ಹಳೇ ಹುಬ್ಬಳ್ಳಿ ಪ್ರಕರಣ ವಾಪಸಾತಿ ದೊಡ್ಡದುರಂತ
ಎಚ್.ಡಿ. ಕುಮಾರಸ್ವಾಮಿಯವರು ಟಿಕೆಟ್ ತ್ಯಾಗಕ್ಕೆ ಮುಂದಾಗಬೇಕು. ಕುಮಾರಸ್ವಾಮಿಯವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿಯವರಿಗೆ ಬೇಕು.
ಹುಬ್ಬಳ್ಳಿ : ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿರುವುದು ಒಂದು ದೊಡ್ಡ ದುರಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗಲಭೆಯಲ್ಲಿ ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ದರು. ಇಂಥ ಪ್ರಕರಣ ವಾಪಸ್ ಪಡೆದರೆ ಪೊಲೀಸ್ ನೈತಿಕ ಬಲ ಅಡಗಿ ಹೋಗುತ್ತದೆ ಎಂದು ನುಡಿದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಪ್ರಕರಣವನ್ನು ವಾಪಸ್ ಪಡೆಯಬಾರದು, ಪಡೆದರೆ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಅವರು ತಿಳಿಸಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಆರೋಪ ಮುಕ್ತರಾಗಬೇಕು ಎಂದ ಯತ್ನಾಳ್, ತಮ್ಮ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎಂದಿದ್ದ ಸಿದ್ಧರಾಮಯ್ಯನವರು ಮುಡಾ ಹಗರಣ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಿಕೆ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಟಿಕೆಟ್ ತ್ಯಾಗಕ್ಕೆ ಮುಂದಾಗಬೇಕು. ಕುಮಾರಸ್ವಾಮಿಯವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿಯವರಿಗೆ ಬೇಕು. ಕುಮಾರಸ್ವಾಮಿ ಬಂದಿರುವುದರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲವಾಗಿದೆ. ಜೆಡಿಎಸ್‍ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ ಎರಡೂ ಕಡೆಯವರಿಗೂ ಲಾಭವಾಗಿದೆ ಎಂದು ಯತ್ನಾಳ್ ಹೇಳಿದರು.
ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಸಂಸದ ಬಸವರಾಜ ಬೊಮ್ಮಾಯಿಯವರ ಮಗನಿಗೆ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಈ ವಿಷಯದಲ್ಲಿ ಪಕ್ಷದ ಹಿರಿಯರು ನಿರ್ಧರಿಸುತ್ತಾರೆ ಎಂದು ಅವರು ತಿಳಿಸಿದರು.