ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹರಿಯಾಣ ಸೋಲಿಗೆ ಮುನ್ನುಡಿ ಬರೆದರಾ ಕಂಗನಾ?

03:10 AM Sep 09, 2024 IST | Samyukta Karnataka

ಫುಟ್ಬಾಲ್‌ನಲ್ಲಿ ಕೆಲವೊಮ್ಮೆ ಕೆಲವರು ಅರಿವಿಲ್ಲದೆ ಸೆಲ್ಫ್ ಗೋಲ್ ಮಾಡುವುದುಂಟು. ಅಂತೆಯೇ ರಾಜಕೀಯದಲ್ಲೂ ಕೆಲವರು ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ತಮ್ಮ ಕಾಲ ಮೇಲೆ ತಾವೇ ಕಲ್ಲನ್ನು ಎತ್ತಿ ಹಾಕಿಕೊಳ್ಳುವುದಿದೆ, ಇನ್ನೇನು ಪ್ರಮುಖ ಹುದ್ದೆ ಸಿಕ್ಕೇ ಬಿಟ್ಟಿತು ಎನ್ನುವುದರಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾದ ಹಲವು ನಿದರ್ಶನಗಳಿವೆ. ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಯಾಮ್ ಪಿತ್ರೋಡ ಇನ್ ಹೆರಿಟೆನ್ಸ್ ಟ್ಯಾಕ್ಸ್ನ ಮಾತನ್ನಾಡಿ ಕಾಂಗ್ರೆಸ್‌ಗೆ ಕಂಟಕವಾದರು. ಅದೇ ರೀತಿ ಮಣಿಶಂಕರ್ ಐಯ್ಯರ್ ಹಿಂದೊಮ್ಮೆ ಹೇಳಿದ್ದ ಚಾಯ್ ವಾಲಾ ಹೇಳಿಕೆಯನ್ನೇ ಬಿಜೆಪಿ ತನ್ನ ಪರವಾಗಿ ಬಳಸಿಕೊಂಡಿತ್ತು. ಅಂತೆಯೇ ಬಿಜೆಪಿಯ ಚಾರಸೌ ಪಾರ ಹೇಳಿಕೆಯನ್ನು ಸಂವಿಧಾನ ಬದಲಾಯಿಸಲು ಇವರಿಗೆ ಚಾರಸೌ ಪಾರ ಆಗಬೇಕಂತೆ ಎಂದು ರಾಹುಲ್ ಗಾಂಧಿ ಹೋದ ಬಂದಲೆಲ್ಲ ಮಾತನಾಡಿ ಬಿಜೆಪಿಯ ಹಾಗೂ ಅವರ ಪಕ್ಷಗಳ ನಾಯಕರ ಹೇಳಿಕೆಗಳೇ ಬಿಜೆಪಿಗೆ ಬೂಮರಾಂಗ್ ಆಗುವಂತೆ ಮಾಡಿದ್ದೂ ತಿಳಿದ ವಿಷಯ. ಅಂತೆಯೇ ಇದೀಗ ಸೆಲ್ಫ್ ಗೋಲ್ ಮಾಡುವ ಸರದಿ ಕಂಗನಾ ಅವರದು. ಹಾಗೆ ನೋಡಿದರೆ ಕಂಗನಾಗೆ ವಿವಾದಾತ್ಮಕ ಹೇಳಿಕೆಗಳು ಹೊಸದಲ್ಲ. ಕೆಲವು ಹೇಳಿಕೆಗಳು ಬಿಜೆಪಿಗೆ ಸಹಾಯ ಮಾಡಿದ್ದೂ ಉಂಟು. ಅದು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದದ್ದು ಇರಬಹುದು. ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದೇ ೨೦೧೪ರ ನಂತರ ಎಂದು ಹೇಳಿದ್ದು ಹೀಗೆ ಹಲವಾರು ಹೇಳಿಕೆಗಳಿವೆ. ಆದರೆ ಈ ಬಾರಿ ಕಂಗನಾ ಹರಿಯಾಣದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರೈತಾಪಿ ವರ್ಗದ ಮುಷ್ಕರದಲ್ಲಿ ರೇಪ್ ಆಗುತ್ತಿತ್ತು. ಹಾಗೂ ಶವಗಳು ತೂಗಾಡುತ್ತಿದ್ದವು ಎಂಬ ಬಾಲಿಶ ಹೇಳಿಕೆಗಳನ್ನು ಕೊಟ್ಟು ಹರಿಯಾಣ ಹಾಗೂ ಪಂಜಾಬಿ ರೈತಾಪಿ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಹರಿಯಾಣ, ಪಂಜಾಬಿ ಭಾಗಗಳ ರೈತಾಪಿ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಕಂಗನಾ ಅವರ ಹೇಳಿಕೆಯಿಂದಾಗಿ ಬಾಣಲೆಯಿಂದ ಬೆಂಕಿಗೆ ಎಂಬ ಪರಿಸ್ಥಿತಿಗೆ ಬಂದು ನಿಂತಿದೆ. ಫಾರ್ಮರ್ಸ್ ಪ್ರೊಟೆಸ್ಟ್ನಿಂದಾಗಿ ಮಂಡಿಸಲು ಇಚ್ಛಿಸಿದ್ದ ಕೃಷಿ ಕಾನೂನಿನ ವಿಧೇಯಕವನ್ನು ಮೋದಿಜಿ ಪರಿಸ್ಥಿತಿ ಅರಿತು ಹಿಂತೆಗೆದುಕೊಂಡಿದ್ದರು. ಅದೇ ರೀತಿ ಹರಿಯಾಣದ ರೈತಾಪಿ ವರ್ಗದಲ್ಲಿ ಹೇಗಾದರೂ ತನ್ನ ಸ್ಥಾನವನ್ನು ಕಾಪಾಡಿಕೊಳ್ಳಲು ಬಿಜೆಪಿ ಶತಾಯುಗತಾಯ ಪ್ರಯತ್ನಿಸುತ್ತಿದ್ದರೆ ಇತ್ತ ಇಂತಹ ವಿವಾದಾತ್ಮಕ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟು ಕಂಗನಾ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಂಗನಾ ಹೇಳಿಕೆಯ ಪ್ರಭಾವ ಎಷ್ಟಿದೆ ಅಂದರೆ ಕಂಗನಾ ಹೇಳಿಕೆಯ ಇಪ್ಪತ್ನಾಲ್ಕು ಗಂಟೆಗಳೊಳಗೆ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ತತಕ್ಷಣವೇ ಬಿಜೆಪಿ ದಿನ ಪತ್ರಿಕೆಗಳಲ್ಲಿ ಕಂಗನಾ ಹೇಳಿಕೆ ಪಕ್ಷದ ಹೇಳಿಕೆಯಲ್ಲ ಎಂದು ಪ್ರಕಟಿಸಿದೆ. ಬಿಜೆಪಿ ತರಾತುರಿಯಲ್ಲಿ ಈ ರೀತಿಯ ಪ್ರಕಟಣೆಯನ್ನು ಹೊರಡಿಸಿದೆ ಅಂದರೆ ಅದಕ್ಕೆ ಕಾರಣ ಹರಿಯಾಣದ ಚುನಾವಣೆ.
