ಹಲೋ.. ನಾನ್ ಎಸಿಪಿ ಎಂದವನಿಗೆ ಬಿತ್ತು ಕೇಸ್
ಹಲೋ ಬೀಟ್ ಪೊಲೀಸಾ.. ನಾನ್ ಎಸಿಪಿ ಮಾತೋಡೋದು. ನಿನ್ನ ಅವ್ಯವಹಾರ ನನಗೆ ತಿಳಿದಿದೆ. ತಕ್ಷಣ 5 ಸಾವಿರ ಹಣ ಕಳಸಿ ಇಲ್ದಿದ್ರೆ ನಿನ್ ಮೇಲೆ ತನಿಖೆ ಗ್ಯಾರಂಟಿ ಎಂದವ ಪೊಲೀಸ್ ಅತಿಥಿಯಾದ ಪ್ರಸಂಗ ಬನಹಟ್ಟಿ ಠಾಣೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಅಪ್ಪು ಹಿರೇಮಠ(42) ಬಂಧಿತ ಆರೋಪಿಯಾಗಿದ್ದಾನೆ.
ಸರ್ಕಾರದಿಂದ ಪೊಲೀಸ್ ಇಲಾಖೆಗೆ ಪೂರೈಸಿದ ಸಿರಿಜ್ ನಂಬರಕ್ಕೆ ಹೋಲಿಕೆಯಾಗುವಂತಹ ಮೊಬೈಲ್ ನಂಬರ್ 9480802997 ಪಡೆದುಕೊಂಡು ಅದನ್ನು ದುರುಪಯೋಗಪಡಿಸಿಕೊಂಡು ಬನಹಟ್ಟಿ ಪೊಲೀಸ್ ಠಾಣೆಗೆ ಕರೆ ಮಾಡಿ ತಾನು ಎಸಿಪಿ/ಡಿಸಿಪಿ ಎಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಂತೆ ನಟಿಸಿ ಮಾತನಾಡಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡು ಹಣದ ಬೇಡಿಕೆಯಿಟ್ಟು ಸಾರ್ವಜನಿಕ ನೌಕರನಂತೆ ನಟಿಸಿ ಮೋಸ ಮಾಡುತ್ತಿದ್ದ. ಇದೀಗ ನಾವಲಗಿ ಗ್ರಾಮದ ಬೀಟ್ ಪೋಲಿಸ್‌ನಿಗೆ ನಿನ್ನ ಬಗ್ಗೆ ತಿಳಿದಿದೆ.
ತಕ್ಷಣವೇ ಹಣ ಹಾಕಬೇಕೆಂದು ನಂಬರ್ ಕಳಿಸಿದ್ದಾನೆ. ಇಲ್ಲದಿದ್ದರೆ ಮೇಲಧಿಕಾರಿಗಳಿಂದ ಸಸ್ಪೆಂಡ್ ಮಾಡಿಸುವದಾಗಿ ಬೆದರಿಕೆಯೊಡ್ಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೆಲ್ಲ ತನಿಖೆಗೊಳಪಡಿಸಿದ ಬನಹಟ್ಟಿ ಪಿಎಸ್‌ಐ ಶಾಂತಾ ಹಳ್ಳಿ ಸಿಮ್ ನಂಬರ್ ಇರುವವನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರ ನಕಲಿ ಪೊಲೀಸ್ ಅಧಿಕಾರಿಯೆಂದು ತಿಳಿದು ಬಂದ ಕಾರಣ ಆತನನ್ನು ಬಂಧಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣ ದಾಖಲು
ಈಗಾಗಲೇ ಕಳೆದ 2017 ರಲ್ಲಿ ಶಿವಮೊಗ್ಗದಲ್ಲಿ, 2019 ರಲ್ಲಿ ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ಹಾಗು 2020 ರಲ್ಲಿ ಜಮಖಂಡಿ ತಹಶೀಲ್ದಾರ ಕಚೇರಿಯಲ್ಲಿಯೂ ಇಂತಹದೇ ಬೇಡಿಕೆಯಿಟ್ಟು ಶಿಕ್ಷೆ ಅನುಭವಿಸಿದ್ದರೂ ಬುದ್ದಿ ಬಾರದ ಈತ ಮತ್ತೇ ಇದೇ ಚಾಳಿ ಮುಂದುವರೆಸಿ ಮತ್ತೇ ಬನಹಟ್ಟಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಅಪ್ಪು ಹಿರೇಮಠ ವಿಕಲಚೇತನನಾಗಿದ್ದು, ಬಲಗೈ ಸ್ವಾಧೀನವಿಲ್ಲ. ಪದವೀಧರನಾಗಿದ್ದರೂ ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದನೆಂದು ತಿಳಿದು ಬಂದಿದ್ದು, ಇಂತಹ ಕೃತ್ಯವೆಸಗುತ್ತ ಅಧಿಕಾರಿ ಹಾಗು ಅಕ್ರಮ ದಂಧೆಕೋರರೇ ಗುರಿಯನ್ನಾಗಿಸಿಕೊಂಡು ಬಂಡವಾಳವನ್ನಾಗಿಸಿಕೊಂಡಿದ್ದ.