಲಿದೆ. ಇದರ ಬದಲು ಆದಷ್ಟು ಬೇಗ ಚುನಾವಣೆ ನಡೆಸುವುದೇ ಸೂಕ್ತ. ಅಲ್ಲಿಯವರೆಗೂ ಸರ್ಕಾರ ಮುಂದುವರಿಸುವುದು ರಾಜ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಭಾವನೆ ವ್ಯಕ್ತವಾಗುತ್ತಿದೆ.