ಒಂದು ಅಂದಾಜಿನ ಪ್ರಕಾರ ಹರಿಯಾಣದಲ್ಲಿ ಬಿಜೆಪಿ ಈಗಾಗಲೇ ಬ್ಯಾಕ್ ಫೂಟಿನಲ್ಲಿದೆ. ಹಾದಿ ಬೀದಿಗಳಲ್ಲಿನ ಚರ್ಚೆಯಲ್ಲಿ ಬಿಜೆಪಿಗರು ಕಾಂಗ್ರೆಸ್ ಅನ್ನು ಸೋಲಿಸಲಾರರು. ಆದರೆ ಕಾಂಗ್ರೆಸ್ ಅನ್ನು ಏನಿದ್ದರೂ ಕಾಂಗ್ರೆಸ್ ಪಕ್ಷದವರೇ ಸೋಲಿಸಬೇಕಷ್ಟೆ ಎಂಬ ಅಭಿಪ್ರಾಯ ಹೊರಹೊಮ್ಮಿದೆ. ಅಂದರೆ ಬಿಜೆಪಿಯ ಗೆಲುವಿನ ಸಾಧ್ಯತೆಗಳೇನು ಎಂದು ನೀವೇ ಊಹಿಸಬಹುದು.
ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಬಿಜೆಪಿ ಗೆದ್ದಿದ್ದು ಅರ್ಧದಷ್ಟು ಸ್ಥಾನಗಳನ್ನು ಮಾತ್ರ. ಅದರ ಅರ್ಥ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಿದಾಗ ಕ್ಲೀನ್ ಸ್ವೀಪ್ ಮಾಡದ ಪಕ್ಷ ವಿಧಾನಸಭೆಯ ಚುನಾವಣೆಯಲ್ಲಿ ನಾಯಬ್ ಸಿಂಗ್ ಸೈನಿ ನೇತೃತ್ವದಲ್ಲಿ ಯಾವ ಕಮಾಲ್ ಮಾಡಲಾಗದು ಎಂದು ಮತದಾರನ ಅಂತರಂಗವಾಣಿ ನುಡಿಯುತ್ತಿದೆ. ಅಲ್ಲದೆ ಒಲಿಂಪಿಕ್ಸ್ನಂತಹ ತೂಕದ ಪದಕ ವಂಚಿತೆ ವಿನೇಶ್ ಫೋಗಟ್ ಕಾಂಗ್ರೆಸ್‌ನಿಂದ ಜೂಲಾನ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್‌ಗೆ ಒಂದಿಷ್ಟು ಸಿಂಪಥಿ ಮತಗಳು ಲಭಿಸಲಿದೆ. ಸದ್ಯಕ್ಕಂತೂ ಕಾಂಗ್ರೆಸ್ ಮೇಲುಗೈ ಎಂಬುದು ರಾಜಕೀಯ ಬಲ್ಲ ಪಂಡಿತರ ಲೆಕ್ಕಾಚಾರ. ಹೀಗೇಕೆ ಎಂದು ನೋಡಿದರೆ ಅಲ್ಲಿನ ಚುನಾವಣೆಗಳ ಮಾದರಿ ಗಮನಿಸಬೇಕು ೨೦೦೫ರಲ್ಲಿ ಭಜನ್ ಲಾಲ್ ಹಾಗೂ ಭೂಪೇಂದ್ರ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ೬೭ ಸ್ಥಾನಗಳನ್ನು ಗೆದ್ದು ಭೂಪೇಂದ್ರ ಸಿಂಗ್ ಹೂಡರನ್ನು ಮುಖ್ಯಮಂತ್ರಿ ಮಾಡಿತ್ತು. ೨೦೦೯ರಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಾಗ ಭೂಪೇಂದ್ರ ಸಿಂಗ್ ಹೂಡ ನೇತೃತ್ವದಲ್ಲಿ ೪೦ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ರೀತಿ ೨೦೧೪ರಲ್ಲಿ ಬಿಜೆಪಿ ೪೭ ಸ್ಥಾನವನ್ನು