ಹಲೋ… ಫೋನ್ ಇನ್ ಕಾರ್ಯಕ್ರಮ
ದಿನದಿಂದ ದಿನಕ್ಕೆ ನಿರೂಪಕಿ ಕಿವುಡನುಮಿ ತನ್ನ ವಿಶಿಷ್ಟ-ವಿಭಿನ್ನ ನಿರೂಪಣೆಯಿಂದಾಗಿ ಭಯಂಕರ ಫೇಮಸ್ ಆಗಿದ್ದಳು. ಹೋದಲ್ಲಿ ಬಂದಲ್ಲಿ ಆಕೆಯನ್ನು ಜನರು ಗುರುತಿಸಿ ಮಾತನಾಡಿಸುತ್ತಿದ್ದರು. ಕೆಲವರು ಆಕೆಯ ಜತೆ ಸೆಲ್ಫಿ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು. ದೊಡ್ಡ, ದೊಡ್ಡ ರಾಜಕಾರಣಿಗಳ ಸಂದರ್ಶನ ಮಾಡುವ ಮುಖಾಂತರ ಅವರನ್ನು ಬೇಸ್ತು ಬೀಳಿಸುತ್ತಿದ್ದಳು. ಆಕೆ ಮಾತನಾಡುವ ಶೈಲಿ, ಪ್ರಶ್ನೆಗಳನ್ನು ಕೇಳುವ ಪರಿ, ಹಾವ-ಭಾವ ಎಲ್ಲವೂ ಜನರಿಗೆ ತುಂಬಾ ಹಿಡಿಸಿದ್ದವು. ನನ್ನ ವಾಹಿನಿಯಲ್ಲಿ ಏನಾದರೂ ಡಿಫರಂಟಾಗಿ ಮಾಡಬೇಕು ಅಂದುಕೊಂಡು ಒಂದು ದಿನ ಮದ್ರಾಮಣ್ಣ-ಬಂಡೆಸಿವು, ಸುಮಾರಣ್ಣ-ಸಿಟ್ಯೂರಪ್ಪ ಇವರನ್ನೆಲ್ಲ ಕೂಡಿಸಿ ಫೋನ್‌ಇನ್ ಕಾರ್ಯಕ್ರಮ ಮಾಡಬೇಕು. ಜನರೇ ಅವರಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆ ಪರಿಹರಿಸಿಕೊಳ್ಳಲಿ ಎಂದು ಸಂಕಲ್ಪ ಮಾಡಿದಳು. ಎಲ್ಲರನ್ನೂ ಕಾಡಿ-ಬೇಡಿ ಕಾರ್ಯಕ್ರಮಕ್ಕೆ ಒಪ್ಪಿಸಿದಳು. ಎಂಟಾನೆಂಟು ದಿನಗಟ್ಟಲೇ ಇಂತಹ ದಿನ ಇವರ ಫೋನ್ ಇನ್ ಕಾರ್ಯಕ್ರಮ ಇದೆ.. ನೋಡಲು ಮರೆಯಿದಿರಿ ಮರೆತು ಮರುಗದಿರಿ ಎಂದು ಗಂಟಲು ಹರಿದು ಹೋಗುವ ಹಾಗೆ ಒದರುತ್ತಿದ್ದಳು. ಕಿವುಡನುಮಿ ದಿನಾಲೂ ಕನ್ನಡಿಯ ಮುಂದೆ ನಿಂತು ಪ್ರಶ್ನೆ ಕೇಳುವ ಪ್ರಾಕ್ಟೀಸ್ ಮಾಡುತ್ತಿದ್ದಳು. ಆಕೆಯ ಗಂಡ ಲೊಂಡೆನುಮ ಏನೇ ಇದು ಅಂದಾಗ ನೀವು ಸುಮ್ನೆ ಇರಿ ಎಂದು ಜಬರಿಸಿ ಸುಮ್ಮನಾಗಿಸುತ್ತಿದ್ದಳು. ದಿನಾಲೂ ಮನೆಯಲ್ಲಿ ಅಡುಗೆ ಮಾಡಿದರೆ ಮಾಡಿದಳು ಇಲ್ಲದಿದ್ದರೆ ಇಲ್ಲ. ಲೊಂಡೆನುಮನಿಗೆ ಸಾಕಾಗಿ ಹೋಗಿತ್ತು. ಇಲ್ಲಿದ್ದರೆ ಉಪವಾಸ ಸಾಯಬೇಕಾದೀತು ನಾನು ಇಂದೇ ಊರಿಗೆ ಹೋಗುವೆ. ಕಾರ್ಯಕ್ರಮದ ದಿನ ಬರುವೆ ಎಂದು ಹೇಳಿ ಹೋದ. ಅವತ್ತು ಕಾರ್ಯಕ್ರಮದ ದಿನ ಕಿವುಡನುಮಿ ಮಸ್ತ್ ರೆಡಿಯಾಗಿದ್ದಳು. ಸ್ಟುಡಿಯೋದಲ್ಲಿ ಮತ್ತೆ ಮತ್ತೆ ಪ್ರಾಕ್ಟೀಸ್ ಮಾಡುತ್ತಿದ್ದಳು. ಇನ್ನೇನು ಕಾರ್ಯಕ್ರಮ ಐದು ನಿಮಿಷ ಉಳಿದಿದೆ ಅನ್ನುವಾಗ ಅತಿಥಿಗಳೆಲ್ಲರೂ ಬಂದರು. ಸಾರ್ ನನ್ನ ಮೊಬೈಲ್ ಕೊಟ್ಟಿದ್ದೀನಿ ಇದಕ್ಕೇ ಕಾಲ್‌ಗಳು ಬರುತ್ತವೆ ಎಂದು ಹೇಳಿ ಕಾರ್ಯಕ್ರಮ ಶುರುಮಾಡಿದಳು. ಒಂದು ಕರೆ ಬಂತು. ಮದ್ರಾಮಣ್ಣ ಅದಕ್ಕೆ ಉತ್ತರಿಸಿದರು. ಇನ್ನೊಂದು ಕರೆಗೆ ಬಂಡೆಸಿವು ಮಾತನಾಡಿದ. ಮತ್ತೊಂದು ಕಾಲ್‌ಗೆ ಸುಮಾರಣ್ಣ ಅರ್ಧರ್ಧ ಕಣ್ಣು ಮುಚ್ಚಿ ಅದೇನೋ ಹೇಳಿದ. ಆಗ ಮತ್ತೊಂದು ಕಾಲ್ ರಿಂಗಾಯಿತು. ಆಗ ಕಿವುಡನುಮಿ ಹಲೋ… ಫೋನ್ ಇನ್ ಕಾರ್ಯಕ್ರಮ ಹೇಳಿ ಏನು ನಿಮ್ಮ ಸಮಸ್ಯೆ. ಯಾರ ಜತೆ ಮಾತನಾಡಬೇಕು? ಸಿಎಮ್ಮಾ…. ಡಿಸಿಎಮ್ಮಾ… ಕೇಂದ್ರ ಸಚಿವರಾ? ಯಾರ ಜತೆ ಹೇಳಿ ಅಂದಳು. ಆ ಕಡೆಯಿಂದ ಏಳ ನಿನ… ಲೇ ನಾನ್ ನಿನ್ ಗಂಡ ಲೊಂಡೆನುಮ ಮಾತಾಡ್ತಾ ಇದೀನಿ… ಮನಿ ಕೀಲಿ ಎಲ್ಲಿಟ್ಟಿ ಬೊಗಳು…. ಎಷ್ಟೊತ್ತಿನಿಂದ ಕಾಯ್ತಾ ಇದೀನಿ… ಬಿಜಿ ಬಿಜಿ ಇದೆ… ಈಗ ಹೇಳು ಎಲ್ಲಿದೆ ಕೀ… ಅಂದ… ಅದು ಲೈವ್ ಆಗಿದ್ದರಿಂದ ಎಲ್ಲ ಕಡೆಗೆ ಕೇಳಿಸಿತು. ಕಿವುಡನುಮಿ ಮತ್ತಷ್ಟು ಫೇಮಸ್ ಆದಳು.