ಗೆದ್ದಿತ್ತು. ೨೦೧೯ರಲ್ಲಿ ಎರಡನೇ ಬಾರಿ ಕಾಂಗ್ರೆಸ್ ಪಕ್ಷದಂತೆ ಬಿಜೆಪಿ ಕೇವಲ ೪೦ ಸ್ಥಾನಗಳಿಗೆ ಸೀಮಿತಗೊಂಡಿತು. ಅಂದರೆ ೨೦೧೪ರಲ್ಲಿ ಕಾಂಗ್ರೆಸ್ ಎದುರಿಸಿದ್ದ ಆಡಳಿತ ವಿರೋಧಿ ಅಲೆಯ ಮಾದರಿಯಲ್ಲಿಯೇ ೨೦೨೪ರಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಅಲ್ಲದೆ ಕಳೆದ ಒಂಬತ್ತು ವರುಷಗಳಲ್ಲಿ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರ ಮೇಲೆ ಇರುವ ಆರೋಪ ಸಾಮಾಜಿಕವಾಗಿ ಮತದಾರರೊಂದಿಗೆ ಕನೆಕ್ಟ್ ಆಗುವಂತಹ ಯಾವ ಕೆಲಸವನ್ನು ಮಾಡಿಲ್ಲವೆಂಬುದು ಅಲ್ಲದೆ ಹರಿಯಾಣದ ರಾಜಕೀಯ ಹೆಚ್ಚು ಕಡಿಮೆ ಸರ್ಕಾರಿ ನೌಕರಿಯ ಸುತ್ತ ಮುತ್ತ ಗಿರಕಿ ಹೊಡೆಯುತ್ತಿರುತ್ತದೆ. ಕಾಲದಿಂದ ಕಾಲಕ್ಕೆ ಇಂತಹ ನೌಕರಿಯ ನಿಯೋಜನೆಗಳನ್ನು ನಿರ್ವಹಣೆಯನ್ನು ಖಟ್ಟರ ಸರ್ಕಾರ ಸರಿಯಾಗಿ ಮಾಡಲಿಲ್ಲ ಎಂಬ ಆರೋಪವಿದೆ. ಅಲ್ಲದೆ ಪೇಪರ್ ಲೀಕ್‌ನಂತ ಪ್ರಹಸನಗಳು ಪದೇ ಪದೇ ಕೇಳಿ ಬಂದದ್ದು ಇವೆಲ್ಲವೂ ಒಟ್ಟಾರೆಯಾಗಿ ಆಡಳಿತ ವಿರೋಧಿ ಅಭಿಪ್ರಾಯವನ್ನು ಹುಟ್ಟು ಹಾಕಿವೆ.
ಹಾಗೆಂದು ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ ಬಹಳ ಬಲಿಷ್ಠವಾಗಿದೆ ಎಂದಲ್ಲ. ಆದರೆ ಅಲ್ಲಿನ ಜನರಿಗೆ ಬಿಜೆಪಿಗೆ ಪರ್ಯಾಯವಾಗಿ ಕಾಣುತ್ತಿರುವುದು ಕಾಂಗ್ರೆಸ್ ಆದ್ದರಿಂದ ಬಿಜೆಪಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ ಎಂದೇ ವಿಮರ್ಶಿಸಲಾಗುತ್ತಿದೆ. ಸದ್ಯಕ್ಕೆ ಚುನಾವಣೆ ನಡೆದರೆ ಹರ್ಯಾಣದ ತೊಂಬತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಐವತ್ತೇಳರಿಂದ ಅರವತ್ತೇಳು ಸ್ಥಾನ ಗಳಿಸಬಹುದು, ಬಿಜೆಪಿ ಹದಿಮೂರರಿಂದ ಹದಿನೆಂಟು ಸ್ಥಾನ ಗಳಿಸಬಹುದು, ಐಏನ್‌ಎಲ್‌ಡಿ ಒಂದು ಸ್ಥಾನ ಗಳಿಸಬಹುದು ಎಂಬುದು ಹರಿಯಾಣದ ಖ್ಯಾತ ಪತ್ರಕರ್ತ ಆದೇಶ ರಾವಲ್ ಅಂಬೋಣ.

Next Article